ಬಾಗಲಕೋಟೆ (ಮೇ26):ಕಳೆದ ಎಂಟು ತಿಂಗಳ ಹಿಂದೆ ವರ್ಗಾವಣೆಗೊಂಡಿದ್ದ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನಕರ್ ಸಿಎಟಿ ಮೊರೆ ಹೋಗಿ ರಾಜ್ಯ ಸರ್ಕಾರದ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತರುವ ಮೂಲಕ ಸಿಇಓ ಹುದ್ದೆಯಲ್ಲಿಯೇ ಮುಂದುವರೆದಿದ್ದರು. ಸಿಎಟಿ ಆದೇಶ ಮಾರ್ಚ್ 31ವರೆಗೆ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಓ ಹುದ್ದೆಯಲ್ಲಿ ಮುಂದುವರಿಯುವಂತೆ ಆದೇಶಿಸಿತ್ತು.
ಆದರೆ ಸಿಎಟಿ ಆದೇಶದಂತೆ 2020 ಮಾರ್ಚ್ 31ರ ಬಳಿಕ ಗಂಗೂಬಾಯಿ ಮಾನಕರ್ ವರ್ಗಾವಣೆಗೊಳ್ಳಬೇಕಿತ್ತು. ಆದರೆ ದೇಶದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವರ್ಗಾವಣೆ ಬಗ್ಗೆ ತಲೆಕೆಡಿಸಿಕೊಂಡಿದ್ದಿಲ್ಲ. ಇದೀಗ ಮತ್ತೆ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನಕರ್ ವರ್ಗಾವಣೆಗೊಳ್ಳಲಿದ್ದಾರೆ ಎನ್ನುವ ಮಾತು ಬಾಗಲಕೋಟೆ ಜಿಲ್ಲಾ ಪಂಚಾಯತ್ ಮೊಗಸಾಲೆ, ಜಿಲ್ಲಾ ಪಂಚಾಯತ್ ಸದಸ್ಯರ ವಲಯದಲ್ಲಿ ಹರಿದಾಡುತ್ತಿದೆ.
ಇನ್ನು, ಜಿಲ್ಲಾ ಪಂಚಾಯತ್ ಸಿಇಓ ವರ್ಗಾವಣೆಗೊಳ್ಳುವ ಸುದ್ದಿಗೆ ಕಾರಣಗಳಿವೆ. ಹಾಗಾಗಿ ಇದೀಗ ಮತ್ತೆ ಸಿಇಓ ಗಂಗೂಬಾಯಿ ಮಾನಕರ್ ವರ್ಗಾವಣೆ ಸುದ್ದಿ ಮುನ್ನೆಲೆಗೆ ಬಂದಿದೆ. ಈಗಾಗಲೇ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ , ಡಿವೈಎಸ್ಪಿ ವರ್ಗಾವಣೆಗೊಳಿಸಿದ ಬೆನ್ನಲ್ಲೇ ಇದೀಗ ಜೂನ್ ತಿಂಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಮೇಜರ್ ಸರ್ಜರಿಗೆ ಮುಂದಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಬಾಗಲಕೋಟೆ ಜಿಪಂ ಸಿಇಓ ಎತ್ತಂಗಡಿ ಏಕೆ..?
ಹೌದು, ಗಂಗೂಬಾಯಿ ಮಾನಕರ್ ಜಿಲ್ಲಾ ಪಂಚಾಯತ್ ಸಿಇಓ ಆಗಿ ಅಧಿಕಾರ ವಹಿಸಿಕೊಂಡ 08-08-2018ರಿಂದಲೂ ಆನೆ ನಡೆದಿದ್ದೆ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ. ಅವರ ನಡೆಗೆ ಬೇಸತ್ತು ಪಕ್ಷಾತೀತವಾಗಿ ಜಿಲ್ಲಾ ಪಂಚಾಯತ್ ಸದಸ್ಯರು ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನಕರ್ ವರ್ಗಾವಣೆಗೆ ಪ್ರಯತ್ನಿಸಿದ್ದರು. ಆವಾಗಿನಿಂದಲೂ ಜಿಲ್ಲಾ ಪಂಚಾಯತ್ ಸಿಇಓ, ಅಧ್ಯಕ್ಷರು,ಸದಸ್ಯರ ಮಧ್ಯೆ ಶೀತಲ ಸಮರ ನಡೆಯುತ್ತಿದೆ.
ಜಿಲ್ಲಾ ಪಂಚಾಯತ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ಸಿಇಓ ಗಂಗೂಬಾಯಿ ಮಾನಕರ್ ನಿರ್ಧಾರ ತೆಗೆದುಕೊಳ್ಳುತ್ತಾರೆ. ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸಿಇಓ ಗಂಗೂಬಾಯಿ ಮಾನಕರ್ ವಿರುದ್ಧ ಸದಸ್ಯರು ಹರಿಹಾಯುತ್ತಲೇ ಬಂದಿದ್ದಾರೆ. ಜೊತೆಗೆ ಸಿಇಓ ಗಂಗೂಬಾಯಿ ಮಾನಕರ್ ವಿರುದ್ಧ ಸದಸ್ಯರು ಹಲವು ಭ್ರಷ್ಟಾಚಾರ ಆರೋಪ ಕೂಡಾ ಮಾಡುತ್ತಾ ಎತ್ತಂಗಡಿಗೆ ಪ್ರಯತ್ನಿಸಿದ್ದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಸೆಪ್ಟೆಂಬರ್ 7,2019ರಂದು ಐಎಎಸ್ ಅಧಿಕಾರಿ ಗಂಗೂಬಾಯಿ ಮಾನಕರ್ ಅವರಿಗೆ ಸ್ಥಳ ತೋರಿಸದೇ ವರ್ಗಾವಣೆಗೊಳಿಸಿ, ಮೊಹಮ್ಮದ್ ಇಕ್ರಮ್ ಷರೀಫ್ ರನ್ನು ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಒಯಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಆದರೆ ಈ ವೇಳೆ ಐಎಎಸ್ ಅಧಿಕಾರಿ ಗಂಗೂಬಾಯಿ ಮಾನಕರ್ ರಾಜ್ಯ ಸರ್ಕಾರದ ವರ್ಗಾವಣೆ ಆದೇಶ ಪ್ರಶ್ನಿಸಿ, ಜೊತೆಗೆ ಅವಧಿ ಪೂರ್ವ ವರ್ಗಾವಣೆ ಹಾಗೂ ಪುತ್ರಿ ಶಿಕ್ಷಣಕ್ಕೆ ತೊಂದರೆಯಾಗುತ್ತೆಂದು ಬೆಂಗಳೂರಿನಲ್ಲಿರುವ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಲಯಕ್ಕೆ ಮೊರೆಹೋಗಿದ್ದರು.ಸೆಪ್ಟೆಂಬರ್ 25, 2019ರಂದು ಸಿಎಟಿ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಒಯಾಗಿ ಮಾರ್ಚ್ 31, 2020ರವರೆಗೆ ಅಧಿಕಾರದಲ್ಲಿ ಮುಂದುವರೆಯುವಂತೆ ಆದೇಶ ಹೊರಡಿಸಿತ್ತು. ಅಕ್ಟೋಬರ್ 1,2019ರಂದು ಗಂಗೂಬಾಯಿ ಮಾನಕರ್ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಓ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಆಗ ಜಿಲ್ಲಾ ಪಂಚಾಯತ್ ಸದಸ್ಯರು ಪಕ್ಷಾತೀತವಾಗಿ ಗಂಗೂಬಾಯಿ ಮಾನಕರ್ ಅಧಿಕಾರ ವಹಿಸಿಕೊಳ್ಳುವುದಕ್ಕೆ ವಿರೋಧಿಸಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಗೆ ಪತ್ರ ಬರೆದಿದ್ದರು.
ಇನ್ನು, ಪ್ರವಾಹ ಸಂಬಂಧ ಪ್ರಗತಿ ಪರಿಶೀಲನೆಗೆಂದು ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರಿಗೂ ಸಭೆಯಲ್ಲೇ ಬಿಜೆಪಿ ಶಾಸಕರು,ಜಿಲ್ಲಾ ಪಂಚಾಯತ್ ಸದಸ್ಯರು ಸಿಇಓ ಗಂಗೂಬಾಯಿ ಮಾನಕರ್ ವರ್ಗಾವಣೆಗೆ ಮನವಿ ಕೊಟ್ಟಿದ್ದರು.ಆದರೆ ಐಎಎಸ್ ಅಧಿಕಾರಿ ಗಂಗೂಬಾಯಿ ಮಾನಕರ್ ಮಾರ್ಚ್ 31, 2020ರವರೆಗೆ ಮುಂದುವರೆಯುವಂತೆ ಸಿಎಟಿ ಆದೇಶಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮಾರ್ಚ್ ವೇಳೆಗೆ ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವಿಕೆ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರ ಗಂಗೂಬಾಯಿ ಮಾನಕರ್ ವರ್ಗಾವಣೆಗೆ ಮುಂದಾಗಿರಲಿಲ್ಲ.ಇದೀಗ ಲಾಕ್ ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಕೆಲವು ಇಲಾಖೆಗಳಲ್ಲಿ ಸರ್ಕಾರ ಅಧಿಕಾರಿಗಳ ವರ್ಗಾವಣೆಗೆ ಮುಂದಾಗಿದೆ.
ಜೂನ್ 1ರಿಂದ ರಾಜ್ಯದ ಎಲ್ಲಾ ದೇವಸ್ಥಾನಗಳು ಓಪನ್; ನಾಳೆಯಿಂದ ಆನ್ಲೈನ್ ಬುಕ್ಕಿಂಗ್ ಸೇವೆ ಶುರು
ಇನ್ನು, ಮೊದಲಿನಿಂದಲೂ ಬಾಗಲಕೋಟೆ ಜಿಲ್ಲಾ ಪಂಚಾಯತ್ ನಲ್ಲಿ ಸಿಇಓ ಗಂಗೂಬಾಯಿ ಮಾನಕರ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರ ಮಧ್ಯೆ ಮುಸುಕಿನ ಗುದ್ದಾಟವಿದೆ. ಸಿಇಓ ಗಂಗೂಬಾಯಿ ಮಾನಕರ್ ಜಿಲ್ಲಾ ಪಂಚಾಯತ್ ಸದಸ್ಯರ ಫೋನ್ ಕರೆ ಸ್ವೀಕರಿಸುವುದಿಲ್ಲ.ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುವುದಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯರು ಗಂಗೂಬಾಯಿ ಮಾನಕರ್ ವರ್ಗಾವಣೆಗೊಳ್ಳಲಿ ಎಂದು ಆಗಾಗ ಸರ್ಕಾರಕ್ಕೆ ಮನವಿ ಕೊಡುತ್ತಾ ಬಂದಿದ್ದಾರೆ.
ಇಲಾಖೆಗಳ ಅಭಿವೃದ್ಧಿ ಕಾರ್ಯ, ಸರ್ಕಾರದಿಂದ ಬಂದ ಅನುದಾನ, ಜೊತೆಗೆ ಜಿಲ್ಲಾ ಪಂಚಾಯತ್ ಸದಸ್ಯರ ಕಾಮಗಾರಿ ಕಡಿತಕ್ಕೆ ಸಹಿ ಹಾಕುವುದಿಲ್ಲ ಎಂಬಿತ್ಯಾದಿ ದೂರುಗಳು ಸಿಇಓ ಗಂಗೂಬಾಯಿ ಮಾನಕರ್ ಮೇಲಿದೆ.ಹೀಗಾಗಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಸಿಇಓ ಮಧ್ಯೆ ಸಮನ್ವಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ.
ಇದೀಗ ಮತ್ತೆ ಜಿಲ್ಲಾ ಪಂಚಾಯತ್ ಸಿಇಒ ಗಂಗೂಬಾಯಿ ಮಾನಕರ್ ಜೂನ್ ತಿಂಗಳಲ್ಲಿ ವರ್ಗಾವಣೆಗೊಳ್ಳಲಿದ್ದಾರೆ ಎನ್ನುವ ಗುಸು ಗುಸು ಸುದ್ದಿ ಹರಿದಾಡತೊಡಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪರಿಗೆ ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನಕರ್ ವರ್ಗಾವಣೆಗೆ ಮುಖಂಡರು, ಜಿಲ್ಲಾ ಪಂಚಾಯತ್ ಸದಸ್ಯರು ಒತ್ತಡ ಹಾಕುತ್ತಿದ್ದಾರೆ. ಸಿಇಓ ವರ್ಗಾವಣೆಗೆ ಈಗಾಗಲೇ ತೆರೆಮರೆ ಕಸರತ್ತು ನಡೆಯುತ್ತಿದೆ ಎನ್ನುವುದು ಬಲವಾಗಿ ಕೇಳಿಬರುತ್ತಿದೆ.
ಏನೇ ಆಗಲಿ ಅಧಿಕಾರಿಶಾಹಿ, ಜನಪ್ರತಿನಿಧಿಗಳ ಮಧ್ಯೆ ಸಮನ್ವಯತೆಯಿದ್ದರೆ ಮಾತ್ರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಲಿಕ್ಕೆ ಸಾಧ್ಯ. ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಿಇಓ ಗಂಗೂಬಾಯಿ ಮಾನಕರ್ ವರ್ಗಾವಣೆಗೆ ಮುಂದಿನ ದಿನಗಳಲ್ಲಿ ಕಾಲವೇ ಉತ್ತರಿಸಲಿದೆ.