ಆನೇಕಲ್ (ಏ.22) : ಸರ್ಕಾರ ಸಾರ್ವಜನಿಕರ ಬಳಕೆಗಾಗಿ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಿದೆ. ಆದರೆ ಸಾರ್ವಜನಿಕರ ರಸ್ತೆಗಳನ್ನು ಹಣ ಲೂಟಿ ಮಾಡಲು ಬಳಕೆ ಮಾಡಲಾಗುತ್ತಿದೆ. ರಸ್ತೆ ಸುರಕ್ಷತೆಯನ್ನು ಬದಿಗೊತ್ತಿ ವಾಹನ ಸವಾರರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಅನಧಿಕೃತ ಜಾಹೀರಾತು ಬೋರ್ಡ್ಗಳೇ ರಾರಾಜಿಸುತ್ತಿವೆ.
ವಾಹನ ಸವಾರರ ಉಪಯೋಗಕ್ಕಾಗಿ ಸರ್ಕಾರ ಎಲ್ಲೆಡೆ ದ್ವಿಪಥ ರಸ್ತೆಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ರಸ್ತೆ ಸುರಕ್ಷತೆ ನಿಯಮಗಳ ಅನ್ವಯ ರಸ್ತೆಗಳ ನಡುವೆ ಡಿವೈಡರ್ಗಳನ್ನು ನಿರ್ಮಿಸಿದ್ದಾರೆ. ಆದರೆ ರಸ್ತೆ ನಡುವಿನ ಡಿವೈಡರ್ಗಳ ಮೇಲೆ ಕೆಲವರು ಅನಧಿಕೃತವಾಗಿ ಹಾಗೂ ಅವೈಜ್ಞಾನಿಕವಾಗಿ ಜಾಹೀರಾತು ಬೋರ್ಡ್ಗಳನ್ನು ಅಳವಡಿಸಿ ಹಣ ಲೂಟಿ ಹೊಡೆಯುತ್ತಿದ್ದಾರೆ. ಈ ಜಾಹೀರಾತು ಬೋರ್ಡ್ಗಳಿಂದ ಮಧ್ಯವರ್ತಿಗಳು ಹಣ ಗಳಿಸುತ್ತಿದ್ದು, ಸರ್ಕಾರಕ್ಕೆ ಯಾವುದೇ ಆದಾಯ ಬರುತ್ತಿಲ್ಲ.
ಇದನ್ನು ಓದಿ: ಶಾನೇ ಟಾಪ್ ಆಗ್ವಳೆ ನಮ್ ಹುಡ್ಗಿ.. ಹೆಣ್ಣು ಮಗು ಹುಟ್ಟಿದ್ದಕ್ಕೆ ಹೆಲಿಕಾಪ್ಟರ್ನಲ್ಲಿ ವೆಲ್ಕಮ್..!
ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕಂಡು ಕಾಣದಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಅವೈಜ್ಞಾನಿಕವಾಗಿ ಹಾಕಿರುವ ಜಾಹೀರಾತು ಬೋರ್ಡ್ಗಳಿಂದ ರಸ್ತೆ ಅಪಘಾತಗಳು ಸಂಭವಿಸಿ ವಾಹನ ಸವಾರರು ಸಾವನ್ನಪ್ಪುತ್ತಿದ್ದಾರೆ. ಅಧಿಕಾರಿಗಳು ಅನಧಿಕೃತ ಬೋರ್ಡ್ಗಳನ್ನು ತೆರವುಗೊಳಿಸಬೇಕು. ಆ ಮೂಲಕ ವಾಹನ ಸವಾರರ ಸುರಕ್ಷತೆಗೆ ಒತ್ತು ನೀಡಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಜಿಗಣಿ ಶಂಕರ್ ಒತ್ತಾಯಿಸಿದ್ದಾರೆ.
ಇನ್ನು ರಸ್ತೆ ನಡುವಿನ ವಿಭಜಕಗಳ ಮೇಲೆ ಜಾಹೀರಾತು ಬೋರ್ಡ್ಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ. ಇಲ್ಲಿನ ರಸ್ತೆಗಳಲ್ಲಿ ಮಾತ್ರ ಯಾವುದೇ ಇಲಾಖೆಯಿಂದ ಅನುಮತಿ ಪಡೆಯದೇ ಜಾಹೀರಾತು ಬೋರ್ಡ್ಗಳನ್ನು ಅಳವಡಿಸಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ಸುಂಕವನ್ನು ಪಾವತಿಸಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಷೇಧವಿದ್ದರು ಇಲ್ಲಿ ರಾಜಾರೋಷವಾಗಿ ಹಗಲು ದರೋಡೆ ನಡೆಸಲಾಗುತ್ತಿದೆ. ಇನ್ನೂ ಸಂಪೂರ್ಣವಾಗಿ ನಿರ್ಮಾಣವಾಗದ ರಸ್ತೆಗಳ ಮಧ್ಯೆಯೂ ಜಾಹೀರಾತು ಬೋರ್ಡ್ಗಳು ತಲೆ ಎತ್ತಿರುವುದನ್ನು ಕಾಣಬಹುದಾಗಿದೆ. ಈ ಬಗ್ಗೆ ಸಾಕಷ್ಟು ಸಲ ಸ್ಥಳೀಯ ಪ್ರಾಧಿಕಾರಗಳಿಗೆ ದೂರು ನೀಡಿದರೂ ಯಾರು ಕ್ರಮಕೈಗೊಳ್ಳುತ್ತಿಲ್ಲ.
ಅವೈಜ್ಞಾನಿಕ ಜಾಹೀರಾತು ಬೋರ್ಡ್ಗಳಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಈ ಕೂಡಲೇ ಅನಧಿಕೃತ ಜಾಹಿರಾತು ಬೋರ್ಡ್ಗಳನ್ನು ತೆರವುಗೊಳಿಸಿ ಸಂಬಂಧಪಟ್ಟವರಿಗೆ ದಂಡ ವಿಧಿಸಬೇಕೆಂದು ಸಾಮಾಜಿಕ ಹೋರಾಟಗಾರ್ತಿ ದೀಪ ಒತ್ತಾಯಿಸಿದ್ದಾರೆ.
ವರದಿ: ಆದೂರು ಚಂದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ