ಧಾರವಾಡ: ವೈದ್ಯಕೀಯ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿರುವಂತೆ ಕೋವಿಡ್ನ ಮೊದಲ ಅಲೆಗಿಂತಲೂ 2ನೇ ಅಲೆ ವೇಗವಾಗಿ ಹರಡುತ್ತಿದೆ. ಸಾರ್ವಜನಿಕರು ಕೋವಿಡ್ ಹರಡುವಿಕೆಯನ್ನು ನಿರ್ಲಕ್ಷಿಸಿಬಾರದು. ಸರ್ಕಾರ ಸೂಚಿಸುವ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 45 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆ ಹಾಕಿಸಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ನಿನ್ನೆ ಮಾತನಾಡಿದ ಅವರು, ಕಳೆದ ವರ್ಷ ಇದೇ ಮಾರ್ಚ್ ಏಪ್ರಿಲ್ ಅವಧಿಯಲ್ಲಿ ಕೊರೊನಾದ ಆರಂಭದ ಪ್ರಕರಣಗಳು ಕಾಣಿಸಿಕೊಂಡಾಗ ಸಾರ್ವಜನಿಕರು ವಹಿಸಿದ ಮುನ್ನೆಚ್ಚರಿಕೆ ಮಾದರಿಯಲ್ಲಿಯೇ ಈಗಲೂ ಮುಂದುವರೆಯಬೇಕು. ಕೊರೋನಾ ವೈರಾಣುವನ್ನು ನಿರ್ಲಕ್ಷಿಸಬಾರದು. ತಜ್ಞರು ಅಭಿಪ್ರಾಯಪಟ್ಟಿರುವಂತೆ ಕೋವಿಡ್ ಮೊದಲ ಅಲೆಗಿಂತಲೂ 2ನೇ ಅಲೆ ಹೆಚ್ಚು ಅಪಾಯಕಾರಿಯಾಗಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಈಗಾಗಲೇ ಪೂರೈಸಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಲ್ಲಿ ಯಾವುದಾದರೂ ಒಂದನ್ನು 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಇದರಿಂದ ರೋಗ ನಿರೋಧಕ ಶಕ್ತಿ ವರ್ಧನೆಯಾಗಲಿದೆ. ಆರೋಗ್ಯಪೂರ್ಣ ಜೀವನ ನಿರ್ವಹಣೆಗೆ ಸುಲಭವಾಗಲಿದೆ ಎಂದರು.
ಕೊವಿಡ್ ತಪಾಸಣೆ ಮತ್ತು ಲಸಿಕೆ ಹಾಕಲು ಸರ್ಕಾರ ನಿಗದಿಪಡಿಸುವ ಗುರಿಯನ್ನು ಜಿಲ್ಲೆಯು ಸಾಧಿಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಮನೋಭಾವ ರೂಢಿಸಿಕೊಳ್ಳಬೇಕು. ಕಳೆದ ಒಂದು ತಿಂಗಳ ಅವಧಿಯಲ್ಲಿ ಕೋವಿಡ್ ಏರಿಕೆಯಾಗುತ್ತಿದೆ. ಜಿಲ್ಲಾಸ್ಪತ್ರೆ, ಕಿಮ್ಸ್ ಸೇರಿದಂತೆ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸಾಕಷ್ಟು ಹಾಸಿಗೆ ಹಾಗೂ ವೆಂಟಿಲೇಟರ್ಗಳ ವ್ಯವಸ್ಥೆ ಸದಾ ಸಿದ್ಧವಿರಬೇಕು. ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ನಿರಂತರವಾಗಿ ಲಸಿಕೆಯನ್ನು ಪೂರೈಸುತ್ತಿದೆ. ಈ ಲಸಿಕೆಯನ್ನು ಅರ್ಹರಿಗೆ ತಲುಪಿಸಲು ವ್ಯಾಪಕವಾಗಿ ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.
ಇದನ್ನೂ ಓದಿ: KS Eshwarappa - ನಾನು ರೆಬೆಲ್ ಅಲ್ಲ, ಲಾಯಲ್: ಯಾವ ದೂರಿಗೂ ಜಗ್ಗಲ್ಲ, ಬಗ್ಗಲ್ಲ: ಈಶ್ವರಪ್ಪ
ಬಳಿಕ ಸುದ್ದಿಗಾರರೊಂದಿಗೆ ಬೆಳಗಾವಿ ಉಪಚುನಾವಣೆ ಕುರಿತು ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ನಾಲ್ಕು ಲಕ್ಷ ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಉಪಚುನಾವಣೆ ಪ್ರಚಾರಕ್ಕೆ ರಮೇಶ ಹಾಗೂ ಬಾಲಚಂದ್ರ ಜಾರಕಿಹೊಳಿ ಆಹ್ವಾನ ನೀಡಿದ್ದು, ಅವರ ಕೂಡ ಬರುವುದಾಗಿ ತಿಳಿಸಿದ್ದಾರೆ. ಕೇಸ್ ನಡೆದ ಹಿನ್ನೆಲೆಯಲ್ಲಿ ಅವರಿಗೆ ಈಗ ಬರಲು ಆಗಿಲ್ಲ. ಮುಂದೆ ಪ್ರಚಾರದಲ್ಲಿ ಪಾಲ್ಗೊಳ್ಳಬಹುದು. ಅಲ್ಲದೇ ಕ್ಷೇತ್ರದಲ್ಲಿ ಬಹುಮತ ಕೊಡಿಸುವ ವಿಶ್ವಾಸ ನೀಡಿದ್ದಾರೆ. ಲೋಕಸಭೆ ಉಪಚುನಾವಣೆ ಫಲಿತಾಂಶ ಬಿಜೆಪಿ ಪರವಾಗಿ ಬರಬಹುದು ಎಂದು ಅಭಿಪ್ರಾಯಪಟ್ಟರು.
ಇಲಾಖೆಯಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪದ ಈಶ್ವರಪ್ಪ ದೂರಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಎಂ ವಿರುದ್ಧ ದೂರು ಅಲ್ಲ. ಆಗಿರುವ ವ್ಯತ್ಯಾಸ ತಿಳಿಸಿದ್ದಾರೆ. ಇಬ್ಬರು ಪರಸ್ಪರ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಹೆಚ್ಚಿಗೆ ಮಾತನಾಡಲಾರೆ. ಇದೆಲ್ಲ ಪಕ್ಷದ ಹಾಗೂ ಸರ್ಕಾರದ ಆಂತರಿಕ ವಿಚಾರ. ಇಲ್ಲೇ ಕುಳಿತು ಬಗೆಹರಿಸುವ ಕೆಲಸ ಆಗಬೇಕೆಂದ ಅವರು, ರೇಣುಕಾಚಾರ್ಯ ಅವರಿಂದ ಸಹಿ ಸಂಗ್ರಹ ವಿಚಾರ ತಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆ ವಿಚಾರವಾಗಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಧಾರವಾಡ ಜಿಲ್ಲೆಯ ಎಸ್ಡಿಎಂ ಎಂಜನೀಯರಿಂಗ್ ಹಾಗೂ ಹುಬ್ಬಳ್ಳಿ ವಿದ್ಯಾನಿಕೇತನ ಕಾಲೇಜಿನಲ್ಲಿ ತಲಾ 15 ಕೋವಿಡ್ ಪ್ರಕರಣ ಪತ್ತೆಯಾಗಿವೆ. ಈ ಹಿನ್ನೆಲೆ ಎರಡು ಕಾಲೇಜಿಗೆ ರಜೆ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಶೇ.70 ರಷ್ಟು ಪ್ರಕರಣ ಹುಬ್ಬಳ್ಳಿ, ಶೇ. 20 ರಷ್ಟು ಧಾರವಾಡ, ಶೇ.10 ರಷ್ಟು ಉಳಿದ ತಾಲೂಕಿನಲ್ಲಿ ಪತ್ತೆಯಾಗುತ್ತಿವೆ. ಸದ್ಯ ಕಾಲೇಜು ತಪಾಸಣೆ ಮಾಡಿದೆ. ಆರಂಭದ ನಂತರ ಪುನಃ ತಪಾಸಣೆ ಮಾಡಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು
ವರದಿ: ಮಂಜುನಾಥ ಯಡಳ್ಳಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ