ಕೋಲಾರದ ಟೇಕಲ್​ನಲ್ಲಿ ಕಲ್ಲು ಗಣಿಗಾರಿಕೆ; ಶುಲ್ಕ ಕಟ್ಟದೇ ತಮಿಳುನಾಡಿಗೆ ಅಕ್ರಮ ಸಾಗಾಣಿಕೆ

ಟೇಕಲ್ ಹೋಬಳಿಯ ಹಳೇಪಾಳ್ಯ ಗ್ರಾಮದ ಸರ್ವೇ ನಂಬರ್ 93, ಕದಿರೇನಹಳ್ಳಿ ಸರ್ವೇ ನಂಬರ್ 16, ಉಳ್ಳೇರಹಳ್ಳಿ ಸರ್ವೇ ನಂಬರ್ 22 , ಅನಿಗಾನಹಳ್ಳಿ ಸರ್ವೇ ನಂಬರ್ 22, ಹುಣಸಿಕೋಟೆ ಸರ್ವೇ ನಂಬರ್ 28 ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.

ಕಲ್ಲು ಗಣಿಗಾರಿಕೆ

ಕಲ್ಲು ಗಣಿಗಾರಿಕೆ

  • Share this:
ಕೋಲಾರ: ಮಾಲೂರು ತಾಲೂಕಿನ ಟೇಕಲ್ ಹೋಬಳಿಯಲ್ಲಿ ಕಲ್ಲುಕುಟಿಕ ವೃತ್ತಿಗೆ ಒಂದು ಇತಿಹಾಸವಿದೆ. ಹತ್ತಾರು ವರ್ಷಗಳಿಂದಲೂ ರೈಲ್ವೆ ಕಾಮಗಾರಿಗಳಿಗೆ ಕಲ್ಲು ಸಾಗಾಣೆ ಆಗ್ತಿರುವುದು ಇಲ್ಲಿಂದಲೇ ಎನ್ನುವುದು ಬಹುತೇಕರಿಗೆ ತಿಳಿಯದ ವಿಚಾರ. ಆದರೆ ಟೇಕಲ್ ಹೋಬಳಿಯ ಕೆಲ ಪ್ರದೇಶದಲ್ಲಿ ಯಥೇಚ್ಛವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ತಮಿಳುನಾಡಿಗೆ ನಮ್ಮ‌ ರಾಜ್ಯದ ಸಂಪತ್ತು ಉಚಿತವಾಗಿ ರವಾನೆಯಾಗುತ್ತಿದೆ. ನಮ್ಮ ರಾಜ್ಯದ ನೀರಾವರಿ ಯೋಜನೆಗಳಿಗೆ ಸದಾ ಖ್ಯಾತೆ ತೆಗೆಯೋ ತಮಿಳುನಾಡು ರಾಜ್ಯಕ್ಕೆ ಕೋಲಾರದಿಂದ ಬೇಕಾಬಿಟ್ಟಿಯಾಗಿ ನಮ್ಮ ರಾಜ್ಯದ ಸಂಪತ್ತು ಅಕ್ರಮವಾಗಿ ಹರಿದು ಹೋಗುತ್ತಿರುವುದು ವಿಪರ್ಯಾಸವೇ ಸರಿ. ಮಾಲೂರಿನ ಹಳೇ ಪಾಳ್ಯ, ಉಳ್ಳೇರಹಳ್ಳಿ, ವೀರಕಪುತ್ರ ಓಬಟ್ಟಿ, ಕದಿರೇನಹಳ್ಳಿ, ಬಲ್ಲೇರಿ ಗ್ರಾಮದಲ್ಲಿನ ಕಂದಾಯ ಇಲಾಖೆಗೆ ಸೇರಿದ ಬೆಟ್ಟಗಳಲ್ಲಿ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ತಮಿಳುನಾಡಿಗೆ ಅಕ್ರಮವಾಗಿ ಕಲ್ಲು ಕೂಚಾಗಳು (ಕಲ್ಲಿನ ಕಂಬಗಳು) ಲಾರಿಗಳಲ್ಲಿ ಯಥೇಚ್ಚವಾಗಿ ಹರಿದು ಹೋಗುತ್ತಿದ್ದು, ಬೆಟ್ಟ ಗುಡ್ಡಗಳನ್ನ ಹಿಟಾಚಿ, ಜೆಸಿಬಿ ಹಾಗು ಟ್ರಾಕ್ಟರ್ ಕಂಪ್ರೆಸರ್ ಬಳಸಿ ಕಲ್ಲು ಬಂಡೆಗಳನ್ನ ಕೊರೆಯಲಾಗುತ್ತಿದೆ.

ಟೇಕಲ್ ಹೋಬಳಿಯ ಹಳೇಪಾಳ್ಯ ಗ್ರಾಮದ ಸರ್ವೇ ನಂಬರ್ 93, ಕದಿರೇನಹಳ್ಳಿ ಸರ್ವೇ ನಂಬರ್ 16, ಉಳ್ಳೇರಹಳ್ಳಿ ಸರ್ವೇ ನಂಬರ್ 22, ಅನಿಗಾನಹಳ್ಳಿ ಸರ್ವೇ ನಂಬರ್ 22, ಹುಣಸಿಕೋಟೆ ಸರ್ವೇ ನಂಬರ್ 28 ರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಸುಮಾರು 40 ಕಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಗಣಿ ಇಲಾಖೆ ಹಾಗು ಮಾಲೂರು ತಾಲೂಕು ಆಡಳಿತ ನೋಡಿಯೂ ನೋಡದಂತೆ ಅಕ್ರಮಕ್ಕೆ ಪರೋಕ್ಷವಾಗಿ ಬೆಂಬಲ ನೀಡ್ತಿರುವ ಆರೋಪ ಕೇಳಿಬರುತ್ತಿದೆ, ಪ್ರತಿನಿತ್ಯ 20 ರಿಂದ 30 ಲೋಡ್‍ಗಳಷ್ಟು ಕಲ್ಲು ಕೂಚಾಗಳು ಲಾರಿಗಳ ಮೂಲಕ ಅಕ್ರಮವಾಗಿ ಇಲ್ಲಿಂದ ತೆರಳುತ್ತಿವೆ. ಲಾರಿಗಳಿಗೆ ಕಲ್ಲು ಸಾಗಿಸಲು ಅನುಮತಿ ಇಲ್ಲ ಹಾಗು ಇಂಟರ್‍ಸ್ಟೇಟ್ ಪರ್ಮಿಟ್ ಸಹ ಇಲ್ಲ. ಆದರೂ ಲಾರಿಗಳು ಯಾವುದೇ ಅಡಚಣೆ ಇಲ್ಲದೆ ಸುಗಮವಾಗಿ ತಮಿಳುನಾಡಿಗೆ ಹೋಗಿ ಬರುತ್ತಿದೆ.

ಸಾಂಪ್ರದಾಯಿಕ ಕಲ್ಲು ಕುಟಿಕರು ಎಂದು ಈಗಾಗಲೇ ಗಣಿಗಾರಿಕೆಗೆ ಅನುಮತಿ ನೀಡುವಂತೆ 70 ಕ್ಕು ಹೆಚ್ಚು ಮಂದಿ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಸರ್ಕಾರ ಮಾತ್ರ ಗೋಮಾಳ ಜಾಗದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿಲ್ಲ. ದೊಡ್ಡ ದೊಡ್ಡ ಬಂಡೆಗಳನ್ನ ಸಿಡಿಸುವ ರಭಸಕ್ಕೆ ಅಕ್ಕ ಪಕ್ಕದ ಗ್ರಾಮಗಳಲ್ಲಿನ ಮನೆಗಳು, ಸರ್ಕಾರಿ ಶಾಲೆಗಳು ಬಿರುಕು ಬಿಟ್ಟಿವೆ. ಹೀಗಾಗಿ ಗಣಿಗಾರಿಕೆ ನಿಲ್ಲಿಸುವಂತೆ ಕೆಲ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಬಗ್ಗೆ ತಮಿಳುನಾಡು ಲಾರಿ ಚಾಲಕರನ್ನ ಪ್ರಶ್ನಿಸಿದರೆ, ನಮಗೆ ಕಲ್ಲು ಸಾಗಿಸಲು ಪರ್ಮಿಟ್ ಇಲ್ಲ ಎಂದು ಪ್ರತಿಕ್ರಿಯಿಸಿದ್ದು, ಪೊಲೀಸರಿಗೆ ಮಾಮೂಲಿ ನೋಡಿಕೊಂಡು ಸಂಚಾರ ಮಾಡ್ತಿರೊದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ತಾಲಿಬಾನಿಗಳು ನನ್ನನ್ನು ಕೊಂದರೂ ಸರಿ ದೇವಸ್ಥಾನ ಬಿಟ್ಟು ಹೋಗೋದಿಲ್ಲ: ಆಫ್ಘನ್ ಹಿಂದೂ ಅರ್ಚಕ ಉದ್ಘಾರ

ಸುಮಾರು 200 ಎಕರೆಗು ಹೆಚ್ಚು ಗೋಮಾಳ ಪ್ರದೇಶದಲ್ಲಿನ ಅಪಾರ ಪ್ರಮಾಣದಲ್ಲಿ ಪ್ರಕೃತಿ ಸಂಪತ್ತು ನಿರಂತರ ಲೂಟಿ ಆಗುತ್ತಿದ್ದರೂ, ತಮಿಳುನಾಡಿಗೆ ಕಲ್ಲು ಕಂಬಗಳು ಲಾರಿಗಳ ಮೂಲಕ ನಿತ್ಯ ರವಾನೆಯಾಗುತ್ತಿವೆ. ಒಂದು ಲಾರಿ ಲೋಡ್ ಕಲ್ಲಿನ ಕೂಚಾಗಳ ಬೆಲೆ 30 ರಿಂದ 40 ಸಾವಿರ ಇದೆ. ತಮಿಳುನಾಡಿನಲ್ಲಿ ಕಲ್ಲು ಕೂಚಾಗಳಿಗೆ ಎಲ್ಲಿಲ್ಲದ ಬೇಡಿಕೆಯಿದ್ದು, ಬೇಕಾಬಿಟ್ಟಿಯಾಗಿ ಕೋಲಾರದಲ್ಲಿ ಸರ್ಕಾರಿ ಸಂಪತ್ತು ಸಂಪತ್ತು ಸಿಕ್ಕಿರುವ ಕಾರಣ ಅಕ್ರಮವಾಗಿ ಲಾರಿಗಳಲ್ಲಿ ರವಾನಿಸಲಾಗುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ಇಷ್ಟೆಲ್ಲ ನಷ್ಟವಾಗುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಷಣ್ಮುಗಂ ಹಾಗು ಕಿರಿಯ ಅಧಿಕಾರಿ ಚೊಕ್ಕಾರೆಡ್ಡಿ ಮಾತ್ರ ನೋಡಿಯು ನೋಡದಂತೆ ಸುಮ್ಮನಿದ್ದಾರೆ.

ಸ್ಥಳದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ವಿಲೇಜ್ ಅಕೌಂಟೆಂಟ್ ವಿನಯ್ ಅವರು ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಒಪ್ಪಿಕೊಂಡಿದ್ದು, ನಿರಂತರ ಗಣಿಗಾರಿಕೆಯಿಂದ ವೇಗವಾಗಿ  ಬೆಟ್ಟಗಳು ಕರಗಿ ಹೋಗುತ್ತಿದೆ, ಈಗಾಗಲೇ ನ್ಯೂಸ್ 18 ಕನ್ನಡ ಮಾಹಿತಿ ಹಿನ್ನಲೆ ಸ್ತಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಪೊಲೀಸ್ ಇಲಾಖೆಗೆ  ಕೋಲಾರ ಜಿಲ್ಲಾಧಿಕಾರಿ ಡಾ ಆರ್ ಸೆಲ್ವಮಣಿ ಅವರು ಸೂಚನೆ ನೀಡಿದ್ದು, ಮುಂದೆ ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

ವರದಿ: ರಘುರಾಜ್
Published by:Vijayasarthy SN
First published: