ಚಾಮರಾಜನಗರದಲ್ಲಿ ಅಕ್ರಮ ಕ್ರಷರ್, ಟಾರ್ ಮಿಕ್ಸಿಂಗ್ ಘಟಕ ಜಪ್ತಿ

ಹನೂರು ತಾಲ್ಲೂಕಿನ ಚಂದಗಾರನಹಳ್ಳಿ ಗ್ರಾಮದ ಸರ್ವೆ ನಂ. 148 ರಲ್ಲಿ ನಿರ್ಮಾಣ ಮಾಡಿರುವ ಕ್ರಷರ್ ಘಟಕ ಪರಿಶೀಲಿಸಿದಾಗ ಯಾವುದೇ ಅನುಮತಿ ಪಡೆಯದೇ ಕ್ರಷರ್ ಘಟಕ ಸ್ಥಾಪಿಸಿದ್ದು, ಕ್ರಷರ್ ಘಟಕದ ಪಕ್ಕದಲ್ಲಿ ಸುಮಾರು 800 ಮೆಟ್ರಿಕ್ ಟನ್‍ನಷ್ಟು ಕಟ್ಟಡ ಕಲ್ಲು ದಾಸ್ತಾನಿರಿಸಿದ್ದು ಪತ್ತೆಯಾಗಿದೆ.

ಅಕ್ರಮ ಕ್ರಷರ್​ಗಳನ್ನು ಜಪ್ತಿ ಮಾಡಿದ ಅಧಿಕಾರಿಗಳು.

ಅಕ್ರಮ ಕ್ರಷರ್​ಗಳನ್ನು ಜಪ್ತಿ ಮಾಡಿದ ಅಧಿಕಾರಿಗಳು.

  • Share this:
ಚಾಮರಾಜನಗರ (ಜನವರಿ 30); ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಲ್ಲುಗಣಿ ಗುತ್ತಿಗೆ ಮಂಜೂರಾದ ಪ್ರದೇಶಗಳಿಗೆ ವ್ಯಾಪಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹನೂರು ತಾಲೂಕು ವ್ಯಾಪ್ತಿಯಲ್ಲಿ ಅನುಮತಿ ಪಡೆಯದ ಕ್ರಷರ್ ಘಟಕ ಹಾಗೂ ಟಾರ್ ಮಿಕ್ಸಿಂಗ್ ಘಟಕವನ್ನು ಜಪ್ತಿ ಮಾಡಿ ಸೀಲ್ ಮಾಡಿದ್ದಾರೆ. ಅನಧಿಕೃತವಾಗಿ ಕಟ್ಟಡ ಕಲ್ಲು ಸಾಗಿಸುತ್ತಿದ್ದ ಎರಡು ಲಾರಿಗಳನ್ನೂ ಸಹ ವಶಕ್ಕೆ ಪಡೆದಿದ್ದಾರೆ.  ಅಕ್ರಮ ಗಣಿಗಾರಿಕೆ, ಸಾಗಾಣಿಕೆ ತಡೆಗಟ್ಟಲು ಮತ್ತು ಗಣಿಗಾರಿಕೆಯಲ್ಲಿ ಸ್ಫೋಟಕ ಬಳಕೆಗೆ ಸುರಕ್ಷತಾ ಕ್ರಮಗಳನ್ನು ಗುತ್ತಿಗೆದಾರರು ಅಳವಡಿಸಿಕೊಂಡಿರುವ ಬಗ್ಗೆ ಪರಿಶೀಲಿಸಿಲು ಜಿಲ್ಲೆಯಾದ್ಯಾಂತ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಕಲ್ಲುಗಣಿ ಗುತ್ತಿಗೆ ಮಂಜೂರಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ತೀವ್ರಗೊಳಿಸಿದ್ದಾರೆ.

ಹನೂರು ತಾಲ್ಲೂಕಿನ ಚಂದಗಾರನಹಳ್ಳಿ ಗ್ರಾಮದ ಸರ್ವೆ ನಂ. 148 ರಲ್ಲಿ ನಿರ್ಮಾಣ ಮಾಡಿರುವ ಕ್ರಷರ್ ಘಟಕ ಪರಿಶೀಲಿಸಿದಾಗ ಯಾವುದೇ ಅನುಮತಿ ಪಡೆಯದೇ ಕ್ರಷರ್ ಘಟಕ ಸ್ಥಾಪಿಸಿದ್ದು, ಕ್ರಷರ್ ಘಟಕದ ಪಕ್ಕದಲ್ಲಿ ಸುಮಾರು 800 ಮೆಟ್ರಿಕ್ ಟನ್‍ನಷ್ಟು ಕಟ್ಟಡ ಕಲ್ಲು ದಾಸ್ತಾನಿರಿಸಿದ್ದು ಪತ್ತೆಯಾಗಿದೆ.  ಈ ಕ್ರಷರ್ ನ್ನು ಜಪ್ತಿ ಪಡಿಸಿ ಸೀಲ್ ಮಾಡಲಾಗಿದೆ. ಸಂಬಂದಿಸಿದ ಪಟ್ಟಾದಾರರಿಗೆ ನೋಟೀಸ್ ಜಾರಿಗೊಳಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮಮ್ಮ  ತಿಳಿಸಿದ್ದಾರೆ.

ಇದಲ್ಲದೆ  ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರೊಡನೆ ಬೈರನತ್ತ ಗ್ರಾಮದ ಸ.ನಂ.90 ರಲ್ಲಿ ಈ ಹಿಂದೆ ಕ್ರಷರ್ ಘಟಕ ಸ್ಥಾಪಿಸಿದ್ದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿ ಟಾರ್  ಮಿಕ್ಸಿಂಗ್ ಪ್ಲಾಂಟ್ ಇದ್ದು ಇಲ್ಲಿ 150 ಟನ್ ಜಲ್ಲಿ ಚಿಪ್ಸ್  ದಾಸ್ತಾನು ಮಾಡಲಾಗಿದ್ದು, ಟಾರ್ ಮಿಕ್ಸಿಂಗ್‍ಗೆ ಬಳಸುತ್ತಿರುವುದು ಪರಿಶೀಲನೆ ವೇಳೆ ಕಂಡು ಬಂದಿದ್ದು ಈ  ಟಾರ್ ಮಿಕ್ಸಿಂಗ್ ಘಟಕವನ್ನು ಸೀಲ್ ಮಾಡಲಾಗಿದೆ.

ಈ ಡಾಂಬರ್ ಮಿಕ್ಸಿಂಗ್ ಪ್ಲಾಂಟ್‍ ವಾರಸುದಾರರು ಹಾಗು  ಜಮೀನಿನ ಮಾಲೀಕರನ್ನು‌ ಪತ್ತೆ ಹಚ್ಚಿ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ 1994 ರನ್ವಯ ತಪ್ಪಿತಸ್ಥರ ವಿರುದ್ದ ಕ್ರಮ ವಹಿಸಲಾಗುವುದೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮಮ್ಮ ತಿಳಿಸಿದ್ದಾರೆ.  ಇದಲ್ಲದೆ ಚಾಮರಾಜನಗರ-ಗುಂಡ್ಲುಪೇಟೆ ಮುಖ್ಯ ರಸ್ತೆ ಬಳಿ ಅನಧಿಕೃತವಾಗಿ ಕಟ್ಟಡ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಎರಡು ಲಾರಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಪೊಲೀಸ್ ಸುಪರ್ದಿಗೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ಯಾವ ಸೀಮೆ ಲೀಡರ್​? ಜೆಡಿಎಸ್​ ಪಕ್ಷ ಸತ್ತು ತುಂಬಾ ದಿನಗಳಾಗಿವೆ; ಜಮೀರ್​ ಅಹಮದ್ ವಾಗ್ದಾಳಿ

ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್ಲಾ ಕಲ್ಲುಗಣಿ ಗುತ್ತಿಗೆದಾರರು ಹಾಗೂ ಕ್ರಷರ್ ಮಾಲೀಕರ  ಸಭೆ ನಡೆಸಿ ಗಣಿಗಾರಿಕೆ, ಸಾಗಾಣಿಕೆ ಹಾಗೂ ಸ್ಪೋಟಕ ಬಳಕೆ ಸಂಬಂಧಿಸಿದಂತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ನಿರ್ದೇಶನ ನೀಡಿಲಾಗಿದೆ ಸ್ಪೋಟಕ ಬಳಕೆಯಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಸುರಕ್ಷತೆಯನ್ನು ಕಾಪಾಡಲು ಹಾಗೂ ಅನುಮತಿ ಪಡೆದಿರುವವರು ಮಾತ್ರ ಸ್ಪೋಟಕ ಬಳಸಲು ಸೂಚಿಸಲಾಗಿದೆ. ಅನಧಿಕೃತ ಸ್ಪೋಟಕ ಸಾಗಾಣಿಕೆ ದಾಸ್ತಾನು ಬಳಕೆ ಸಂಬಂಧ ಉಲ್ಲಂಘನೆಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಎಲ್ಲಾ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ 25 ಕ್ರಷರ್ ಘಟಕಗಳಿಗೆ ಬೇಟಿ ನೀಡಿ ಪರಿಶೀಲಿಸಲಾಗಿದೆ. ಈ ವೇಳೆ ಪರವಾನಗಿ ಪಡೆದು ಉಪ ಖನಿಜ ಸಾಗಾಣಿಕೆ ಮಾಡಬೇಕು ಅನಧಿಕೃತವಾಗಿ ಸಾಗಾಣಿಕೆ ಮಾಡಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ‌ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Published by:MAshok Kumar
First published: