• Home
  • »
  • News
  • »
  • district
  • »
  • ಡಿಕೆ ರವಿ ವರ್ಸಸ್ ರಮೇಶ್ ಕುಮಾರ್: ಕೆಸಿ ವ್ಯಾಲಿ ಯೋಜನೆ ರೂವಾರಿ ಯಾರು? ಜೆಡಿಎಸ್ ನಾಯಕರ ಮಧ್ಯೆ ಭಿನ್ನಾಭಿಪ್ರಾಯ

ಡಿಕೆ ರವಿ ವರ್ಸಸ್ ರಮೇಶ್ ಕುಮಾರ್: ಕೆಸಿ ವ್ಯಾಲಿ ಯೋಜನೆ ರೂವಾರಿ ಯಾರು? ಜೆಡಿಎಸ್ ನಾಯಕರ ಮಧ್ಯೆ ಭಿನ್ನಾಭಿಪ್ರಾಯ

ಕೋಲಾರ ಶಾಸಕ ಶ್ರೀನಿವಾಸಗೌಡ

ಕೋಲಾರ ಶಾಸಕ ಶ್ರೀನಿವಾಸಗೌಡ

ಕೋಲಾರದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರೂಪುಗೊಂಡಿರುವ ಕೆಸಿ ವ್ಯಾಲಿ ಯೋಜನೆಗೆ ದಿವಂಗತ ಡಿ.ಕೆ. ರವಿ ಪಾತ್ರದ ಬಗ್ಗೆ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಮತ್ತು ಎಂಎಲ್ಸಿ ಗೋವಿಂದರಾಜು ಮಧ್ಯೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.

  • Share this:

ಕೋಲಾರ: ಬಯಲುಸೀಮೆ ಕೋಲಾರ ಜಿಲ್ಲೆಯ ಪಾಲಿಗೆ ಕೆಸಿ ವ್ಯಾಲಿ ಯೋಜನೆ ವರವಾಗಿದೆ. ಬೆಂಗಳೂರಿನ ಸಂಸ್ಕರಿಸಿದ ಕೊಳಚೆ ನೀರು ಯಶಸ್ವಿಯಾಗಿ ಹರಿಯುತ್ತಿದ್ದು  ಯೋಜನೆಯಿಂದ ತುಂಬಿರುವ ಅಮ್ಮೇರಹಳ್ಳಿ ಕೆರೆಗೆ ಉಸ್ತುವಾರಿ ಸಚಿವ ಎಚ್ ನಾಗೇಶ್, ಸಂಸದ ಎಸ್ ಮುನಿಸ್ವಾಮಿ ನಿನ್ನೆ ಮಂಗಳವಾರ ಬಾಗಿನ ಸಮರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀನಿವಾಸಗೌಡ, ರಮೇಶ್ ಕುಮಾರ್, ವೈಎ ನಾರಾಯಣಸ್ವಾಮಿ, ಗೋವಿಂದರಾಜು ಹಾಗು ನಾಸಿರ್ ಅಹಮದ್ ಭಾಗಿಯಾಗಿದ್ದರು. ಬಾಗಿನ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ, ಯೋಜನೆ ಜಾರಿಯಾಗಲು ಯಾವೊಬ್ಬ ಐಎಎಸ್ ಅಧಿಕಾರಿಯೂ ಕಾರಣರಲ್ಲ, ಹಾಗೆಯೇ ಮೃತ ಅಧಿಕಾರಿಯೂ ಇದಕ್ಕೆ ಕಾರಣರಲ್ಲ. ಅದೇನೊ ರಾಜಕಾರಣಿಗಳು ಏನು ಮಾಡಿದರೂ ಯಾರು ಒಪ್ಪುತ್ತಿಲ್ಲ. ಇದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.


ಯೋಜನೆ ಆರಂಭದಿಂದ ಇಲ್ಲಿಯ ತನಕ ಹಿರಿಯ ಶಾಸಕ ರಮೇಶ್ ಕುಮಾರ್ ಅವರ ಪರಿಶ್ರಮ ಕಾರಣವೇ ಹೊರತು, ಮಾಜಿ ಕೋಲಾರ ಡಿಸಿ ಕಾರಣರಲ್ಲ ಎಂದು ದಿವಂಗತ ಡಿ.ಕೆ. ರವಿ ಅವರ ಹೆಸರೇಳದೆ ರಮೇಶ್ ಕುಮಾರ್ ಅವರನ್ನ ಜೆಡಿಎಸ್ ಶಾಸಕರು ಹಾಡಿಹೊಗಳಿದರು.


ಕೆಸಿ ವ್ಯಾಲಿ ಡಿ.ಪಿ.ಆರ್ ಸಿದ್ದವಾಗಲು ಡಿಕೆ ರವಿ ಅವರೇ ಕಾರಣ: ಎಮ್ಮೆಲ್ಸಿ ಗೋವಿಂದರಾಜು 


ಬಾಗಿನ ಸಮರ್ಪಣೆ ನಂತರ ನಗರಸಭೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ಎಮ್ಮೆಲ್ಸಿ ಗೋವಿಂದರಾಜು ಅವರು ಶಾಸಕ ಶ್ರೀನಿವಾಸಗೌಡ ಹೇಳಿಕೆಗೆ ತಿರುಗೇಟು ಕೊಟ್ಟರು. ಯೋಜನೆ ಜಾರಿಯಾಗಲು ಮೊದಲು ಡಿ.ಪಿ.ಆರ್ ಸಿದ್ದಪಡಿಸಲು ಮೃತ ಡಿಕೆ ರವಿಯವರೇ ಕಾರಣ. ಇದು ನನಗಿರುವ ಮಾಹಿತಿ. ಯಾರು ಏನೇ ಹೇಳಿದರು ಅವರ ಪಾತ್ರ ಯೋಜನೆಯಲ್ಲಿದೆ, ಇದು ಸತ್ಯ ಎಂದು ಶ್ರೀನಿವಾಸಗೌಡರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಈ ವೇಳೆ ಶಾಸಕ ಶ್ರೀನಿವಾಸಗೌಡ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಕುಳಿತಿದ್ದು ಕಂಡುಬಂತು.


ಡಿಕೆ ರವಿ ಹೆಸರಲ್ಲಿ ಭಿನ್ನಾಭಿಪ್ರಾಯ ಬೇಡ, ಯೋಜನೆಯಲ್ಲಿ ಅವರ ಪಾತ್ರವೂ ಇದೆ - ರಮೇಶ್ ಕುಮಾರ್ 


ಬಾಗಿನ ಕಾರ್ಯಕ್ರಮದ ಕಡೆಯಲ್ಲಿ ಮಾತನಾಡಿದ ಹಿರಿಯ ಶಾಸಕ ರಮೇಶ್ ಕುಮಾರ್, ಡಿಕೆ ರವಿ ಕುರಿತಾಗಿ ಯಾವುದೇ ಭಿನ್ನಾಭಿಪ್ರಾಯ ಬೇಡವೇ ಬೇಡ. ಕೆಸಿ ವ್ಯಾಲಿ ಯೋಜನೆ ಜಾರಿಯಲ್ಲಿ ಅವರ ಪ್ರಯತ್ನ ಇದೆ. ಮೊದಲು ಡಿಕೆ ಅವರು ಕೋಲಾರ ನಗರಕ್ಕೆ ನೀರು ಸರಬರಾಜು ಮಾಡಲು ಯೋಜನೆ ರೂಪಿಸಿದ್ದರು. ಯೋಜನೆ ಆರಂಭಕ್ಕೂ ಮೊದಲು ಹಲವರು ಶ್ರಮಿಸಿದ್ದಾರೆ. ಅವರಲ್ಲಿ ನಿವೃತ್ತ ನ್ಯಾಯಾಧೀಶ ನಾಗಮೋಹನ ದಾಸ್ ಅವರ ಕೊಡುಗೆಯೂ ಇದೆ. ಹೀಗೆ ನೀರಾವರಿ ಯೋಜನೆಯಲ್ಲಿ ಯಾರ್ಯಾರು ಸಹಕಾರ ಕೊಟ್ಟಿದ್ದಾರೊ ಎಲ್ಲರನ್ನು ನಾವು ಸ್ಮರಿಸಬೇಕಿದೆ ಎಂದರು.


ಒಟ್ಟಿನಲ್ಲಿ ಕೆಸಿ ವ್ಯಾಲಿ ಯೋಜನೆ ವಿಚಾರವಾಗಿ ಜಿಲ್ಲೆಯಲ್ಲಿ ಹಗ್ಗಜಗ್ಗಾಟ ಮುಂದುವರೆದಿದೆ. ಯೋಜನೆ ಜಾರಿಯಲ್ಲಿ ಮಾಜಿ ಡಿಸಿ ದಿವಂಗತ ಡಿಕೆ ರವಿ ಅವರ ಪಾತ್ರದ ಬಗ್ಗೆ ತೆನೆ ನಾಯಕರ ಮಧ್ಯೆಯೇ ವೈಮನಸ್ಸು, ಪೈಪೋಟಿ, ಹೊರಬಂದಿದೆ. ಇದು ವೈಯಕ್ತಿಕ ಮುನಿಸಾ ಅಥವಾ ಇದೊಂದೇ ವಿಚಾರದಲ್ಲಿನ ಭಿನ್ನಾಭಿಪ್ರಾಯವಾ ಎಂದು ತಿಳಿಯಬೇಕಿದೆ.

Published by:Vijayasarthy SN
First published: