HOME » NEWS » District » IS CM YEDIYURAPPA FEARING TO VISIT CHAMARAJANAGARA BECAUSE OF BLIND BELIEVES HK NCHM

ಚಾಮರಾಜನಗರಕ್ಕೆ ಬರಲು ಸಿಎಂ ಹಿಂದೇಟು: ಮೂಢನಂಬಿಕೆಗೆ ಕಟ್ಟುಬಿದ್ರಾ ಯಡಿಯೂರಪ್ಪ

ಸಿಎಂ ಯಡಿಯೂರಪ್ಪ ಮತ್ತೆ ಅದೇ ಮೂಢನಂಬಿಕೆ ಗೆ ಜೋತ್ತು ಬಿದ್ದಿದ್ದು ಚಾಮರಾಜನಗರಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

news18-kannada
Updated:November 20, 2020, 4:45 PM IST
ಚಾಮರಾಜನಗರಕ್ಕೆ ಬರಲು ಸಿಎಂ ಹಿಂದೇಟು: ಮೂಢನಂಬಿಕೆಗೆ ಕಟ್ಟುಬಿದ್ರಾ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ
  • Share this:
ಚಾಮರಾಜನಗರ(ನವೆಂಬರ್. 20): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಚಾಮರಾಜನಗರಕ್ಕೆ ಬರಲು ಭಯಪಡುತ್ತಿದ್ದಾರಾ? ಹೀಗೊಂದು ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದು, ಚರ್ಚೆಗೆ ಗ್ರಾಸವಾಗಿದೆ. ರಾಜ್ಯದ 26 ನೇ ಸಿಎಂ ಆಗಿ 2019 ಜುಲೈ ನಲ್ಲಿ ಅಧಿಕಾರ ಸ್ವೀಕರಿಸಿದ ಬಿ ಎಸ್ ಯಡಿಯೂರಪ್ಪ 16 ತಿಂಗಳು ಕಳೆದರು ಚಾಮರಾಜನಗರದತ್ತ ತಲೆ ಹಾಕಿಲ್ಲ. ಆದರೆ, ಇದೇ ತಿಂಗಳು 25 ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗು ಶಂಕುಸ್ಥಾಪನೆಗಾಗಿ ಜಿಲ್ಲೆಯ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿರುವ ಯಡಿಯೂರಪ್ಪ ಚಾಮರಾಜನಗರಕ್ಕೆ ಭೇಟಿ ನೀಡುತ್ತಿಲ್ಲ, ಇಲ್ಲಿಗೆ ಭೇಟಿ ನೀಡಿದರೆ ತಮ್ಮ ಅಧಿಕಾರ ಹೋಗಿಬಿಡುತ್ತೆ ಎಂಬ ಮೂಢನಂಬಿಕೆಗೆ ಕಟ್ಟುಬಿದ್ರಾ? ಎಂಬ ಪ್ರಶ್ನೆಗಳು ಸಹಜವಾಗಿಯೇ ಕೇಳಿಬರುತ್ತಿವೆ. 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸುಮಾರು ಮೂರು ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಒಮ್ಮೆಯು ಚಾಮರಾಜನಗರಕ್ಕೆ ಭೇಟಿ ನೀಡಿರಲಿಲ್ಲ.

ಕೇವಲ‌14 ಕಿಲೋ ಮೀಟರ್ ದೂರದಲ್ಲಿರುವ ಸಂತೇಮರಹಳ್ಳಿಗೆ ಬಂದಿದ್ದ ಅವರು ಅಪ್ಪಿತಪ್ಪಿಯು ಚಾಮರಾಜನಗರದತ್ತ ಸುಳಿಯಲಿಲ್ಲ. ಇದೀಗ ಅದೇ ಪರಿಪಾಠ ಮುಂದುವರಿಸಿದ್ದು ಚಾಮರಾಜನಗರ ಪಟ್ಟಣಕ್ಕೆ ಬಾರದೆ ಜಿಲ್ಲೆಯ ಮಹದೇಶ್ವರ ಬೆಟ್ಟಕ್ಕೆ ಬಂದು ಹೋಗುತ್ತಿದ್ದಾರೆ.

ಮೂಢನಂಬಿಕೆಗೆ ಕಾರಣವೇನು? :

ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಹಾಗೂ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗಿದ್ದ ವೇಳೆ ಚಾಮರಾಜನಗರಕ್ಕೆ ಬಂದಿದ್ದರು. ಆದರೆ, ಇಲ್ಲಿಂದ ಹೋದ ಮೇಲೆ ಆರು ತಿಂಗಳ ಒಳಗೆ ಬೇರೆ ಬೇರೆ ಕಾರಣಗಳಿಂದ ಅಧಿಕಾರ ಕಳೆದುಕೊಂಡರು. ಅದಕ್ಕು ಮೊದಲು ಚಾಮರಾಜನಗರಕ್ಕೆ ಭೇಟಿ ನೀಡಿ ಹೋಗಿದ್ದು ಕೇವಲ ಕಾಕತಾಳೀಯ. ಆದರೆ, ಕೆಲ ಕಿಡಿಗೇಡಿಗಳು ಮುಖ್ಯಮಂತ್ರಿಗಳಾದವರು ಚಾಮರಾಜನಗರ ಬಂದರೆ ಆರು ತಿಂಗಳ ಒಳಗೆ ಅವರ ಅಧಿಕಾರ ಹೋಗುತ್ತೆ ಎಂಬ ಮೂಢನಂಬಿಕೆ ಹುಟ್ಟು ಹಾಕಿದರು. ಆಗಿನಿಂದ ಚಾಮರಾಜನಗಕ್ಕೆ ಕಳಂಕ ಅಂಟಿಕೊಂಡಿತು.

ಈ ಮೌಢ್ಯಕ್ಕೆ ಬೆದರಿದ ಎಸ್. ಬಂಗಾರಪ್ಪ, ವೀರಪ್ಪಮೊಯಿಲಿ, ಹೆಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಸ್. ಎಂ. ಕೃಷ್ಣ, ಧರಂಸಿಂಗ್ ಇತ್ತ ಕಾಲಿಡಲಿಲ್ಲ. ಸುಮಾರು 16 ವರ್ಷಗಳ  ನಂತರ ಹೆಚ್.ಡಿ. ಕುಮಾರಸ್ವಾಮಿ ಮೂಢನಂಬಿಕೆ ಧಿಕ್ಕರಿಸಿ 2007ರ ಮೇ ತಿಂಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಆದರೆ 20-20 ಸರ್ಕಾರದಲ್ಲಿ ಜೆಡಿಎಸ್ ಬಿಜೆಪಿ ನಡುವೆ ಅಧಿಕಾರ ಹಂಚಿಕೆ  ಗೊಂದಲದಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಸಹ ಕಾಕತಾಳಿಯವೆಂಬಂತೆ ಪದಚ್ಯುತಗೊಂಡರು ಹಾಗಾಗಿ ಚಾಮರಾಜನಗರಕ್ಕೆ ಮತ್ತೆ ಅದೇ ಕಳಂಕ ಅಂಟಿಕೊಂಡಿತು.

ನಂತರದಲ್ಲಿ ಸಿಎಂ ಆದ ಯಡಿಯೂರಪ್ಪ ಅವರು 14 ಕಿ.ಮೀ. ಅಂತರದಲ್ಲಿರುವ ಸಂತೇಮರಹಳ್ಳಿಗೆ ಬಂದರೂ ನಗರಕ್ಕೆ ಬರಲಿಲ್ಲ. ಇನ್ನು ಸದಾನಂದಗೌಡರು ಚಾಮರಾಜನಗಕ್ಕೆ ಭೇಟಿ ನೀಡಲು ಹಿಂಜರಿದರು. ಆದರೆ, ಜಗದೀಶ್ ಶೆಟ್ಟರ್ ತಮ್ಮ ಅಧಿಕಾರದ ಕೊನೆ ದಿನಗಳಲ್ಲಿ ಚಾಮರಾಜನಗರಕ್ಕೆ ಆಗಮಿಸಿದ್ದರು.

ಇದನ್ನೂ ಓದಿ : ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ಸಮರ್ಥನೆ; ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದ ಶರಣಪ್ರಕಾಶ ಪಾಟೀಲನಂತರ ಸಿಎಂ ಆದ ಸಿದ್ದರಾಮಯ್ಯ 10ಕ್ಕು ಹೆಚ್ಚು ಬಾರಿ ಭೇಟಿ ನೀಡುವ ಮೂಲಕ ಮೂಡನಂಬಿಕೆಯನ್ನು ಇನ್ನಿಲ್ಲದಂತೆ ಹೊಸಕಿ ಹಾಕಿದರು. ಅಷ್ಟೇ ಅಲ್ಲ ನೂರು ಕೋಟಿ ರೂಪಾಯಿಗು ಹೆಚ್ಚು ಅನುದಾನ ನೀಡುವ ಮೂಲಕ ಚಾಮರಾಜನಗರ ಪಟ್ಟಣ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದರು.

ಆದರೆ ಈಗ ಸಿಎಂ ಯಡಿಯೂರಪ್ಪ ಮತ್ತೆ ಅದೇ ಮೂಢನಂಬಿಕೆ ಗೆ ಜೋತ್ತು ಬಿದ್ದಿದ್ದು ಚಾಮರಾಜನಗರಕ್ಕೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮುಖ್ಯಮಂತ್ರಿ ಆಗಿದ್ದವರು ಅಧಿಕಾರ ಕಳೆದುಕೊಂಡ ಇದುವರೆಗಿನ ಘಟನೆಗಳು ಕೇವಲ ಕಾಕತಾಳೀಯ ಅಷ್ಟೇ. ರಾಜಕೀಯ ಕಾರಣಗಳಿಗೆ ಅಧಿಕಾರ ಕಳೆದುಕೊಂಡರೆ ಚಾಮರಾಜನಗರಕ್ಕೆ ಆ ಕಳಂಕವನ್ನು ಅಂಟಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ, ಪರಿಸರವಾದಿ ಪುಣಜನೂರು ದೊರೆಸ್ವಾಮಿ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 10 ಬಾರಿ ಭೇಟಿ ನೀಡಿದರೂ ಯಾವುದೇ ಕುಂದುಂಟಾಗಲಿಲ್ಲ, ಅವರು 5  ವರ್ಷ ಯಶಸ್ವಿಯಾಗಿ ಅಧಿಕಾರಾವಧಿ ಪೂರೈಸಿದ ಉದಾಹರಣೆ ನಮ್ಮ ಕಣ್ಮುಂದೆ ಇರುವಾಗ ಮೂಢ ನಂಬಿಕೆಗಳಿಗೆ ಏಕೆ ಮಣೆಹಾಕಬೇಕು, ಮುಖ್ಯಮಂತ್ರಿ ಯಡಿಯೂರಪ್ಪ ಇದನ್ನೆಲ್ಲ ಬದಿಗೊತ್ತಿ ಚಾಮರಾಜನಗರ ಕ್ಕೆ ಭೇಟಿ ನೀಡಬೇಕು, ಅನುದಾನ ನೀಡುವ ಮೂಲಕ ಪಟ್ಟಣದ  ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
Published by: G Hareeshkumar
First published: November 20, 2020, 4:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories