ಯಾದಗಿರಿ: ಹಾಡಹಗಲೇ ಯಾದಗಿರಿಯಲ್ಲಿ ಮರಳು ಮಾಫಿಯಾ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಯಾದಗಿರಿ ಜಿಲ್ಲಾದ್ಯಂತ ಅಕ್ರಮ ಮರಳು ಸಾಗಣೆ ಮಾಡಲಾಗುತ್ತಿದೆ. ಹಳ್ಳಕೊಳ್ಳ ಹಾಗೂ ಭೀಮಾ ,ಕೃಷ್ಣಾ ನದಿಯಲ್ಲಿ ಕೂಡ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಸಮೀಪ ಹಾಗೂ ನಗರಸಭೆ ಕಚೇರಿ ಸಮೀಪದ ಹಳ್ಳದಲ್ಲಿಯೇ ಹಾಡಹಗಲೇ ಮರಳು ಲೂಟಿ ಮಾಡಲಾಗುತ್ತಿದೆ. ಅಕ್ರಮ ಮರಳು ಲೂಟಿ ಮಾಡುತ್ತಿದ್ದರು ಅಧಿಕಾರಿಗಳು ಮಾತ್ರ ಮೌನವಹಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು ಕಡೆ ಮಾತ್ರ ಮರಳು ಗಣಿಗಾರಿಕೆ ಮಾಡಿ ಸಾಗಾಣಿಕೆ ಮಾಡಲು ಅನುಮತಿ ನೀಡಲಾಗಿದೆ. ಆದರೆ,ಅಕ್ರಮ ದಂಧೆಕೊರರು ಜೆಸಿಬಿ ಮೂಲಕ ಅಗೆದು ಮರಳು ಕೊಳ್ಳೆ ಹೊಡೆಯುತ್ತಿದ್ದಾರೆ.
ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮ ಸೇರಿ ಕೆಲ ಕೃಷ್ಣಾ ನದಿಯಲ್ಲಿ ರಾತ್ರೋ ರಾತ್ರಿ ಜೆಸಿಬಿ ಮೂಲಕ ಕೃಷ್ಣಾ ನದಿ ಬಗೆದು ಮರಳು ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಕಂದಾಯ,ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲವಂತೆ ಹೀಗಾಗಿ ಹಲವಾರು ಅನುಮಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಮಾತನಾಡಿ, "ಯಾದಗಿರಿ ಜಿಲ್ಲೆಯಲ್ಲಿ ಅಕ್ರಮವಾಗಿ ಕೃಷ್ಣಾ,ಭೀಮಾ ನದಿ ಹಾಗೂ ಹಳ್ಳಕೊಳ್ಳದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ.ಟಿಪ್ಪರ್ ಮೂಲಕ ಯಾವುದೇ ಸುರಕ್ಷತಾ ನಿಯಮಗಳನ್ನು ಪಾಲಿಸಿದೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿದೆ.ಈ ಬಗ್ಗೆ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮಕೈಗೊಂಡು ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕಾಗಿದೆ" ಎಂದರು.
ನಗರಸಭೆ ಕಚೇರಿ ಹಿಂಭಾಗದ ಹಳ್ಳದಲ್ಲಿ ಹಾಡಹಗಲೇ ಜೆಸಿಬಿ ಬಗೆದು ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿದೆ .ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿರುವ ಪರಿಣಾಮ ಸುತ್ತಮುತ್ತಲಿನ ಮನೆಗಳ ನಿವಾಸಿಗಳಿಗೆ ಆತಂಕ ಎದುರಾಗಿದೆ.
ಇದನ್ನೂ ಓದಿ: Amit Shah: ಜೈಶ್ರೀರಾಮ್ ಘೋಷಣೆ ಕೂಗಲು ಮಮತಾ ಬ್ಯಾನರ್ಜಿಗೆ ಅವಮಾನ ಏಕೆ?; ಗೃಹ ಸಚಿವ ಅಮಿತ್ ಶಾ ಚಾಟಿ
ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅರೀಫ್ ಉಲ್ಲಾ ಮಾತನಾಡಿ, "ಮರಳು ಸಾಗಾಣಿಕೆ ಮಾಡಲು ಜಿಲ್ಲೆಯ ನಾಲ್ಕು ಪ್ರದೇಶದಲ್ಲಿ ಮಾತ್ರ ಅನುಮತಿ ನೀಡಲಾಗಿದೆ.ಒಂದು ವೇಳೆ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದರು ಕಂಡು ಬಂದರೇ ಕ್ರಮಕೈಗೊಳ್ಳಲಾಗುತ್ತದೆ" ಎಂದರು.ಅಕ್ರಮ ಮರಳು ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹಲವು ಪ್ರಮುಖ ಇಲಾಖೆ ಕಚೇರಿ ಮುಂಭಾಗದಿಂದ ನಿತ್ಯವೂ ಟಿಪ್ಪರ್, ಟ್ರಾಕ್ಟರ್ ಮೂಲಕ ಅಕ್ರಮ ವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ