ಕೆಆರ್​ಎಸ್ ಡ್ಯಾಮ್​ಗೆ ದೃಷ್ಟಿನಿವಾರಣೆ ಪೂಜೆ ಮೂಲಕ ಸುಮಲತಾ ದೃಷ್ಟಿಗೆ ಗುರಿಯಾದರಾ ಮಂಡ್ಯ ದಳಪತಿಗಳು

ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರು ನಿನ್ನೆ ಕೆಆರ್​ಎಸ್ ಡ್ಯಾಂಗೆ ಪೂಜೆ, ಪುನಸ್ಕಾರ ನೆರವೇರಿಸಿದ್ದಾರೆ. ಸಂಸದೆ ಸುಮಲತಾ ಭೇಟಿ ಕೊಟ್ಟ ಬೆನ್ನಲ್ಲೇ ಈ ಬೆಳವಣಿಗೆ ಆಗಿದೆ. ಸುಮಲತಾ ಮತ್ತು ದಳಪತಿಗಳ ಮಧ್ಯೆ ಮತ್ತೊಂದು ಸುತ್ತಿನ ವಾಗ್ಸಮರಕ್ಕೆ ಇದು ಕಾರಣವಾಗುತ್ತಾ?

ಕೆಆರ್​ಎಸ್ ಡ್ಯಾಮ್ ಬಳಿ ಜೆಡಿಎಸ್ ಶಾಸಕರಿಂದ ಪೂಜೆ

ಕೆಆರ್​ಎಸ್ ಡ್ಯಾಮ್ ಬಳಿ ಜೆಡಿಎಸ್ ಶಾಸಕರಿಂದ ಪೂಜೆ

 • Share this:
  ಮಂಡ್ಯ: ಕೆಲ ದಿನಗಳಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್​ಎಸ್ ಡ್ಯಾಂ ಸುದ್ದಿಯಲ್ಲಿತ್ತು. ಇದಕ್ಕೆ ಕಾರಣ ಮಂಡ್ಯ ಸಂಸದೆ ಸುಮಲತಾ ಅಂಬರೀಶ್. ಮೇ 29 ರಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪತ್ರಿಕಾಗೋಷ್ಠಿ ನಡೆಸಿ ಕೃಷ್ಣರಾಜಸಾಗರ ಅಣೆಕಟ್ಟು ಬಿರುಕು ಬಿಟ್ಟಿದೆ ಎಂಬ ಹೇಳಿಕೆಯನ್ನ ನೀಡಿದ್ದರು. ಇದು ಮಂಡ್ಯ ಜೆಡಿಎಸ್ ದಳಪತಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ಮುಂದು ವರಿದಂತೆ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆಯೊಂದನ್ನ ನೀಡುವ ಮೂಲಕ ಸುಮಲತಾ ಅಂಬರೀಶ್ ಆಕ್ರೋಶಕ್ಕೆ ಕಾರಣವಾಗಿದ್ದರು. ಆದರೆ ಇವೆಲ್ಲಾ ವಾಕ್ಸಮರಗಳ ಬಳಿಕ ಸುಮಲತಾ ಅಂಬರೀಶ್ ಅವರು ಕೆಆರ್​ಎಸ್ ಡ್ಯಾಂ ಬಿರುಕು ಬಿಟ್ಟಿದ್ಯಾ ಎಂಬುದನ್ನು ಪರಿಶೀಲಿಸಲು ಸ್ವತಃ ತಾವೇ ಡ್ಯಾಂಗೆ ತೆರಳಿ ಪರಿಶೀಲನೆ ನಡೆಸಿದ್ದರು.

  ಅದಾದ ಬಳಿಕ ಸ್ಥಳೀಯ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯಾಸ್ತ್ರ ಬಿಟ್ಟರು. ಡ್ಯಾಂಗೆ ಏನು ಆಗಿಲ್ಲ. ಆದ್ರೆ ಡ್ಯಾಂಗೆ ದೃಷ್ಟಿ ತಾಗಿದೆ ಅಂತ ಶಾಸಕ ವ್ಯಂಗ್ಯವಾಡಿದ್ದರು. ಆದ್ರೆ ಅಂದು ಹೇಳಿದ ಮಾತಿಗೆ ಸುಮ್ಮನಾಗದ ದಳಪತಿಗಳು ನಿನ್ನೆ ಡ್ಯಾಂನ ಕಾವೇರಿ ಪ್ರತಿಮೆ ಮುಂಭಾಗ ದೃಷ್ಟಿ ಪೂಜೆಯನ್ನೂ ನೆರವೇರಿಸಿದ್ದಾರೆ.

  ವೇದಬ್ರಹ್ಮ ಡಾ, ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ನೆರವೇರಿದ ದೃಷ್ಟಿ ನಿವಾರಣೆ ಪೂಜೆ....

  ಶ್ರೀರಂಗಪಟ್ಟಣದ ಖ್ಯಾತ ಜ್ಯೋತಿಷಿ ಡಾ| ಭಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ಕಾವೇರಿ ಮಾತೆಗೆ ನಿನ್ನೆ ಪೂಜೆ ಮಾಡಲಾಯ್ತು. ಪ್ರತಿಮೆ ಮುಂಭಾಗ ಹೋಮ ಕುಂಡವನ್ನ ನಿರ್ಮಿಸಿ. ಪೂರ್ಣ ಕುಂಭಗಳನ್ನ ಸ್ಥಾಪಿಸಲಾಗಿತ್ತು. ಆಷಾಢದ ತುಲಾ ಮಾಸದಲ್ಲಿ ಎಲ್ಲಾ ನದಿಗಳಿಗೂ ಪೂಜೆ ಸಲ್ಲಿಸೋದ್ರಿಂದ ಇಂದು ಕಾವೇರಿ ಮಾತೆಗೆ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಗಿದೆ ಅಂತ ಭಾನುಪ್ರಕಾಶ್ ಶರ್ಮ ತಿಳಿಸಿದರು.

  ಇದನ್ನೂ ಓದಿ: Karnataka Weather Updates: ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ 2 ದಿನ ಮಳೆ; ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

  ಪೂಜೆಯಲ್ಲಿ ಭಾಗಿಯಾದ ಜಿಲ್ಲೆಯ ಎಲ್ಲಾ ಶಾಸಕರು....

  ಈ ವಿಶೇಷ ಪೂಜೆಯಲ್ಲಿ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು ಭಾಗಿಯಾಗಿದ್ದರು. ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಎಲ್ಲಾ ಶಾಸಕರು ಪೂಜಾ ಕಾರ್ಯ ನೆರವೇರಿಸಿದ್ರು. ಸಾಮೂಹಿಕವಾಗಿ ಎಲ್ಲಾ ಶಾಸಕರು ಬೂದಕುಂಬಳ ಕಾಯಿ ಹೊಡೆಯುವ ಮೂಲಕ KRS ಡ್ಯಾಂಗೆ ತಾಗಿದೆ ಎನ್ನಲಾದ ದೃಷ್ಟಿ ನಿವಾರಣೆಗೆ ಮುಂದಾದರು.

  ಸಂಸದೆ ಸುಮಲತಾಗೆ ಪರೋಕ್ಷವಾಗಿ ಟಾಂಟ್ ಕೊಟ್ಟ ಶಾಸಕ ಪುಟ್ಟರಾಜು..

  ಪೂಜೆಯಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದ ಶಾಸಕ ಸಿಎಸ್ ಪುಟ್ಟರಾಜು, ನಮ್ಮಂತಹ ರಾಜಕಾರಣಿಗಳ ಬಾಯಲ್ಲಿ ಕೆಆರ್​ಎಸ್ ಬಗ್ಗೆ ಬೇರೆ ರೀತಿ ಅರ್ಥ ಕಲ್ಪಿಸುವಂತಾಗಿತ್ತು ಅನ್ನೋ‌ ಮೂಲಕ KRS ಬಿರುಕು ಬಿಟ್ಟಿದೆ ಎಂಬ ಸುಮಲತಾ ಹೇಳಿಕೆಗೆ ಪರೋಕ್ಷವಾಗಿ ಲೇವಡಿ ಮಾಡಿದರು. ಅಲ್ಲದೆ ಕೆಲ ದಿನಗಳಿಂದ ಕೆಆರ್​ಎಸ್ ರಾಜಕೀಯ ದಾಳವಾಗಿತ್ತು. ಹಿಗಾಗಿ ಡ್ಯಾಂ ಸುರಕ್ಷಿತವಾಗಿರಲಿ ಹಾಗೂ ಕಾವೇರಿ ತಾಯಿ ಎಲ್ಲರಿಗೂ ಒಳ್ಳೆದು ಮಾಡಲಿ ಅಂತ ಪೂಜೆ‌ ಸಲ್ಲಿಸಿದ್ದಾಗಿ ಪುಟ್ಟರಾಜು ತಿಳಿಸಿದರು.

  ಇದನ್ನೂ ಓದಿ: Karaga Festival - ರಾಮನಗರದ ಪ್ರಸಿದ್ಧ ಚಾಮುಂಡೇಶ್ವರಿ ಕರಗ ಉತ್ಸವಕ್ಕೆ ಬ್ರೇಕ್

  ಒಟ್ಟಾರೆ‌, ಕೃಷ್ಣರಾಜಸಾಗರ ಅಣೆಕಟ್ಟು ಬಿರುಕು ಬಿಟ್ಟಿದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ಜಿಲ್ಲೆಯ ಜೆಡಿಎಸ್ ನಾಯಕರು ಮತ್ತು ಸುಮಲತಾ ಅಂಬರೀಶ್ ನಡುವೆ ದೊಡ್ಡ ಮಟ್ಟದ ಬಿರುಕಂತೂ ಬಿಟ್ಟಿದೆ. ಸದ್ಯ ಎಲ್ಲಾ ವಾಕ್ಸಮರ ಮುಗಿತು ಅನ್ನುವಷ್ಟರಲ್ಲಿ ಈಗ ದಳಪತಿಗಳು ದೃಷ್ಟಿ ನಿವಾರಣೆ ಪೂಜೆ ಮಾಡೋ ಮೂಲಕ ಸುಮಲತಾ ದೃಷ್ಟಿಗೆ ಗುರಿಯಾಗಿದ್ದಾರೆ. ಇದು ಮುಂದೆ ಯಾವ ಹಂತ ತಲುಪುತ್ತದೆ ಎಂಬುದನ್ನ ಕಾದುನೋಡಬೇಕಾಗಿದೆ.

  ವರದಿ- ಸುನೀಲ್ ಗೌಡ
  Published by:Vijayasarthy SN
  First published: