ಬೆಳಗಾವಿ (ಸೆಪ್ಟೆಂಬರ್ 25); ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಕ್ರಿಯೆ ನೆರವೇರಿಸಿದ ಬಳಿಕ ಇಂದು ಕುಟುಂಬ ಸದಸ್ಯರು ಬೆಳಗಾವಿಗೆ ವಾಪಸ್ ಆಗಿದ್ದಾರೆ. ಬೆಳಗಾವಿಯ ವಿಶೇಶ್ವರಯ್ಯ ನಗರದಲ್ಲಿ ಇರೋ ನಿವಾಸದಲ್ಲಿ ಶಿವಗಣಾರಾಧನೆಯನ್ನು ನಡೆಸಲಾಯಿತು. ಈ ವೇಳೆ ಸಂಬಂಧಿಕರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮಗಳ ಜತೆಗೆ ಮಾತನಾಡಿದ ಸಚಿವ ಜಗದೀಶ ಶೆಟ್ಟರ್, "ಸುರೇಶ್ ಅಂಗಡಿ ಅವರ ಪಾರ್ಥೀವ ಶರೀರವನ್ನು ಬೆಳಗಾವಿಗೆ ತರಲು ಸಾಕಷ್ಟು ಪ್ರಯತ್ನ ಮಾಡಲಾಯಿತು. ಆದರೇ ಇದಕ್ಕೆ ಕಾನೂನಿನ ತೊಡಕು ಹಿನ್ನೆಲೆಯಲ್ಲಿ ಸಾಧ್ಯವಾಗಲಿಲ್ಲ. ಆದರೆ, ಬೆಳಗಾವಿಯಲ್ಲಿ ಸುರೇಶ ಅಂಗಡಿ ಸ್ಮಾರಕ ನಿರ್ಮಾಣ ಬಗ್ಗೆ ಯೋಚನೆ ಇದೆ. ಈ ಕುರಿತು ಜನಪ್ರತಿನಿಧಿಗಳು, ಅಭಿಮಾನಿಗಳು, ಕುಟುಂಬದ ಸದಸ್ಯರ ಜತೆಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
"ಸುರೇಶ ಅಂಗಡಿ ಮೃತಪಟ್ಟಿದ್ದು ಆಘಾತಕಾರಿ ಸಂಗತಿಯಾಗಿದೆ. ಆರೋಗ್ಯ ಸುಧಾರಣೆಗೆ ಎಲ್ಲಾ ಪ್ರಯತ್ನ ಮಾಡಿದ್ರು ಅದು ಫಲ ನೀಡಿಲ್ಲ. ಸುರೇಶ ಅಂಗಡಿ ಮಾಡಿರೋ ಕೆಲಸ ಇಂದಿಗು ಜನ ಮಾನಸದಲ್ಲಿ ಇದೆ. ನಾವು ಬೀಗರು ಆಗೋ ಮೊದಲೇ ಸುರೇಶ ಅಂಗಡಿ ನನ್ನ ಜತೆಗೆ ಸ್ನೇಹಿತರಾಗಿದ್ದರು. ಬಿಜೆಪಿ ಸಂಘಟನೆಗೆ ಬೆಳಗಾವಿ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಗೆ ಪ್ರವಾಸ ಮಾಡಿದ್ದೇವೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಸೇರಿ ಪಕ್ಷ ಸಂಘಟನೆ ಮಾಡಲು ಶ್ರಮಿಸಿದ್ರು. ಇದರಿಂದ ಬೆಳಗಾವಿಯಲ್ಲಿ ಬಿಜೆಪಿಯಲ್ಲಿ ಪಕ್ಷ ಅತ್ಯಂತ ಗಟ್ಟಿಯಾಗಿ ಬೆಳೆದಿದೆ.
ರೈಲ್ವೇ ಮಂತ್ರಿಯಾಗಿ ಒಂದೇ ವರ್ಷದಲ್ಲಿ ಇಡೀ ರಾಜ್ಯದಲ್ಲಿ ಅನೇಕ ಉತ್ತಮ ಕೆಲಸವನ್ನು ಮಾಡಿದ್ದಾರೆ. ಬೆಂಗಳೂರು, ಮೈಸೂರು, ಬೀದರ್ ಸೇರಿ ಎಲ್ಲಾ ಭಾಗದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಬೆಳಗಾವಿ, ಕಿತ್ತೂರು ಹಾಗೂ ಧಾರವಾಡ ರೈಲು ಯೋಜನೆ ಅನೇಕ ಸಲ ಬಜೆಟ್ ನಲ್ಲಿ ಘೋಷಣೆಯಾಗಿದೆ. ಆದರೇ ಸುರೇಶ ಅಂಗಡಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಿದ್ದರು. ಬೆಳಗಾವಿಯಿಂದ ಬೆಂಗಳೂರಿಗೆ ನೇರವಾಗಿ ರೈಲು ಸಂಪರ್ಕ ಕೆಲಸವನ್ನು ಮಾಡಿದ್ದಾರೆ" ಎಂದು ಸುರೇಶ ಅಂಗಡಿ ಕೆಲಸವನ್ನು ಜಗದೀಶ ಶೆಟ್ಟರ್ ಶ್ಲಾಘಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ