ಹಾಸನ; ನೋಡ್ರಿ, ನಮ್ಮ ಪಕ್ಷ, ದೇವೇಗೌಡ್ರು ಇರುವ ತನಕ ನಮ್ಮ ಪಕ್ಷದ ಯಾವ ಕಾರ್ಯಕರ್ತರೂ ಯಾರ ಬೆದರಿಕೆಗೂ ಹೆದರುವ ಅವಶ್ಯಕತೆಯಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಕಾರ್ಯಕರ್ತರ ಸಭೆಯಲ್ಲಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದರು.
ಹಾಸನದ ಖಾಸಗಿ ಸಭಾಂಗಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ.ರೇವಣ್ಣ ಅವರು, ಹಾಸನ ಜಿಲ್ಲೆಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಕೊಡುಗೆ ಏನ್ರೀ, ನಾಚಿಕೆ ಮಾನ, ಮರ್ಯಾದೆಯಿದ್ದವರು, ಹಾಸನಕ್ಕೆ ಬಂದು ಮತ ಕೇಳಬಾರದು. ಯಾವ ಅಭಿವೃದ್ದಿ ಕೆಲಸ ಮಾಡಿದ್ದಾರೆ. ನಾವು ಮಾಡಿದ ಕಾಮಗಾರಿಗಳಿಗೆ ಚಾಲನೆ ಕೊಟ್ಟು ನಾವು ಮಾಡಿದ್ದೇವೆ ಎಂದು ಚುನಾವಣೆ ಸಮಯದಲ್ಲಿ ಹೇಳ್ತಿದ್ದಾರೆ. ಆದರೆ ಜನರಿಗೆ ಗೊತ್ತು. ದೇವೇಗೌಡ್ರು, ಕುಮಾರಣ್ಣ ಏನ್ ಮಾಡಿದ್ದಾರೆ ಎಂದು. ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬುದ್ದಿ ಕಲಿಸ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ವಿರುದ್ಧ ಗುಡುಗಿದರು.
1850 ಕೋಟಿ ಕಾಮಗಾರಿ ತಂದೋರು ಯಾರ್ರಿ?
ಬೇಲೂರು-ಹಾಸನ-ಬಿಳಿಕೆರೆ, ಹಾಸನ ಚನ್ನರಾಯಪಟ್ಟಣ ನಡುವೆ ಮೂರು ಮೇಲ್ಸೇತುವೆ ಮತ್ತು ಹೊಸ ಬಸ್ ನಿಲ್ದಾಣ ಹಾಗೂ ಹಳೆ ಬಸ್ ನಿಲ್ದಾಣದ ರೈಲ್ವೇ ಮೇಲ್ಸೇತುವೆಗಳಿಗೆ ಯಾರು ಚಾಲನೆ ಕೊಟ್ಟಿದ್ದು? ಬಿಜೆಪಿಯವರು ಮಾಡಿಸಿದ್ರಾ? ಜಿಲ್ಲೆಗೆ ಜೆಡಿಎಸ್ ಕೊಡುಗೆ ಏನು? ಜೆಡಿಎಸ್ ಅಧಿಕಾರಾವಧಿಯಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳಾಗಿವೆ ಎಂಬುದನ್ನು ಕಾರ್ಯಕರ್ತರು ಎಲ್ಲೆಡೆ ಗಟ್ಟಿಯಾಗಿ ಹೇಳಲು ಏಕೆ ಹೆದರುತ್ತೀರಿ? ಜೆಡಿಎಸ್ ಕೊಡುಗೆಯನ್ನು ಪ್ರತಿಯೊಬ್ಬ ಕಾರ್ಯಕರ್ತರು ಮನೆ– ಮನೆಗೆ ತಲುಪಿಸುವ ಮೂಲಕ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಎದುರಿಸಬೇಕು. ಯಾರ ಬೆದರಿಕೆ, ದಬ್ಬಾಳಿಕೆಗೂ ಹೆದರುವ ಅಗತ್ಯವಿಲ್ಲ. ನಿಮ್ಮ ಜೊತೆಗೆ ನಾವಿದ್ದೇವೆ. ನಮ್ಮ ಕಾರ್ಯಕರ್ತರಿಗೆ, ನಮ್ಮ ಜನಕ್ಕೆ ಸುಖಾ ಸುಮ್ಮನೆ ತೊಂದರೆ ಕೊಟ್ಟರೇ ನಾನು ಸುಮ್ಮನಿರಲ್ಲ. ನೀವು ಯಾವುದೇ ಆತಂಕಕ್ಕೆ ಒಳಗಾಗದೇ ಧೈರ್ಯವಾಗಿ ಚುನಾವಣೆ ಎದುರಿಸಿ ಎಂದು ಗ್ರಾಮ ಪಂಚಾಯ್ತಿಯ ಬೆಂಬಲಿತ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದರು.
ಗೂಂಡಾಗಿರಿಗೆ ಕಡಿವಾಣ ಹಾಕುವುದು ಗೊತ್ತಿದೆ
ಜಿಲ್ಲೆಯಲ್ಲಿ ಆರು ಶಾಸಕರು, ಸಂಸದ, ರಾಜ್ಯಸಭೆ ಸದಸ್ಯರಿದ್ದು, ಯಾಕೆ ಹೆದರಬೇಕು. ಗೂಂಡಾಗಿರಿಗೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡುತ್ತೇನೆ. ಅವರಿಂದ ನಿಯಂತ್ರಿಸಲು ಸಾಧ್ಯವಾಗದೆ ಇದ್ದರೆ ಮುಂದೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ನಾವು ಹೆದರಿ ಸುಮ್ಮನೆ ಕೂರುವುದಿಲ್ಲ. ರಾಜಕಾರಣ ಇವತ್ತಿಗೆ ಮುಗಿದಿಲ್ಲ ಎಂಬುದನ್ನು ನಮ್ಮ ಕಾರ್ಯಕರ್ತರು ಅರಿಯಬೇಕು ಎಂದರು.
ಜನವರಿಯಲ್ಲಿ ಜೆಡಿಎಸ್ ಪುಟಿದೇಳುತ್ತೆ ನೋಡ್ತಾಯಿರಿ
ರಾಜ್ಯದಲ್ಲಿ ಜೆಡಿಎಸ್ ಶಕ್ತಿ ಏನು ಎಂಬುದನ್ನು ಜನವರಿ ಎರಡನೇ ವಾರದ ಬಳಿಕ ತೋರಿಸುತ್ತೇವೆ. ಪಕ್ಷಕ್ಕೆ ಹೇಗೆ ಹೊಸ ಚಾಲನೆ ಕೊಡಬೇಕು ಎಂದು ಗೊತ್ತಿದೆ. ಕಾರ್ಯಕರ್ತರು ಧೃತಿಗೆಡಬೇಕಾಗಿಲ್ಲ. ದೇವೇಗೌಡರು ಬದುಕಿರುವಾಗಲೇ ಜೆಡಿಎಸ್ ಎಂದರೆ ಏನು ಎಂದು ತೋರಿಸುವೆ ಎಂದು ಹೇೇಳಿದರು.
ಎಲ್ಲಾ ಪ್ರಾಣಿಗಳ ಹತ್ಯೆ ನಿಲ್ಲಿಸಿ
ದೇಶದಲ್ಲಿ ಅತೀ ಹೆಚ್ಚು ಗೋಮಾಂಸ ವಿದೇಶಗಳಿಗೆ ರಫ್ತಾಗುತ್ತಿದೆ. ಇದಕ್ಕೆಲ್ಲ ಕಾರಣ ಯಾರು? ಚುನಾವಣೆ ಮುಂದಿಟ್ಟುಕೊಂಡು ಈಗ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೀರಿ. ಅದೇ ರೀತಿ ಸದನದಲ್ಲಿ ಕುರಿ, ಕೋಳಿ ಸೇರಿದಂತೆ ಎಲ್ಲಾ ಪ್ರಾಣಿಗಳ ಹತ್ಯೆ ನಿಷೇಧಿಸಿ ಕಾಯ್ದೆ ತನ್ನಿ, ರಾಜ್ಯದ ಜನರು ಬರೀ ಬೂದುಗುಂಬಳ ತಿನ್ನಲು ಹೇಳಿ ಎಂದು ವ್ಯಂಗ್ಯವಾಡಿದರು.
ಇದನ್ನು ಓದಿ: ಕ್ಷುಲ್ಲಕ ವದಂತಿ ಹರಡಿದ ಏರ್‌ಟೆಲ್, ವಿಐ ವಿರುದ್ಧ ಟ್ರಾಯ್ ಕ್ರಮಕ್ಕೆ ಆಗ್ರಹಿಸಿ ರಿಲಾಯನ್ಸ್ ಜಿಯೋ ದೂರು
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, 1977ರವರೆಗೆ ಗ್ರಾಮ ಪಂಚಾಯಿತಿ ಚುನಾವಣೆಗಳು ಪಕ್ಷದ ಚಿಹ್ನೆಯಡಿ ನಡೆದಿದ್ದವು. ಆಗ ನಾವು ವಿಜಯ ಪತಾಕೆ ಹಾರಿಸುವ ಮೂಲಕ ಶಕ್ತಿ ತೋರಿಸಿದ್ದೇವೆ. ಈಗ ಪಕ್ಷಾಧಾರಿತ ಚುನಾವಣೆ ಆಗಿಲ್ಲವಾದ್ದರಿಂದ ಕಾರ್ಯಕರ್ತರನ್ನು ಗೆಲ್ಲಿಸಬೇಕಿದೆ. ಜಿಲ್ಲೆಯಲ್ಲಿ ಅವಸಾನ ಸ್ಥಿತಿ ತಲುಪಿರುವ ಕಾಂಗ್ರೆಸ್ ಒಂದು ಕಡೆಯಾದರೆ ಅಭ್ಯರ್ಥಿಗಳಿಲ್ಲದೆ ನಮ್ಮ ಕಾರ್ಯಕರ್ತರನ್ನು ಸೆಳೆಯಲು ಬಿಜೆಪಿ ಹವಣಿಸುತ್ತಿದೆ. ಕಾರ್ಯಕರ್ತರು ಯಾವ ಕಾರಣಕ್ಕೂ ಕುತಂತ್ರಗಳಿಗೆ ಬಲಿಯಾಗಬಾರದು. ಗ್ರಾಮದ ಹಿತದೃಷ್ಟಿಯಿಂದ ಕೆಲಸ ಮಾಡುವ, ವ್ಯಕ್ತಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ವರದಿ - ಡಿಎಂಜಿ ಹಳ್ಳಿ ಅಶೋಕ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ