• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ದಕ್ಷಿಣ ಭಾರತದಲ್ಲಿಯೇ ಪ್ರಥಮ ಪೆಟ್ ಬಾಟಲ್ ಘಟಕ ಜನವರಿಯಂದು ಹಾಸನದಲ್ಲಿ ಲೋಕಾರ್ಪಣೆ; ಎಚ್.ಡಿ.ರೇವಣ್ಣ

ದಕ್ಷಿಣ ಭಾರತದಲ್ಲಿಯೇ ಪ್ರಥಮ ಪೆಟ್ ಬಾಟಲ್ ಘಟಕ ಜನವರಿಯಂದು ಹಾಸನದಲ್ಲಿ ಲೋಕಾರ್ಪಣೆ; ಎಚ್.ಡಿ.ರೇವಣ್ಣ

ಮಾಜಿ ಸಚಿವ ಹೆಚ್.ಡಿ. ರೇವಣ್ಣ

ಮಾಜಿ ಸಚಿವ ಹೆಚ್.ಡಿ. ರೇವಣ್ಣ

ಪೆಟ್ ಬಾಟಲ್ ನಲ್ಲಿ 12 ಬಗೆಯ ಸುವಾಸಿತ ಹಾಲಿನ ಮಾದರಿಗಳು ಹೊರತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜನರಿಗೆ ಸ್ವಾದಕ್ಕೆ ಇಚ್ಛಾನುಸಾರ ವಿವಿಧ ಬಗೆಯ ಹಾಗೂ ಇತರೆ ಉತ್ಪನ್ನಗಳನ್ನು ಹೊರತರಲಾಗುವುದು ಎಂದು ರೇವಣ್ಣ ತಿಳಿಸಿದರು.

  • Share this:

ಹಾಸನ ; ಹಾಸನ ಹಾಲು ಒಕ್ಕೂಟವು 2019-20 ನೇ ಸಾಲಿನಲ್ಲಿ ರೂ. 1450.0 ಕೋಟಿ ವಹಿವಾಟು ನಡೆಸುವ ಮುಖಾಂತರ ರೂ. 36 ಕೋಟಿ ತೆರಿಗೆ ಪೂರ್ವ ನಿವ್ವಳ ಲಾಭ ಗಳಿಸಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.


ನಗರದ ಡೈರಿ ವೃತ್ತದಲ್ಲಿರುವ ಹಾಲು ಒಕ್ಕೂಟದ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ ಅವರು, ಒಕ್ಕೂಟವು ಗಳಿಸಿರುವ ಲಾಭವನ್ನು ಸಹಕಾರ ಸಂಘಗಳ ಕಾಯ್ದೆಗಳ ಅನ್ವಯ ಸಂಘಗಳಿಗೆ ಡಿವಿಡೆಂಡ್ ಮತ್ತು ಬೋನಸ್  ಪಾವತಿಸಲಾಗುವುದು. 2019-20 ನೇ ಸಾಲಿನಲ್ಲಿ ಒಕ್ಕೂಟದ ಹಾಲಿನ ಶೇಖರಣೆ ಗರಿಷ್ಠ 11.50 ಲಕ್ಷ ಲೀಟರ್​ಗಳಾಗಿದ್ದು, ಸರಾಸರಿ ಶೇ. 12 ರಷ್ಟು ಹೆಚ್ಚಾಗಿದೆ. ಹಾಲು ಒಕ್ಕೂಟಗಳಲ್ಲಿಯೇ ಹಾಸನ ಹಾಲು ಒಕ್ಕೂಟವು ಮೂರನೇ ಸ್ಥಾನದಿಂದ ಎರಡನೇ ಸ್ಥಾನ ಗಳಿಸಿದೆ ಎಂದರು.


ಒಕ್ಕೂಟದಲ್ಲಿ ಹಾಲಿನ ಶೇಖರಣೆ ಹೆಚ್ಚಳದಿಂದ ಹಾಲಿನ ಪರಿವರ್ತನೆಗೆ ಕಳುಹಿಸುತ್ತಿರುವ ಹಾಲನ್ನುಕಡಿಮೆ ಮಾಡುವ ನಿಟ್ಟಿನಲ್ಲಿ 4.0 ಲಕ್ಷ ಲೀ. ಸಾಮರ್ಥ್ಯದ ಯು.ಹೆಚ್.ಟಿ. ಘಟಕ, 20,000 ಲೀಟರ್  ಸಾಮರ್ಥ್ಯದ ಐಸ್ ಕ್ರೀಂ ಘಟಕ ಕಾರ್ಯಾರಂಭ ಮಾಡಲಾಗಿದೆ ಎಂದು ಹೇಳಿದರು.


ದಕ್ಷಿಣ ಭಾರತದಲ್ಲಿ ಪ್ರಥಮ ಪೆಟ್ ಬಾಟಲ್ ಘಟಕ


ಪ್ರಸ್ತುತ ಪ್ರತಿನಿತ್ಯ 10 ಲಕ್ಷ ಲೀ. ಸಾಮರ್ಥ್ಯದ ಪ್ರತಿ ಗಂಟೆಗೆ 30000 ಪೆಟ್ ಬಾಟಲ್ ಸಾಮರ್ಥ್ಯವಿರುವ ದೇಶದಲ್ಲಿಯೇ ನಾಲ್ಕನೆ ಹಾಗೂ ರಾಜ್ಯದ ಪ್ರಥಮ ಯು.ಹೆಚ್.ಟಿ. ಸುವಾಸಿತ ಹಾಲಿನ ಘಟಕವನ್ನು ಸ್ಥಾಪನೆ ಮಾಡುತ್ತಿದ್ದು, ಮುಂದಿನ ಜನವರಿಯಲ್ಲಿ ಕಾರ್ಯಾರಂಭ ಮಾಡಲಾಗುವುದು ಎಂದ ಮಾಹಿತಿ‌ ನೀಡಿದರು.


ಒಕ್ಕೂಟದ ಮಹತ್ವಾಕಾಂಕ್ಷಿ ಯೋಜನೆಯಾದ 15 ಲಕ್ಷ ಲೀ. ಸಾಮರ್ಥ್ಯದ ಮೆಗಾ ಡೇರಿ. 60 ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲಿನ ಪುಡಿ ಘಟಕ, ಹಾಲಿನ ಪುಡಿ ಮತ್ತು ಬೆಣ್ಣೆ ಬ್ಲಿಸ್ಟರ್ ಪ್ಯಾಕ್ ಮಾಡುವ ರಿಟೇಲ್ ಪ್ಯಾಕಿಂಗ್ ಸೌಲಭ್ಯಗಳು ಮತ್ತು ಇತರೆ ಪೂರಕ ಸೌಲಭ್ಯಗಳನ್ನು ಅಳವಡಿಸಲು ಸುಮಾರು 400 ಕೋಟಿ ರೂ. ಗಳ ಬಂಡವಾಳ ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಜನವರಿಯಲ್ಲಿ ಕಾರ್ಯ ಪ್ರಾರಂಭಿಸಲಾಗುವುದು. ಮೇಲಿನ ಘಟಕಗಳ ಸ್ಥಾಪನೆಯಿಂದ ಹಾಸನ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಸುಮಾರು 20 ಲಕ್ಷ ಲೀ. ಗಳ ಹಾಲಿನ ಶೇಖರಣೆ ಗುರಿ ಹೊಂದಿದ್ದು, ಶೇಖರಿಸಿದ ಎಲ್ಲಾ ಹಾಲನ್ನು ಒಕ್ಕೂಟದಲ್ಲಿ ಸಂಸ್ಕರಿಸಲು ಸಾಧ್ಯವಾಗುತ್ತದೆ ಎಂದರು.


ಹಾಸನದಲ್ಲಿ ತಯಾರಾಗುತ್ತಿರುವ ಪೆಟ್​ ಬಾಟಲ್ ಘಟಕ.


ಪೆಟ್‌ಬಾಟಲ್ ಪ್ಲಾಂಟ್‌ನ ಪಕ್ಷಿ ನೋಟ


ಪ್ರಸ್ತುತ ದೇಶದಾದ್ಯಂತ 3 ಯು.ಹೆಚ್.ಟಿ. ಪೆಟ್‌ಬಾಟಲ್ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಗುಜರಾತ್ ರಾಜ್ಯದಲ್ಲಿ AMUL Brand ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ UHT PET BOTTLE ಕಾರ್ಯಾಗಾರವನ್ನು ಹಾಸನ ಹಾಲು ಒಕ್ಕೂಟದಲ್ಲಿ ನಿರ್ಮಿಸಲಾಗುತ್ತಿದ್ದು,‌ ಸದರಿ ಕಾರ್ಯಾಗಾರವು ಅತ್ಯಾಧುನಿಕ ಗಣಕೀಕೃತ ತಂತ್ರಜ್ಞಾನವುಳ್ಳ 4ನೇ ಪೆಟ್‌ಬಾಟಲ್ ಘಟಕವಾಗಿರುವುದು ಹೆಮ್ಮೆಯ ವಿಷಯವಾಗಿರುತ್ತದೆ ಎಂದರು.


ಹಾಲು ಉತ್ಪಾದಕರು ಉತ್ಪಾದಿಸುವ ಹೆಚ್ಚುವರಿ ಹಾಲಿಗೆ ಮಾರುಕಟ್ಟೆ ಒದಗಿಸಿ ಉತ್ಪಾದಕರಿಗೆ ಉತ್ತಮ ದರ ನೀಡುವಲ್ಲಿ ಸದರಿ ಯೋಜನೆಯು ಸಹಕಾರಿಯಾಗಿದೆ. ಮೇಲ್ಕಂಡ ಘಟಕವನ್ನು ಅಂದಾಜು ರೂ. 165 ಕೋಟಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಸದರಿ ಯೋಜನೆಯಲ್ಲಿ ಸಂಕೀರ್ಣ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು, ಉತ್ಪಾದನೆಯ ಎಲ್ಲಾ ಹಂತಗಳಲ್ಲಿ ಸ್ವಯಂಚಾಲಿತ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳಲಾಗಿದೆ.


ಇದನ್ನು ಓದಿ: ಮಸ್ಕಿ ಉಪಚುನಾವಣೆ; ನೀರಾವರಿಯ ದಾಳ ಉರುಳಿಸುತ್ತಿರುವ ಬಿಜೆಪಿ!


ಇಟಲಿ, ಜರ್ಮನಿ, ಬೆಲ್ಜಿಯಂ ಯಂತ್ರ


ಸದರಿ ಯಂತ್ರೋಪಕರಣಗಳು ಇಟಲಿ, ಜರ್ಮನಿ ಮತ್ತು ಬೆಲ್ಜಿಯಂ ದೇಶಗಳಲ್ಲಿ ತಯಾರಾಗಿದ್ದು M/s GEA PROCESS ENGINEERING LTD., ಸಂಸ್ಥೆಯವರಿಂದ ಕಾರ್ಯಗತಗೊಳಿಸಲಾಗುತ್ತಿದೆ. ಮೇಲ್ಕಂಡ ಘಟಕವು ಜನವರಿ-2021ರ ಅಂತ್ಯದ ವೇಳೆಗೆ ವಾಣಿಜ್ಯ ಉತ್ಪಾದನೆ ಪ್ರಾರಂಭಿಸಲಿದೆ ಎಂದರು.


12 ಬಗೆಯ ಮಿಲ್ಕ್ ಪ್ಲೇವರ್ 


ಪೆಟ್ ಬಾಟಲ್ ನಲ್ಲಿ 12 ಬಗೆಯ ಸುವಾಸಿತ ಹಾಲಿನ ಮಾದರಿಗಳು ಹೊರತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜನರಿಗೆ ಸ್ವಾದಕ್ಕೆ ಇಚ್ಛಾನುಸಾರ ವಿವಿಧ ಬಗೆಯ ಹಾಗೂ ಇತರೆ ಉತ್ಪನ್ನಗಳನ್ನು ಹೊರತರಲಾಗುವುದು ಎಂದು ರೇವಣ್ಣ ತಿಳಿಸಿದರು.


ವರದಿ - ಡಿಎಂಜಿಹಳ್ಳಿಅಶೋಕ್

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು