news18-kannada Updated:March 3, 2021, 1:57 PM IST
ಸಾಂದರ್ಭಿಕ ಚಿತ್ರ.
ಆನೇಕಲ್: ಇತ್ತೀಚೆಗೆ ಎಲ್ಲಿ ನೋಡಿದ್ರು ಸ್ಪೋಟಕ ವಸ್ತುಗಳದ್ದೇ ಸದ್ದು. ತಿಂಗಳ ಹಿಂದೆ ಶಿವಮೊಗ್ಗದ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಸ್ಪೋಟಗೊಂಡು ಅಪಾರ ಸಾವು ನೋವು ಸಂಭವಿಸಿತ್ತು. ಅದರ ಕಹಿ ನೆನಪು ಮಾಸುವ ಮುನ್ನವೇ ವಾರದ ಹಿಂದೆ ಗುಡಿಬಂಡೆ ಬಳಿಯ ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ನಂತಹ ಸ್ಪೋಟಕಗಳು ಸಿಡಿದು ಮತ್ತೊಮ್ಮೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಎರಡು ಘಟನೆಗಳು ರಾಜ್ಯದ ಜನರನ್ನು ಬೆಚ್ಚಿ ಬಿಳಿಸುವಂತೆ ಮಾಡಿದ್ದು ಸುಳ್ಳಲ್ಲ. ಎರಡು ಘಟನೆಗಳಿಂದ ಎಚ್ಚೆತ್ತ ರಾಜ್ಯ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು, ಸ್ಪೋಟಕ ವಸ್ತುಗಳ ಸಾಗಣೆ ಮತ್ತು ಸಂಗ್ರಹಣೆ ಬಗ್ಗೆ ಹದ್ದಿನ ಕಣ್ಣಿಟ್ಟಿತ್ತು. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸರು ಸಹ ತಮ್ಮ ಸರಹದ್ದಿನಲ್ಲಿ ಸ್ಪೋಟಕ ವಸ್ತುಗಳು ಸಾಗಾಣೆ ಮತ್ತು ಸಂಗ್ರಹಣೆ ಬಗ್ಗೆ ನಿಗಾ ವಹಿಸಿದ್ದು, ನಿನ್ನೆ ಸಂಜೆ ಖಚಿತ ಮಾಹಿತಿ ಮೇರೆಗೆ ಸ್ಪೋಟಕ ವಸ್ತುಗಳನ್ನು ಅಕ್ರಮವಾಗಿ ಶೇಖರಣೆ ಮಾಡಿಟ್ಟಿದ್ದ ಮಹಾಂತಲಿಂಗಾಪುರ ಸಮೀಪದ ಬಲಾರ್ ಬಂಡೆ ಬಳಿಯ ಮನೆಯೊಂದರ ಮೇಲೆ ಜಿಗಣಿ ಪೋಲಿಸರ ದಾಳಿ ನಡೆಸಿದ್ದು ಅಪಾರ ಪ್ರಮಾಣದ , ಸ್ಪೋಟಕ ವಸ್ತುಗಳು ಸೇರಿದಂತೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ತಮಿಳುನಾಡಿನ ತಾರಮಂಗಲಂ ಗ್ರಾಮದ ವಾಸಿ ವೆಂಕಟೇಶ್ ಬಂಧಿತ ಆರೋಪಿ. ಬಂಧಿತ ಆರೋಪಿ ವೆಂಕಟೇಶ್ ನಿಂದ 82 ಬಂಡಲ್ ಸೇಫ್ಟಿ ಪ್ಯೂಸ್ , 440 ತೋಟ (Emotional explosive) , ಸುಪ್ರೀ ಕಂಪನಿಯ 700 ಪ್ಲೈನ್ ಡಿಟೋನೆಟರ್ , 160 ಎಸ್ಓಡಿ( Special ordinary detonater , 20 ಕೆ.ಜಿ ಅಮೋನಿಯಂ ನೈಟ್ರೇಟ್ ಮತ್ತು 10 ಕೆ.ಜಿ ಗನ್ ಪೌಡರ್ ವಶಕ್ಕೆ ಪಡೆಯಲಾಗಿದೆ. ಸದ್ಯ ಪೊಲೀಸರು ವಶಪಡಿಸಿಕೊಂಡಿರುವ ಸ್ಪೋಟಕಗಳು ಇಲ್ಲಿಗೆ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Ramesh Jarkiholi: ರಾಸಲೀಲೆ ವಿಡಿಯೋ ಪ್ರಕರಣ; ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ
ಬಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ನಿನ್ನೆ ಸಂಜೆ ಜಿಗಣಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶೇಖರ್ ಮತ್ತು ತಂಡ ದಾಳಿ ನಡೆಸಿದಾಗ ಅಕ್ರಮವಾಗಿವಾಗಿ ಸಂಗ್ರಹಿಸಿಟ್ಟಿದ್ದ ಸ್ಪೋಟಕ ವಸ್ತುಗಳು ಪತ್ತೆಯಾಗಿದೆ. ಇನ್ನೂ ಆರೋಪಿ ವೆಂಕಟೇಶನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಜಿಗಣಿ ಪೊಲೀಸರು ವಿಚಾರಣೆ ನಡೆಸಿದ್ದು, ಬಂಡೆ ಹೊಡೆಯಲು ರಾಮನಗರದ ಬಿಡದಿ ಬಳಿಯಿಂದ ಕಳೆದ ಐದಾರು ತಿಂಗಳ ಹಿಂದೆ ಸ್ಪೋಟಕಗಳನ್ನು ತಂದಿರುವುದಾಗಿ ಪೊಲೀಸರ ಬಳಿ ತಿಳಿಸಿರುವುದಾಗಿ ತಿಳಿದು ಬಂದಿದೆ.
ಒಟ್ಟಿನಲ್ಲಿ ಪೊಲೀಸರ ನಿಗಾವಣೆಯಿಂದ ಅಕ್ರಮವಾಗಿ ಬಂಡೆ ಹೊಡೆಯಲು ಅವೈಜ್ಞಾನಿಕವಾಗಿ ಶೇಖರಣೆ ಮಾಡಿದ್ದ ಸ್ಪೋಟಕಗಳು ಪತ್ತೆಯಾಗಿದ್ದು, ಮುಂದೆ ಸಂಭವಿಸಬಹುದಾಗಿದ್ದ ದುರಂತ ತಪ್ಪಿದೆ. ಸದ್ಯ ಪೊಲೀಸರು ವಶಪಡಿಸಿಕೊಂಡಿರುವ ಸ್ಪೋಟಕಗಳನ್ನು ಸುರಕ್ಷತೆ ದೃಷ್ಟಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸುಪರ್ದಿಗೆ ವಹಿಸಲಾಗಿದ್ದು ಮುಂದಿನ ತನಿಖೆಗೆ ಪೂರಕ ಸಾಕ್ಷಿಯಾಗಿ ಬಳಕೆಯಾಗಲಿದೆ
(ವರದಿ : ಆದೂರು ಚಂದ್ರು)
Published by:
MAshok Kumar
First published:
March 3, 2021, 1:57 PM IST