• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಸಾರಿಗೆ ಮುಷ್ಕರ ಜಿದ್ದಾಜಿದ್ದಿ; ಜಮಖಂಡಿಯಲ್ಲಿ ಬಸ್ಸಿಗೆ ಕಲ್ಲೇಟಿನಿಂದ ರಾಜ್ಯದಲ್ಲಿ ಮೊದಲ ಚಾಲಕ ಬಲಿ!

ಸಾರಿಗೆ ಮುಷ್ಕರ ಜಿದ್ದಾಜಿದ್ದಿ; ಜಮಖಂಡಿಯಲ್ಲಿ ಬಸ್ಸಿಗೆ ಕಲ್ಲೇಟಿನಿಂದ ರಾಜ್ಯದಲ್ಲಿ ಮೊದಲ ಚಾಲಕ ಬಲಿ!

ಮೃತಪಟ್ಟ ಚಾಲಕ.

ಮೃತಪಟ್ಟ ಚಾಲಕ.

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಶಾಂತಿಯುತವಾಗಿ ನಡೆಯುತ್ತೆ ಎಂದೆಲ್ಲೆ ಹೇಳಿ, ಇದೀಗ ಮುಷ್ಕರದ ಹೆಸರಿನಲ್ಲಿ ತಮ್ಮದೇ ಸಿಬ್ಬಂದಿ ಮೃತಪಟ್ಟ ಅಮಾನವೀಯ ಘಟನೆ ನಡೆದಿದೆ. ಇನ್ನು ಮುಂದಾದರು ಮಾತುಕತೆ ಮೂಲಕ ಸರ್ಕಾರ ಸಾರಿಗೆ ನೌಕರರ ಮುಷ್ಕರ ಸುಖಾಂತ್ಯಗೊಳಿಸಬೇಕಿದೆ.

  • Share this:

ಬಾಗಲಕೋಟೆ (ಏ. 16): ಸಾರಿಗೆ ನೌಕರರ ಮುಷ್ಕರ 10ನೇ ದಿನವೂ ಮುಂದುವರೆದಿದೆ. ಏತನ್ಮಧ್ಯೆ, ಕುಟುಂಬಕ್ಕೆ ಆಧಾರವಾಗಿದ್ದ ಚಾಲಕ ಹಿರಿಯ ಅಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊ೦ಡು ಪ್ರಮಾಣ ಪತ್ರ ಸಲ್ಲಿಸಿ  ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ಕೆಲ ಕಿಡಿಗೇಡಿಗಳು ಬಸ್ಸಿಗೆ ಕಲ್ಲು ತೂರಿದ್ದರಿಂದ ತೀವ್ರವಾಗಿ ಗಾಯಗೊಂಡ ಚಾಲಕ ಬಲಿಯಾಗಿದ್ದಾರೆ. ಕಿಡಿಗೇಡಿಗಳ ದುಷ್ಕೃತ್ಯಕ್ಕೆ ರಾಜ್ಯದಲ್ಲಿ ಕೆಎಸ್​ಆರ್​ಟಿಸಿ ಚಾಲಕನೋರ್ವನ ಬಲಿಯಾಗಿರುವ ಅಮಾನವೀಯ ಘಟನೆ  ಬಾಗಲಕೋಟೆಯಲ್ಲಿ ನಡೆದಿದೆ.


ಚಾಲಕನ ಸಾವಿಗೆ ಯಾರು ಹೊಣೆ!?


ಬಾಗಲಕೋಟೆ ಜಿಲ್ಲೆ ಜಮಖಂಡಿ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 55 ವರ್ಷದ ಎನ್ ಕೆ ಅವಟಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವತ್ತು ಕರ್ತವ್ಯಕ್ಕೆಂದು ಹಾಜರಾಗಿ ಜಮಖಂಡಿಯಿಂದ ಘತ್ತರಗಾಕ್ಕೆ ಹೋಗಿ ವಿಜಯಪುರ ಮಾರ್ಗವಾಗಿ ವಾಪಸ್  ಜಮಖಂಡಿ ನಗರಕ್ಕೆ ಬರುವ ವೇಳೆ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಕಿಡಿಗೇಡಿಗಳು ಬಸ್ ಗೆ ಏಕಾಏಕಿ ಕಲ್ಲು ತೂರಿದ್ದಾರೆ. ಕಲ್ಲು ನೇರವಾಗಿ ಚಾಲಕ ಎನ್ ಕೆ ಅವಟಿ ಕುತ್ತಿಗೆ ಭಾಗಕ್ಕೆ ಬಲವಾಗಿ ಹೊಡೆದ ಪರಿಣಾಮ ಅವರು ತಕ್ಷಣ ಬಸ್ ನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ, ಮೂರ್ಛೆ ಹೋಗಿದ್ದಾರೆ. ಈ ವೇಳೆ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು. ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ಚಾಲಕನನ್ನು ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.


ಮೃತ ಚಾಲಕನಿಗೆ ಪತ್ನಿ ಶಹಿರಾಬಾನು, ನಾಲ್ಕು ಜನ ಪುತ್ರರಿದ್ದಾರೆ. ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಸಾರಿಗೆ ನೌಕರರ ಇದೀಗ ಸಾರಿಗೆ ಮುಷ್ಕರದಲ್ಲಿ ಬಲಿಯಾಗಿದ್ದು ವಿಪರ್ಯಾಸ. ಈ ಸಾವಿಗೆ ಯಾರು ಹೊಣೆ ಎನ್ನುವ ಪ್ರಶ್ನೆ ಕಾಡತೊಡಗಿದೆ. ಆಸ್ಪತ್ರೆಗೆ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ, ಸಾರಿಗೆ ಅಧಿಕಾರಿಗಳು ಭೇಟಿ ನೀಡಿದರು. ಇನ್ನು ಕಲ್ಲು ಎಸೆದಿದ್ದು ಯಾರು ಎನ್ನುವದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.


ಸಾರಿಗೆ ಅಧಿಕಾರಿಗಳ ವಿರುದ್ಧ ಮೃತನ ಹೆಂಡತಿ ಆಕ್ರೋಶ.!!


ಜಮಖಂಡಿ ನಗರದ  ಅವಟಿ ಗಲ್ಲಿ ನಿವಾಸಿ ನಭಿಸಾಬ ಅವಟಿ ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ 9 ದಿನದಿಂದ ಕೆಲಸಕ್ಕೆ ಗೈರಾಗಿದ್ದರು. ಸಾರಿಗೆ ಅಧಿಕಾರಿಗಳು ಅವರ ಮನೆಗೆ ಹೋಗಿ ಪದೇ ಪದೇ ಕರ್ತವ್ಯಕ್ಕೆ ಹಾಜರಾಗಿ ಎಂದು ಒತ್ತಡ ಹಾಕಿದ್ದಾರೆ. 55ವರ್ಷ ಮೇಲ್ಪಟ್ಟ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿಕೊ೦ಡು ಕರ್ತವ್ಯಕ್ಕೆ ಹಾಜರಾಗಲು ಸೂಚಿನೆ ನೀಡಿದ್ದರು. ನನ್ನ ಪತಿ ಕರ್ತವ್ಯಕ್ಕೆ ಹಾಜರಾಗಿ ಇವತ್ತು ಮೃತಪಟ್ಟಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಅಳಲು ತೋಡಿಕೊಂಡು, ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.


ಇದನ್ನು ಓದಿ: ಕೊರೋನಾ ಹೆಚ್ಚಳ; ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಹೊರ ಜಿಲ್ಲೆಯ ಪ್ರವಾಸಿಗರ ನಿಷೇಧಕ್ಕೆ ಸ್ಥಳೀಯರ ಒತ್ತಾಯ


ಇನ್ನೊಂದೆಡೆ ಸರ್ಕಾರ ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪು ಹಾಕುತ್ತಿಲ್ಲ. ಸರಕಾರ ಹಾಗೂ ಸಾರಿಗೆ ನೌಕರರ ಮುಷ್ಕರದ ಜಿದ್ದಾಜಿದ್ದಿಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಇದೀಗ ಸಾರಿಗೆ ನೌಕರ ಮುಷ್ಕರಕ್ಕೆ ಸರ್ಕಾರವೂ ಸೆಡ್ಡು ಹೊಡೆದು ಖಾಸಗಿ ಬಸ್, ವಾಹನಗಳಿಗೆ ಬಸ್ ನಿಲ್ದಾಣ ಮೂಲಕ ಸಂಚಾರಕ್ಕೆ ಅವಕಾಶ ನೀಡಿದೆ. ಇನ್ನು ರಾಜ್ಯದಲ್ಲಿ ಅಲ್ಲಲ್ಲಿ ಓಡಾಡುತ್ತಿರುವ ಬಸ್​ಗಳಿಗೆ ಕಲ್ಲು ತೂರುವುದು, ಕರ್ತವ್ಯಕ್ಕೆ ಹಾಜರಾದವರಿಗೆ ಹೂ ಮಾಲೆ ಹಾಕಿ ವ್ಯಂಗ್ಯವಾಡುವುದು, ಬಸ್ ಅಡ್ಡಗಟ್ಟಿ ಪ್ರತಿಭಟನೆ ಮಾಡಿದ್ದಾರೆ.


ಒಟ್ಟಿನಲ್ಲಿ ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಶಾಂತಿಯುತವಾಗಿ ನಡೆಯುತ್ತೆ ಎಂದೆಲ್ಲೆ ಹೇಳಿ, ಇದೀಗ ಮುಷ್ಕರದ ಹೆಸರಿನಲ್ಲಿ ತಮ್ಮದೇ ಸಿಬ್ಬಂದಿ ಮೃತಪಟ್ಟ ಅಮಾನವೀಯ ಘಟನೆ ನಡೆದಿದೆ. ಇನ್ನು ಮುಂದಾದರು ಮಾತುಕತೆ ಮೂಲಕ ಸರ್ಕಾರ ಸಾರಿಗೆ ನೌಕರರ ಮುಷ್ಕರ ಸುಖಾಂತ್ಯಗೊಳಿಸಬೇಕಿದೆ.

Published by:HR Ramesh
First published: