ಹುಬ್ಬಳ್ಳಿ(ಅ. 10): ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಖಚಿತ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಶಿವಶಂಕರ ಕಲ್ಲೂರ ಜೊತೆಗೆ ಶನಿವಾರ ಜಂಟಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಗೆಲುವಿಗಾಗಿ ಪ್ರಾಮಾಣಿಕವಾದ ಪ್ರಯತ್ನ ನಡೆಸಿದ್ದೇವೆ ಎಂದರು.
ಈಗಾಗಲೇ ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳು ನನ್ನನ್ನು ಸಂಪರ್ಕ ಮಾಡಿದ್ದಾರೆ. ಚುನಾವಣೆಯಲ್ಲಿ ಬೆಂಬಲ ಸೂಚಿಸುವಂತೆ ನನಗೆ ಮನವಿ ಮಾಡಿದ್ದಾರೆ. ಆದರೆ ನಾನು ಜೆಡಿಎಸ್ ಪಕ್ಷದ ಅಭ್ಯರ್ಥಿ ಶಿವಶಂಕರ ಕಲ್ಲೂರ ಅವರಿಗೆ ಮಾತ್ರ ಬೆಂಬಲಿಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಆದರೆ ಪದವೀಧರರಿಗಾಗಿ ಅವರು ಈವರೆಗೂ ಏನು ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಈ ಕುರಿತು ಬಹಿರಂಗ ವೇದಿಕೆ ಮೇಲೆ ನಾವು ಬಿಜೆಪಿ ಜೊತೆ ಚರ್ಚೆಗೆ ಸಿದ್ಧ ಎಂದು ಹೊರಟ್ಟಿ ಹೇಳಿದರು.
ನಾವು ಈವರೆಗೂ ಯಾರ ನಂಬಿಕೆಯನ್ನೂ ಕಳೆದುಕೊಂಡಿಲ್ಲ. ಅದೇ ನಂಬಿಕೆಯ ಮೇಲೆ ನಾವು ಈಗ ಪದವೀಧರರ ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ. ಕಳೆದ ಹಲವಾರು ವರ್ಷಗಳಿಂದ ಜೆಡಿಎಸ್ ಪಕ್ಷ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದೆ. ಹೀಗಾಗಿ ನಮಗೆ ಹಿಂದಿನಿಂದಲೂ ಬೆಂಬಲ ಸಿಕ್ಕಿದೆ. ನಾವು ಯಾರ ಜೊತೆಗೂ ಒಳ ಒಪ್ಪಂದ ಮಾಡಿಕೊಂಡಿಲ್ಲ ಕಳೆದ ಕೆಲ ಚುನಾವಣೆಯಲ್ಲಿ ಎಚ್.ಕೆ. ಪಾಟೀಲರ ಜೊತೆಗೆ ಹೊಂದಾಣಿಕೆ ಇತ್ತು. ಈ ಚುನಾವಣೆಯಲ್ಲಿ ನಾವು ಮಾಡಿದ ಕಾರ್ಯ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿದ್ದರಿಂದ ಮತದಾರರ ಮುಂದೆ ಹೋಗುತ್ತಿದ್ದೇವೆ ಎಂದು ಮಾಜಿ ಸಚಿವರೂ ಆದ ಅವರು ತಿಳಿಸಿದರು.
ಇದನ್ನೂ ಓದಿ: ಬಂಗಾರಪೇಟೆಯಲ್ಲಿ ಮಳೆನೀರಿನಿಂದ ತುಂಬಿದ ಕಾಲುವೆಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ
ಇದೇ ವೇಳೆ ಮಾತನಾಡಿದ ಪಶ್ಚಿಮ ಪದವೀಧರರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಶಂಕರ ಕಲ್ಲೂರ್, ಈ ಚುನಾವಣೆಯಲ್ಲಿ ಎಸ್.ವಿ. ಸಂಕನೂರ್ ಹಠಾವೋ, ಪದವೀಧರ್ ಬಚಾವೋ ಎಂಬ ತೀರ್ಮಾನಕ್ಕೆ ಜನರು ಬಂದಿದ್ದಾರೆ. ಅಧಿಕ ಮತಗಳ ಅಂತರದಿಂದ ಜೆಡಿಎಸ್ ಗೆಲುವು ಶತಃಸಿದ್ಧ ಎಂದರು.
ನಾನು ಕಳೆದ ಎರಡು ಸಲ ಕವಿವಿ ಸೆನೆಟ್ ಸದಸ್ಯನಾಗಿ, ವಿದ್ಯಾರ್ಥಿಗಳ ಜೊತೆಗೆ ಪಾಲ್ಗೊಂಡು ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಕಳೆದ ಆರು ವರ್ಷಗಳಿಂದ ಬಿಜೆಪಿಯ ಎಸ್.ವಿ. ಸಂಕನೂರ್ ಅವರು ಪದವೀಧರರ ಯಾವುದೇ ಸಮಸ್ಯೆ ಬಗೆಹರಿಸಿಲ್ಲ. ಅವರು ಸದನದ ಶೂರರು ಅಂತಾ ನಾನು ಭಾವಿಸಿದ್ದೆ. ಕೇವಲ ಮನವಿ ಕೊಟ್ಟಿದ್ದಾರೆ, ಸಂಕನೂರ ಅವರು ಸದನದ ಶೂರರಲ್ಲ. ಅವರೊಬ್ಬ ಮನವಿ ಶೂರರು ಎಂದು ಜೆಡಿಎಸ್ ಅಭ್ಯರ್ಥಿ ವಾಗ್ದಾಳಿ ನಡೆಸಿದರು.
ವರದಿ: ಪರಶುರಾಮ ತಹಶೀಲ್ದಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ