ಪೊಲೀಸ್ ಚಿಂತನಾ ಹಾಲ್ ನಲ್ಲಿ 50 ಬೈಕ್ ಗಳ ಪ್ರದರ್ಶನ ; ನೋಡಿ ಬೆಚ್ಚಿ ಬಿದ್ದರು ಜನ ಯಾಕೆ ಗೊತ್ತಾ?

ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ನಡೆದಿದ್ದ ನಾನಾ ಬೈಕ್​​ಗಳ ಕಳ್ಳತನ ಪ್ರಕರಣವನ್ನು ಈ ಪೊಲೀಸರು ಪತ್ತೆ ಮಾಡಿದ್ದರು. ಅಷ್ಟೇ ಅಲ್ಲ, 50 ಬೈಕ್ ಗಳನ್ನು ವಶಪಡಿಸಿಕೊಂಡು ತಂದು ಪ್ರದರ್ಶಿಸಿದರು

ಬೈಕ್​​ಗಳು

ಬೈಕ್​​ಗಳು

  • Share this:
ವಿಜಯಪುರ(ಅಕ್ಟೋಬರ್​. 23): ವಿಜಯಪುರ ನಗರದ ಪೊಲೀಸ್ ಚಿಂತನಾ ಹಾಲ್ ಪೊಲೀಸರು ನಾನಾ ಕಾರ್ಯಕ್ರಮಗಳಿಗೆ ಹೇಳಿ ಮಾಡಿಸಿದ ಜಾಗ. ಆಗಾಗ ಇಲ್ಲಿ ಪೊಲೀಸರು ಪತ್ರಿಕಾಗೋಷ್ಠಿ ಕೂಡ ಮಾಡುತ್ತಾರೆ. ಆದರೆ, ಈ ಪ್ರದೇಶ ಅಚ್ಚರಿಗೆ ಕಾರಣವಾಗಿತ್ತು. ಒಂದರ ಪಕ್ಕದಲ್ಲೊಂದು ಸಾಲಾಗಿ ಬೈಕ್ ಗಳನ್ನು ಇಲ್ಲಿ ನಿಲ್ಲಿಸಲಾಗಿತ್ತು. ಯಾರೇ ಬಂದು ನೋಡಿದರೂ ಇದೊಂದು ಬೈಕ್ ಮೇಳದಂತಿತ್ತು. ಆದರೆ, ಇಲ್ಲಿ ಆಗಿದ್ದೆ ಬೇರೆ.  ಮಾಧ್ಯಮದವರೂ ಬಂದು ನೋಡಿದಾಗ ಅಬ್ಬಾ ಎಂದು ನಿಟ್ಟುಸಿರುವ ಬಿಡುವಂತಿತ್ತು ಅಲ್ಲಿನ ಚಿತ್ರಣ. ಅಷ್ಟಕ್ಕೂ ಆಗಿದ್ದೇನೆಂದರೆ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಡಿವೈಎಸ್ಪಿ ಈ. ಶಾಂತವೀರ ನೇತೃತ್ವದಲ್ಲಿ ಮುದ್ದೇಬಿಹಾಳ ಸಿಪಿಐ ಆನಂದ ವಾಘಮೋಡೆ, ತಾಳಿಕೋಟೆ ಪಿಎಸ್‌ಐಗಳಾದ ಶಿವಾಜಿ ಎಚ್. ಪವಾರ, ಗಂಗಾಬಾಯಿ ಬಿರಾದಾರ ಹಾಗೂ ತಂಡದವರು ಭರ್ಜರಿ ಕಾರ್ಯಾಚರಣೆ ನಡೆಸಿದ್ದರು. ಅವರು ಮಾಡಿದ ಕಾರ್ಯಾಚರಣೆಯ ಸ್ಪಷ್ಟ ಚಿತ್ರಣ ಅಲ್ಲಿತ್ತು.  

ವಿಜಯಪುರ ಜಿಲ್ಲೆಯಲ್ಲಿ ಕಳೆದ ಸುಮಾರು ಒಂದೂವರೆ ವರ್ಷಗಳಿಂದ ನಡೆದಿದ್ದ ನಾನಾ ಬೈಕ್​​ಗಳ ಕಳ್ಳತನ ಪ್ರಕರಣವನ್ನು ಈ ಪೊಲೀಸರು ಪತ್ತೆ ಮಾಡಿದ್ದರು. ಅಷ್ಟೇ ಅಲ್ಲ, 50 ಬೈಕ್ ಗಳನ್ನು ವಶಪಡಿಸಿಕೊಂಡು ತಂದು ಪ್ರದರ್ಶಿಸಿದರು. ಈ ಬೈಕ್ ಕಳ್ಳತನ ಪ್ರಕರಣ ಸಂಬಂಧ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೆಬಾವಿ ಗ್ರಾಮದ 28 ವರ್ಷದ ಮೌನೇಶ ಗುರಣ್ಣ ಬಡಿಗೇರ, 38 ವರ್ಷದ ನಿಂಗಣ್ಣ ಬಸಪ್ಪ ಪೂಜಾರಿ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡೆಕಲ ಗ್ರಾಮದ 29 ವರ್ಷದ ಮೀರಾಸಾಬ್ ರಜಾಕಸಾಬ್ ಬಳಿಗಾರ ಮತ್ತು 29 ವರ್ಷದ ಮೆಹಬೂಬ ತಾಹೀರ ಹುಸೇನ ಬಳಿಗಾರ ಎಂಬುವರನ್ನು ಬಂಧಿಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಎಸ್ಪಿ ಅನುಪಮ ಅಗ್ರವಾಲ, ವಿಜಯಪುರ ಜಿಲ್ಲೆಯ ನಾನಾ ಕಡೆ ಕಳ್ಳತನ ಮಾಡಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ನಾಲ್ಕು ಜನರನ್ನು ಬಂಧಿಸಲಾಗಿದೆ. 30 ಲಕ್ಷ ರೂಪಾಯಿ ಮೌಲ್ಯದ 50 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, ಇನ್ನೂ ಬಾಕಿ ಇರುವ ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆಗೆ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯ ಇಬ್ಬರು ಆರೋಪಿಗಳು ಹೆಚ್ಚಾಗಿ ಸ್ಪ್ಲೆಂಡರ್‌  ಬೈಕ್ ಗಳನ್ನು ಕದಿಯುತ್ತಿದ್ದರು. ನಂತರ ಅವುಗಳನ್ನು ಯಾದಗಿರಿ ಜಿಲ್ಲೆಯ ಇಬ್ಬರು ಆರೋಪಿಗಳ ಮೂಲಕ ಕಡಿಮೆ ಬೆಲೆಗೆ ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ನಾನಾ ಗ್ರಾಮೀಣ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದರು. ಕಳೆದ ಸುಮಾರು ಒಂದೂವರೆ ವರ್ಷದಲ್ಲಿ ಇವರು ಕಳವು ಮಾಡಿದ್ದ 50 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮತ್ತಷ್ಟು ಬೈಕ್ ಕಳ್ಳತನ ಪ್ರಕರಣಗಳನ್ನು ಭೇದಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಬಸವನ ಬಾಗೇವಾಡಿ, ತಾಳಿಕೋಟೆ ಮತ್ತು ಮುದ್ದೇಬಿಹಾಳ ತಾಲೂಕಿನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಸ್ಪಿ ಅನುಪಮ ಅಗರವಾಲ ಮತ್ತು ಎಎಸ್ಪಿ ಡಾ. ರಾಮ ಲಕ್ಷ್ಣಣ ಅರಸಿದ್ಧಿ ನಗದು ಬಹುಮಾನ ನೀಡಿ ಇದೇ ಸಂದರ್ಭದಲ್ಲಿ ಗೌರವಿಸಿದರು.

ಇದನ್ನೂ ಓದಿ : ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ: ಆರೋಪಿ ನವೀನ್​ಗೆ ಜಾಮೀನು

ಈ ಮೂಲಕ ಕೆಲಸ ಮಾಡಿದ ಪೊಲೀಸರಿಗೆ ಶಹಬ್ಬಾಷ್ ಗಿರಿ ನೀಡಿದರು.  ಈ ಸಂದರ್ಭದಲ್ಲಿ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ದಿ ಸೇರಿದಂತೆ ನಾನಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಮನೆಗಳ್ಳರ ಬಂಧನ

ಇದೇ ವೇಳೆ, ರಾತ್ರಿ ಹೊತ್ತಿನಲ್ಲಿ ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಸವನ ಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಮೂರು ತಿಂಗಳ ಹಿಂದೆ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಸವನ ಬಾಗೇವಾಡಿ ಪಟ್ಟಣದ ನಿವಾಸಿಗಳಾದ ಸೋಹೈಲ್ ಮುರ್ತುಜಸಾಬ ಇನಾಮದಾ(21) ಮತ್ತು ಆಕಾಶ ರಮೇಶ ಕೋಲಕಾರ(19) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಅವರ ಬಳಿಯಿದ್ದ 2.15 ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ಚಿನ್ನಾಭರಣ, 190 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅನುಪಮ ಅಗ್ರವಾಲ ತಿಳಿಸಿದ್ದಾರೆ.
Published by:G Hareeshkumar
First published: