• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಅಕ್ರಮ ಗಣಿಗಾರಿಕೆ: 142 ಕೋಟಿ ರೂ.ದಂಡ ರದ್ದು, ಏಪ್ರಿಲ್ 1 ರಿಂದ ಮತ್ತೆ ಡ್ರೋಣ್ ಸರ್ವೆ!

ಅಕ್ರಮ ಗಣಿಗಾರಿಕೆ: 142 ಕೋಟಿ ರೂ.ದಂಡ ರದ್ದು, ಏಪ್ರಿಲ್ 1 ರಿಂದ ಮತ್ತೆ ಡ್ರೋಣ್ ಸರ್ವೆ!

ಕಲ್ಲು ಗಣಿಗಾರಿಕೆ

ಕಲ್ಲು ಗಣಿಗಾರಿಕೆ

ಶಿವಮೊಗ್ಗ ಪ್ರಕರಣದ ನಂತರ ಚಾಮರಾಜನಗರ ಜಿಲ್ಲೆಯಲ್ಲಿ 42 ಕಲ್ಲು ಗಣಿಗಾರಿಕೆ 22 ಕ್ರಷರ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಒಂದು ತಿಂಗಳ ಒಳಗೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಅಕ್ರಮವಾಗಿ ಸ್ಪೋಟಕ ಬಳಸುತ್ತಿರುವುದು ಎಲ್ಲಿಯೂ ಕಂಡು ಬಂದಿಲ್ಲ ಎಂದು  ತಿಳಿಸಿದರು.

ಮುಂದೆ ಓದಿ ...
  • Share this:

ಚಾಮರಾಜನಗರ (ಫೆ.08); ಚಾಮರಾಜನಗರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಿಧಿಸಿದ್ದ 142 ಕೋಟಿ ರೂಪಾಯಿ ದಂಡವನ್ನು ಸರ್ಕಾರ ರದ್ದುಪಡಿಸಿದೆ. ಅಕ್ರಮ ಗಣಿಗಾರಿಕೆ ಪ್ರಮಾಣವವನ್ನು ವೈಜ್ಞಾನಿಕವಾಗಿ ಅಂದಾಜು ಮಾಡುವ ನಿಟ್ಟಿನಲ್ಲಿ   ಡ್ರೋಣ್ ಸರ್ವೆ ಮಾಡಲು ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು ಏಪ್ರಿಲ್ 1 ರಿಂದ ಡ್ರೋಣ್ ಸರ್ವೆ ಆರಂಭವಾಗಲಿದೆ.


ಚಾಮರಾಜನಗರ ಜಿಲ್ಲೆ ಅಕ್ರಮ ಗಣಿಗಾರಿಕೆಯ ತಾಣವಾಗಿದೆ. ಕಪ್ಪುಶಿಲೆ (ಗ್ರಾನೈಟ್) ಹಾಗೂ ಬಿಳಿಕಲ್ಲನ್ನು  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಭೂ ತಾಯಿಯ ಒಡಲನ್ನು ಬಗೆದು ಲೂಟಿ ಹೊಡೆಯಲಾಗಿದೆ. ಕೆಲವೆಡೆ  ಕೆರೆ-ಕಟ್ಟೆ ಗೋಮಾಳ ಹೀಗೆ ನಿಯಮಗಳನ್ನು ಮೀರಿ  ಗಣಿಗಾರಿಕೆ ಮಾಡಿದ್ದರೆ ಮತ್ತೆ ಕೆಲವೆಡೆ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆಗೆ ಪರವಾನಗಿ ಪಡೆದು ಪಕ್ಕದ ಸರ್ಕಾರಿ ಗೋಮಾಳ ಒತ್ತುವರಿ ಮಾಡಿಕೊಂಡು ಗಣಿಗಾರಿಕ ನಡೆಸಲಾಗಿದೆ. ಇನ್ನೂ ಕೆಲವೆಡೆ ಯಾವುದೇ ರೀತಿಯ ಪರವಾನಗಿ ಪಡೆಯದೆ ಗಣಿಗಾರಿಕೆ ಮಾಡುವುದು, 1 ಅಥವಾ 2 ಎಕರೆಗೆ ಪರವಾನಿಗೆ ಪಡೆದು 5 ಅಥವಾ 6  ಎಕರೆಯಲ್ಲಿ ಗಣಿಗಾರಿಕೆ ಮಾಡುವುದು ಹೀಗೆ ನಾನಾ  ರೀತಿಯ ಅಕ್ರಮಗಳಿಗೆ ಚಾಮರಾಜನಗರ ಜಿಲ್ಲೆ ಸಾಕ್ಷಿಯಾಗಿದೆ.


ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಎರಡು ವರ್ಷಗಳ ಹಿಂದೆ ಸರ್ವೆ ನಡೆಸಿ 142 ಕೋಟಿ ರೂಪಾಯಿ ದಂಡ ವಿಧಿಸಿದ್ದರು. ಆದರೆ ವೈಜ್ಞಾನಿಕವಾಗಿ ಸರ್ವೆ ಮಾಡಿಲ್ಲ. ತಮ್ಮ ಅನುಪಸ್ಥಿತಿಯಲ್ಲಿ ಸರ್ವೆ ಮಾಡಲಾಗಿದ್ದು, ಈ ಬಗ್ಗೆ ಪುನರ್ ಪರಿಶೀಲಿಸುವಂತೆ ಗಣಿ ಮಾಲೀಕರು ಮನವಿ ಮಾಡಿದ್ದರು. ಇದೇ ರೀತಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಅಕ್ರಮ ಗಣಿಗಾರಿಕೆಗೆ ದಂಡ ವಿಧಿಸಿರುವ ಬಗ್ಗೆ ಗಣಿ ಮಾಲೀಕರು ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರು.ಈ ಹಿನ್ನಲೆಯಲ್ಲಿ  ಹಿಂದೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿ ಮತ್ತೆ ಹೊಸದಾಗಿ ಡ್ರೋಣ್ ಸರ್ವೆ ನಡೆಸಿ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ದಂಡ ಹಾಕಲು ನಿರ್ಧರಿಸಲಾಗಿತ್ತು. ಅದರಂತೆ ರಾಜ್ಯದ ಎಲ್ಲ ಕಡೆ  ಕಲ್ಲುಗಣಿ ಗುತ್ತಿಗೆಗಳಲ್ಲಿ ಡ್ರೋಣ್ ಸರ್ವೆಗಾಗಿ ರಾಜ್ಯ ಸರ್ಕಾರ 8 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.


ಈ ಹಿನ್ನಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ  ಡ್ರೋಣ್ ಸರ್ವೆ ಮಾಡಲು ಈ ಪ್ರಕ್ಯುರ್ ಮೆಂಟ್ ಫೋರ್ಟಲ್ ಮೂಲಕ ಟೆಂಡರ್ ಆಹ್ವಾನಿಸಿದೆ. ಟೆಂಡರ್ ಪಕ್ರಿಯೆ ನಡೆಯುತ್ತಿದ್ದು ನಿಯಮಾವಳಿಗಳ ಪ್ರಕಾರ  ಅರ್ಹ ಏಜೆನ್ಸಿಗೆ  ಟೆಂಡರ್ ನೀಡಲಾಗುವುದು. ಚಾಮರಾಜನಗರ ಜಿಲ್ಲೆಯಲ್ಲಿ  ಏಪ್ರಿಲ್ 1 ರಿಂದ  ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಡೆಪ್ಯೂಟಿ ಡೈರೆಕ್ಟರ್ ಆಫ್ ಲ್ಯಾಂಡ್ ರೆಕಾರ್ಡ್ಸ್ ಹೀಗೆ ಎಲ್ಲಾ ಅಧಿಕಾರಿಗಳು ಸೇರಿ ಹಿಂದೆ ಯಾವ ಜಾಗಗಳಲ್ಲಿ ಸರ್ವೆ ನಡೆಸಲಾಗಿತ್ತೋ ಅದೇ ಜಾಗಗಳಲ್ಲಿ ಕಲ್ಲುಗಣಿ ಗುತ್ತಿಗೆ  ಪ್ರದೇಶಗಳನ್ನು ಗುರುತು ಮಾಡಿ ಡ್ರೋಣ್ ಸರ್ವೆ ನಡೆಸಲಾಗುವುದು. ಅಲ್ಲಿ  ಯಾವ ಪ್ರಮಾಣದಲ್ಲಿ ಕಲ್ಲು ತೆಗೆಯಲಾಗಿದೆ ಎಂಬುದರ  ಬಗ್ಗೆ ವೈಜ್ಞಾನಿಕವಾಗಿ ಅಂದಾಜು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಷಾನ ಇಲಾಖೆ ಉಪನಿರ್ದೇಶಕಿ ಲಕ್ಷ್ಮಮ್ಮ ನ್ಯೂಸ್ 18 ಗೆ ತಿಳಿಸಿದರು.


ಇದನ್ನು ಓದಿ: ಟಯರ್​ನಲ್ಲೂ ಅರಳಿದ ಬಗೆಬಗೆಯ ಹೂವು, ಗಾರ್ಡನಿಂಗ್​ನಲ್ಲಿ ಟಯರ್ ಕೂಡ ಬಳಸಬಹುದು ಎಂದು ತೋರಿಸಿಕೊಟ್ಟ ದಂಪತಿ


ಅಕ್ರಮ ಗಣಿಗಾರಿಕೆ ತಡೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಮಾಸಾಚರಣೆ


ಚಾಮರಾಜನಗರ ಜಿಲ್ಲೆಯಲ್ಲಿ ಫೆಬ್ರುವರಿ 28 ರಿಂದ ಮಾರ್ಚ್ 28 ರವರೆಗೆ  ಅನಧಿಕೃತ ಗಣಿಗಾರಿಕೆ ತಡೆಗಟ್ಟುವಿಕೆ  ಹಾಗೂ ಗಣಿಗಳಲ್ಲಿ ಸುರಕ್ಷತಾ ಕ್ರಮಗಳ ಮಾಸಾಚರಣೆ ನಡೆಸಲಾಗುತ್ತಿದೆ. ಈ ಅವಧಿಯಲ್ಲಿ  ಜಿಲ್ಲೆಯ ಎಲ್ಲಾ ಗಣಿಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಸ್ಫೋಟಕ ಕಾಯ್ದೆ ಪ್ರಕಾರ ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಹೇಗೆ, ಯಾವ ವೇಳೆಯಲ್ಲಿ ಸ್ಫೋಟಕ ಬಳಸಬೇಕು, ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂಬುದರ ಬಗ್ಗೆ ಗಣಿ ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ಮಾರ್ಗದರ್ಶನ ನೀಡಲಾಗವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಲಕ್ಷ್ಮಮ್ಮ ತಿಳಿಸಿದ್ದಾರೆ.


ಶಿವಮೊಗ್ಗ ಪ್ರಕರಣದ ನಂತರ ಈಗಾಗಲೇ ಜಿಲ್ಲೆಯಲ್ಲಿ 42 ಕಲ್ಲು ಗಣಿಗಾರಿಕೆ 22 ಕ್ರಷರ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಒಂದು ತಿಂಗಳ ಒಳಗೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಅಕ್ರಮವಾಗಿ ಸ್ಪೋಟಕ ಬಳಸುತ್ತಿರುವುದು ಎಲ್ಲಿಯೂ ಕಂಡು ಬಂದಿಲ್ಲ ಎಂದು  ತಿಳಿಸಿದರು.

  • ವರದಿ: ಎಸ್.ಎಂ.ನಂದೀಶ್ 

Published by:HR Ramesh
First published: