Child Marriages : ಕೊರೋನಾ ಲಾಕ್ ಡೌನ್ ನಡುವೆಯೇ ಹಾಸನದಲ್ಲಿ ಹೆಚ್ಚಿದ ಬಾಲ್ಯ ವಿವಾಹ
ಲಾಕ್ಡೌನ್ ನಂತರ ಹಾಸನದಲ್ಲಿ ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗುತ್ತಿರುವುದನ್ನು ಮನಗಂಡ ಅಧಿಕಾರಿಗಳು, ಅಪ್ರಾಪ್ತ ಬಾಲಕಿಯರ ಮದುವೆಗೆ ಮುಂದಾದ ಪೋಷಕರಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ.
ಹಾಸನ (ಸೆಪ್ಟೆಂಬರ್. 17): ಕೊರೋನಾ ಬಂದು ಇಡೀ ದೇಶವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆಯೇ ಲಾಕ್ ಡೌನ್ ಅವಧಿಯಲ್ಲಿ ಕೆಲವು ಪೋಷಕರು ತಮ್ಮ ಅಪ್ರಾಪ್ತ ಹೆಣ್ಣು ಮಕ್ಕಳ ಮದುವೆ ಮಾಡಿ ಮುಗಿಸಲು ತಯಾರಿ ನಡೆಸಿದ ಪ್ರಕರಣಗಳು ಹಾಸನದಲ್ಲಿ ಹೆಚ್ಚಾಗಿ ವರದಿಯಾಗಿದೆ. ಹೀಗಾಗಿ ಅಪ್ರಾಪ್ತ ಯುವತಿಯರ ಮದುವೆಗೆ ಮುಂದಾಗುತ್ತಿರುವ ಯುವಕರಿಗೆ ಖಡಕ್ ಎಚ್ಚರಿಕೆ ರವಾನಿಸಲಾಗಿದೆ. ಕೊರೋನಾ ಬಂದು ಇಡೀ ಪ್ರಪಂಚವೇ ತತ್ತರಿಸುತ್ತಿದೆ. ಹೀಗಾಗಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆಗಳು ಕಡಿಮೆಯಾಗಿದ್ದು ಪೋಷಕರು ಮನೆಯ ಸಮೀಪವೇ ಮದುವೆ ಮಾಡಿ ಮುಗಿಸಲು ಮುಂದಾಗುತ್ತಿದ್ದಾರೆ. ಅದರಲ್ಲೂ ಹಾಸನದಲ್ಲಿ ಕೆಲವು ಪೋಷಕರು ಲಾಕ್ಡೌನ್ ಸಮಯದಲ್ಲಿ ತಮ್ಮ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಸದ್ದಿಲ್ಲದೆ ಮದುವೆ ಮಾಡಿ ಮುಗಿಸಲು ಮುಂದಾಗಿದ್ದು, ಈಗ ಅಂಕಿ ಅಂಶದಿಂದ ಬಯಲಾಗಿದೆ. ಕಳೆದ ಏಪ್ರಿಲ್ ತಿಂಗಳಿಂದ ಜುಲೈ ತಿಂಗಳ ವರೆಗೆ ಇಂತಹ ಸುಮಾರು 51 ಬಾಲ್ಯ ವಿವಾಹ ಪ್ರಕರಣಗಳನ್ನು ಅಧಿಕಾರಿಗಳು ತಡೆದಿರುವುದು ಅಂಕಿ ಅಂಶದಿಂದ ಬಯಲಾಗಿದೆ.
ಲಾಕ್ಡೌನ್ ನಂತರ ಹಾಸನದಲ್ಲಿ ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗುತ್ತಿರುವುದನ್ನು ಮನಗಂಡ ಅಧಿಕಾರಿಗಳು, ಅಪ್ರಾಪ್ತ ಬಾಲಕಿಯರ ಮದುವೆಗೆ ಮುಂದಾದ ಪೋಷಕರಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಯುವತಿಯರ ಮದುವೆಗೆ ಮುಂದಾಗುತ್ತಿರುವ ಯುವಕರಿಗೆ ಕೂಡ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದು, ಯುವಕರು ಈ ರೀತಿಯ ಮದುವೆಗೆ ಮುಂದಾಗಬಾರದು ಎಂದು ಬುದ್ದಿವಾದ ಹೇಳುತ್ತಿದ್ದಾರೆ.
ಈ ವರ್ಷ ಈಗಾಗಲೇ ಬಾಲ್ಯ ವಿವಾಹವಾಗಿರುವ 18 ಪ್ರಕರಣಗಳ ಎಫ್ಐಆರ್ ದಾಖಲಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಅಷ್ಟೇ ಅಲ್ಲದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರನ್ನ ಮದುವೆಯಾಗಿ, ಲೈಂಗಿಕ ದೌರ್ಜನ್ಯ ನೀಡಿರುವ ಮಾಹಿತಿ ಮೇಲೆ, ಈ ವರ್ಷ ಸುಮಾರು 30 ಪೋಕ್ಸೋ ಪ್ರಕರಣ ಕೂಡ ದಾಖಲಿಸಲಾಗಿದೆ.
ಲಾಕ್ಡೌನ್ ನಂತರ ಹಾಸನದಲ್ಲಿ ಹೆಚ್ಚು ಬಾಲ್ಯ ವಿವಾಹದಂತಹ ಪ್ರಕರಣಗಳು ಕಂಡು ಬರುತ್ತಿದ್ದು, ಇದರ ತಡೆಗೆ ಹಾಸನ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳದಿದ್ದಲ್ಲಿ ಜೈಲಿಗೆ ಹೋಗುವುದು ಗ್ಯಾರಂಟಿ ಎನ್ನುತ್ತಿದೆ ಪೊಲೀಸ್ ಇಲಾಖೆ.
ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ಮೈಸೂರು ಜಿಲ್ಲೆಯಲ್ಲಿ ನಡೆದಿವೆ. ನಂತರದಲ್ಲಿ ಚಿಕ್ಕಬಳ್ಳಾಪುರ, ಬೆಳಗಾವಿ ಜಿಲ್ಲೆ ಸೇರಿವೆ. ಬೆಳಗಾವಿ ಜಿಲ್ಲೆಯಲ್ಲಿ ಲಾಕ್ಡೌನ್ ಅವಧಿಯಲ್ಲಿ ಒಟ್ಟು 12 ಬಾಲ್ಯ ವಿವಾಹ ತಡೆಗಟ್ಟಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 10 ದಿನಗಳಲ್ಲಿ ನಾಲ್ಕು ಬಾಲ್ಯ ವಿವಾಹ ಪ್ರಯತ್ನ ನಡೆದಿವೆ.
ಬಾಲ್ಯ ವಿವಾಹ ಮಾಡುವುದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಇದನ್ನು ಪ್ರೋತ್ಸಾಹಿಸುವ ಅಥವಾ ಒತ್ತಾಯಪೂರ್ವಕವಾಗಿ ಮದುವೆ ನಡೆಸುವ ಪೋಷಕರ ಮೇಲೆ ಹಾಗೂ ಒಂದು ವೇಳೆ ಹುಡುಗ ಪ್ರಾಪ್ತ ವಯಸ್ಸಿನವನಾಗಿದ್ದರೆ ಅವನ ಮೇಲೂ ಸಹ ಎಫ್.ಐ.ಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದ್ದಾರೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ