ಕಲಬುರ್ಗಿ(ಸೆಪ್ಟೆಂಬರ್. 22): ಕಲಬುರ್ಗಿ ಜಿಲ್ಲೆಯಲ್ಲಿ ಸತತ ಕೆಲವು ದಿಗಳಿಂದ ಅಬ್ಬರಿಸಿದ್ದ ಮಳೆರಾಯ ತುಸು ವಿರಾಮ ನೀಡಿದ್ದಾನೆ. ಆದರೆ, ಮಳೆ ಅವಾಂತರಗಳು ಮಾತ್ರ ನಿಂತಿಲ್ಲ. ಜಿಲ್ಲೆಯಲ್ಲಿ ಮತ್ತೋರ್ವ ಯುವಕ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಶವವಾಗಿ ಪತ್ತೆಯಾಗಿದೆ. ಕೇವಲ ಒಂದು ವಾರದಲ್ಲಿ ಹಳ್ಳದಲ್ಲಿ ಕೊಚ್ಚಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಮಳೆಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾನೆ. ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾದ ಘಟನೆ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಕರದಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು 21 ವರ್ಷದ ಶಿವರಾಜ್ ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಕರದಳ್ಳಿ ಕರೆ ಭರ್ತಿಯಾಗಿತ್ತು. ಕೆರೆಯ ಕೋಡಿಯಿಂದ ಹರಿದ ನೀರಿನಲ್ಲಿ ಯುವಕ ಕೊಚ್ಚಿ ಹೋಗಿದ್ದ. ನಿನ್ನೆ ಸಂಜೆ ಹೊಲದಿಂದ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಶಿವರಾಜ್ ಕೊಚ್ಚಿ ಹೋಗಿದ್ದ. ಆದರೆ, ನಿನ್ನೆ ಈತನಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಇಂದು ಬೆಳಿಗ್ಗೆಯಿಂದಲೇ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಕೊನೆಗೂ ಯುವಕನ ಶವ ಹಳ್ಳದಲ್ಲಿ ಪತ್ತೆಯಾಗಿದೆ. ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೇವಲ ಒಂದು ವಾರದ ಅಂತರದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪುತ್ತಿರುವ ಮೂರನೇ ಪ್ರಕರಣ ಇದಾಗಿದೆ. ಈ ಮುಂಚೆ ಕಾರಿನಲ್ಲಿ ಹೋಗುತ್ತಿದ್ದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಘಟನೆ ಆಳಂದ ತಾಲೂಕಿನ ಬೊಮ್ನಳ್ಳಿ ಬಳಿ ನಡೆದಿತ್ತು. ಯಳಸಂಗಿ ಗ್ರಾಮದ 33 ವರ್ಷದ ಎಇಇ ಸಿದ್ಧರಾಮ ಅವುಟೆ ಹಳ್ಳದ ಮುಳ್ಳ ಕಂಟಿಗಳ ನಡುವೆ ಶವವಾಗಿ ಪತ್ತೆಯಾಗಿದ್ದ.
ಇದನ್ನೂ ಓದಿ : Drug Mafia : ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ : ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶ
ಇದರ ಬೆನ್ನ ಹಿಂದೆಯೇ ಕಮಲಾಪುರ ತಾಲೂಕಿನ ಶ್ರೀಚಂದ ಗ್ರಾಮದ ಬಳಿ ಯುವಕನೋರ್ವ ಕೊಚ್ಚಿ ಹೋಗಿದ್ದ. ಗ್ರಾಮದ ಜನ ನೋಡ ನೋಡುತ್ತಿದ್ದಂತೆಯೇ ಎಲ್ಲರ ಕಣ್ಣೆದುರಿಗೇ ಯುವಕ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ. ಆತ ಮರು ದಿನ ಶವವಾಗಿ ಪತ್ತೆಯಾಗಿದ್ದ. ಶ್ರೀಚಂದ ಗ್ರಾಮದ 28 ವರ್ಷದ ಬೀರಶೆಟ್ಟಿ ಬೋಧನವಾದಿ ಸಾವನ್ನಪ್ಪಿದ್ದ. ಗ್ರಾಮಸ್ಥರು ರಕ್ಷಣೆಗೆಂದು ನೀಡಿದ್ದ ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳುವುದರೊಳಗಾಗಿ ಯುವಕ ಕೊಚ್ಚಿ ಹೋಗಿದ್ದ. ಮರು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ