HOME » NEWS » District » JIGANI POLICE ARREST A NOTORIOUS MOBILE THIEF CANK SNVS

ಜಿಗಣಿ ಪೊಲೀಸರ ಕಾರ್ಯಾಚರಣೆ: ಕುಖ್ಯಾತ ಮೊಬೈಲ್ ಕಳ್ಳನ ಬಂಧನ

ಹಗಲು ಹೊತ್ತು ಯಾರಿಗೂ ಅನುಮಾನ ಬರದಂತೆ ಸಭ್ಯನಂತಿದ್ದ ವ್ಯಕ್ತಿ, ಕತ್ತಲಾಗುತ್ತಿದ್ದಂತೆಯೇ ರಸ್ತೆಗಳಲ್ಲಿ ಸಂಚರಿಸುವ ಜನರಿಗೆ ಮಾರಕಾಸ್ತ್ರದಿಂದ ಬೆದರಿಸಿ ಮೊಬೈಲ್ ಲಪಟಾಯಿಸುತ್ತಿದ್ದ. ಶೋಕಿಗಾಗಿ ಈ ಕೆಲಸ ಮಾಡುತ್ತಿದ್ದ ಆರೋಪಿ ಈಗ ಜಿಗಣಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

news18-kannada
Updated:March 30, 2021, 4:01 PM IST
ಜಿಗಣಿ ಪೊಲೀಸರ ಕಾರ್ಯಾಚರಣೆ: ಕುಖ್ಯಾತ ಮೊಬೈಲ್ ಕಳ್ಳನ ಬಂಧನ
ಸಾಂದರ್ಭಿಕ ಚಿತ್ರ.
  • Share this:
ಆನೇಕಲ್: ಅವನು ಹಗಲು ವೇಳೆ ಆರಾಮವಾಗಿ ತಿರ್ಗಾಡಿಕೊಂಡು ಇರ್ತಿದ್ದ... ಆದ್ರೆ ರಾತ್ರಿಯಾಗುತ್ತಿದ್ದಂತೆ ತನ್ನ ಕೈ ಚಳಕ ತೋರಿಸುತ್ತಿದ್ದ... ಕೈಗಾರಿಕಾ ಪ್ರದೇಶಗಳಲ್ಲಿ ತನ್ನ ಅಡ್ಡೆ ಮಾಡಿಕೊಂಡಿದ್ದ ಆತ ಒಬ್ಬಂಟಿಯಾಗಿ ಓಡಾಡುವವರನ್ನು ಟಾರ್ಗೆಟ್ ಮಾಡುತ್ತಿದ್ದ… ಮಾರಕಾಸ್ತ್ರಗಳಿಂದ ಬೆದರಿಸಿ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ… ಆದ್ರೆ ಆತನ ಗ್ರಹಚಾರ ಕೆಟ್ಟಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಠಾಣೆ ಪೊಲೀಸರು ಕುಖ್ಯಾತ ಮೊಬೈಲ್ ಕಳ್ಳನನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಜಫ್ತಿ ಮಾಡಿದ್ದಾರೆ. ಜಿಗಣಿ ಸಮೀಪದ ಕ್ಯಾಲಸನಹಳ್ಳಿ ವಾಸಿ ಸತೀಶ್ ಬಂಧಿತ ಆರೋಪಿ. ಈತನ ಬಳಿ ಸುಮಾರು ನಾಲ್ಕು ಲಕ್ಷ ಮೌಲ್ಯದ ವಿವೋ, ಸ್ಯಾಮ್‌ಸಂಗ್‌, ರಿಯಲ್ ಮಿ, ಇನ್ಪಿಕ್ಸ್, ಎಂಐ,  ರೆಡ್ ಮಿ, ಎಚ್ ಟಿ ಸಿ, ಹಾನರ್, ಜಿವಿ, ಲಾವಾ, ಕಾರ್ಬನ್ ಮತ್ತು ಕೀ ಪ್ಯಾಡ್ ಸೇರಿದಂತೆ ವಿವಿಧ ಕಂಪನಿಗಳ ನಲವತ್ತು ಮೊಬೈಲ್​ಗಳು ಪತ್ತೆಯಾಗಿದ್ದು, ಜಿಗಣಿ ಪೊಲೀಸರು ಮೊಬೈಲ್​ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ .

ಇದೇ ತಿಂಗಳು ಇಪ್ಪತ್ತಾರನೇ ತಾರೀಖು ಜಿಗಣಿ ರಿಂಗ್ ರಸ್ತೆಯಲ್ಲಿ ಪೊಲೀಸರು ನಾಕಾ ಬಂದಿ ಹಾಕಿ ತಪಾಸಣೆ ನಡೆಸುತ್ತಿದ್ದ ವೇಳೆ ಪೊಲೀಸರನ್ನು ಕಂಡು ಆರೋಪಿ ಸತೀಶ್ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿ ಸತೀಶ್​ನನ್ನು ಅಡ್ಡಗಟ್ಟಿ ವಶಕ್ಕೆ ಪಡೆದು ಪೊಲೀಸರು ತಮ್ಮ ಸ್ಟೈಲ್​ನಲ್ಲಿ ವಿಚಾರಣೆ ನಡೆಸಿದಾಗ ಮೊಬೈಲ್ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಕೊರೋನಾ ಹೆಚ್ಚಲು ಕಾರಣ ಇದೇನಾ? ಕಳೆದೊಂದು ವಾರದ ಅಂಕಿಅಂಶ ಇದು

ಬಂಧಿತ ಆರೋಪಿ ಹಗಲು ವೇಳೆ ಒಳ್ಳೆಯವನಂತೆ ಓಡಾಡಿಕೊಂಡು ಇರ್ತಿದ್ದ. ಕತ್ತಲಾಗುತ್ತಿದ್ದಂತೆ ತನ್ನ ನಿಜ ಸ್ವರೂಪವನ್ನು ತೋರುತ್ತಿದ್ದ. ಜಿಗಣಿ, ಹೆಬ್ಬಗೋಡಿ, ಸೂರ್ಯಸಿಟಿ, ಅತ್ತಿಬೆಲೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶಗಳಲ್ಲಿ ರಾತ್ರಿ ವೇಳೆ ಒಬ್ಬಂಟಿಯಾಗಿ ಓಡಾಡುವವರನ್ನು ಹಿಂಬಾಲಿಸಿ ಅಡ್ಡಗಟ್ಟುತ್ತಿದ್ದ ಆಸಾಮಿ ಸತೀಶ ಮಾರಕಾಸ್ತ್ರಗಳಿಂದ ಬೆದರಿಸಿ ಮೊಬೈಲ್​ಗಳನ್ನು ಮಾತ್ರ ದೋಚಿ ಪರಾರಿಯಾಗುತ್ತಿದ್ದ.

ಇನ್ನು, ಬಂಧಿತ ಆರೋಪಿ ಸತೀಶನಿಗೆ ದುಬಾರಿ ಬೆಲೆಯ ಮೊಬೈಲ್​ಗಳು ಅಂದ್ರೆ ಎಲ್ಲಿಲ್ಲದ ಮೋಹ. ತಾನು ಸ್ನೇಹಿತರ ಮುಂದೆ ಬಡಾಯಿ ಕೊಚ್ಚಿಕೊಳ್ಳಲು ವಾರಕ್ಕೊಂದು ಮೊಬೈಲ್ ಬದಲಾಯಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಸತೀಶನ ಸ್ನೇಹಿತರಲ್ಲೂ ಗುಮಾನಿ ಮೂಡಿತ್ತು. ಕೊನೆಗೆ ಆತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಆರೋಪಿ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧನದಿಂದ ಜಿಗಣಿ, ಅತ್ತಿಬೆಲೆ, ಆನೇಕಲ್, ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೊಬೈಲ್ ಕಳವು ಪ್ರಕರಣಗಳು ಪತ್ತೆಯಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

ವರದಿ: ಆದೂರು ಚಂದ್ರು
Published by: Vijayasarthy SN
First published: March 30, 2021, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories