ಮಾಗಡಿ: ಅವರಿಬ್ಬರು ಧರ್ಮದಲ್ಲಿ ಬೇರೆಯಾದರೂ ಕೂಡ ಪ್ರೀತಿಯಲ್ಲಿ ಒಂದೇ ಎಂದು ಭಾವಿಸಿ ಪರಸ್ಪರ ಮನಸ್ಸನ್ನ ಕೊಟ್ಟು ಪ್ರೀತಿಸುತ್ತಿದ್ದರು. ಆದರೆ ಮನೆಯವರ ದ್ವೇಷಕ್ಕೆ ಇಂದು ಪ್ರೇಮಿಯ ಪ್ರಾಣಪಕ್ಷಿ ಹಾರಿಹೋಗಿದೆ. ಹುಡುಗಿಯ ತಂದೆ, ಮತ್ತು ಅಣ್ಣ ಸೇರಿ ಹುಡುಗನನ್ನ ಕೊಲೆ ಮಾಡಿ ಈಗ ಪೊಲೀಸರ ಅಥಿತಿಗಳಾಗಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಕ ಕನಕೇನಹಳ್ಳಿ ಬಳಿ 24 ವರ್ಷದ ಲಕ್ಷ್ಮೀಪತಿಯ ಕೊಲೆಯಾಗಿದೆ.
ಲಕ್ಷ್ಮಿಪತಿ ಮೂಲತಃ ನೆಲಮಂಗಲದ ಬಸವನಹಳ್ಳಿ ಗ್ರಾಮದ ನಿವಾಸಿ. ಈತ ಪ್ರೀತಿಸುತ್ತಿದ್ದ ಹುಡುಗಿ ಅಂಬ್ರಿನಾ ಸಹ ನೆಲಮಂಗಲದ ಇಸ್ಲಾಂಪುರದ ನಿವಾಸಿ. ಇವರಿಬ್ಬರು ಸ್ಥಳೀಯ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 3-4 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಅಂಬ್ರಿನಾ ಮನೆಯಲ್ಲಿ ತೀವ್ರವಾಗಿ ವಿರೋಧವಿತ್ತು. ಒಂದೆರಡು ಬಾರಿ ಲಕ್ಷ್ಮಿಪತಿಯನ್ನ ಅಂಬ್ರಿನಾ ತಂದೆ ನಜೀಮುದ್ದೀನ್ ಕರೆದು ವಾರ್ನ್ ಕೂಡ ಮಾಡಿದ್ದರೆನ್ನಲಾಗಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ರೌಡಿಶೀಟರ್ ಮೇಲೆ ಗುಂಡಿನ ದಾಳಿ
ಆದರೂ ಕೂಡ ಈ ಪ್ರೇಮಿಗಳು 2018 ಮತ್ತು 2019 ರಲ್ಲಿ ಎರಡು ಬಾರಿ ಮನೆಬಿಟ್ಟು ಓಡಿಹೋಗಿ ಮಂಡ್ಯದಲ್ಲಿ ಸುಮಾರು 6 ತಿಂಗಳು ಕಾಲ ತಲೆಮರೆಸಿಕೊಂಡಿದ್ದರು. ನಂತರ ಮತ್ತೆ ಮನೆಗೆ ವಾಪಸ್ಸಾಗಿದ್ದರು. ಆದರೆ ಕಳೆದ ಒಂದೆರಡು ತಿಂಗಳುಗಳಿಂದ ಮತ್ತೆ ಇವರಿಬ್ಬರ ಲವ್ ಅಫೇರ್ ಜಾಸ್ತಿಯಾದ ಕಾರಣ ಅಂಬ್ರಿನಾ ತಂದೆ ನಜೀಮುದ್ದೀನ್ ಅವರು ಲಕ್ಷ್ಮಿಪತಿಯನ್ನ ಬೇರೊಬ್ಬರ ಮೂಲಕ ಸಂಪರ್ಕಿಸಿದ್ದಾರೆ. ಮಗಳ ಜೊತೆಗೆ ಮದುವೆ ಮಾಡುತ್ತೇನೆ, ಮಾತನಾಡೋಣ ಬಾ ಎಂದು ನಿನ್ನೆ ರಾತ್ರಿ ಕುದೂರು ವ್ಯಾಪ್ತಿಯ ಕನಕೇನಹಳ್ಳಿ ಬಳಿಯ ಬೆಟ್ಟದ ಬಳಿ ಕರೆಸಿದ್ದಾರೆ. ಅಲ್ಲಿಗೆ ಲಕ್ಷ್ಮಿಪತಿ ಮತ್ತು ಅವರ ಅಣ್ಣ ನಟರಾಜ್ ಇಬ್ಬರೂ ಹೋಗಿದ್ದಾನೆ. ಅದಕ್ಕೂ ಮೊದಲು ಎಲ್ಲರೂ ಕೂಡ ಮದ್ಯಪಾನ ಮಾಡಿದ್ದಾರೆ. ನಂತರ ಬೆಟ್ಟದ ಬಳಿ ಅಂಬ್ರಿನಾ ತಂದೆ ನಜೀಮುದ್ದೀನ್, ಅಣ್ಣ ಸಿಕಂದರ್ ಜೊತೆಗೆ ಇನ್ನಿಬ್ಬರು ಸೇರಿ ಲಕ್ಷ್ಮಿಪತಿಯ ಕತ್ತಿಗೆ ಬೆಲ್ಟ್ ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: ಡೋಲಾಯಮಾನ ಸ್ಥಿತಿಯಲ್ಲಿ ದಸರಾ ಸಿದ್ದತೆ : ಕೆಲವೇ ದಿನ ಬಾಕಿ ಇದ್ದರೂ ಇನ್ನು ನಿರ್ಧಾರವಾಗದ ಉದ್ಘಾಟಕರ ಹೆಸರು
ಸ್ಥಳದಲ್ಲಿಯೇ ತನ್ನ ಸಹೋದರ ಲಕ್ಷ್ಮಿಪತಿಯ ಕೊಲೆಯನ್ನ ನೋಡಿದ ಅಣ್ಣ ನಟರಾಜ್ ಏನೂ ಮಾಡಲಾಗದೇ ಮನೆಗೆ ಬಂದಿದ್ದಾನೆ. ನಂತರ ಮನೆಯವರ ಜೊತೆಗೂಡಿ ಕುದೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ. ಈಗಾಗಲೇ ಅಂಬ್ರಿನಾ ತಂದೆ ನಜೀಮುದ್ದೀನ್ ಹಾಗೂ ಪುತ್ರ ಸಿಕಂದರ್ ಪೊಲೀಸರ ವಶದಲ್ಲಿದ್ದು, ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆಬೀಸಿದ್ದಾರೆ.
ವರದಿ: ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ