ಮರಳು-ತಿರುಳು ಭಾಗ 1: ಕೊರೋನಾ ಕರಿನೆರಳಿನಲ್ಲಿ ಕಣ್ಮರೆಯಾಗಿದ್ದ ಮರಳಿನ ಅಕ್ರಮ ಬೆಳಕಿಗೆ

ಮರಳು ಇಂದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ದಂಧೆಯನ್ನು ಸಕ್ರಮವಾಗಿ ಮಾಡಿಕೊಂಡು ನಡೆಸಿದರೆ ತೊಂದರೆ ಇಲ್ಲ. ಆದರೆ ಅಕ್ರಮವಾಗಿ ಮರಳು ತುಂಬುವವರ ಸಂಖ್ಯೆಯೇ ಜಿಲ್ಲೆಯಲ್ಲಿ ಹೆಚ್ಚು. ಈ “ಮರಳು-ತಿರುಳು” ಸರಣಿ ವರದಿಯಲ್ಲಿ ಹಂತ-ಹಂತವಾಗಿ ಮರಳು ಅಕ್ರಮವನ್ನು ಬಯಲಿಗೆಳೆದು ಕರಾಳ ಮುಖವಾಡ ಕಳಚಲಿದೆ.

ಅಕ್ರಮ ಮರಳು ಗಣಿಗಾರಿಕೆ

ಅಕ್ರಮ ಮರಳು ಗಣಿಗಾರಿಕೆ

  • Share this:
ಕೊಪ್ಪಳ: ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಇದೆ. ಅಂದರೆ ಇವರೆಡರಷ್ಟು ಕಷ್ಟದ ಕೆಲಸ ಬೇರೆ ಯಾವುದೂ ಇಲ್ಲ ಎಂಬರ್ಥದಲ್ಲಿ ಗಾದೆ ಹುಟ್ಟಿಕೊಂಡಿದೆ. ಈಗ ಮದುವೆಯನ್ನೇನೋ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮಾಡಿ ಮುಗಿಸಿಬಿಡಬಹುದು. ಆದರೆ ಮನೆ ಕಟ್ಟುವುದಿದೆಯಲ್ಲ, ಅದರಲ್ಲೂ ಮನೆ ಕಟ್ಟಲು ಮರಳು ಹೊಂದಿಸುವುದಿದೆಯಲ್ಲ ಅಸಾಮಾನ್ಯ ಕೆಲಸ ಎಂಬ ಹಂತಕ್ಕೆ ಬಂದು ನಿಂತಿದೆ. I “ಮರಳು-ತಿರುಳು” ಸರಣಿ ವರದಿಯಲ್ಲಿ ಹಂತ-ಹಂತವಾಗಿ ಮರಳು ಅಕ್ರಮವನ್ನು ಬಯಲಿಗೆಳೆದು ಕರಾಳ ಮುಖವಾಡ ಕಳಚಲಿದೆ. ಜನಸಾಮಾನ್ಯರಿಗೆ ಸುಲಭವಾಗಿ ಮರಳು ಸಿಗಬೇಕೆನ್ನುವ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರುತ್ತೆ ಎನ್ನುವ ಆಶಾವಾದದೊಂದಿಗೆ...

ಜಿಲ್ಲೆಯಲ್ಲಿ ಎಷ್ಟಿವೆ ಗಣಿ ಗುತ್ತಿಗೆಗಳು?:

ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ಭಾಗದ ಕೆಲ ಪ್ರದೇಶ ಹೊರತುಪಡಿಸಿದರೆ ಉಳಿದೆಲ್ಲ ಬಯಲು ಸೀಮೆ. ತುಂಗಭದ್ರಾ ಜಲಾಶಯದ ಹರಿವು ಇರುವೆಡೆ ನೀರಾವರಿ. ಜಲಾಶಯ ಹರಿವಿನಲ್ಲಿ ನದಿ, ಕಾಲುವೆಗಳು ಬರುತ್ತವೆ. ಇನ್ನುಳಿದೆಡೆ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳು ಜಿಲ್ಲೆಯಲ್ಲಿ ಕಮ್ಮಿಯಿಲ್ಲ. ನೀರಿನ ಜೊತೆಗೆ ಹರಿದುಬರುವ ಮರಳಿಗೆ ಭಾರಿ ಬೇಡಿಕೆ ಇಂದು-ನಿನ್ನೆಯದಲ್ಲ. ಕೊಪ್ಪಳ ಜಿಲ್ಲೆ ಈಗೀಗ ಒಂರ್ಥದಲ್ಲಿ ಮರಳಿನ ನಿಕ್ಷೇಪ, ಮರಳಿನ ನಿಧಿ ಎನಿಸಿಕೊಂಡಿದೆ. ಏಕೆಂದರೆ ಇಲ್ಲಿನ ಮರಳಿಗೆ ಸೀಮಾಂಧ್ರ, ಆಂದ್ರಪ್ರದೇಶ, ಮಹಾರಾಷ್ಟ್ರದಲ್ಲೂ ಬೇಡಿಕೆ ಇದೆ, ಮಾತ್ರವಲ್ಲ, ಪೂರೈಕೆಯಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಎಕ್ಕಾ, ರಾಜಾ, ರಾಣಿ ನನ್ನ ಕೈಯೊಳಗೆ; ಕೊಪ್ಪಳದಲ್ಲಿ ‘ಫಂಡ್’ ಅಡ್ಡೆಗೆ ಪೊಲೀಸ್ ರೇಡ್

ಸುಮಾರು ಮೂರ್ನಾಲ್ಕು ದಶಕಗಳ ಹಿಂದೆ ಮನೆ ಕಟ್ಟಲು ಬೇಕಾಗುವ ಮರಳಿಗೆ ಇಷ್ಟೆಲ್ಲ ಸರ್ಕಸ್ ಬೇಕಿರಲಿಲ್ಲ. ಟ್ರ್ಯಾಕ್ಟರ್ ಮಾಲಕರಿಗೆ ನೂರೊ-ಇನ್ನೂರೋ ಕೊಟ್ಟಿದ್ದರೆ ಹಳ್ಳಕ್ಕೆ ಹೋಗಿ, ಮರಳು ತುಂಬಿಕೊಂಡು ತಂದು ಹಾಕುತ್ತಿದ್ದರು. ಇದಕ್ಕೆ ಯಾವ ಪರವಾನಗಿಯೂ ಬೇಕಿದ್ದಿಲ್ಲ. ರಾಜಧನವೂ ಇಷ್ಟು ಪ್ರಮಾಣದಲ್ಲಿ ಇರುತ್ತಿರಲಿಲ್ಲ. ಆದರೆ ಜಿಲ್ಲೆಯಲ್ಲೀಗ ಮರಳಿಗೆ ಚಿನ್ನದ ಬೆಲೆ ಬಂದಿದೆ. ಹಾಗಾಗಿ ಮರಳು ಇಂದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ದಂಧೆಯನ್ನು ಸಕ್ರಮವಾಗಿ ಮಾಡಿಕೊಂಡು ನಡೆಸಿದರೆ ತೊಂದರೆ ಇಲ್ಲ. ಆದರೆ ಅಕ್ರಮವಾಗಿ ಮರಳು ತುಂಬುವವರ ಸಂಖ್ಯೆಯೇ ಜಿಲ್ಲೆಯಲ್ಲಿ ಹೆಚ್ಚು.

ಕೊಪ್ಪಳ ಜಿಲ್ಲೆಯ ಪಟ್ಟಾ ಜಮೀನಿನಲ್ಲಿ 5 ಮರಳು ಗಣಿ ಗುತ್ತಿಗೆಗಳನ್ನು ಮಾತ್ರ ಮಂಜೂರು ಮಾಡಲಾಗಿದೆ. ಯಲಬುರ್ಗಾ ತಾಲೂಕಿನ ಬಳಗೇರಿಯ ಶಮಂತ್ ಬಿ.ಎಂ. ಎನ್ನುವ ಗುತ್ತಿಗೆದಾರರಿಗೆ (ಗುತ್ತಿಗೆ ಸಂಖ್ಯೆ-KPLNS-01) ಅಲ್ಲಿನ ಸರ್ವೇ ನಂಬರ್ 220/1 ರಿಂದ 220/8ರವರೆಗಿನ ಜಮೀನಿನಲ್ಲಿ (9-20 ವಿಸ್ತೀರ್ಣ ಮಾತ್ರ) ಸಾದಾ ಮರಳು ತೆಗೆಯಲು 2019ರ ಜುಲೈ 17ರಿಂದ 5 ವರ್ಷದವರೆಗೆ ಗುತ್ತಿಗೆ ನೀಡಲಾಗಿದೆ.

ಇದನ್ನೂ ಓದಿ: ಶಿಖಾ ಶೇಖ್ ಪ್ರಕರಣದ ತನಿಖಾ ವರದಿ

ಯಲಬುರ್ಗಾ ತಾಲೂಕಿನ ಅದೇ ಬಳಗೇರಿ ಗ್ರಾಮದ ಸರ್ವೇ ನಂಬರ್ 221/1 ಮತ್ತು 221/2ರ ಜಮೀನಿನಲ್ಲಿ(6-33 ವಿಸ್ತೀರ್ಣ ಮಾತ್ರ) ಶಶಿಕಾಂತ್ ಎಂ.ಪಾಟೀಲ (ಗುತ್ತಿಗೆ ಸಂಖ್ತೆ-KPLNS-02) ಎನ್ನುವ ಗುತ್ತಿಗೆದಾರರಿಗೆ ಸಾದಾ ಮರಳು ತೆಗೆಯಲು 2019ರ ಆಗಸ್ಟ್ 22ರಿಂದ 5ವರ್ಷದವರೆಗೆ ಮರಳು ಗಣಿ ಗುತ್ತಿಗೆ ನೀಡಲಾಗಿದೆ.

ಯಲಬುರ್ಗಾ ತಾಲೂಕಿನ ಗಂಗನಾಳದಲ್ಲಿ ಶರಣಬಸಪ್ಪ ಚನ್ನಶೆಟ್ಟಿ (ಗುತ್ತಿಗೆ ಸಂಖ್ಯೆ-KPLNS-04) ಎಂಬ ಗುತ್ತಿಗೆದಾರರಿಗೆ ಸರ್ವೇ ನಂಬರ್ 1/1/1ರಲ್ಲಿ(5-26 ವಿಸ್ತೀರ್ಣ ಮಾತ್ರ)  ಸಾದಾ ಮರಳು ತೆಗೆಯಲು 2019ರ ನವೆಂಬರ್ 20ರಿಂದ 5 ವರ್ಷದವರೆಗೆ ಮರಳು ಗಣಿ ಗುತ್ತಿಗೆ ನೀಡಲಾಗಿದೆ.

ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದಲ್ಲಿ ಮೆ.ಅಮೃತೇಶ್ವರ ಎಂಟರ್ಪ್ರೈಸಸ್ ಎಂಬ ಗುತ್ತಿಗೆದಾರರಿಗೆ (ಗುತ್ತಿಗೆ ಸಂಖ್ಯೆ KPLNS-05) ಗ್ರಾಮದ ಸರ್ವೇ ನಂಬರ್ 110/1, 110/2 ಹಾಗೂ 110/3 (5-30 ವಿಸ್ತೀರ್ಣ ಮಾತ್ರ)ರಲ್ಲಿ ಸಾದಾ ಮರಳು ತೆಗೆಯಲು 2020ರ ಮಾರ್ಚ್ 10ರಿಂದ 5 ವರ್ಷದವರೆಗೆ ಮರಳು ಗಣಿ ಗುತ್ತಿಗೆ ನೀಡಲಾಗಿದೆ.

ಹಾಗೆಯೇ ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದ ಸರ್ವೇ ನಂಬರ್ 61/2ರಲ್ಲಿ (7-01 ವಿಸ್ತೀರ್ಣ ಮಾತ್ರ) ಸಾದಾ ಮರಳು ತೆಗೆಯಲು 2019ರ ನವೆಂಬರ್ 14ರಿಂದ 5 ವರ್ಷದವರೆಗೆ ಸಾದಾ ಮರಳು ತೆಗೆಯಲು ಆಶೀಶ್ ಭಗವಾನ್ ತೋಶ್ನಿವಾಲ (ಗುತ್ತಿಗೆ ಸಂಖ್ಯೆ-KPLNS-03) ಎನ್ನುವ ಗುತ್ತಿಗೆದಾರರಿಗೆ ಮರಳು ಗಣಿ ಗುತ್ತಿಗೆ ನೀಡಲಾಗಿದೆ.

ಇವಿಷ್ಟು ಕೊಪ್ಪಳ ಜಿಲ್ಲೆಯಲ್ಲಿ ಅಧಿಕೃತವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡು ಮರಳು ತೆಗೆಯಲು ಪರವಾನಗಿ ಪಡೆದಿರುವ ಗುತ್ತಿಗೆ ಕಂಪನಿಗಳು ಮತ್ತು ಗುತ್ತಿಗೆದಾರರು. ನದಿ ವ್ಯಾಪ್ತಿಯ ಹಳ್ಳ ಮತ್ತು ನದೀ ಪಾತ್ರದ ಮರಳು ತೆಗೆಯಲು ಪರವಾನಗಿ ಪಡೆದಿರುವ ಕಂಪನಿಗಳ ವಿವರದ ಜೊತೆಗೆ ಮತ್ತಷ್ಟು ರೋಚಕ ವಿಷಯಗಳ ಅನಾವರಣ ಮುಂದಿನ ಭಾಗದಲ್ಲಿ.

ತನಿಖಾ ವರದಿ: ಬಸವರಾಜ ಕರುಗಲ್
Published by:Vijayasarthy SN
First published: