ಬೆಂಗಳೂರು, ಸೆ. 08: ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ (Kalburgi City Corporation) ಕಾಂಗ್ರೆಸ್ ಕೈತಪ್ಪಿಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿಯಬೇಕೆಂದು ಹಪಹಪಿಸುತ್ತಿರುವ ಬಿಜೆಪಿಗೆ ಜೆಡಿಎಸ್ ಪಕ್ಷ ಶಾಕ್ ಕೊಟ್ಟಿದೆ. ಬಿಜೆಪಿಗೆ ಬೆಂಬಲ ಕೊಡಲು ನಿರ್ಧರಿಸಿದ್ದ ಕುಮಾರಸ್ವಾಮಿ ಅಂತಿಮವಾಗಿ ನಿರ್ಧಾರ ಬದಲಿಸಿದ್ದಾರೆ. ಇದಕ್ಕೆ ಕಾರಣ ಕಲಬುರ್ಗಿ ಪಾಲಿಕೆಯ ನೂತನ ಜೆಡಿಎಸ್ ಸದಸ್ಯರನ್ನಲಾಗಿದೆ. ಬಿಡದಿಯ ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿ ನಿವಾಸಕ್ಕೆ ಆಗಮಿಸಿದ ನಾಸಿರ್ ಹುಸೇನ್, ಆಲಿಮುದ್ದೀನ್ ಪಟೇಲ್ ಸೇರಿದಂತೆ ನಾಲ್ವರು ಜೆಡಿಎಸ್ ಸದಸ್ಯರುಗಳು ಜೆಡಿಎಸ್ಗೆ ಮೇಯರ್ ಸ್ಥಾನ ಸಿಗಬೇಕೆಂದು ಪಟ್ಟು ಹಿಡಿದಿದ್ದಾರೆನ್ನಲಾಗಿದೆ. ಜೆಡಿಎಸ್ ಪಕ್ಷಕ್ಕೆ ಯಾರು ಮೇಯರ್ ಸ್ಥಾನ ಕೊಡುತ್ತಾರೋ ಆ ಪಕ್ಷಕ್ಕೆ ಬೆಂಬಲ ಕೊಡುತ್ತೇವೆ ಎಂದು ಈ ಪಾಲಿಕೆ ಸದಸ್ಯರು ಕುಮಾರಸ್ವಾಮಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆನ್ನಲಾಗಿದೆ. ಕಾಂಗ್ರೆಸ್ ಜೊತೆ ಹೋಗುವುದು ಬೇಡ ಎಂದು ನಿರ್ಧರಿಸಿದ್ದ ಕುಮಾರಸ್ವಾಮಿ ಈಗ ಪಾಲಿಕೆ ಸದಸ್ಯರ ಮಾತಿಗೆ ಹೌದು ಎಂದು ಹೇಳಿರುವುದು ತಿಳಿದುಬಂದಿದೆ.
ರಾಮನಗರದಲ್ಲಿ ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಜೆಡಿಎಸ್ನ ಕಲಬುರ್ಗಿ ಪಾಲಿಕೆ ಸದಸ್ಯರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಾವು ನಾಲ್ಕು ಜನರು ಕುಮಾರಣ್ಣರನ್ನ ಭೇಟಿ ಮಾಡಿದ್ದೇವೆ. ಜೆಡಿಎಸ್ಗೆ ಮೇಯರ್ ಸ್ಥಾನ ಸಿಗಬೇಕೆಂಬ ಅಭಿಪ್ರಾಯವನ್ನು ಪ್ರಮುಖವಾಗಿ ನಾವು ತಿಳಿಸಿದ್ದೇವೆ. ನಮಗೆ ಯಾವ ಪಕ್ಷ ಬೆಂಬಲ ಕೊಡುತ್ತೋ ಆ ಪಕ್ಷಕ್ಕೆ ಬೆಂಬಲ ಕೊಡುತ್ತೇವೆ. ಕಾಂಗ್ರೆಸ್ಗೆ ಬೆಂಬಲ ಕೊಟ್ಟರೆ ಅದರ ಬಗ್ಗೆ ಕುಮಾರಣ್ಣನ ಜೊತೆಗೆ ಚರ್ಚೆ ಮಾಡುತ್ತೇವೆ ಎಂದು ಬಿಡದಿಯ ತೋಟದ ಮನೆಯಲ್ಲಿ ಜೆಡಿಎಸ್ ಮುಖಂಡ ನಾಸಿರ್ ಹುಸೇನ್ ಉಸಾದ್ ಹೇಳಿದ್ಧಾರೆ.
ಇನ್ನು ಪಾಲಿಕೆ ಸದಸ್ಯ ಅಲೀಮುದ್ದೀನ್ ಪಟೇಲ್ ಅವರು ಈ ಬಗ್ಗೆ ಮಾತನಾಡಿದ್ದು, ತಮಗೆ ಪಾಲಿಕೆ ಮೈತ್ರಿ ವಿಚಾರದ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ. ನಾಸಿರ್ ಹುಸೇನ್ ಮತ್ತು ಕುಮಾರಸ್ವಾಮಿ ಏನು ಚರ್ಚೆ ಮಾಡಿದ್ದಾರೆಂದು ಗೊತ್ತಿಲ್ಲ. ಸಂಜೆ 4ಕ್ಕೆ ನಿರ್ಧಾರ ಹೊರಬೀಳಬಹುದು ಎಂದು ಅಲೀಮುದ್ದೀನ್ ತಿಳಿಸಿದ್ದಾರೆ.
ಇದನ್ನೂ ಓದಿ: ಕಲಬುರ್ಗಿ ಪಾಲಿಕೆಗೆ ಮಹಿಳಾ ಮೇಯರ್; ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರಕ್ಕೆ ಬಿಜೆಪಿ ಕಸರತ್ತು
ಬಿಜೆಪಿಗೆ ಬೆಂಬಲಿಸಲು ನಿರ್ಧರಿಸಿದ್ದ ಕುಮಾರಸ್ವಾಮಿ:
ಆದರೆ, ನಾಸಿರ್ ಹುಸೇನ್ ಹೇಳಿಕೆಗೂ ಮುನ್ನ ಮಾಧ್ಯಮಗಳಿಗೆ ಬಂದ ಮಾಹಿತಿ ಪ್ರಕಾರ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದರೆನ್ನಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಜೊತೆ ಹೋಗುವುದರಿಂದ ಯಾವುದೇ ಪ್ರಯೋಜನ ಇಲ್ಲ. ಬಿಜೆಪಿ ಜೊತೆ ಕೈ ಜೋಡಿಸುವುದರಿಂದ ಅಭಿವೃದ್ಧಿ ಕೆಲಸಗಳು ಆಗುವ ಸಾಧ್ಯತೆ ಇದೆ. ನೀವು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿ. ನಾನು ದೇವೇಗೌಡರನ್ನು ಮನವೊಲಿಸುತ್ತೇನೆ ಎಂದು ಜೆಡಿಎಸ್ ಸದಸ್ಯರಿಗೆ ಕುಮಾರಸ್ವಾಮಿ ಒಪ್ಪಿಸಿದ್ದರೆಂದು ಹೇಳಲಾಗುತ್ತಿತ್ತು. ಆದರೆ, ಕಲಬುರ್ಗಿ ಪಾಲಿಕೆಯ ಜೆಡಿಎಸ್ ಸದಸ್ಯರು ಮೇಯರ್ ಸ್ಥಾನ ಬೇಕೆಂದು ಪಟ್ಟು ಹಿಡಿದಿರುವುದರಿಂದ ಕುಮಾರಸ್ವಾಮಿ ಕೂಡ ವಿಧಿಯಿಲ್ಲದೇ ಒಪ್ಪಿರಬಹುದು ಎಂಬ ಅಭಿಪ್ರಾಯಗಳಿವೆ.
ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಬಲಾಬಲ ಎಷ್ಟು?:
ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ 55 ವಾರ್ಡ್ಗಳಿವೆ. ಮೊನ್ನೆ ಪ್ರಕಟವಾದ ಫಲಿತಾಂಶದಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಕ್ಷೇತ್ರಗಳಲ್ಲಿ ಗೆದ್ದಿವೆ. ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಪಾಲಿಕೆ ಅಧ್ಯಕ್ಷರ ಅಥವಾ ಮೇಯರ್ ಚುನಾವಣೆಯಲ್ಲಿ ಕಲಬುರ್ಗಿ ಲೋಕಸಭಾ ಕ್ಷೇತ್ರದ ಸಂಸದ, ಶಾಸಕ ಹಾಗೂ ವಿಧಾನಸಭಾ ಸದಸ್ಯರಿಗೆ ಮತ ಹಾಕುವ ಹಕ್ಕು ಇದೆ. ಇವರೆಲ್ಲರನ್ನೂ ಸೇರಿ ಪಾಲಿಕೆಯಲ್ಲಿ ಬಹುಮತಕ್ಕೆ 32 ನಂಬರ್ ಅಗತ್ಯ ಇದೆ. ಬಿಜೆಪಿಯಲ್ಲಿ ಪಾಲಿಕೆ ಸದಸ್ಯರ ಸಂಖ್ಯೆ 23, ಒಬ್ಬ ಸಂಸದ, ಇಬ್ಬರು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರೊಂದಿಗೆ ಬಿಜೆಪಿಯ ಬಲ 30 ಆಗುತ್ತದೆ. ಮ್ಯಾಜಿಕ್ ನಂಬರ್ ಆದ 32ಕ್ಕೆ ಇನ್ನೂ ಇಬ್ಬರು ಸದಸ್ಯರ ಬೆಂಬಲ ಅಗತ್ಯ ಇದೆ. ಜೆಡಿಎಸ್ನ ನಾಲ್ವರು ಸದಸ್ಯರಲ್ಲಿ ಇಬ್ಬರ ಬೆಂಬಲ ಸಿಕ್ಕರೂ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಬಲ್ಲುದು.
ಅತ್ತ, ಕಾಂಗ್ರೆಸ್ ಪಕ್ಷ ಕಲಬುರ್ಗಿ ಪಾಲಿಕೆಯಲ್ಲಿ 27 ಸದಸ್ಯರನ್ನ ಹೊಂದಿದೆ. ಒಬ್ಬ ಶಾಸಕ ಹಾಗೂ ಒಬ್ಬರ ರಾಜ್ಯಸಭಾ ಸದಸ್ಯರನ್ನ ಸೇರಿಸಿದರೆ ಅದರ ಸಂಖ್ಯಾಬಲ 29ಕ್ಕೆ ಏರುತ್ತದೆ. ಮ್ಯಾಜಿಕ್ ನಂಬರ್ಗೆ ಇನ್ನೂ 3 ಸದಸ್ಯರ ಬೆಂಬಲ ಅಗತ್ಯ ಇದೆ. ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಸದಸ್ಯರ ಬೆಂಬಲ ಅತಿ ಮುಖ್ಯ. ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಮುಕ್ತ ಮನಸ್ಸಿನಿಂದ ಇದೆ. ಮೊನ್ನೆ ನ್ಯೂಸ್18 ಕನ್ನಡ ಜೊತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಜೆಡಿಎಸ್ ಪಕ್ಷ ಜಾತ್ಯತೀತ ನಿಲುವು ಇರುವುದರಿಂದ ಅದರೊಂದಿಗೆ ಅಧಿಕಾರ ಹಂಚಿಕೊಳ್ಳಲು ಸಮಸ್ಯೆ ಇಲ್ಲ ಎಂದಿದ್ದರು. ಆದರೆ, ಅಂತಿಮವಾಗಿ ಪಕ್ಷದ ನಾಯಕರು ಮತ್ತು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಈಗ ಜೆಡಿಎಸ್ ಪಕ್ಷ ಮೇಯರ್ ಪಟ್ಟಕ್ಕಾಗಿ ಬೇಡಿಕೆ ಇಟ್ಟರೆ ಕಾಂಗ್ರೆಸ್ ಒಪ್ಪಿಕೊಳ್ಳುತ್ತದಾ ಕಾದುನೋಡಬೇಕು. ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಜೆಡಿಎಸ್ಗೆ ಮೇಯರ್ ಸ್ಥಾನ ಕೊಡಲು ಸುತಾರಾಂ ಒಪ್ಪಲಿಲ್ಲವಾದರೂ ಕಲಬುರ್ಗಿಯಲ್ಲಿ ಅಸ್ತು ಎಂದರೆ ಅಚ್ಚರಿ ಇಲ್ಲ. ಒಂದು ವೇಳೆ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಜೆಡಿಎಸ್ಗೆ ಮೇಯರ್ ಸ್ಥಾನ ಕೊಡಲು ನಿರ್ಧರಿಸಿದರೆ ಕುಮಾರಸ್ವಾಮಿ ಯಾರ ಕಡೆ ವಾಲುತ್ತಾರೆ ಎಂಬುದು ಸದ್ಯದ ಕುತೂಹಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ