• Home
 • »
 • News
 • »
 • district
 • »
 • ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಫೇಸ್​​ಬುಕ್​​ ಮೂಲಕ ವಂಚನೆ : ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು

ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಫೇಸ್​​ಬುಕ್​​ ಮೂಲಕ ವಂಚನೆ : ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Facebook : ಗಾಬರಿಯಾದ ಪಿಎಸ್ಐ ರೇವಣ್ಣ ಯಾರೂ ಸಹ ಹಣ ಹಾಕದಂತೆ ಮನವಿ ಮಾಡಿದ್ದು, ತಮ್ಮ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಯಾಗಿರುವುದರ ಕುರಿತು ಜಾಗೃತರಾಗಿರುವಂತೆ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ತಕ್ಷಣ ನಗರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ

ಮುಂದೆ ಓದಿ ...
 • Share this:

  ಕಾರವಾರ(ಸೆಪ್ಟೆಂಬರ್​.04): ಇಷ್ಟು ದಿನ ಬ್ಯಾಂಕಿನವರ ಹೆಸರಲ್ಲಿ ಕರೆ ಮಾಡಿ ಜನರಿಂದ ಹಣ ಕೀಳುವ ಘಟನೆಗಳ ಬಗ್ಗೆ ಕೇಳಿದ್ದೀರಿ. ಗಿಫ್ಟ್ ನೀಡುವ ನೆಪದಲ್ಲಿ ಹಣ ಹಾಕಿಸಿಕೊಂಡು ಮೋಸ ಮಾಡಿದ ಪ್ರಕರಣಗಳು ಸಹ ನಡೆದಿವೆ. ಆದರೆ, ಇದೀಗ ಚಾಲಾಕಿ ಚೋರರು ಹಣ ಮಾಡುವುದಕ್ಕೆ ಹೊಸ ಮಾರ್ಗವೊಂದನ್ನ ಹುಡುಕಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ನಿಮ್ಮದೇ ಸ್ನೇಹಿತರಂತೆ ಪರಿಚಯಸ್ಥರ ಹೆಸರಿನಲ್ಲಿ ಕಾಸು ಪೀಕಲು ಮುಂದಾಗಿರುವ ಘಟನೆಯೊಂದು ಉತ್ತರಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯದ ದಿನಮಾನದಲ್ಲಿ ಬ್ಯಾಂಕ್ ಖಾತೆ ಇಲ್ಲದಿದ್ದರೂ ಸಹ ಫೇಸ್‌ಬುಕ್ ಖಾತೆಯನ್ನ ಹೊಂದದೇ ಇರುವವರು ಯಾರೂ ಇಲ್ಲ ಅಂತಲೇ ಹೇಳಬಹುದು. ಸಾಕಷ್ಟು ಮಂದಿ ಪ್ರತಿನಿತ್ಯ ತಮ್ಮ ಸ್ನೇಹಿತರು, ಸಂಬಂಧಿಕರೊಂದಿಗೆ ಸಾಮಾಜಿಕ ಜಾಲತಾಣದಲ್ಲೇ ಹೆಚ್ಚಿನದಾಗಿ ಸಂಪರ್ಕದಲ್ಲಿರುತ್ತಾರೆ. ಆದರೆ, ಇದನ್ನೇ ದಾಳವಾಗಿ ಬಳಸಿಕೊಂಡಿರುವ ಜಾಲವೊಂದು ನಕಲಿ ಖಾತೆಗಳನ್ನ ಮಾಡಿಕೊಂಡು ಹಣ ಮಾಡಲು ಮುಂದಾಗಿದ್ದಾರೆ. 


  ನಗರದಲ್ಲಿರುವ ಗ್ರಾಮೀಣ ಠಾಣೆಯ ಪಿಎಸ್ಐ ರೇವಣ್ಣ ಜೀರನಕಳಗಿ ಹೆಸರಿನಲ್ಲಿ ಅವರ ಸುಮಾರು 20ಕ್ಕೂ ಅಧಿಕ ಸ್ನೇಹಿತರಿಗೆ ಕುಶಲೋಪರಿಯ ಸಂದೇಶಗಳನ್ನು ಫೇಸ್‌ಬುಕ್ ಮೆಸೆಂಜರ್ ಮೂಲಕ ಕಳುಹಿಸಲಾಗಿದೆ. ಪರಿಚಯಸ್ಥರು ಆತ್ಮೀಯವಾಗಿ ಮಾತುಕತೆ ಪ್ರಾರಂಭಿಸಿದ್ದು, ಬಳಿಕ ರೇವಣ್ಣ ಹೆಸರಿನಲ್ಲಿ ಸಂದೇಶ ಮಾಡಿದ್ದ ವ್ಯಕ್ತಿ ತನಗೆ ತುರ್ತು ಹಣದ ಅವಶ್ಯಕತೆ ಇದ್ದು ತನ್ನ ಫೋನ್‌ಪೇ ಅಥವಾ ಗೂಗಲ್ ಫೇ ಖಾತೆಗೆ 10 ಸಾವಿರ ಹಣ ಹಾಕುವಂತೆ ಕೇಳಿಕೊಂಡಿದ್ದಾನೆ. ಈ ವೇಳೆ ಯಾವ ಉದ್ದೇಶಕ್ಕೆ ಹಣ ಬೇಕು, ಏನಾಗಿದೆ ಎಂದು ಪ್ರಶ್ನೆ ಮಾಡಿದಾಗ ಸಮರ್ಪಕ ಉತ್ತರ ಬಂದಿಲ್ಲವಾಗಿದೆ. ಇದರಿಂದ ಅನುಮಾನಗೊಂಡವರು ನೇರವಾಗಿ ಪಿಎಸ್‌ಐಗೆ ಕರೆ ಮಾಡಿ ವಿಷಯವನ್ನ ಕೇಳಿದಾಗ ಅಸಲಿಗೆ ಮೆಸೇಜ್ ಬಂದಿರುವುದು ನಕಲಿ ಖಾತೆಯಿಂದ ಎನ್ನುವುದು ತಿಳಿದು ಶಾಕ್ ಆಗಿದೆ.


  ನಕಲಿ ಫೇಸ್​ಬುಕ್​​ ಖಾತೆ


  ಅಸಲಿಗೆ ರೇವಣ್ಣ ಜೀರನಕಳಗಿ ಹೆಸರಿನಲ್ಲಿ ನಕಲಿ ಖಾತೆಯನ್ನ ಸೃಷ್ಟಿಸಲಾಗಿದ್ದು, ಅವರ ಫೇಸ್‌ಬುಕ್ ಖಾತೆಯಲ್ಲಿದ್ದ ಸ್ನೇಹಿತರಲ್ಲಿ ಹಲವರಿಗೆ ಫ್ರೆಂಡ್ ರಿಕ್ವೆಸ್ಟ್‌ನ್ನ ಕಳುಹಿಸಲಾಗಿದೆ. ಕಾರವಾರದ ವ್ಯಕ್ತಿಗೆ ಬಂದಂತೆ ಕೆಲ ಪೊಲೀಸರು ಹಾಗೂ ಇತರರೊಂದಿಗೂ ಸಹ ಇದೇ ರೀತಿ ಕುಶಲೋಪರಿ ವಿಚಾರಿಸುತ್ತಾ ಚಾಟ್ ಮಾಡಿದ್ದು, ಬಳಿಕ ತನಗೆ ಹಣದ ಅವಶ್ಯಕತೆ ಇದೆ ಎನ್ನುವ ಬೇಡಿಕೆ ಇಟ್ಟಿದ್ದಾರೆ. ಇನ್ನೂ ಕೆಲವರಿಗೆ ಬ್ಯಾಂಕ್ ಖಾತೆಯ ನಂಬರನ್ನ ಸಹ ನೀಡಿದ್ದು ಪ್ರತಿಯೊಬ್ಬರ ಬಳಿ 10 ರಿಂದ 20 ಸಾವಿರದವರೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.


  ಇನ್ನು ಬೆಳ್ಳಂಬೆಳಿಗ್ಗೆ ಸ್ನೇಹಿತರು, ಸಂಬಂಧಿಕರು ಕರೆ ಮಾಡಿ ಮೆಸೇಜ್ ಬಂದಿರುವುದರ ಕುರಿತು ತಿಳಿಸಿದ್ದಾರೆ. ಇದರಿಂದ ಗಾಬರಿಯಾದ ಪಿಎಸ್ಐ ರೇವಣ್ಣ ಯಾರೂ ಸಹ ಹಣ ಹಾಕದಂತೆ ಮನವಿ ಮಾಡಿದ್ದು, ತಮ್ಮ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಯಾಗಿರುವುದರ ಕುರಿತು ಜಾಗೃತರಾಗಿರುವಂತೆ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ತಕ್ಷಣ ನಗರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ರೇವಣ್ಣ ಅವರ ಸ್ನೇಹಿತರಲ್ಲಿ ಕೆಲವರು ತುರ್ತು ಅವಶ್ಯಕತೆ ಎಂದಾಕ್ಷಣ ತಕ್ಷಣ ಹಣವನ್ನ ವರ್ಗಾಯಿಸಿದ್ದು, ಬಳಿಕ ಅವರಿಗೆ ಕರೆ ಮಾಡಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ.


  ಇದನ್ನೂ ಓದಿ : ಜಿಎಸ್​ಟಿ ಪರಿಹಾರದ ಪಾಲಿನ ಬದಲಿಗೆ ಆರ್​ಬಿನಿಂದ ಸಾಲ - ಕೇಂದ್ರ ಸರ್ಕಾರ ಸಲಹೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ


  ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ನಕಲಿ ಖಾತೆಗಳನ್ನ ಸೃಷ್ಟಿಸಿ ಪರಿಚಯಸ್ಥರ ಹೆಸರಿನಲ್ಲಿ ಮೋಸ ಮಾಡುವ ಜಾಲ ಸಕ್ರಿಯವಾಗಿದ್ದು ಈ ಬಗ್ಗೆ ಜಾಗೃತರಾಗಿರುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.


  ಒಟ್ಟಾರೆ ಪೊಲೀಸರ ಹೆಸರಿನಲ್ಲಿಯೇ ನಕಲಿ ಖಾತೆ ಸೃಷ್ಟಿಸಿ ಹಣ ಕೀಳಲು ಮುಂದಾಗಿರುವುದು ನಿಜಕ್ಕೂ ಪೊಲೀಸರನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಜನರು ಮತ್ತೆ ಮೋಸ ಹೋಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.

  Published by:G Hareeshkumar
  First published: