news18-kannada Updated:September 10, 2020, 3:27 PM IST
ಜೋಗ ಜಲಪಾತ
ಶಿವಮೊಗ್ಗ(ಸೆಪ್ಟೆಂಬರ್. 10): ವಿಶ್ವ ವಿಖ್ಯಾತ ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಾಗಲೇ 120 ಕೋಟಿ ರೂ ಅನುಮೋದನೆ ನೀಡಿದೆ. ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಇದನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸಬೇಕಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಜೋಗ ಅಭಿವೃದ್ಧಿಗೆ ನೀಲ ನಕಾಶೆ ರೂಪಿಸುವ ಕುರಿತು ಜೋಗದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜೋಗ ವೀಕ್ಷಣೆಗೆ ಬಂದ ಪ್ರವಾಸಿಗರು ಕೇವಲ ಜಲಪಾತ ನೋಡಿಕೊಂಡು ಹೋಗದೆ ಒಂದು ಇಡೀ ದಿನ ಪೂರ್ತಿ ಜೋಗ ಪ್ರವಾಸಿ ತಾಣದಲ್ಲಿ ಕಳೆಯಬೇಕು. ಪ್ರವಾಸಿಗರು ಕನಿಷ್ಟ ಒಂದು ಇಡೀ ದಿನ ಅಲ್ಲಿನ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಅವಕಾಶ ಕಲ್ಪಿಸಬೇಕಾಗಿದೆ. ಈಗಿರುವ ಸೌಲಭ್ಯಗಳನ್ನು ಉತ್ತಮ ಪಡಿಸುವ ಜೊತೆಗೆ ಇನ್ನಷ್ಟು ಹೊಸ ಮೂಲ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಮಾತ್ರವಲ್ಲದೆ ಕೆಪಿಟಿಸಿಎಲ್ ಪಾತ್ರವೂ ಬಹಳ ಮುಖ್ಯವಾಗಿದೆ. ಜೋಗ ಅಭಿವೃದ್ಧಿ ನಿಟ್ಟಿನಲ್ಲಿ ಇದು ಎರಡನೇ ಸಭೆಯಾಗಿದ್ದು, ತಜ್ಞರ ಸಲಹೆಗಳನ್ನು ಪಡೆದು ಆದಷ್ಟು ಬೇಗನೆ ನೀಲ ನಕಾಶೆ ಅಂತಿಮಗೊಳಿಸಿ ಟೆಂಡರ್ ಕರೆಯುವ ಪ್ರಕ್ರಿಯೆಯನ್ನು ಆರಂಭಿಸಬೇಕಾಗಿದೆ ಎಂದರು.
ವಿಶ್ವವಿಖ್ಯಾತಿಯನ್ನು ಗಳಿಸಿರುವಂತ ಜಲಪಾತ. ಜೋಗ ಜಲಪಾತ ವೀಕ್ಷಣೆಗೆ ದೇಶದ ಮೂಲೆ ಮೂಲೆಗಳಿಂದ ಸಾವಿರಾರೂ ಜನ ಪ್ರವಾಸಿಗರು ಆಗಮಿಸುತ್ತಾರೆ. ಅಷ್ಟೇ ಯಾಕೆ ವಿದೇಶಗಳಿಂದಲೂ ಈ ಜಲಪಾತದ ಸೌಂದರ್ಯ ಸವಿಯಲೂ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿನ ಪ್ರಕೃತಿಯ ಸುಂದರ ಸೊಬಗು ನೋಡಿಕೊಂಡು ಹೋಗುತ್ತಾರೆ. ಇಂತಹ ಜೋಗ ಜಲಪಾತ ಪ್ರದೇಶವನ್ನು ಹೆಚ್ಚಿನ ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಜೋಗ ಜಲಪಾತ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 120 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ.

ಹಿರಿಯ ಅಧಿಕಾರಿಗಳ ಸಭೆ
ಈ ಭಾಗದಲ್ಲಿ ಇರುವಂತ 22 ಎಕರೆ ಪ್ರದೇಶದಲ್ಲಿ ವೀಕ್ಷಣಾ ಗೋಪುರ, ಕಾರಂಜಿಗಳ ನಿರ್ಮಾಣ, ವಿಶ್ರಾಂತಿ ಗೃಹಗಳು, ಉದ್ಯಾನವನ, ವಿದ್ಯುದಾಗಾರಕ್ಕೆ ಪ್ರವಾಸಿಗರಿಗೆ ವೀಕ್ಷಣಾ ಅವಕಾಶ, ಮಳೆಗಾಲ ಹೊರತು ಪಡಿಸಿ ಪ್ರತಿ ಶನಿವಾರ ಮತ್ತು ಭಾನುವಾರ ಜಲಪಾತಕ್ಕೆ ನೀರು ಹರಿಸುವ ಪ್ರಸ್ತಾವನೆಗಳಿಗೆ ಅಂತಿಮ ರೂಪು ನೀಡಬೇಕಾಗಿದೆ ಎಂದರು.
ಇದನ್ನೂ ಓದಿ :
ರೈತರಿಗೆ ಗೋಳು ಕೊಡುವ ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಮುಚ್ಚಿ: ಪ್ರಧಾನಿಗೆ ಹೆಚ್.ಡಿ. ರೇವಣ್ಣ ಆಗ್ರಹ
ಇದೇ ವೇಳೆ ಸಭೆಯಲ್ಲಿ ಇದ್ದ ಕೆಪಿಟಿಸಿಲ್ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್ ಅವರು ಮಾತನಾಡಿ, ಜೋಗದಲ್ಲಿ ಕೆಪಿಟಿಸಿಎಲ್ಗೆ ಸೇರಿದ ಹಲವು ಆಸ್ತಿಗಳಿವೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಪವರ್ ಸ್ಟೇಷನ್, ಆಸ್ಪತ್ರೆ ಇತ್ಯಾದಿ ಕಟ್ಟಡಗಳನ್ನು ಬಳಸಿಕೊಳ್ಳಬಹುದಾಗಿದ್ದು, ಕೆಪಿಟಿಸಿಎಲ್ ಎಲ್ಲಾ ಸಹಕಾರ ನೀಡಲಿದೆ ಎಂದು ಮಾಹಿತಿ ನೀಡಿದರು.
ಒಟ್ಟಾರೆ ಜೋಗ ಜಲಪಾತ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಬರುವಂತ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಸಿಗುವಂತೆ ಮಾಡುವ ಕೆಲಸ ಆಗುತ್ತಿದೆ.
Published by:
G Hareeshkumar
First published:
September 10, 2020, 3:27 PM IST