ಧಾರವಾಡ(ಅಕ್ಟೋಬರ್. 14): ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಜಾರಿಯಲ್ಲಿರುವ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಹಾಗೂ ಕೇಂದ್ರ ಚುನಾವಣಾ ಆಯೋಗವು ನೀಡಿರುವ ಕೋವಿಡ್-19 ಮಾರ್ಗಸೂಚಿಗಳನ್ನು ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಸೂಚನೆ ನೀಡಿದ್ದಾರೆ. ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ರಾಜಕೀಯ ಪಕ್ಷದ ಪ್ರತಿನಿಧಿಗಳ ಹಾಗೂ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಪ್ರಕ್ರಿಯೆಗಳು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ಜರುಗುವಂತೆ ಕ್ರಮ ವಹಿಸುವುದು ಎಲ್ಲರ ಕರ್ತವ್ಯವಾಗಿದೆ. ಕೇಂದ್ರ ಚುನಾವಣಾ ಆಯೋಗವು ಚುನಾವಣಾ ದಿನಾಂಕ ಘೋಷಿಸಿದ ದಿನದಿಂದ ಜಾರಿಯಾಗಿರುವ ಮಾದರಿ ನೀತಿ ಸಂಹಿತೆಯನ್ನು ಪ್ರತಿಯೊಂದು ಪಕ್ಷಗಳು ಪಾಲಿಸಬೇಕು ಎಂದರು.
ಬಹಿರಂಗ ಪ್ರಚಾರ, ವಾಹನಗಳ ಬಳಕೆ, ಪ್ರಚಾರ ಸಾಮಗ್ರಿ ಇತ್ಯಾದಿಗಳ ಕುರಿತು ಅನುಮತಿ ನೀಡಲು ಪಶ್ಚಿಮ ಪದವೀಧರ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹ ಕ್ರಮಕೈಗೊಳ್ಳಲಾಗಿದೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತಮಗೆ ಅಗತ್ಯವಿರುವ ಅನುಮತಿಗಳನ್ನು ಸಹಾಯಕ ಚುನಾವಣಾಧಿಕಾರಿಗಳು ಆಗಿರುವ ಆಯಾ ಜಿಲ್ಲಾಧಿಕಾರಿಗಳಿಂದ ಪಡೆಯಬಹುದಾಗಿದೆ.
ಬಹಿರಂಗ ಪ್ರಚಾರ ಸಭೆಗಳಲ್ಲಿ ಮತ್ತು ಮನೆ ಮನೆಗೆ ತೆರಳಿ ಪ್ರಚಾರ ಹಾಗೂ ಒಳಾಂಗಣ ಸಭೆಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳಲ್ಲಿ ತಿಳಿಸಿರುವ ಸಂಖ್ಯೆಯಷ್ಟು ಸಾರ್ವಜನಿಕರು ಮಾತ್ರ ಭಾಗವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವಂತೆ ಚುನಾವಣಾ ಅಧಿಕಾರಿ ಸೂಚನೆ ನೀಡಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಚುನಾವಣಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ ಮೂರು ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣೆ ನಿಯಮಗಳ ಉಲ್ಲಂಘನೆ ಕುರಿತು ದೂರುಗಳನ್ನು ದಾಖಲಿಸಲು, ಸಾರ್ವಜನಿಕರು ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 1077 ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು. ಮತ್ತು ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಕುರಿತ ಯಾವುದೇ ರೀತಿಯ ದೂರುಗಳಿದ್ದಲ್ಲಿ ಎಂಸಿಸಿ ಕಮಿಟಿಯ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಮೊಬೈಲ್ 9480864000 ಮತ್ತು ಧಾರವಾಡ ಉಪವಿಭಾಗಾಧಿಕಾರಿ ಮೊಬೈಲ್ 9731008189 ಗೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.
ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 146 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಪ್ರತಿ ಮತಗಟ್ಟೆಯಲ್ಲಿ ಆರೋಗ್ಯ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಇರುತ್ತಾರೆ. ಮತಗಟ್ಟೆಗೆ ಬರುವ ಪ್ರತಿ ಮತದಾರ ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕು. ಮತಗಟ್ಟೆಯಲ್ಲಿ ಕೋವಿಡ್ ಮಾರ್ಗ ಸೂಚಿಗಳನ್ವಯ ಮತದಾರನ ಆರೋಗ್ಯ ತಪಾಸಣೆ ಮಾಡಬೇಕು. ಜ್ವರ, ಕೆಮ್ಮು ಇತ್ಯಾದಿಗಳು ಕಂಡು ಬಂದಲ್ಲಿ ಮತದಾನದ ಕೊನೆಯ 1 ಗಂಟೆ ಸಮಯ ನೀಡಿ ಅವರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಪ್ರತಿ ಮತದಾರರಿಗೆ ಮತದಾನ ಚೀಟಿ ತಲುಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಇದರೊಂದಿಗೆ ಮತದಾರನಿಗೆ ಅಗತ್ಯವಿರುವ ಕೋವಿಡ್ ಮಾರ್ಗಸೂಚಿ, ಮತದಾನದ ರೀತಿ, ಸಮಯ, ಸ್ಥಳದ ಮಾಹಿತಿಗಳನ್ನು ನೀಡಲು ಮತ್ತು ಭಾರತ ಚುನಾವಣಾ ಆಯೋಗದ ಅನುಮತಿ ಪಡೆದು ಇದೇ ಮೊದಲ ಬಾರಿಗೆ ಪ್ರತಿ ಮತದಾರನಿಗೆ ತನ್ನ ಮತಗಟ್ಟೆ ತಲುಪಲು ಅಗತ್ಯವಿರುವ ರೂಟ್ ಮ್ಯಾಪ್‍ನ್ನು ನೀಡಲು ತಂತ್ರಾಂಶ ಬಳಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ : ಅಂತರರಾಷ್ಟ್ರೀಯ ಮಟ್ಟದಲ್ಲಿ ಹಳ್ಳಿ ಹುಡುಗಿಯ ಸಾಧನೆ ; ವಿಶ್ವದಲ್ಲೇ ಸಂಚಲನ ಮೂಡಿಸಿದ ಅಶ್ವಿನಿ ಲೈಫ್ ಸ್ಟೋರಿ
ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಧಾರವಾಡ ಜಿಲ್ಲೆಯಲ್ಲಿ ಪುರುಷ-13,989, ಮಹಿಳೆ-8,653, ಇತರೆ-4, ಒಟ್ಟು 22,646 ಮತ್ತು ಗದಗ ಜಿಲ್ಲೆಯಲ್ಲಿ ಪುರುಷ-11,001, ಮಹಿಳೆ-5,011, ಇತರೆ-1, ಒಟ್ಟು 16,013, ಮತ್ತು ಹಾವೇರಿ ಜಿಲ್ಲೆಯಲ್ಲಿ ಪುರುಷ-16,430, ಮಹಿಳೆ-7,453, ಇತರೆ-5, ಒಟ್ಟು 23,888, ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಪುರುಷ-7,160, ಮಹಿಳೆ-6,066, ಇತರೆ-1, ಒಟ್ಟು 13,227 ಹೀಗೆ ಇಡೀ ಮತಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಪುರುಷ-48,580, ಮಹಿಳೆ-27,183, ಇತರೆ-11 ಒಟ್ಟು 75,774 ಅರ್ಹ ಮತದಾರರಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ