ಮೈಸೂರು(ಡಿಸೆಂಬರ್. 13): ರಾಜ್ಯ ರಾಜಕೀಯದ ದಳಪತಿಗಳ ಪಾಳಯದಲ್ಲಿ ಅಚ್ಚರಿ ಬೆಳವಣಿಗೆಯೊಂದು ನಡೆದು ಪಕ್ಷದಿಂದ ದೂರ ಇದ್ದ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರನ್ನು ಕೆ.ಆರ್.ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ ಬೆನ್ನಲ್ಲೆ ಸಕ್ರಿಯರಾದ ಜೆಡಿಎಸ್ ನಾಯಕರು ಪಡೆ, ಇದೀಗ ಪಕ್ಷದೊಳಗಿನ ಭಿನ್ನಮತಗಳನ್ನ ಶಮನ ಮಾಡುವ ಪ್ರಯತ್ನಕ್ಕೆ ಕೈಹಾಕಿದಂತೆ ಕಾಣುತ್ತಿದ್ದು, ಈ ಹಿನ್ನೆಯಲ್ಲಿ ಇಂದು ಮೈಸೂರಿನಲ್ಲಿ ಶಾಸಕರಾದ ಸಾರಾ.ಮಹೇಶ್ ಹಾಗೂ ಜಿಟಿ.ದೇವೇಗೌಡ ಮಾತುಕತೆ ನಡೆಸಿರುವ ಬೆಳವಣಿಗೆ ಪಕ್ಷದ ಕಾರ್ಯಕರ್ತರಿಗೆ ಉತ್ಸಹ ತುಂಬಿದೆ. ಮೈಸೂರಿನ ಜಲದರ್ಶಿನಿ ಅಥಿತಿಗೃಹದಲ್ಲಿ ಜಿಟಿಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಾ.ರಾ.ಮಹೇಶ್ ಒಂದು ಕೆಲವೊತ್ತು ಚರ್ಚೆ ಮಾಡಿ ಹಲವು ಮಹತ್ವದ ವಿಚಾರಗಳನ್ನ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ. ತೀವ್ರ ಕುತೂಹಲ ಕೆರಳಿಸಿದ ಉಭಯ ನಾಯಕರ ಮಾತುಕತೆ ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಸಕ್ರಿಯ ಆಗುವಂತೆ ಮಾಡಿದೆ.
ಜಿ ಟಿ ದೇವೇಗೌಡ ಕಳೆದ ಲೋಕಸಭಾ ಚುನಾವಣಾ ನಂತರ ಜೆಡಿಎಸ್‌ನಿಂದ ದೂರ ಉಳಿದಿದು ಇದೀಗ ಹಳೆಯ ವಿಚಾರ. ಇತ್ತಿಚಿಗೆ ಮೈಸೂರಿನಲ್ಲಿ ನಾನು ಜೆಡಿಎಸ್‌ನಲ್ಲೆ ಉಳಿದರೂ ಅಚ್ಚರಿ ಇಲ್ಲ ಅಂದಿದ್ದ ಜಿ ಟಿ ದೇವೇಗೌಡರನ್ನ ಇಂದು ಶಾಸಕ ಸಾ.ರಾ.ಮಹೇಶ್ ಭೇಟಿ ಮಾತುಕತೆ ನಡೆಸಿದ್ದಾರೆ. ಪಕ್ಷದಲ್ಲಿ ತಟಸ್ಥವಾಗಿರುವ ಜಿಟಿಡಿಯನ್ನ ಮತ್ತೆ ಪಕ್ಷದಲ್ಲಿ ಸಕ್ರಿಯ ಮಾಡಲು ಇದು ಸಂಧಾನ ಸಭೆ ಎನ್ನುವುದು ಮೂಲಗಳಿಂದ ಬಂದಿರುವ ಮಾಹಿತಿಯಾಗಿದೆ.
ಕಳೆದ ಎರಡು ದಿನಗಳಿಂದ ಈ ಭೇಟಿ ಮುಂದಕ್ಕೆ ಹೋಗಿ ಇಂದು ಅಂತಿಮವಾಗಿ ಶಾಸಕ ಸಾ.ರಾ.ಮಹೇಶ್ ಜಿಟಿಡಿರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹಳೆಯದ್ದನೆಲ್ಲ ಮರೆತು ಪಕ್ಷದಲ್ಲಿ ಸಕ್ರಿಯವಾಗಿ ನಿಮ್ಮ ನೇತೃತ್ವದಲ್ಲೆ ಚುನಾವಣೆ ಎದುರಿಸೋಣ, ಮತ್ತೆ ಮೈಸೂರಿನಲ್ಲಿ ಜೆಡಿಎಸ್ ಪಕ್ಷವನ್ನ ಬಲಪಡಿಸೋಣ ಅಂತ ಶಾಸಕ ಸಾ.ರಾ.ಮಹೇಶ್ ಮನವಿ ಮಾಡಿಕೊಂಡಿದ್ದಾರೆ ಎನ್ನುವುದು ಸದ್ಯ ಜೆಡಿಎಸ್ ಪಾಳೆಯದಲ್ಲಿ ಕೇಳಿ ಬರುತ್ತಿರುವ ಮಾತುಗಳು. ಆದರೆ, ಸಮ್ಮಿಶ್ರ ಸರ್ಕಾರ ಇದ್ದಾಗ ಹಾಗೂ ಸರ್ಕಾರ ಬಿದ್ದ ನಂತರ ಜೆಡಿಎಸ್ ನಾಯಕರು ತನ್ನನ್ನು ನಡೆಸಿಕೊಂಡ ರೀತಿಗೆ ಶಾಸಕ ಜಿಟಿಡಿ ಆಕ್ಷೇಪ ವ್ಯಕ್ತಪಡಿಸಿದ್ದು, ಅದನ್ನ ನಾನು ಮುಂದಿನ ದಿನಗಳಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದ್ದಾರಂತೆ.
ಆದರೆ, ಭೇಟಿ ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ ಜಿಟಿಡಿ, ಇದು ವೈಯುಕ್ತಿಕ ಭೇಟಿ. ನಾನೇನು ಮಾತನಾಡೋಲ್ಲ ಎಂದು ಹೇಳಿ ತೆರಳಿದ್ದಾರೆ. ಅಲ್ಲದೆ ಮಾಧ್ಯಮಗಳು ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಮುಂದಾದಾಗ ನನ್ನ ಹೇಳಿಕೆಗಳು ಮಾಧ್ಯಮದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ, ನಾನು ಆ ರೀತಿ ಏನು ನಡೆದುಕೊಂಡಿಲ್ಲ ಅಂತಷ್ಟೆ ಹೇಳಿ ಸ್ಥಳದಿಂದ ತೆರಳಿದ್ದಾರೆ. ಈ ಮೊದಲು ಕಾರ್ಯಕ್ರಮವೊಂದಲ್ಲಿ ನಾಟಕದ ಹಾಡು ಹೇಳಿ ರಂಜಿಸಿದ್ದ ಜಿಟಿಡಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿದ್ದರು. ಗ್ರಾ.ಪಂ ಚುನಾವಣೆಯಲ್ಲಿ ನಾನು ಭಾಗವಹಿಸೋದಿಲ್ಲ, ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೂ ಹೋಗಲ್ಲ ಹುಣಸೂರಿಗೂ ಹೋಗಲ್ಲ ಅಂತ ಸ್ಪಷ್ಟನೆ ನೀಡಿದ್ದರು.
ಜಿಟಿಡಿಯನ್ನ ನಿನ್ನೆಯಷ್ಟೇ ಜೆಡಿಎಸ್ ಪಕ್ಷದಿಂದ ಹುಣಸೂರು ಕ್ಷೇತ್ರದ ಉಸ್ತುವರಿಯನ್ನಾಗಿ ಮಾಡಲಾಗಿತ್ತು ಆದ್ರೆ ಈ ವಿಚಾರವು ಕೂಡ ಪಕ್ಷದ ಮೂಲಗಳಿಂದ ನನಗೆ ತಿಳಿದಿಲ್ಲ, ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ ಎಂದು ಹೇಳಿದ ಜಿಟಿಡಿ, ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಸಭೆಗೂ ಹಾಜರಾಗಲ್ಲ ಹಾಗೂ ಸಭೆಗೆ ಆಹ್ವಾನ ನೀಡಿಲ್ಲ. ಗ್ರಾ.ಪಂ ಚುನಾವಣೆ ಪಕ್ಷದ ಚಿಹ್ನೆ ಮೇಲೆ ನಡೆಯುವ ಚುನಾವಣೆಯಲ್ಲ ನಾನು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಟಸ್ಥವಾಗಿರುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದ ಉಸ್ತುವಾರಿಯನ್ನ ಕುಮಾರಸ್ವಾಮಿ ಅವರೇ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನನಗೆ ಹುಣಸೂರು ಕ್ಷೇತ್ರ ಪರಿಚಯವಿರುವ ಕಾರಣ ನನಗೆ ಉಸ್ತುವಾರಿ ವಹಿಸಿರಬಹುದು ಎಂದು ಉತ್ತರಿಸಿದ್ದರು.
ಇದನ್ನೂ ಓದಿ : ಸರ್ಕಾರದೊಂದಿಗೆ ಸಾರಿಗೆ ನೌಕರರ ಸಂಧಾನ ವಿಫಲ: ನಾಳೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ
ಇತ್ತ ತಮ್ಮ ಭೇಟಿಯ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕ ಸಾ.ರಾ.ಮಹೇಶ್, ಜಿ.ಟಿ.ದೇವೇಗೌಡರು ನಮ್ಮ ನಾಯಕರು. ಅವರನ್ನ ಭೇಟಿ ಮಾಡುವುದರಲ್ಲಿ ವಿಶೇಷ ಏನಿಲ್ಲ. ಅವರು ನಮ್ಮ ಪಕ್ಷದಲ್ಲೆ ಇದ್ದಾರೆ, ಮುಂದೆ ನಮ್ಮ ಜೊತೆ ಬಂದೆ ಬರ್ತಾರೆ. ಕೆಲ ದಿನಗಳ ಕಾಲ ಸಕ್ರಿಯ ಇರಲಿಲ್ಲ, ಇನ್ನು ಮುಂದೆ ಆಕ್ಟಿವ್ ಆಗುತ್ತಾರೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಅಂತ ಕೇಳ್ತಿವಿ. ಅವರು ನಮಗಿಂತ 25 ವರ್ಷ ದೊಡ್ಡವರು ನಮ್ಮಂತವರು ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳುವ ಅಧಿಕಾರ ಅವರಿಗೆ ಇದೆ. ಹಾಗೇನಾದರೂ ನಾನು ತಪ್ಪು ಮಾಡಿದ್ರೆ ಅದನ್ನು ತಿದ್ದಿಕೊಳ್ಳುತ್ತೇನೆ. ಕುಮಾರಸ್ವಾಮಿಯವರು ಜಿಟಿಡಿಯವರನ್ನ ಭೇಟಿ ಮಾಡುವ ಸಂದರ್ಭ ಬಂದಿಲ್ಲ, ಅಂತಹ ಸಂದರ್ಭ ಬಂದರೆ ಅವರು ಜಿಡಿಟಿರನ್ನ ಭೇಟಿ ಮಾಡುತ್ತಾರೆ ಇನ್ಮುಂದೆ ಎಲ್ಲವು ಸರಿಯಾಗಲಿದೆ ಗ್ರಾ.ಪಂ ಚುನಾವಣೆಯಲ್ಲಿ ನಮ್ಮ ಪಕ್ಷ ಹೆಚ್ಚಿನ ಸಾಧನೆ ಮಾಡಲಿದೆ ಅಂತ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ