ವಿಮಾನದಲ್ಲಿ (Flight) ಪ್ರಯಾಣಿಸಿದ್ದೀರಾ? ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಕನ್ನಡ (Kannada), ಹಿಂದಿ (Hindi) ಅಥವಾ ಇಂಗ್ಲೀಷ್ನಲ್ಲಿ (English) ಘೋಷಣೆ ಮಾಡುವುದು ವಾಡಿಕೆ. ಆದರೆ ಮಂಗಳೂರಿನಲ್ಲಿ (Mangalore) ತುಳು ಭಾಷೆಯನ್ನು ಬಳಸುವ ಮೂಲಕ ಸ್ಥಳೀಯ ಭಾಷೆಗೆ ಗೌರವ ನೀಡಿದ್ದಾರೆ. ದಕ್ಷಿಣ ಕನ್ನಡ (Dakshina Kannada) ಮತ್ತು ಮಂಗಳೂರಿನಲ್ಲಿ ತುಳು ಭಾಷೆ (Tulu Language) ಮಾತನಾಡುವ ಜನರು ಹೆಚ್ಚಿದ್ದು, ವಿಮಾನದಲ್ಲಿ ಸ್ಥಳೀಯ ಭಾಷೆಯನ್ನು ಬಳಸಿರುವುದು ಪ್ರಯಾಣಿಕರಲ್ಲಿ ಸಂತಸ ಮೂಡಿಸಿದೆ.
ಇಂಡಿಗೋದ ಮೊದಲ ಅಧಿಕಾರಿಯಾಗಿರುವ ಮಂಗಳೂರು ಮೂಲದ ಪೈಲಟ್ ಪ್ರದೀಪ್ ಪದ್ಮಶಾಲಿ ಅವರು ವಿಮಾನದಲ್ಲಿ ತುಳು ಭಾಷೆಯಲ್ಲಿ ಘೋಷಣೆ ಮಾಡಿದ್ದಾರೆ. ಡಿಸೆಂಬರ್ 24, 2020 ರಂದು ತಮ್ಮ ಮಾತೃಭಾಷೆ ತುಳುವಿನಲ್ಲಿ 26 ಸೆಕೆಂಡುಗಳ ಘೋಷಣೆ ಮಾಡಿವ ಮೂಲಕ ಪ್ರಯಾಣಿಕರಿಗೆ ಸ್ಥಳೀಯ ಭಾಷೆಯ ಬಗೆಗಿನ ಗೌರವ ಹೆಚ್ಚಿಸಿದ್ದಾರೆ.
ಅಂದಹಾಗೆಯೇ ವಿಮಾನವು ಮುಂಬೈನಿಂದ ಮಂಗಳೂರಿಗೆ ಪ್ರಯಾಣಿಸಲು ಸಿದ್ಧವಾಗಿತ್ತು. ತುಳುವಿನಲ್ಲಿ ಮಾತನಾಡುತ್ತಾ, "ನಿಕ್ಲೆಗ್ ಮಾತೆರ್ಗ್ಲಾ ಸೊಲ್ಮೆಲು!" (ಎಲ್ಲರಿಗೂ ಶುಭಾಶಯಗಳು). ವಿಮಾನದಲ್ಲಿದ್ದ ಪ್ರಯಾಣಿಕರನ್ನು ಪ್ರದೀಪ್ ಸ್ವಾಗತಿಸಿ, ಸುಗಮ ಪ್ರಯಾಣವನ್ನು ಹಾರೈಸಿದರು. ಸುಮಾರು ಒಂದು ಗಂಟೆ ಐದು ನಿಮಿಷಗಳ ಕಾಲ ಪ್ರಯಾಣ ಇರುತ್ತದೆ. ಈ ಘೋಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಕೆಲವು ದಿನಗಳಲ್ಲಿ ವಿಮಾನಗಳಲ್ಲಿ ತುಳುವಿನಲ್ಲಿ ಇದೇ ರೀತಿಯ ಘೋಷಣೆಗಳನ್ನು ಮಾಡಲಾಗಿದೆ. ಒಂದು ವಾರದ ಹಿಂದೆ, ತುಳುವಿನಲ್ಲಿ ವಿಮಾನದ ಮೊದಲ ಅಧಿಕಾರಿಯ ಮತ್ತೊಂದು ವಿಡಿಯೋ ಕ್ಲಿಪ್ಪಿಂಗ್ ವೈರಲ್ ಆಗಿತ್ತು. ತುಳುವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಹಲವರ ಪ್ರಶಂಸೆಗೆ ಪಾತ್ರವಾಯಿತು.
ಭಾನುವಾರದಂದು ಮುಂಬೈ-ಮಂಗಳೂರು ಇಂಡಿಗೋ ಫ್ಲೈಟ್ 6E5317 ಸಮಯದಲ್ಲಿ ಬೋರ್ಡಿಂಗ್ ಗೇಟ್ನಲ್ಲಿ ವಿಮಾನಯಾನ ಸಿಬ್ಬಂದಿ ತುಳುವಿನಲ್ಲಿ ಮತ್ತೊಂದು ಘೋಷಣೆಯನ್ನು ಮಾಡಿರುವುದು ಬೆಳಕಿಗೆ ಬಂದಿದೆ.
ಇದನ್ನು ಓದಿ: Mobileನಿಂದ ಜೀವ ಉಳಿಸಿಕೊಂಡನಾ ಯುವಕ? ಬ್ರಹ್ಮಗಿರಿಯಲ್ಲಿ ಬಿದ್ದು ಬದುಕಿ ಬಂದವನ ರೋಚಕ ಕಥೆ
“ಇತ್ತೀಚೆಗೆ ತುಳುವಿನಲ್ಲಿ ಕೆಲವು ಪೈಲಟ್ಗಳು ಘೋಷಣೆಗಳನ್ನು ಮಾಡಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ತಮ್ಮ ಮಾತೃಭಾಷೆಯಲ್ಲಿ ಪ್ರಕಟಣೆಯನ್ನು ಕೇಳಿದಾಗ ಪ್ರಯಾಣಿಕರು ಹೆಮ್ಮೆಪಡುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಮಂಗಳೂರಿನ ವೆಲೆನ್ಸಿಯಾದಿಂದ ಬಂದಿರುವ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಪೈಲಟ್ ಕ್ಯಾಪ್ಟನ್ ಮೈಕೆಲ್ ಸಲ್ಡಾನ್ಹಾ ಹೇಳಿದರು.
"ವಿಮಾನದಲ್ಲಿ ಪ್ರಕಟಣೆಗಳ ಸಮಯದಲ್ಲಿ ಸ್ಥಳೀಯ ಭಾಷೆಯನ್ನು ಬಳಸುವ ಪ್ರತಿಕ್ರಿಯೆಯು ಪ್ರಯಾಣಿಕರಿಂದ ಸಕಾರಾತ್ಮಕವಾಗಿದೆ" ಎಂದು ಗಗನಸಖಿಯೊಬ್ಬರು ಹೇಳಿದ್ದಾರೆ.
ಇದನ್ನು ಓದಿ: Bengaluru to Pakistan: ಜೈಲಿನಲ್ಲಿದ್ದ ಮಹಿಳೆಗೆ ಪಾಕ್ ಪೌರತ್ವ! ಆಕೆ ಬೆಂಗಳೂರಿಗೆ ಬಂದಿದ್ದೇ ರೋಚಕ
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಮಹೇಶ್ ಮೂಲ್ಕಿ ಎಂಬವರು ತುಳು ಭಾಷಾ ಹೋರಾಟಗಾರರು ಹೌದು. ಇವರು ವಿಮಾನಯಾನ ಸಂಸ್ಥೆಗಳು ಮತ್ತು ಅವರ ಸಿಬ್ಬಂದಿ ತಮ್ಮ ವಿಮಾನಗಳಲ್ಲಿ ತುಳುವನ್ನು ಉತ್ತೇಜಿಸುತ್ತಿರುವುದನ್ನು ಶ್ಲಾಘಿಸಿದರು.
ಮಹೇಶ್ ಮೂಲ್ಕಿ ಅವರ ಟ್ವೀಟ್
ತುಳು ಭಾಷೆಯ ಬಗ್ಗೆ:
ದಕ್ಷಿಣ ಭಾರತದ ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಕೂಡ ಒಂದು. ದಕ್ಷಿಣ ಕನ್ನಡ, ಮಂಗಳೂರು, ಉಡುಪಿ, ಸುಳ್ಯ, ಕಾಸರಗೋಡು ಭಾಗದಲ್ಲಿ ತುಳು ಮಾತನಾಡುವ ಜನರಿದ್ದಾರೆ. ಇವರನ್ನು ತುಳುವರು ಎಂದು ಕರೆಯಲಾಗುತ್ತದೆ.
ಸುಮಾರು ೧೦ನೇ ಶತಮಾನದಲ್ಲಿ ತುಳು ಬ್ರಾಹ್ಮಣರು ದಕ್ಷಿಣ ಭಾರತದ ಭಾಗಗಳಲ್ಲಿ ವಿಕಾಸವಾದ ತಿಗಳಾರಿ ಲಿಪಿ ಎಂಬ ಬ್ರಾಹ್ಮಿ ಆಧಾರಿತ ಲಿಪಿಯನ್ನು ಉಪಯೋಗಿಸುತ್ತಿದರು. ತುಳುವ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ಈ ಲಿಪಿಯನ್ನು ತುಳು ಲಿಪಿ ಎಂದು ಕರೆಯಲಾಗಿದೆ.
ತುಳು ಭಾಷೆ ಮಂಗಳೂರು ಅಥವಾ ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಾಗದೆ ಮುಂಬೈ, ಗುಕರಾತ್ ಭಾಗದಲ್ಲೂ ತುಳು ಮಾತನಾಡುವ ಮತ್ತು ಈ ಭಾಷೆಯನ್ನು ಪ್ರೀತಿಸುವ ಜನರಿದ್ದಾರೆ. . ಸುಮಾರು 9 ದಶಲಕ್ಷ ಜನರು ತುಳು ಭಾಷೆ ಮಾತನಾಡುವವರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ