news18-kannada Updated:December 29, 2020, 9:11 PM IST
ಡಿಸಿಎಂ ಅಶ್ವತ್ಥ ನಾರಾಯಣ.
ರಾಮನಗರ : ಬೆಂಗಳೂರಿನಲ್ಲಿ ಪತ್ತೆಯಾಗಿರುವುದು ಯಾವುದು ಹೊಸ ವೈರಸ್ ಅಲ್ಲ. ಇರುವ ವೈರಸ್ ಬೇರೆ ರೀತಿ ಆಗಿದೆ. ಹಾಗಾಗಿ ಯಾರು ಭಯ ಪಡುವ ಅಗತ್ಯವಿಲ್ಲ. ಜನರ ಜೀವನವನ್ನ ಕಾಪಾಡುವಲ್ಲಿ ಸರ್ಕಾರ ಬದ್ಧವಾಗಿದೆ. ಇನ್ನು ಜನವರಿ 1 ರಿಂದ 10 ನೇತರಗತಿ ಹಾಗೂ ಪಿಯುಸಿ ತರಗತಿ ಪ್ರಾರಂಭವಾಗುತ್ತೆ. ಇದಕ್ಕೆ ಈಗಾಗಲೇ ಎಲ್ಲಾ ರೀತಿಯ ಕ್ರಮ ವಹಿಸಲಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಈ ಶಾಲೆ ಆರಂಭದ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರು ತಿಳಿಸಿದ್ದಾರೆ.
ರಾಮನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಂಎಲ್ಸಿ ಧರ್ಮೇಗೌಡರ ಸಾವು ನಂಬಲು ಆಗುತ್ತಿಲ್ಲ. ಆದರೆ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಪೊಲೀಸರು ಕ್ರಮ ವಹಿಸುತ್ತಾರೆ. ಈಗಲೇ ಊಹಾಪೋಹಗಳಿಗೆ ಕಿವಿಕೊಡಲು ಆಗಲ್ಲ. ಎಂದು ತಿಳಿಸಿದರು.
ಇನ್ನು ರಾಮನಗರ ಜಿಲ್ಲೆಯಲ್ಲಿ ಹೆಚ್ಚಿನ ಪಂಚಾಯಿತಿಗಳು ಈ ಬಾರಿ ಬಿಜೆಪಿಗೆ ಸಿಗಲಿದೆ. ಈಗ ಪ್ರಸ್ತುತವಿರುವ ಪಕ್ಷ ಬಿಜೆಪಿ ಮಾತ್ರ. ಕಾಂಗ್ರೆಸ್ ಹಾಗೂ ಇತರೆ ಎಲ್ಲಾ ಪಕ್ಷಗಳು ಅಪ್ರಸ್ತುತವಾಗಿವೆ. ಬಿಜೆಪಿ ಪಾರ್ಟಿ ಎಂದಿಗೂ ಇರಲಿದೆ. ಎಲ್ಲಾ ಕಾಲಕ್ಕೂ ಇರಲಿದೆ. ಉಳಿದ ಪಕ್ಷಗಳು ಎಷ್ಟು ತಿಂಗಳು ಇರಲಿದೆ ಅನ್ನೋದು ಕಾಲವೇ ನಿರ್ಧರಿಸುತ್ತೆ. ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲೇ ಒಡಕಿದೆ. ಇದರ ಜೊತೆಗೆ ರಾಜ್ಯದಲ್ಲೂ ಮೂರು ಗುಂಪಾಗಿದೆ. ಹಾಗಾಗಿ ಮುಂದೆ ಕಾಂಗ್ರೆಸ್ ಪಕ್ಷ ಇದ್ದರೆ ಮಾತ್ರ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದರು.
ಇದನ್ನು ಓದಿ: ಸಿದ್ಧರಾಮಯ್ಯ ಹಾದಿ ಬಿಟ್ಟಿದ್ದಾರೆ, ರಾಹುಲ್ ಗಾಂಧಿ ಸಂಸತ್ತಿನ ಮುಂದೆ ಕಾರು ಕಾಯಲು ಲಾಯಕ್ಕಿಲ್ಲ; ಯತ್ನಾಳ
ಜಿಲ್ಲೆಯಲ್ಲಿ ಮಹಿಳಾ ಆಸ್ಪತ್ರೆ ನಿರ್ಮಾಣ
ಚನ್ನಪಟ್ಟಣ ಹಾಗೂ ಮಾಗಡಿಯಲ್ಲಿ ಸೂಪರ್ ಸ್ಪೆಷಾಲಿಟಿ ಮಹಿಳಾ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಜೊತೆಗೆ ರಾಮನಗರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಆಸ್ಪತ್ರೆಯ ಜೊತೆಗೆ ಹಳೇ ಆಸ್ಪತ್ರೆ ಸಹ ಇರಲಿದೆ. ಆ ಆಸ್ಪತ್ರೆಯನ್ನು ಮಕ್ಕಳು ಮತ್ತು ಮಹಿಳೆಯರ ಆಸ್ಪತ್ರೆಯಾಗಿ ಬಳಕೆ ಮಾಡಿಕೊಳ್ಳಲಾಗುತ್ತೆ ಎಂದು ಅಶ್ವಥ್ ನಾರಾಯಣ ತಿಳಿಸಿದರು.
ಇದರ ಜೊತೆಗೆ ರಾಮನಗರ-ಚನ್ನಪಟ್ಟಣ ಮಧ್ಯೆ ನೂತನ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗಲಿದೆ. ಚನ್ನಪಟ್ಟಣದ ಭೈರಾಪಟ್ಟಣದಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆಯಾಗಲಿದೆ. ಈ ಎಲ್ಲಾ ಅಭಿವೃದ್ಧಿ ಕೆಲಸಗಳನ್ನ ಇನ್ನೆರಡು ವರ್ಷಗಳಲ್ಲಿ ಮುಗಿಸುವ ಪ್ರಯತ್ನ ಮಾಡಲಾಗುತ್ತೆ ಎಂದು ಭರವಸೆ ನೀಡಿದರು.
ವರದಿ : ಎ.ಟಿ.ವೆಂಕಟೇಶ್
Published by:
HR Ramesh
First published:
December 29, 2020, 9:11 PM IST