HOME » NEWS » District » ILLEGAL SAND TRANSPORT FROM NANDIHALLI TO BENGALURU RHHSN BKTV

ಅಕ್ರಮ ಮರಳುಗಾರಿಕೆ: ನಂದಿಹಳ್ಳಿಯಿಂದ ಹುಬ್ಬಳ್ಳಿ, ಬೆಂಗಳೂರುವರೆಗೂ ನಾನ್ ಸ್ಟಾಪ್ ಮರಳು ಸಾಗಣಿಕೆಗೆ ಅಧಿಕಾರಿಗಳೇ ಶ್ರೀರಕ್ಷೆ!

ಒಟ್ಟಿನಲ್ಲಿ ಕೆಲವೊಂದಿಷ್ಟು ಅಧಿಕಾರಿಗಳ ಹಣದಾಹಕ್ಕೆ ತುಂಗಭದ್ರೆಯ ಒಡಲು ಬರಿದಾಗುತ್ತಿರುವುದು ದುರಂತವೇ ಸರಿ. ಈಗಲಾದರೂ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಅಕ್ರಮ ತಡೆದು ಇದರಲ್ಲಿ ತಮ್ಮ ಪಾತ್ರ ಇಲ್ಲ ಎನ್ನುವುದನ್ನು ತೋರಿಸಬೇಕಾಗಿದೆ.

news18-kannada
Updated:March 13, 2021, 7:01 AM IST
ಅಕ್ರಮ ಮರಳುಗಾರಿಕೆ: ನಂದಿಹಳ್ಳಿಯಿಂದ ಹುಬ್ಬಳ್ಳಿ, ಬೆಂಗಳೂರುವರೆಗೂ ನಾನ್ ಸ್ಟಾಪ್ ಮರಳು ಸಾಗಣಿಕೆಗೆ ಅಧಿಕಾರಿಗಳೇ ಶ್ರೀರಕ್ಷೆ!
ತುಂಗಾಭದ್ರ ನದಿಯಲ್ಲಿ ಮರಳು ತುಂಬುತ್ತಿರುವುದು.
  • Share this:
ಕೊಪ್ಪಳ: ಮರಳು ಯಾರಿಗೆ ತಾನೇ ಬೇಡ ಹೇಳಿ. ಸರ್ಕಾರದ ಕಾಮಗಾರಿಗಳಿಂದ ಹಿಡಿದು ಬಡವರ್ಗದ ಜನ ಮನೆ ಕಟ್ಟೋಕೆ ಮರಳು ಅತ್ಯವಶ್ಯಕ ನೈಸರ್ಗಿಕ ಸಂಪನ್ಮೂಲವಾಗಿದೆ. ಆದರೆ ಇದೀಗ ಮರಳಿನ ಕೃತಕ ಅಭಾವ ಸೃಷ್ಟಿಸಿ ಮರಳಿಗೆ ಬಂಗಾರದ ಬೆಲೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಅದೆಷ್ಟೋ ಕುಳಗಳು, ನದಿ, ಹಳ್ಳಗಳನ್ನು ಬಗೆದು, ಲೋಡ್‌ಗಟ್ಟಲೇ ಹಗಲು- ರಾತ್ರಿ ಎನ್ನದೆ ಮರಳು ಸಾಗಾಟ ನಡೆಸುತ್ತಿದ್ದಾರೆ. ಅಕ್ರಮ ಮರಳುಗಾರಿಕೆಯನ್ನು ತಡೆಗಟ್ಟಬೇಕಾದ ಅಧಿಕಾರಿಗಳೇ ಇದಕ್ಕೆ ಶ್ರೀ ರಕ್ಷೆಯಾಗಿ ನಿಂತಿದ್ದಾರೆ.

ಹೌದು, ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನಂದಿಹಳ್ಳಿ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯಿಂದ ಹಗಲು ರಾತ್ರಿ ಎನ್ನದೇ ಲಾರಿಗಳ ಮುಖಾಂತರ, ಟ್ರ್ಯಾಕ್ಟರ್​ಗಳ ಮುಖಾಂತರ ಸಲೀಸಾಗಿ ಮರಳು ಸಾಗಾಣಿಕೆ ಆಗುತ್ತೆ. ನಂದಿಹಳ್ಳಿ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯಲ್ಲಿ ಸ್ಥಳೀಯರು ಯಾವುದೇ ತರಹ ಮರಳು ತೆಗೆದುಕೊಂಡು ಹೋಗುವುದಿಲ್ಲ. ಆದರೆ ಪ್ರಭಾವಿಗಳು ಪೊಲೀಸ್ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಕೆಲ ಅಧಿಕಾರಿಗಳನ್ನೇ ತಮ್ಮ ಬುಟ್ಟಿಯಲ್ಲಿ ಹಾಕಿಕೊಂಡು, ನೇರವಾಗಿ ರಾತ್ರೋರಾತ್ರಿ ದೊಡ್ಡ ದೊಡ್ಡ ಲಾರಿಗಳ ಮುಖಾಂತರ ಬೆಂಗಳೂರು, ಹುಬ್ಬಳ್ಳಿಗೆ ಸಾಗಾಣಿಕೆ ಮಾಡುತ್ತಾ ಇದ್ದಾರೆ. ಇನ್ನೂ ದೊಡ್ಡ ಆತಂಕದ ವಿಷಯವೇನೆಂದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕೃತ ಮರಳು ಕೇಂದ್ರ ಇಲ್ಲದಿದ್ದರೂ "ಝಿರೋ" ಪಾಯಿಂಟ್( ಅನಧಿಕೃತ) ನಿಂದ ಮರಳು ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಅಂತರ್ ಜಿಲ್ಲೆ ತಲುಪುತ್ತೆ.

ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರೋ ಬಸವರಾಜ್ ದಡೇಸೂಗೂರು ಅವರು ಕಳೆದ ಸಮ್ಮಿಶ್ರ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದ ರಾಜಶೇಖರ ಪಾಟೀಲ್ ಮುಂದೆ ಒಂದೇ ಒಂದು ಪುಟ್ಟಿ ಮರಳು ಜನರು ಸಾಗಾಣಿಕೆ ಮಾಡಿದರೆ ಪೊಲೀಸರು FIR ಹಾಕ್ತಾ ಇದ್ದಾರೆ ಎಂದು ದೂರು ಸಲ್ಲಿಸಿದ್ದರು. ಆದರೆ ಇದೀಗ ಕೋಟ್ಯಂತರ ರೂಪಾಯಿ ಮೌಲ್ಯದ ಮರಳು ಸಾಗಾಣಿಕೆ ಆದ್ರೂ ಆ ಪೊಲೀಸರು , ಆ ಶಾಸಕರು ಎಲ್ಲಿಗೆ ಹೋಗಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಬೆಂಗಳೂರು ಮೂಲದ ಮರಳು ಕಿಂಗ್ ಪಿನ್?

ಬೆಂಗಳೂರು ಮೂಲದ ವ್ಯಕ್ತಿಯೋರ್ವ ನಂದಿಹಳ್ಳಿ ಭಾಗದ ಜನರಿಗೆ ಮಂಕುಬೂದಿ ಎರಚಿ, ನನಗೆ ವಿಧಾನಸೌದಿಂದ  ಹಿಡಿದು ಕೊಪ್ಪಳ ಜಿಲ್ಲೆಯ ಎಲ್ಲಾ  ಅಧಿಕಾರಿಗಳು ಪರಿಚಯ. ಅವರೇ ನನಗೆ ಶ್ರೀರಕ್ಷೆ. ನನಗೆ ಏನೂ ಮಾಡಲು ಆಗದು ಎಂದು ತಿಂಗಳು ಮಾಮೂಲಿ ಕೊಡ್ತಾ ಇದ್ದಾನಂತೆ. ಸಾಮಾನ್ಯ ಜನರು ಮರಳು ತರೋಕೆ ಹೋದರೆ ಅಧಿಕಾರಿಗಳು ಕೇಸ್ ಹಾಕ್ತಾರಂತೆ. ಆದರೆ ಬೆಂಗಳೂರಿನ ಕಿಂಗ್ ಪಿನ್ ಹಗಲು- ರಾತ್ರಿ ಅನ್ನದೇ ಮರಳು ಸಾಗಾಟ ಮಾಡಿದ್ರೂ ಆತನನ್ನು ಯಾರು ತಡೆಯುವುದೇ ಇಲ್ಲ ಎನ್ನುತ್ತಿದ್ದಾರೆ ಇಲ್ಲಿನ ಸಾರ್ವಜನಿಕರು.

ಕೊಪ್ಪಳ ಜಿಲ್ಲೆಯಲ್ಲಿ ಪರದಾಟ, ಹೊರಗಿನವರಿಗೆ ಹಬ್ಬದೂಟ

ಬಹುತೇಕವಾಗಿ ಮರಳಿನ ಕೃತಕ ಅಭಾವ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ. ಅದರಲ್ಲೂ ಗಂಗಾವತಿ, ಕುಷ್ಟಗಿ, ಕನಕಗಿರಿ, ಕಾರಟಗಿ, ಯಲಬುರ್ಗಾ ಭಾಗದ ಸಾಮಾನ್ಯ ಜನರು ಮನೆ ಕಟ್ಟೋಕೆ ಮರಳು ಪಡೆಯಬೇಕೆಂದರೆ ಹರಸಾಹಸ ಪಡೆಯಲೇಬೇಕು. ಹಾಗಂತ ಕೊಪ್ಪಳ ಜಿಲ್ಲೆಯಲ್ಲಿ ಮರಳು ಸಿಗುವುದಿಲ್ಲ ಅಂತಾ ತಿಳಿಯಬೇಡಿ. ಈ ಜಿಲ್ಲೆಯ ಜನರ ಅವಶ್ಯಕತೆ ಇರುವಷ್ಟು ಮರಳು ಸಿಗುತ್ತೆ. ಆದರೆ ಇಂತಹ ಕಿಂಗ್ ಪಿನ್​ಗಳಿಂದ ಹೊರಗಿನ ಜಿಲ್ಲೆಗೆ ಮರಳು ಸಾಗಾಟ ಆಗಿ ಲಕ್ಷಾಂತರ ಹಣ ಲೂಟಿ ಮಾಡ್ತಾ ಇದ್ದಾರೆ.29 ಮರಳು ಕೇಂದ್ರಗಳು ತೆರೆಯಲು ನಿರ್ಧಾರ

ಸದ್ಯ ನದಿಪಾತ್ರದ ಭಾಗಗಳ ಒಟ್ಟು 13 ಮರಳು ಕೇಂದ್ರಗಳನ್ನು ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿಗಳಿಗೆ ಗುತ್ತಿಗೆ ಕೊಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನೂ 1, 2 ಹಾಗೂ 3 ಶ್ರೇಣಿಯ ಹಳ್ಳ-ಕೊಳ್ಳಗಳಿಂದ 16 ಮರಳು ಕೇಂದ್ರಗಳನ್ನು ತೆರೆಯಲು ಗ್ರಾಮ ಪಂಚಾಯತ್ ಗೆ ವಹಿಸಲು ಈಗಾಗಲೇ ನಿರ್ಧಾರ ಮಾಡಲಾಗಿದೆ. ಇದರಿಂದ ಅನಧಿಕೃತ ಮರಳು ಸಾಗಾಟಕ್ಕೆ ಕಡಿವಾಣ ಹಾಕಬಹುದು ಅಂತಾರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು.

ಇದನ್ನು ಓದಿ: Quad Summit 2021: ವಸುದೈವ ಕುಟುಂಬಂ ಎಂಬ ತತ್ವದಂತೆ ನಾವು ಮತ್ತಷ್ಟು ಆಪ್ತವಾಗಿ ಕಾರ್ಯನಿರ್ವಹಿಸೋಣ: ಪ್ರಧಾನಿ ಮೋದಿ

ಅನಧಿಕೃತ ಮರಳು ಸಾಗಾಟದ ಬಗ್ಗೆ ಗಮನಕ್ಕೆ ಬಂದಿದೆ. ಈ ಹಿಂದೆ ಮೂರು ಟ್ರ್ಯಾಕ್ಟರ್​ಗಳನ್ನು ಹಿಡಿದು ಕೇಸ್ ಮಾಡಲಾಗಿದೆ. ಸದ್ಯ ಕಾರಟಗಿ ತಾಲೂಕು ಸ್ಯಾಂಡ್ ಮಾನಿಟರಿಂಗ್ ತಂಡಕ್ಕೆ ಕ್ರಮ ತೆಗೆದುಕೊಳ್ಳಲು ಸೂಚಿಸುತ್ತೇನೆ ಎಂದು ಜಿಲ್ಲೆಯ ಗಣಿ ಮತ್ತು  ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮುತ್ತಪ್ಪ ಅವರು ಹೇಳಿದ್ದಾರೆ.
Youtube Video

ಒಟ್ಟಿನಲ್ಲಿ ಕೆಲವೊಂದಿಷ್ಟು ಅಧಿಕಾರಿಗಳ ಹಣದಾಹಕ್ಕೆ ತುಂಗಭದ್ರೆಯ ಒಡಲು ಬರಿದಾಗುತ್ತಿರುವುದು ದುರಂತವೇ ಸರಿ. ಈಗಲಾದರೂ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಅಕ್ರಮ ತಡೆದು ಇದರಲ್ಲಿ ತಮ್ಮ ಪಾತ್ರ ಇಲ್ಲ ಎನ್ನುವುದನ್ನು ತೋರಿಸಬೇಕಾಗಿದೆ.

  • ವಿಶೇಷ ವರದಿ: ಬಸವರಾಜ ಕರುಗಲ್

Published by: HR Ramesh
First published: March 13, 2021, 6:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories