ನಿಗಮ ಸ್ಥಾಪನೆಗೆ ಸ್ವಾಗತ; ವೀರಶೈವ ಲಿಂಗಾಯಿತರಿಗೆ 2ಎ ಮೀಸಲಾತಿಯನ್ನೂ ನೀಡಿ ಎಂದ್ರು ಕಾಂಗ್ರೆಸ್ ಶಾಸಕ

ಇಂಡಿಯ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಅವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಹಾಗೆಯೇ ಆ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದೂ ಆಗ್ರಹಿಸಿದ್ದಾರೆ.

ಯಶವಂತರಾಯಗೌಡ ವಿ. ಪಾಟೀಲ

ಯಶವಂತರಾಯಗೌಡ ವಿ. ಪಾಟೀಲ

  • Share this:
ವಿಜಯಪುರ: ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಸ್ವಾಗತಿಸಿದ್ದಾರೆ. ಅಷ್ಡೇ ಅಲ್ಲ, ವೀರಶೈವ ಲಿಂಗಾಯಿತ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬ ಬೇಡಿಕೆಯಿತ್ತು. ಅಲ್ಲದೇ, ಮಾರ್ಚ್ ನಲ್ಲಿ ವಿಧಾನ ಸಭೆ ಅಧಿವೇಶನದಲ್ಲಿ ನಾನುದಂತೆ ಸೇರಿ 5 ಜನ ಶಾಸಕರು ಈ ಕುರಿತು ಬೇಡಿಕೆ ಇಟ್ಟಿದ್ದೆವು.  ಅಂದಿನ ಅಧಿವೇಶನದಲ್ಲಿ‌ ಜೆಡಿಎಸ್ ದಲಿತ ಶಾಸಕ ಅನ್ನದಾನಿ ನಮಗಿಂತಲೂ ಚೆನ್ನಾಗಿ ವಿಷಯ ಮಂಡಿಸಿದ್ದರು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದರು. ನಂತರ ನಾವು ಶಾಸಕರು ಮತ್ತು ಸಚಿವರು ಸಿಎಂಗೆ ಮನವಿ ಮಾಡಿದ್ದೆವು. ಅಲ್ಲದೇ, ವೀರಶೈವ ಮಹಾಸಭೆ ಕೂಡ ಬೇಡಿಕೆ ಸಲ್ಲಿಸಿತ್ತು. ಸರಕಾರ ಈಗ ಸ್ಪಂದಿಸಿ ನಿಗಮ ಸ್ಥಾಪಿಸಿದೆ. ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಅಲ್ಲದೇ, ಮುಖ್ಯಮಂತ್ರಿ ಬಿ.‌ ಎಸ್. ಯಡಿಯೂಪ್ಪ ಅವರಿಗೆ ವೀರಶೈವ- ಲಿಂಗಾಯಿತ ಶಾಸಕನಾಗಿ, ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.

ವೀರಶೈವ ಸಮುದಾಯ ಎಲ್ಲರೊಂದಿಗೆ ಸಾಮರಸ್ಯದೊಂದಿಗಿದ್ದು, ಎಲ್ಲರಿಗೂ ಸ್ಪಂದಿಸುತ್ತಿದೆ. ಈ ಸಮುದಾಯದಲ್ಲಿಯೂ ಆರ್ಥಿಕವಾಗಿ ಬಡವರಿದ್ದಾರೆ. ನಿಗಮ ಸ್ಥಾಪನೆಯಿಂದ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ ಅವರು, ಜಗತ್ತಿನಾದ್ಯಂತ ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ.  ಕೊರೊನಾ ಸಂಕಷ್ಟ ಮುಗಿದ ಮೇಲೆ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಅಲ್ಲದೇ, ಕೇಂದ್ರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ವೀರಶೈವ ಲಿಂಗಾಯಿತ ಸಮುದಾಯಗಳನ್ನು ಸೇರಿಸಲು ಸಿಎಂ ಕ್ರಮ ಕೈಗೊಳ್ಳಲಿ ಎಂದು ಇಂಡಿ ಶಾಸಕರು ಆಗ್ರಹಿಸಿದರು.

ವೀರಶೈವ ಲಿಂಗಾಯಿತರನ್ನು 2ಎ ಮೀಸಲಾತಿ‌ ಪಟ್ಟಿಗೆ ಸೇರಿಸಬೇಕು. ಮೊನ್ನೆ ಮಂಗಳವಾರ ಸಿಎಂ ಜೊತೆ ದೂರವಾಣಿಯಲ್ಲಿ ಮಾತನಾಡಿ ಕೃತಜ್ಞತೆ ಸಲ್ಲಿಸಿದ್ದೇನೆ. ಅಲ್ಲದೇ, ಕೃತಜ್ಞತೆ ಪತ್ರವನ್ನೂ ಬರೆದಿದ್ದೇನೆ. ವೀರಶೈವ-ಲಿಂಗಾಯಿತ ಅಭಿವೃದ್ಧಿ ನಿಗಮದ ಜೊತೆಯಲ್ಲಿಯೇ ಸಿಎಂ ಇನ್ನುಳಿದ ಸಮುದಾಯಗಳಿಗೂ ಸಿಎಂ ಸ್ಪಂದಿಸಲಿ. ಉಳಿದ ಸಮುದಾಯಗಳಿಗೂ ಅಭಿವೃದ್ಧಿ ನಿಗಮ ಸ್ಥಾಪಿಸಲಿ ಎಂದು ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ‌ ಆಗ್ರಹಿಸಿದರು.

ಇದನ್ನೂ ಓದಿ: ವಿಜಯಪುರದಲ್ಲಿ ರಾತ್ರಿ ಶೂಟೌಟ್: ಆರೋಪಿ ಪರಾರಿ, ಗಾಯಾಳು ಆಸ್ಪತ್ರೆಗೆ ದಾಖಲು

ಕೆಲವು ಮಠಾಧೀಶರು ಮತ್ತು ಲಿಂಗಾಯತ ಮುಖಂಡರು ನಿಗಮ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ವೀರಶೈವ-ಲಿಂಗಾಯಿತ ಅಭಿಚೃದ್ಧಿ ನಿಗಮ ಈಗಷ್ಟೆ ಹುಟ್ಟಿದ ಕೂಸು. ಇದು ಒಂದೇ ದಿನಕ್ಕೆ ಬೆಳೆಯಬೇಕು ಅನ್ನೋದು ಸರಿಯಲ್ಲ. ಪ್ರಾಂಜಲ‌ ಮನಸ್ಸಿನಿಂದ ಸ್ವೀಕರಿಸುವ ಗುಣವಿರಬೇಕು. ಪಕ್ಷ ಯಾವುದೇ ಇರಲಿ. ಒಳ್ಳೆಯ ವಿಚಾರಗಳಲ್ಲಿ ಬೆಂಬಲ ಕೊಡಬೇಕು ಎಂದು ತಿಳಿಸಿದರು.

ಸಿದ್ದಗಂಗಾ ಶ್ರೀಗಳು ನಿಗಮ ಸ್ಥಾಪನೆಗೆ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಯಾವ ದೃಷ್ಟಿಕೋನದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ನಮಗೆ ಕಾವಿ ಹಾಕಿದ ಎಲ್ಲ ಮಠಾಧಿಶರ ಮೇಲೂ ಗೌರವವಿದೆ‌. ನಮಗೆ ಸ್ವಾಮೀಜಿಗಳಲ್ಲಿ ದೊಡ್ಡವರು ಸಣ್ಣವರು ಅಂತಾ ಭೇದ ಇಲ್ಲ ಎಂದು ಯಶವಂತರಾಯಗೌಡ ವಿ. ಪಾಟೀಲ ತಿಳಿಸಿದರು.

ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಈ ಕುರಿತು ಪ್ರತಿಕ್ರಿಯೆ ನೀಡಲು ಸೂಕ್ತ ವ್ಯಕ್ತಿ ನಾನಲ್ಲ‌ ಎಂದು‌‌ ಹೇಳಿದರು. ಭೀಮಾ ಪ್ರವಾಹ ಪರಿಹಾರ ವಿಳಂಬ ಕುರಿತು ಮಾತನಾಡಿದ ಅವರು, ಸಿಎಂ ಬೇರೆ ಜಿಲ್ಲೆಗೆ ಭೇಟಿ ನೀಡಿದಂತೆ ಭೀಮಾ ಪ್ರವಾಹ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಬೇಕು. ಭೀಮಾ ಪ್ರವಾಹ ಸಂತ್ರಸ್ತರಿಗೆ ಸರಕಾರ ಸ್ಪಂದಿಸದಿದ್ದರೆ ದೊಡ್ಡ ಪ್ರಮಾಣದಲ್ಲಿ ಹೋರಾಟಕ್ಕೆ ಇಳಿಯುತ್ತೇನೆ. ಸರಕಾರ ಪರಿಹಾರ ನೀಡುತ್ತಿದೆ. ಇನ್ನಷ್ಟು ಕಾಲಾವಕಾಶ ನೀಡುತ್ತೇನೆ. ಆದರೂ, ಸ್ಪಂದಿಸದಿದ್ದರೆ ನಂತರ ದೊಡ್ಡ ಪ್ರಮಾಣದ ಹೋರಾಟ ಮಾಡುತ್ತೇನೆ ಎಂದು ಯಶವಂತರಾಯಗೌಡ ವಿ. ಪಾಟೀಲ‌ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಪ್ರಾಧಿಕಾರ ರಚನೆ ಕುರಿತಾಗಿ ಪ್ರಶ್ನೆ ಮಾಡುವ ಅರ್ಹತೆ ಸಿದ್ದರಾಮಯ್ಯನವರಿಗೆ ಇಲ್ಲ; ಜಗದೀಶ್ ಶೆಟ್ಟರ್ ವಾಗ್ದಾಳಿ

ಮಹಾರಾಷ್ಟ್ರ ಡಿಸಿಎಂ ಹೇಳಿಕೆಗೆ ಆಕ್ರೋಶ: 

ಬೆಳಗಾವಿ ಮತ್ತು ಕಾರವಾರ ಜಿಲ್ಲೆಗಳನ್ನು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆಗೆ ಶಾಸಕರು ಇದೇ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಜ್ಞಾವಂತ ನಾಯಕರು ತಮ್ಮ ಮಿತಿಗಳನ್ನ ಮೀರಿ ಮಾತನಾಡಬಾರದು.  ಇಂಥ ವಿಷಯಗಳನ್ನ ಕೆದಕಿ ಜನರಲ್ಲಿ ಕಿಚ್ಚು ಹಚ್ಚುವ ಕೆಲಸ ಮಾಡಬಾರದು. ಸಣ್ಣ ವಿಚಾರಗಳನ್ನ ರಾಜಕೀಯವಾಗಿ ಬಳಕೆ ಮಾಡಬಾರದು. ಅದು ಅಂದಿಗೆ ಮುಗಿದು ಹೋದ ವಿಚಾರ. ವಾಪಸ್ ಕೆದಕುವ ಪ್ರಶ್ನೆ ಇಲ್ಲ. ನಾವೆಲ್ಲರೂ ದೇಶದಲ್ಲಿ ಅಣ್ಣ ತಮ್ಮಂದಿರಂತೆ ಬಾಳಿ ಬದುಕಬೇಕಿದೆ. ಈ ರೀತಿ ಕಿಡಿ ಹೊತ್ತಿಸೋದು ಸರಿಯಲ್ಲ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಬುದ್ಧಿ ಹೇಳಿದರು.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: