ಕೊರೋನಾ ಸ್ಫೋಟಕ್ಕೆ ಹೋಂ ಐಸೋಲೇಷನ್ ಕೂಡ ಕಾರಣವಾಗ್ತಾ ಇದೆಯಾ?

ಕೊರೋನಾ  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಮರಣ ಮೃದಂಗ ಬಾರಿಸಿದ್ದು, ಕಳೆದ 24 ಗಂಟೆ ಅವಧಿಯಲ್ಲಿ 9 ಮಂದಿ ಕೋವಿಡ್-19 ಗೆ ಬಲಿಯಾಗಿದ್ದಾರೆ. ನಿನ್ನೆ ತಾನೇ 3 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದೀಗ ಕಳೆದ 24 ಗಂಟೆ ಅವಧಿಯಲ್ಲಿ 9 ಮಂದಿ ಮೃತಪಟ್ಟಿರುವುದು ಆತಂಕ ಮೂಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಾಮರಾಜನಗರ (ಏ. 30): ಜಿಲ್ಲೆಯಲ್ಲಿ ದಿನೇದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊರೋನಾ ಸ್ಫೋಟಕ್ಕೆ ಹೋಂ ಐಸೋಲೇಷನ್ ಸಹ  ಕಾರಣವಾಗ್ತಾ ಇದೆಯಾ  ಎಂಬ ಪ್ರಶ್ನೆಯು ಉದ್ಭವವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ  ಇರುವ 2137 ಸಕ್ರಿಯ ಪ್ರಕರಣ ಪೈಕಿ 1532 ಮಂದಿ ಅಂದರೆ ಶೇಕಡ 71 ಕ್ಕೂ ಹೆಚ್ಚು ಸೋಂಕಿತರು ಹೋಂ ಐಸೋಲೇಷನ್ ನಲ್ಲಿದ್ದಾರೆ. ಹೋಂ ಐಸೋಲೇಷನ್ ನಲ್ಲಿ ಇರಬೇಕಾದರೆ  ಮನೆಗಳಲ್ಲಿ  ಪ್ರತ್ಯೇಕ ಕೊಠಡಿ ಹಾಗೂ ಶೌಚಾಲಯ ಇರಬೇಕು. ಅವರಿಗೊಬ್ಬ ಸಹಾಯಕರಿರಬೇಕು ಎಂಬಿತ್ಯಾದಿ ಮಾನದಂಡಗಳಿವೆ.

ಬಡವರು, ಹಿಂದುಳಿದವರು, ಮಧ್ಯಮ ವರ್ಗದವರೇ ಹೆಚ್ಚಾಗಿರುವ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ, ಅಷ್ಟೇ ಏಕೆ ನಗರ ಪ್ರದೇಶಗಳ ಮನೆಗಳಲ್ಲೂ ಪ್ರತ್ಯೇಕ ಕೋಣೆ ಹಾಗೂ ಶೌಚಾಲಯ ಇರುವುದಿಲ್ಲ ಅಲ್ಲದೇ  ಮನೆಗಳು ಬಹಳ ಇಕ್ಕಟ್ಟಾಗಿರುತ್ತವೆ. ಹಾಗಾಗಿ ಎಷ್ಟೇ ಎಚ್ಚರ ವಹಿಸಿದರು ಹೋಂ ಐಸೋಲೇಷನ್ ನಲ್ಲಿ ಇರುವ ಸೋಂಕಿತರಿಂದ ಮನೆಯ ಇತರರಿಗೂ ಸೋಂಕು ಹಬ್ಬುತ್ತಿರುವ ಸಾಧ್ಯತೆಗಳು ಕಂಡುಬರುತ್ತಿವೆ.

ಕಳೆದ ಬಾರಿ ಅಂದರೆ ಮೊದಲ ಅಲೆ ಸಂದರ್ಭದಲ್ಲಿ ಸೋಂಕಿತರಿಗೆ  ರೋಗ ಲಕ್ಷಣ ಇರಲಿ ಇಲ್ಲದಿರಲಿ ಅವರನ್ನು ಕೂಡಲೇ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುತ್ತಿತ್ತು. ಇಲ್ಲವೇ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಇದರಿಂದ ಸೋಂಕು ಹರಡುವಿಕೆ ಪ್ರಮಾಣ ಕಡಿಮೆ ಇತ್ತು. ಆದರೆ ಕೆಲವು ತಿಂಗಳಿನಿಂದ ಈಚೆಗೆ ಹೋಂ ಐಸೋಲೇಷನ್​ಗೆ ಅವಕಾಶ ಮಾಡಿಕೊಡಲಾಗಿದೆ. ಇದೀಗ ಎರಡನೇ ಅಲೆಯ ಸಂದರ್ಭದಲ್ಲಿ ಕೊರೋನಾ ಸೋಂಕು ತಗುಲಿದವರ ಪೈಕಿ ಬಹುತೇಕ ಮಂದಿ ಹೋಂ ಐಸೋಲೇಷನ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರೆ ಜೊತೆಗೆ ರೋಗ ಲಕ್ಷಣ ಇಲ್ಲದವರನ್ನು ಐಸೋಲೇಷನ್ ಗೆ ಕಳುಹಿಸಿಲಾಗುತ್ತಿದೆ. ಇಂತಹವರ ಮೇಲೆ ಆರೋಗ್ಯ ಇಲಾಖೆಯಿಂದ ನಿಗಾ ಇಡಲು ಸಾಧ್ಯವಾಗುತ್ತಿಲ್ಲ.

ಹೋಂ ಐಸೋಲೇಷನ್​ನಲ್ಲಿ ಇರುವವರಿಂದ ರೂಲ್ಸ್ ಪಾಲನೆ ಆಗ್ತಿಲ್ಲ. ಹೊರಗೆ ಓಡಾಟ ನಡೆಸುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿಬರುತ್ತಿವೆ. ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಒಂದೊಂದು ಮನೆಯಲ್ಲಿ ಇಬ್ಬರಿಂದ ಮೂವರಿಗೆ ಸೋಂಕು ತಗುಲಿದೆ. ಕೆಲವು ಮನೆಗಳಲ್ಲಿ ಮನೆಮಂದಿಗೆಲ್ಲಾ ಪಾಸಿಟಿವ್ ಆಗಿರುವುದು ಸಹ ಕಂಡು ಬಂದಿದೆ.

ದೊಡ್ಡರಾಯಪೇಟೆ ಗ್ರಾಮವೊಂದರಲ್ಲೆ 40ಕ್ಕೂ ಹೆಚ್ಚು ಪ್ರಕರಣ

ಚಾಮರಾಜನಗರ ಜಿಲ್ಲೆಯಲ್ಲಿ ಹಳ್ಳಿಹಳ್ಳಿಗಳಲ್ಲೂ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶಗಳಲ್ಲೇ  ಹೆೆಚ್ಚು ಕೋವಿಡ್ ಪ್ರಕರಣ ಕಂಡು ಬರುತ್ತಿವೆ. ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಒಂದೇ ಗ್ರಾಮದಲ್ಲಿ 40 ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು ಕಳೆದ ಕೆಲವಾರು ದಿನಗಳಿಂದ ನಿತ್ಯ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿವೆ.

ಕಳೆದ ಕೆಲ ದಿನಗಳ ಹಿಂದೆ ಗ್ರಾಮದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬೆಂಗಳೂರು ಸೇರಿದಂತೆ ಹೊರ ಊರುಗಳಿಂದ ಜನ ಬಂದಿದ್ದರು. ಈ ಪೈಕಿ ಸೋಂಕಿತರೊಬ್ಬರು ಬಂದಿರುವ ಸಾಧ್ಯತೆಗಳಿದ್ದು ಅವರಿಂದ ಇತರರಿಗೆ ಕೊರೋನಾ ಹರಡಿರುವ ಸಾದ್ಯತೆಗಳಿವೆ. ಗ್ರಾಮದಲ್ಲಿ ಕೊರೋನಾ ತಾಂಡವವಾಡುತ್ತಿದ್ದರು ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರ ಆರೋಪಿಸಿದ್ದಾರೆ. ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಔಷಧಿಗಾಗಿ ಸೋಂಕಿತರೇ ಆಸ್ಪತ್ರೆ ಗೆ ಹೋಗಬೇಕಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ‌.

ಒಮ್ಮೆ ಔಷಧಿ ಕೊಡುವುದಾಗಿ ಸೋಂಕಿತರನ್ನೆಲ್ಲಾ ಆ್ಯಂಬುಲೆನ್ಸ್ ನಲ್ಲಿ ಆಲೂರು ಪ್ರಾಥಮಿಕ ಕರೆದೊಯ್ಯಲಾಗಿತ್ತು. ಅಲ್ಲಿ ಒಂದಿಷ್ಟು ಮಾತ್ರೆಗಳನ್ನಷ್ಟೇ ನೀಡಿದರು. ಆದರೆ ಮತ್ತೆ ಆ್ಯಂಬುಲೆನ್ಸ್ ನಲ್ಲಿ ಊರಿಗೆ ತಂದು ಬಿಡಲಿಲ್ಲ. ಸೋಂಕಿತರೆ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಬರಬೇಕಾಯ್ತು. ಹೀಗೆ ಸೋಂಕಿತರನ್ನು ಹೊರಗೆ ಅಡ್ಡಾಡಲು ಬಿಟ್ಟರೆ ಇತರರಿಗೆ ಕೊರೋನಾ ಹರಡುವುದಿಲ್ಲವೇ ಎಂದು‌ ಗ್ರಾಮ‌ ಪಂಚಾಯ್ತಿ  ಸದಸ್ಯ ನಾಗೇಂದ್ರ ಪ್ರಶ್ನಿಸಿದ್ದಾರೆ. ಯಾವ ವೈದ್ಯಾಧಿಕಾರಿಯೂ ತಮ್ಮೂರಿಗೆ  ಭೇಟಿ ನೀಡಿ ಕೊರೋನಾ ಸೋಂಕಿತರ ಯೋಗಕ್ಷೇಮ ವಿಚಾರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇದನ್ನು ಓದಿ: ಗದಗ ಜಿಲ್ಲೆಯಲ್ಲಿ ಸೋಂಕಿತರಿಗೆ ಬೆಡ್, ಆಕ್ಸಿಜನ್ ಕೊರತೆ ಇಲ್ಲ; ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟನೆ

24 ಗಂಟೆ ಅವಧಿಯಲ್ಲಿ ಕೋವಿಡ್ ಗೆ  9 ಮಂದಿ ಬಲಿ

ಕೊರೋನಾ  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಮರಣ ಮೃದಂಗ ಬಾರಿಸಿದ್ದು, ಕಳೆದ 24 ಗಂಟೆ ಅವಧಿಯಲ್ಲಿ 9 ಮಂದಿ ಕೋವಿಡ್-19 ಗೆ ಬಲಿಯಾಗಿದ್ದಾರೆ. ಬುಧವಾರ ತಾನೇ 3 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದೀಗ ಕಳೆದ 24 ಗಂಟೆ ಅವಧಿಯಲ್ಲಿ 9 ಮಂದಿ ಮೃತಪಟ್ಟಿರುವುದು ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ  ದಿನೇದಿನೇ ಏರುತ್ತಿದ್ದು ಸದ್ಯ ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಗುರುವಾರ ಕೊರೋನಾ ಪಾಸಿಟಿವಿಟಿ ದರ ಶೇಕಡಾ 23ಕ್ಕೂ ಹೆಚ್ಚಾಗಿದ್ದು ಆತಂಕ ಮೂಡಿಸಿದೆ.

  • ವರದಿ: ಎಸ್.ಎಂ. ನಂದೀಶ್

Published by:HR Ramesh
First published: