ಬೆಂಗಳೂರು ಗ್ರಾಮಾಂತರ ಜಿಲ್ಲೆ: ಬೀಡಿ, ಸಿಗರೇಟು, ಗುಟ್ಕಾ, ಪಾನ್‌ಮಸಾಲಾ ಮುಂತಾದ ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಜಗಿದು, ಉಗಿಯುವಂತಿಲ್ಲ. ಆದರೂ ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖಾಧಿಕಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಖಡಕ್ಕಾಗಿ ಸೂಚಿಸಿದರು. ದೇವನಹಳ್ಳಿ ತಾಲ್ಲೂಕು ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತಂಬಾಕು ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಮೇಲೆ ದಿಢೀರ್ ಕಾರ್ಯಾಚರಣೆ ನಡೆಸಿ, ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ, ಪಾನ್‌ಮಸಾಲಾ ಜಗಿಯುವವರ ವಿರುದ್ಧ ಆರೋಗ್ಯ ಇಲಾಖೆಯವರು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ದಂಡ ವಿಧಿಸುವುದರೊಂದಿಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು. ಜನರನ್ನು ತಂಬಾಕು ಸೇವನೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಎಲ್ಲ ಶೈಕ್ಷಣಿಕ ಸಂಸ್ಥೆಗಳ ಆವರಣದಿಂದ 100 ಗಜ ಅಂತರದಲ್ಲಿ ಧೂಮಪಾನ ಮಾಡುವುದು, ತಂಬಾಕು ಉತ್ಪನ್ನಗಳನ್ನು ಅಂಗಡಿ ಮಳಿಗೆಗಳಲ್ಲಿ ಮಾರಾಟ ಮಾಡುವಂತಿಲ್ಲ ಎಂದರಲ್ಲದೆ, ಈ ಕುರಿತು ಶಾಲೆಗಳಲ್ಲಿ ಗೋಡೆ ಬರಹ ಬರೆಯುವಂತೆ ತಿಳಿಸಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕಿನ ವಿವಿಧ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಸಾಧಿಸಿ ಪೊಲೀಸ್ಲಿ ಇಲಾಖೆಯ ಸಹಕಾರದೊಂದಿಗೆ ಸಾರ್ವಜನಿಕವಾಗಿ ತಂಬಾಕು ಸೇವನೆ ಮಾಡುವವರ ವಿರುದ್ಧ ಹಾಗೂ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದೆ. ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ನೇತೃತ್ವದಲ್ಲಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರಲ್ಲದೆ, ಸಾರ್ವಜನಿಕ ಶಿಕ್ಷಣ ಇಲಾಖೆಯು ಸಹಕಾರ ನೀಡಬೇಕೆಂದು ತಿಳಿಸಿದರು.
ಇದನ್ನು ಓದಿ: ಕೆರಗೋಡು ಅಂಚೆಕಚೇರಿ ಅಧಿಕಾರಿಯ ಅಕ್ರಮ; ಮೃತ ಮಹಿಳೆಯ ಖಾತೆಯಿಂದ ಸಾವಿರಾರು ರೂ ಹಣ ವಿತ್ ಡ್ರಾ
ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿ ಡಾ.ವಿದ್ಯಾ ಮಾತನಾಡಿ, ತಂಬಾಕು ದುಷ್ಪರಿಣಾಮ ಕುರಿತು 100 ಶಾಲೆಗಳಿಗೆ ಭೇಟಿ ನೀಡಿ ಅರಿವು ಮೂಡಿಸುವ ಗುರಿಯನ್ನು ಹೊಂದಲಾಗಿದ್ದು, ಈವರೆಗೂ ಕೋವಿಡ್ ಕಾರಣದಿಂದ 13 ಶಾಲೆಗಳಿಗೆ ಮಾತ್ರ ಭೇಟಿ ನೀಡಿ ಅರಿವು ಮೂಡಿಸಲಾಗಿದೆ ಎಂದಾಗ, ಜಿಲ್ಲಾಧಿಕಾರಿ ಅವರು ನೆಪಗಳನ್ನು ಹೇಳದೆ ಫೆಬ್ರವರಿ ಮಾಸಾಂತ್ಯದೊಳಗೆ ನಿಗದಿತ ಗುರಿಗಳನ್ನು ತಲುಪಿ ಪ್ರಗತಿ ಸಾಧಿಸುವಂತೆ ಸೂಚಿಸಿದರು. ಜಿಲ್ಲಾ ಹಂತದಲ್ಲಿ ಅನಿರೀಕ್ಷಿತ ದಾಳಿ ನಡೆಸಿ 51 ಪ್ರಕರಣಗಳನ್ನು ದಾಖಲಿಸಲಾಗಿದ್ದು, 8750 ರೂ.ಗಳ ದಂಡ ಸಂಗ್ರಹಿಸಲಾಗಿದ್ದು, ಸ್ವತಃ ತಂಬಾಕು ತ್ಯಜಿಸಲು ಮುಂದಾಗುವವರಿಗೆ ದೊಡ್ಡಬಳ್ಳಾಪುರ ಆರೋಗ್ಯ ಕೇಂದ್ರದಲ್ಲಿ ಕೌನ್ಸೆಲಿಂಗ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಅಸಿಸ್ಟಂಟ್ ಸಬ್ ಇನ್ಸ್‌ಪೆಕ್ಟರ್ ತ್ಯಾಗರಾಜು ಅವರು ಮಾತನಾಡಿ, ಪೊಲೀಸ್ ಇಲಾಖೆಯಿಂದ ತಂಬಾಕು ಸೇವನೆ ನಿಯಂತ್ರಣದಡಿಯಲ್ಲಿ 2502 ಪ್ರಕರಣಗಳನ್ನು ದಾಖಲಿಸಲಾಗಿದ್ದು, 2,58,000 ರೂ.ಗಳ ದಂಡ ವಸೂಲಿ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ