ಮಹದೇಶ್ವರ ಬೆಟ್ಟದಲ್ಲಿ ಒಂದೇ ದಿನ 1465 ಮಂದಿಯಿಂದ ಮುಡಿಸೇವೆ

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ

ನವೆಂಬರ್ 2 ರಂದು ಒಂದೇ ದಿನ ಬರೋಬ್ಬರಿ 1,465 ಮಂದಿ ಮಾದಪ್ಪನ ಸನ್ನಿದಿಯಲ್ಲಿ ಮುಡಿ ಮಾಡಿಸಿದ್ದಾರೆ. ಜಾತ್ರಾ ಸಂದರ್ಭಗಳನ್ನು ಹೊರತು ಪಡಿಸಿ ಸಾಮಾನ್ಯ ದಿನಗಳಲ್ಲಿ ಇದೊಂದು ದಾಖಲೆ ಆಗಿದೆ.

  • Share this:

ಚಾಮರಾಜನಗರ(ನವೆಂಬರ್. 03): ಕೋವಿಡ್ -19 ಹಿನ್ನಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಈ ಹಿನ್ನಲೆಯಲ್ಲಿ ಮಾದಪ್ಪನ ಸನ್ನಿದಿಯಲ್ಲಿ ಮುಡಿಸೇವೆ ಮಾಡಿಸಲು ಯಾರಿಗು ಅವಕಾಶವಿರಲಿಲ್ಲ. ಆದರೆ, ಇದೀಗ ನಿರ್ಬಂಧಗಳನ್ನು ತೆರವುಗೊಳಿಸಿ ಆದೇಶ ಹೊರಡಿಸುತ್ತಿದ್ದಂತೆ ನವೆಂಬರ್ 2 ರಂದು ಒಂದೇ ದಿನ ಬರೋಬ್ಬರಿ 1,465 ಮಂದಿ ಮಾದಪ್ಪನ ಸನ್ನಿದಿಯಲ್ಲಿ ಮುಡಿ ಮಾಡಿಸಿದ್ದಾರೆ. ಜಾತ್ರಾ ಸಂದರ್ಭಗಳನ್ನು ಹೊರತು ಪಡಿಸಿ ಸಾಮಾನ್ಯ ದಿನಗಳಲ್ಲಿ ಇದೊಂದು ದಾಖಲೆ ಆಗಿದೆ. ಮಲೆಮಹದೇಶ್ವರ ಕೋಟ್ಯಂತರ ಭಕ್ತರ ಆರಾಧ್ಯ ದೈವ. ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರಬೆಟ್ಟ ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳವೂ ಹೌದು. ಇಲ್ಲಿ ಯಾವುದೇ ಹರಕೆ ಹೊತ್ತರೆ ಈಡೇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ. ಹಾಗಾಗಿ ತಮ್ಮ ಇಷ್ಟಾರ್ಥ ಸಿದ್ದಿಸಿದರೆ ಮಹದೇಶ್ವರನಿಗೆ ಮುಡಿ ಸೇರಿದಂತೆ ವಿವಿಧ ರೀತಿಯ ಸೇವೆ ಮಾಡಿಸುವುದಾಗಿ  ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ. ಆದರೆ, ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಮಹದೇಶ್ವರ ಬೆಟ್ಟಕ್ಕು ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು.


ಹಂತ ಹಂತವಾಗಿ ಲಾಕ್ ಡೌನ್ ತೆರವುಗೊಳಿಸುತ್ತಿದ್ದಂತೆ ಹಲವು ಮುಂಜಾಗ್ರತಾ ಕ್ರಮಗಳೊಂದಿಗೆ ಜೂನ್ 8 ರಿಂದ ಮಲೆಮಹದೇಶ್ವರ ದೇಗುಲಕ್ಕೆ ಭಕ್ತರಿಗೆ ಪ್ರವೇಶಾವಕಾಶವನ್ನು ಕಲ್ಪಿಸಲಾಗಿತ್ತು. ಭಕ್ತರು ಕೇವಲ ದೇವರ ದರ್ಶನ ಮಾಡಬಹುದಿತ್ತು.ಆದರೆ ಯಾವುದೇ ಸೇವೆಗೆ ಅವಕಾಶ ಇರಲಿಲ್ಲ. ಹಾಗಾಗಿ ಮಹದೇಶ್ವರನಿಗೆ ಮುಡಿ ಕೊಡುವುದಾಗಿ ಹರಕೆ ಹೊತ್ತಿದ್ದ ಭಕ್ತರು ಜಾತಕ ಪಕ್ಷಿಯಂತೆ ಕಾಯತೊಡಗಿದ್ದರು.


ಇದೀಗ ರಾತ್ರಿ ವಾಸ್ಯವ್ಯ, ಮುಡಿಸೇವೆ ಹಾಗು ಇತರೆ ಸೇವೆಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನನ್ನು ತೆರವುಗೊಳಿಸಿ ಆದೇಶ ಹೊರಡಿಸುತ್ತಿದ್ದಂತೆ ಭಕ್ತರ ದಂಡೆ ಮಾದಪ್ಪನ ಸನ್ನಿದಿಗೆ ಹರಿದು ಬರತೊಡಗಿದೆ.


ನವೆಂಬರ್ 2 ರಂದು ಒಂದೇ ದಿನ 1,467 ಮಂದಿ ಮುಡಿ ತೆಗೆಸಿ ಹರಕೆ ತೀರಿಸಿದ್ದಾರೆ. ಮುಡಿಸೇವೆಯೊಂದರಿಂದಲೇ 73,250 ರೂಪಾಯಿ ಆದಾಯ ಬಂದಿದೆ. ಇದೇ ದಿನ 72 ಮಂದಿ ಚಿನ್ನದ ರಥೋತ್ಸವ ಸೇವೆ ಮಾಡಿಸಿದ್ದಾರೆ. 471 ಮಂದಿ  ಹುಲಿವಾಹನ ಸೇವೆ, 50 ಮಂದಿ ಬಸವವಾಹನ ಸೇವೆ, 27 ಮಂದಿ ರುದ್ರಾಕ್ಷಿ ಮಂಟಪದ ಸೇವೆ ಮಾಡಿಸಿದ್ದಾರೆ. ಈ ಎಲ್ಲಾ ಸೇವೆಗಳಿಂದ 3,62,922 ರೂಪಾಯಿ ಆದಾಯ ಸಂಗ್ರಹವಾಗಿದೆ.


ಇದನ್ನೂ ಓದಿ : ಸಿಗಂದೂರು‌ ದೇವಸ್ಥಾನದ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ‌ ಬೇಡ: ಬೇಳೂರು ಗೋಪಾಲಕೃಷ್ಣ


ಕೋವಿಡ್ -19 ಹಿನ್ನಲೆಯಲ್ಲಿ ಮುಡಿಸೇವೆಗೆ ನಿರ್ಬಂಧ ಹೇರಿದ್ದರಿಂದ  ಬೆಟ್ಟದಲ್ಲಿ ಮುಡಿ ತೆಗೆಯುವ ಸವಿತಾ ಸಮಾಜದವರು ನಿರುದ್ಯೋಗ ಸಮಸ್ಯೆ ಎದುರಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರು. ಆದರೆ, ಈಗ ಮುಡಿಸೇವೆಗೆ ಅವಕಾಶ ಕಲ್ಪಿಸಿರುವುದರಿಂದ ಅವರಿಗೂ ಅನುಕೂಲವಾಗಿದೆ ಎನ್ನುತ್ತಾರೆ ಮಹದೇಶ್ವರಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ.


ಒಟ್ಟಾರೆ ಲಾಕ್ ಡೌನ್ ಸಂದರ್ಭದಲ್ಲಿ ಬಿಕೋ ಎನ್ನುತ್ತಿದ್ದ ಮಾದಪ್ಪನ ಸನ್ನಿದಿ ಇದೀಗ ಭಕ್ತರಿಂದ ತುಂಬಿ ತುಳುಕುತ್ತಿದೆ. ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ನಿಧಾನವಾಗಿ ಏರತೊಡಗಿದ್ದು ವ್ಯಾಪಾರ ವಹಿವಾಟಿನಲ್ಲು ಚೇತರಿಕೆ ಕಾಣುತ್ತಿದ್ದು ಆರ್ಥಿಕ ಚಟುವಟಿಕೆಗಳು ಗರಿಗೆದರತೊಡಗಿವೆ.

Published by:G Hareeshkumar
First published: