ಕೋಲಾರ: 2019 ರ ಲೋಕಸಭೆ ಚುನಾವಣೆಯ ಸೋಲಿನ ಕಹಿಘಟನೆ, ಇನ್ನು ಕಾಂಗ್ರೆಸ್ ಪಕ್ಷದ ನಾಯಕರನ್ನ ಬೆಂಬಿಡದೆ ಕಾಡುತ್ತಿದೆ, ಕೋಲಾರ ಮೀಸಲು ಕ್ಷೇತ್ರದಿಂದ ಸತತ 7 ಬಾರಿ ಗೆದ್ದು ಕೇಂದ್ರ ಸಚಿವರಾಗಿದ್ದ, ಮಾಜಿ ಸಚಿವ ಕೆಎಚ್ ಮುನಿಯಪ್ಪ ಊಹಿಸದ ಸೋಲು ಕಂಡಿದ್ದರು, ಹಲವು ಬಾರಿ ತಮ್ಮ ಸೋಲಿನ ವಿಚಾರವಾಗಿ ಜಿಲ್ಲೆಯ ಶಾಸಕರ ವಿರುದ್ದ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ಮುನಿಯಪ್ಪ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಎಮ್ ಎಲ್ ಸಿ ನಾಸೀರ್ ಅಹಮದ್ ರನ್ನ ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಹಲವು ಬಾರಿ ಆಗ್ರಹಿಸಿದ್ದರು, ಇದೀಗ ಮತ್ತೊಮ್ಮೆ ರಾಜ್ಯ ಕೈ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಎದುರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ತುಮಕೂರಿನಲ್ಲಿ ರಾಜ್ಯ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ವಿಭಾಗೀಯ ಮಟ್ಟದ ಸಭೆಯಲ್ಲಿ, ಕೈ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಎದುರೇ ನಾಯಕರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ, ಕೋಲಾರ ಜಿಲ್ಲಾ ಮುಖಂಡರ ಸಭೆಯಲ್ಲಿ ಮೊದಲು ಮಾತನಾಡಿದ ಕೆಎಚ್ ಮುನಿಯಪ್ಪ , ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ನಮ್ಮ ಪಕ್ಷದವರೆ ಸಂಚು ಮಾಡಿ, ಬಿಜೆಪಿಗೆ ಬೆಂಬಲಿಸಿದ್ದಾರೆ, ನಾನು ಅವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು, ಅದು ಜಾರಿಯಾಗಿಲ್ಲ. ನಮ್ಮವರೇ ಹೀಗೆ ಮಾಡಿದರೆ ಹೇಗೆ, ಪಕ್ಷದ ಕಾರ್ಯಕರ್ತರಿಗೆ ಯಾವ ಸಂದೇಶ ಹೋಗುತ್ತದೆ ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು, ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕೆಎಚ್ ಮುನಿಯಪ್ಪ ಮಾತಿನ ನಂತರ, ಎಲ್ಲರನ್ನ ಉದ್ದೇಶಿಸಿ ಮಾತನಾಡಿದ ಹಿರಿಯ ಶಾಸಕ ರಮೇಶ್ ಕುಮಾರ್, ಜಿಲ್ಲೆಯಲ್ಲಿ ಈ ಹಿಂದೆ ಕೆಲವರು ಅಧಿಕಾರಕ್ಕಾಗಿ ಏನೆಲ್ಲ ಮಾಡಿದ್ದಾರೆ ಎಲ್ಲವು ತಿಳಿದಿದೆ, ಅಧಿಕಾರ ಇದ್ದಾಗ ಎಲ್ಲರೊಂದಿಗೆ ಬೆರೆತು ಚನ್ನಾಗಿದ್ದರು, ನಾವು ಮಾಡದ್ದನ್ನ ಪುನಃ ನಮ್ಮನ್ನ ಉಲ್ಲೇಖಿಸಿ ಆರೋಪಿಸಲಾಗಿದೆ, ಸ್ಪೀಕರ್ ಎನ್ನುವ ಜವಾಬ್ದಾರಿಯುತ ಸ್ತಾನದಲ್ಲಿದ್ದು ನಾನು ಚುನಾವಣೆ ವೇಳೆ ಯಾರಿಗು ಬೆಂಬಲ ನೀಡಿಲ್ಲ, ವಿನಾಕಾರಣ ಆರೋಪ ಮಾಡುವುದು ಬೇಡ, ಇಷ್ಟು ದಿನ ಒಬ್ಬರೇ ಅಧಿಕಾರ ಅನುಭವಿಸಿದ್ದರು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ, ಎಂದು ಕೆಎಚ್ ಮುನಿಯಪ್ಪ ಹೆಸರೇಳದೆ ಟಾಂಗ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಕೆಎಚ್ ಮುನಿಯಪ್ಪ ಮಾತನಾಡುವ ವೇಳೆ ಎಂಎಲ್ಸಿ ನಾಸೀರ್ ಅಹಮದ್ ಮಧ್ಯಪ್ರವೇಶಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಕೆಎಚ್ ಮುನಿಯಪ್ಪ ಅವರು ಅಲ್ಪ ಸಂಖ್ಯಾತರನ್ನ ಬೆಳೆಯಲು ಬಿಡಲಿಲ್ಲ, ಕೋಲಾರ ಕ್ಷೇತ್ರದಲ್ಲಿ ಬೇರೊಬ್ಬರನ್ನ ಗೆಲ್ಲಿಸಲು ಸಹಕಾರ ನೀಡಿ, ಕಾಂಗ್ರೆಸ್ ಗೆ ದ್ರೋಹ ಬಗೆದಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ, ಈ ವೇಳೆ ಗೊಂದಲ ಉಂಟಾಗಿದ್ದು ಇಬ್ಬರನ್ನ ಸಮಾಧಾನ ಪಡಿಸಲಾಗದೆ ಉಸ್ತುವಾರಿ ಸುರ್ಜೇವಾಲ ಸುಸ್ತಾಗಿದ್ದಾರೆ, ಕೂಡಲೇ ಎರಡು ಬಣದವರನ್ನ ಮಾಜಿ ಸಿಎಂ ಸಿದ್ದರಾಮಯ್ಯ ಮನವೊಲಿಸಿ ಗೊಂದಲ ಬಗೆಹರಿಸಿದ್ದಾರೆ, ಆದರೆ ಕೆಎಚ್ ಮುನಿಯಪ್ಪ ಹಾಗು ರಮೇಶ್ ಕುಮಾರ್ ಬಣದ ಎರಡು ಗುಂಪುಗಳು, ಹೊಂದಾಣಿಕೆಯಿಂದ ಮುಂಬರುವ ಚುನಾವಣೆ ಎದುರಿಸ ಬೇಕು ಎಂದು ಸುರ್ಜೇವಾಲಾ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ಸಿಎಂ ಸ್ಥಾನ ತ್ಯಜಿಸಿದರೆ ಈಶ್ವರಪ್ಪಗೆ ಪಟ್ಟ ಕಟ್ಟಿ: ರಾಯಣ್ಣ ಬ್ರಿಗೇಡ್ ನಾಯಕರ ಆಗ್ರಹ
ಕೈ ನಾಯಕರ ವಿಭಾಗೀಯ ಸಭೆ ಮುಗಿದರು ಗೊಂದಲಗಳು ಮಾತ್ರ ಮುಂದುವರೆದಿದೆ, ಸಭೆ ನಂತರ ಎಲ್ಲಾ ನಾಯಕರು ಸಿದ್ದರಾಮಯ್ಯ ಹಾಗು ಸುರ್ಜೇವಾಲಾ ಜೊತೆಗೆ ಪೋಟೊ ತೆಗೆಸಿಕೊಳ್ಳಲು ಅಕ್ಕ ಪಕ್ಕದಲ್ಲಿ ನಿಂತಿದ್ದರೆ ಕೆಎಚ್ ಮುನಿಯಪ್ಪ ಸ್ವಲ್ಪ ಅಂತರ ಕಾಯ್ದುಕೊಂಡಿದ್ದು ಕಂಡುಬಂತು. ಇನ್ನು ಕೋಲಾರ ಕಾಂಗ್ರೆಸ್ ಕಿತ್ತಾಟಕ್ಕೆ ಬ್ರೇಕ್ ಹಾಕಲು ರಾಜ್ಯ ಕಾಂಗ್ರೆಸ್ ನಾಯಕರು ಸದ್ಯದಲ್ಲೆ ವಿಶೇಷ ಸಭೆಯನ್ನ ಕರೆಯಲಿದ್ದಾರೆಂದು ತಿಳಿದುಬಂದಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ