ಕೋಲಾರದ ವಿಸ್ಟ್ರಾನ್ ಘಟಕಕ್ಕೆ ಸಚಿವ ಜಗದೀಶ್ ಶೆಟ್ಟರ್ ಭೇಟಿ; ಕಂಪನಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ

ಹಿಂಸಾಚಾರದಂತಹ ಘಟನೆಗಳಿಂದ ಸಾವಿರಾರು ಉದ್ಯೋಗಿಗಳ ಜೀವನ ಬೀದಿಪಾಲಾಗುತ್ತದೆ. ಮುಂದೆ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸಿದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಿ ಎಂದು ಸಚಿವ ಜಗದೀಶ ಶೆಟ್ಟರ್ ಅವರು ವಿಸ್ಟ್ರಾನ್ ಉದ್ಯೋಗಿಗಳಿಗೆ ಸಲಹೆ ನೀಡಿದರು.

ವಿಸ್ತ್ರಾನ್ ಘಟಕಕ್ಕೆ ಭೇಟಿ ನೀಡಿದ ಸಚಿವ ಜಗದೀಶ್ ಶೆಟ್ಟರ್

ವಿಸ್ತ್ರಾನ್ ಘಟಕಕ್ಕೆ ಭೇಟಿ ನೀಡಿದ ಸಚಿವ ಜಗದೀಶ್ ಶೆಟ್ಟರ್

  • Share this:
ಕೋಲಾರ: ಡಿಸೆಂಬರ್ 12 ರಂದು ವಿಸ್ಟ್ರಾನ್ ಕಂಪನಿಯಲ್ಲಿ ದಾಂದಲೆ ನಡೆದ ಹಿನ್ನೆಲೆ ಸ್ಥಗಿತಗೊಂಡಿದ್ದ ಕಂಪನಿಯಲ್ಲಿ ಈಗ ಮರು ಕಾರ್ಯಾರಂಭಿಸಿದೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಈ ವಿಸ್ಟ್ರಾನ್ ಘಟಕಕ್ಕೆ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಅವರು, ಕಾರ್ಮಿಕರ ಈಗಿನ ಸ್ಥಿತಿಗತಿ ಬಗ್ಗೆ ವಿಚಾರಿಸಿದರು. ಕಾರ್ಮಿಕರಲ್ಲಿ ಕೆಲವೇ ಮಂದಿಯ ಮುಂಗೋಪದಿಂದಾಗಿ ಸಾವಿರಾರು ಕಾರ್ಮಿಕರು ಸಮಸ್ಯೆ ಅನುಭವಿಸಬೇಕಾಯಿತು ಎಂದು ಅಂದು ನಡೆದ ಪರಿಸ್ಥಿತಿಯನ್ನು ಸಚಿವರ ಮುಂದೆ ಕಾರ್ಮಿಕರು ವಿವರಿಸಿದರು.

ನಂತರ ಸಚಿವರು ಮಾತನಾಡಿ, ಹಿಂಸಾಚಾರದಂತಹ ಅನವಶ್ಯಕ ಘಟನೆಗಳಿಂದ ಯಾವುದೇ ಸಮಸ್ಯೆಗೂ ಪರಿಹಾರ ದೊರಕುವುದಿಲ್ಲ. ಅಂದು ನಡೆದ ಘಟನೆಯಿಂದಾಗಿ ಕಾರ್ಖಾನೆ ಮುಚ್ಚಬೇಕಾಯಿತು. ಅಲ್ಲದೆ, ಸಾವಿರಾರು ಕಾರ್ಮಿಕರು ಅನವಶ್ಯಕವಾಗಿ ಗೊಂದಲಕ್ಕೀಡಾಗಬೇಕಾಯಿತು. ಆದ್ದರಿಂದ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವವಾದಲ್ಲಿ ನಿಮ್ಮ ಮೇಲಾಧಿಕಾರಿಗಳಿಗೆ ಮೊದಲು ತಿಳಿಸಬೇಕು. ಅಲ್ಲಿಯೂ ಪರಿಹಾರ ದೊರಕದೇ ಇದ್ದ ಸಂದರ್ಭದಲ್ಲಿ, ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.

ಹಿಂದೆ ಉದ್ಯೋಗಕ್ಕಾಗಿ ಜನರು ಬೇಡಿಕೆ ಇಡುತ್ತಿದ್ದನ್ನ ಸಚಿವರು ಮೆಲುಕು ಹಾಕಿದರು. 10 ವರ್ಷಗಳ ಹಿಂದೆ ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ಜನರು ಉದ್ಯೋಗಕ್ಕಾಗಿ ಬೆಂಗಳೂರು ನಗರಕ್ಕೆ ದಿನ ನಿತ್ಯ ಅಲೆದಾಡುತ್ತಿದ್ದ ಪರಿಸ್ಥಿತಿ ಇತ್ತು. ಈಗ ಜಿಲ್ಲೆಗೆ ಕೈಗಾರಿಕೆಗಳು ಹೆಚ್ಚಾಗಿ ಬರುತ್ತಿದ್ದು, ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ಇದನ್ನು ಅಭಿವೃದ್ದಿ ಪಡಿಸಬೇಕೇ ಹೊರತು ಇಂತಹ ಘಟನೆಗಳಿಂದ ಕೆಟ್ಟ ಅಭಿಪ್ರಾಯ ಮೂಡಿಸುವಂತಾಗಬಾರದು ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ: ಬೆಂಗಳೂರಿಗರೇ, ನೈಜೀರಿಯನ್ ಪ್ರಜೆಗಳಿಗೆ ಮನೆ ಕೊಡುವ ಮುನ್ನ ಹುಷಾರ್; ಪೊಲೀಸರು ಕೊಡಲಿದ್ಧಾರೆ ಶಾಕ್

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಗೌರವ್ ಗುಪ್ತಾ ಅವರು ಮಾತನಾಡಿ, ಸಮಸ್ಯೆ ಉದ್ಭವವಾಗುವ ಸಮಯದಲ್ಲಿ ಅಧಿಕಾರಿಗಳು ಭೇಟಿ ನೀಡುವ ಪರಿಪಾಠವನ್ನು ಬಿಡಬೇಕು. ಆಗಾಗ್ಗೆ ಕೈಗಾರಿಕೆಗಳಿಗೆ ಭೇಟಿ ನೀಡಿ ಅಲ್ಲಿನ ಸೌಕರ್ಯಗಳು ಹಾಗೂ ಆಗಬೇಕಾದ ಕಾರ್ಯಗಳ ಬಗ್ಗೆ ಸಲಹೆ ನೀಡಬೇಕು ಮತ್ತು ಕಾರ್ಮಿಕರ ಸಂಕಷ್ಟಗಳನ್ನು ಆಲಿಸಬೇಕು ಎಂದು ಸೂಚನೆ ನೀಡಿದರು.

ಈ ಸಮಯದಲ್ಲಿ ಕೆಐಎಡಿಬಿ ಸಿಇಓ ಡಾ. ಶಿವಶಂಕರ್, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣಾ, ವಿಸ್ಟ್ರಾನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುದಿಪ್ತೋ ಗುಪ್ತಾ, ಕೊಲಾರ ಜಿಲ್ಲಾಧಿಕಾರಿಗಳಾದ ಡಾ. ಆರ್ ಸೆಲ್ಪಮಣಿ, ಎಸ್​ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

ಇನ್ನು ಬೆಚ್ಚಿ ಬೀಳಿಸುವ ಗಲಾಟೆಯಿಂದ ಎಚ್ಚೆತ್ತುಕೊಂಡಿರುವ ವಿಸ್ಟ್ರಾನ್ ಕಂಪನಿಯ ಆಡಳಿತ ಮಂಡಳಿ, ನೌಕರರನ್ನ ಸೇರಿಸಿಕೊಳ್ಳಲು ಹಲವು ನಿಬಂಧನೆಗಳನ್ನ ವಿಧಿಸಿದೆ. ಈ ಬಾರಿ ಕಂಪನಿಗೆ ಸೇರಲು ಪ್ರತಿಯೊಬ್ಬರು ಪೋಲೀಸರ ನಿರಾಕ್ಷೇಪಣಾ ಪತ್ರ ತರಬೇಕಾಗಿರೋದು ಕಡ್ಡಾಯವಾಗಿದ್ದು, ಇದಕ್ಕಾಗಿ ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸಾವಿರಾರು ಯುವಕ ಯುವತಿಯರು ತಮ್ಮ ಗುರುತಿನ ಚೀಟಿ ತೋರಿಸಿ, ಪೋಲೀಸರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ, ನಿರಾಕ್ಷೇಪಣ ಪತ್ರ ಪಡೆದುಕೊಳ್ಳುತ್ತಿದ್ದಾರೆ. ಇಷ್ಟು ದಿನ ಕೆಲಸವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ ಪರದಾಡುತ್ತಿದ್ದ ಯುವಕ ಯುವತಿರು ಉತ್ಸುಕದಿಂದ ನಿರಾಕ್ಷೇಪಣೆ ಪತ್ರ ಪಡೆದು ಮತ್ತೆ ಕಂಪನಿಗೆ ಸೇರಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Chamarajanagar: ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಬಿ.ಆರ್.ಟಿ. ವರ್ಚುವಲ್ ರಿಯಾಲಿಟಿ ವಿಡಿಯೋ: ರಾಜ್ಯದಲ್ಲೇ  ಮೊದಲ ಪ್ರಯತ್ನ

ಈ ಬಗ್ಗೆ ಮಾತನಾಡಿರುವ ಕಾರ್ಮಿಕರು, ಕಂಪನಿ ಮತ್ತೆ ಆರಂಭವಾಗುತ್ತಿರುವುದು ಖುಷಿಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಕಂಪನಿಯಲ್ಲಿ ಐಟಿಐ, ಡಿಪ್ಲೊಮೊ, ಹಾಗು ಇಂಜಿನಿಯರಿಂಗ್ ವಿಭಾಗದ ನೌಕರರಿಗೆ ಇಂತಿಷ್ಟು ವೇತನ ನಿಗದಿ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಮೊದಲ ಹಂತದಲ್ಲಿ ಕಂಪನಿಯಲ್ಲಿ 2500 ಮಂದಿ ಕಾರ್ಮಿಕರೊಂದಿಗೆ ಕೆಲಸ ಆರಂಭಿಸಿದ್ದು, ಇನ್ನೂ ಪೂರ್ಣ ಪ್ರಮಾಣದಲ್ಲಿ ಕೈಗಾರಿಕೆ ಆರಂಭವಾಗಲು ಹಲವು ದಿನಗಳು ಹಿಡಿಯಲಿದೆ ಎಂದು ಹೇಳಲಾಗುತ್ತಿದೆ.

ವರದಿ: ರಘುರಾಜ್
Published by:Vijayasarthy SN
First published: