HOME » NEWS » District » JDS LEADER HD KUMARASWAMY EMOTIONAL SPEECH IN ELECTION CAMPAIGN IN SIRA BYPOLL 2020 HK

ನನಗೆ ವಿಷ ಕೊಡುತ್ತಿರೋ, ಹಾಲು ಕೊಡುತ್ತಿರೋ ... ಶಿರಾ ಜನರಿಗೆ ಬಿಟ್ಟದ್ದು ; ಕುಮಾರಸ್ವಾಮಿ ಭಾವುಕ ನುಡಿ

ಶಿರಾ ಕ್ಷೇತ್ರದ ಜನರು ನನಗೆ ವಿಷ ಕೊಡುತ್ತಿರೋ ಅಥವಾ ಹಾಲು‌ ಕೊಡುತ್ತಿರೋ ನಿಮಗೆ ಬಿಟ್ಟದ್ದು, ಇಲ್ಲಿಂದ ನನಗೆ ಹೊಸ ರಾಜಕೀಯ ಶುರುವಾಗಬೇಕಿದ್ದು, ಮುಂದಿನ ರಾಜಕೀಯ ಹೋರಾಟಕ್ಕೆ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ.

news18-kannada
Updated:September 30, 2020, 6:50 PM IST
ನನಗೆ ವಿಷ ಕೊಡುತ್ತಿರೋ, ಹಾಲು ಕೊಡುತ್ತಿರೋ ... ಶಿರಾ ಜನರಿಗೆ ಬಿಟ್ಟದ್ದು ; ಕುಮಾರಸ್ವಾಮಿ ಭಾವುಕ ನುಡಿ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
  • Share this:
ತುಮಕೂರು(ಸೆಪ್ಟೆಂಬರ್​. 30): ಶಿರಾ ಉಪಚುನಾವಣೆ ಘೋಷಣೆ ಬಳಿಕ ರಾಜಕೀಯ ಚಟುವಟಿಕೆ ಗರಿ ಗೆದರಿದೆ. ಕ್ಷೇತ್ರಕ್ಕೆ ಇಂದು ಎಂಟ್ರಿ ಕೊಟ್ಟ ಜೆಡಿಎಸ್ ನಾಯಕರು ಭರ್ಜರಿ ಭಾಷಣ ಮಾಡಿ ಕಾರ್ಯಕರ್ತರನ್ನ ಹುರಿದುಂಬಿಸಿದ್ದಾರೆ. ಇನ್ನೂ ಅಭ್ಯರ್ಥಿ ಆಯ್ಕೆಯಲ್ಲಿ ನಿಗೂಡವಾಗಿರುವ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ‌ ವಿರುದ್ದ ಗುಡುಗಿ, ಚುನಾವಣೆಯ ಸಮರ ಸಾರಿದ್ದಾರೆ. ಇಂದೇ ಅಭ್ಯರ್ಥಿ ಘೋಷಣೆಯಾಗುತ್ತೆ ಎಂದು ನಿರೀಕ್ಷೆ ಇಟ್ಟಿದ್ದ ಕಾರ್ಯಕರ್ತರಿಗೆ ಇಂದೂ ಸಹ ನಿರಾಸೆಯಾಗಿದ್ದು, ಇನ್ನೆರೆಡು ದಿನದಲ್ಲಿ ಅಭ್ಯರ್ಥಿ ಯಾರೆಂದು ಅಂತಿಮ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭಾಷಣದಲ್ಲಿ ಹೇಳಿ ಕಾತುರ ಹೆಚ್ಚಿಸಿದ್ದಾರೆ. ಇನ್ನೊಂದೆಡೆ ಯಾರೇ ಅಭ್ಯರ್ಥಿಯಾದರೂ ನನ್ನ ನಮ್ಮ ಬೆಂಬಲ ಅವರಿಗೆ ಇದ್ದೇ ಇರುತ್ತೆ ಎನ್ನುವ ಮೂಲಕ ಸತ್ಯನಾರಾಯಣ್ ಅವರ ಮಗ ಸತ್ಯಪ್ರಕಾಶ್ ಸಂಚಲನ ಮೂಡಿಸಿದ್ದಾರೆ. ತುಮಕೂರು‌ ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವೇರಿದೆ. ನಿನ್ನೆಯಷ್ಟೆ ಚುನಾವಣೆ ದಿನಾಂಕ‌ ಘೋಷಣೆಯಾದ ಬೆನ್ನಲ್ಲೇ ಇಂದು ಜೆಡಿಎಸ್ ನ ನಾಯಕರು ಶಿರಾಗೆ ಭೇಟಿ‌ ನೀಡಿ ಉಪಸಮರದ ಅಭ್ಯರ್ಥಿ ಘೋಷಣೆಯ ಪೂರ್ವಭಾವಿ ಸಮಾವೇಶ ನಡೆಸಿದ್ದಾರೆ.

ಶಿರಾ ಉಪ ಚುನಾವಣೆಗೆ ಇನ್ನೂ ಅಭ್ಯರ್ಥಿಯನ್ನ ಘೋಷಣೆ ಮಾಡದ ಜೆಡಿಎಸ್ ಇನ್ನೂ ತನ್ನ ನಡೆಯನ್ನ ನಿಗೂಡವಾಗಿಸಿದೆ. ಇಂದು ಶಿರಾ ನಗರದ ಜೆಡಿಎಸ್ ಕಚೇರಿ ಬಳಿ ನಡೆದ ಸಮಾವೇಶದಲ್ಲಿ ಜೆಡಿಎಸ್ ನ ಟಿಕೆಟ್ ಆಕಾಂಕ್ಷಿತರು ಸಾವಿರಾರು ಕಾರ್ಯಕರ್ತರನ್ನ ಸೇರಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದಾರೆ.

ಸಮಾವೇಶದುದ್ದಕ್ಕೂ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ದ ಹರಿಹಾಯ್ದ ಜೆಡಿಎಸ್ ನ ನಾಯಕರು, ಉಪಸಮರದಲ್ಲಿ ಜೆಡಿಎಸ್ ಗೆಲ್ಲಲ್ಲೇ ಬೇಕೆಂಬ ಪಣತೊಟ್ಟಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಬಹಳ ವೇಗದಲ್ಲಿ ಹೊರಟ್ಟಿದ್ದು, ಎರಡೂ ಪಕ್ಷಗಳನ್ನ ಶಿರಾ ಕ್ಷೇತ್ರದ ಜನರು ತಿರಸ್ಕರಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಶಿರಾ ಕ್ಷೇತ್ರದ ಜನರು ನನಗೆ ವಿಷ ಕೊಡುತ್ತಿರೋ ಅಥವಾ ಹಾಲು‌ ಕೊಡುತ್ತಿರೋ ನಿಮಗೆ ಬಿಟ್ಟಿದ್ದು, ಇಲ್ಲಿಂದ ನನಗೆ ಹೊಸ ರಾಜಕೀಯ ಶುರುವಾಗಬೇಕಿದ್ದು, ಮುಂದಿನ ರಾಜಕೀಯ ಹೋರಾಟಕ್ಕೆ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ. ಇನ್ನೆರಡು‌ ದಿನದಲ್ಲಿ‌ ಕಾರ್ಯಕರ್ತರನ್ನ ಕರೆದು ಅಭ್ಯರ್ಥಿ ತೀರ್ಮಾನಿಸಲಿದ್ದು, ಎಲ್ಲರು ಒಟ್ಟಿಗೆ ಸೇರಿ ಚುನಾವಣೆ ಎದುರಿಸಿ ಎಂದು ಕುಮಾರಸ್ವಾಮಿ ಕರೆ ನೀಡಿದರು.

ಇದನ್ನೂ ಓದಿ : ಆರ್ ಆರ್ ನಗರ ಉಪ ಚುನಾವಣೆ : ಮುನಿರತ್ನ ನಮ್ಮ ವೈರಿ ಅಲ್ಲ, ಬಿಜೆಪಿ ವಿರುದ್ಧ ನಮ್ಮ ಹೋರಾಟ : ಸಂಸದ ಡಿಕೆ ಸುರೇಶ್

ಒಂದೆಡೆ ಪಕ್ಷದ ಟಿಕೆಟ್ ರೇಸ್ ನಲ್ಲಿ ಕಲ್ಕೆರೆ ರವಿಕುಮಾರ್ ಹಾಗೂ ದಿವಂಗತ ಶಾಸಕ ಸತ್ಯನಾರಾಯಣ್ ಪುತ್ರ ಸತ್ಯಪ್ರಕಾಶ್ ಇದ್ದು, ಇಂದಿನ ಸಮಾವೇಶದಲ್ಲಿ ಸತ್ಯಪ್ರಕಾಶ್ ಭಾಷಣ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಟಿಕೆಟ್ ಘೋಷಣೆಯಲ್ಲಿ ಸತ್ಯನಾರಾಯಣ್ ಅವ್ರ ಕುಟುಂಬಕ್ಕೆ ಮೊದಲ ಆದ್ಯತೆ ಎಂದು ಈ ಹಿಂದಿನಿಂದಲೂ ಹೆಚ್ ಡಿ ಕುಮಾರಸ್ವಾಮಿಯವರು ಘೋಷಿಸಿದ್ದು, ಯಾರೇ ಅಭ್ಯರ್ಥಿಯಾದರೂ ನನ್ನ ನಮ್ಮ ಬೆಂಬಲ ಅವರಿಗೆ ಇದ್ದೇ ಇರುತ್ತೆ ಅಂತಾ ತುಂಬಿದ ಸಭೆಯಲ್ಲಿ ಸತ್ಯಪ್ರಕಾಶ್ ತಮ್ಮ ಕೈಚಾಚಿ ಶಪತ ಮಾಡಿದ್ದು ವಿಶೇಷವಾಗಿತ್ತು.

ಸಮಾವೇಷದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್ ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಗೌರಿ ಶಂಕರ್ ಸೇರಿದಂತೆ ಜಿಲ್ಲೆಯ ಅನೇಕ ನಾಯಕರು ಉಪಸ್ಥಿತರಿದ್ದರು.

ಇಂದೇ ಟಿಕೆಟ್ ಘೊಷಣೆಯಾಗೋ ನಿರೀಕ್ಷೆಯಲ್ಲಿದ್ದ ಶಿರಾ ಜೆಡಿಎಸ್ ಕಾರ್ಯಕರ್ತರಿಗೆ ಇಂದೂ ಕೂಡ ನಿರಾಸೆಯಾಗಿದೆ. ಒಂದೆಡೆ ಸತ್ಯಪ್ರಕಾಶ್ ಭಾಷಣದ ಮಾತುಗಳು, ಇನ್ನೊಂದೆಡೆ ಕಾರ್ಯಕರ್ತರನ್ನ ಸೇರಿಸಿ ಶಕ್ತಿ ಪ್ರದರ್ಶನ ನಡೆಸಿರುವ ಕಲ್ಕೆರೆ ರವಿಕುಮಾರ್, ಈ ಇಬ್ಬರಲ್ಲಿ ಟಿಕೆಟ್ ಯಾರಿಗೆ ಎನ್ನುವುದು ಸದ್ಯದ ಕಾತುರವಾಗಿದೆ.
Published by: G Hareeshkumar
First published: September 30, 2020, 6:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories