ಮೈಸೂರು: ಕೊರೋನಾ ಪ್ರಕರಣಗಳ ಸಂಖ್ಯೆ ಮೈಸೂರಿನಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ, ನಂಜನಗೂಡು ಗೌತಮ ಪಂಚ ಮಹಾರಥೋತ್ಸವಕ್ಕೆ ಬ್ರೇಕ್ ಹಾಕಲಾಗಿದೆ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಈ ಸಂಬಂಧ ಲಿಖಿತ ಆದೇಶ ಹೊರಡಿಸಿದ್ದು, ಈ ಬಾರಿ ನಂಜನಗೂಡು ದೊಡ್ಡರಥೋತ್ಸವದಲ್ಲಿ ಕೇವಲ ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಮಾರ್ಚ್ 19 ರಿಂದ ಮಾರ್ಚ್ 30 ರವರೆಗೆ ಧಾರ್ಮಿಕ ಪೂಜೆ ಮಾಡಿ, ಸಾಂಪ್ರದಾಯಿಕವಾಗಿ ಚಿಕ್ಕ ತೇರು ನಡೆಸಲು ಅನುಮತಿ ನೀಡಲಾಗಿದೆ. ಷರತ್ತುಗೊಳಪಡಿಸಿ ಸಾಂಕೇತಿಕ ರಥೋತ್ಸವಕ್ಕೆ ಸಮ್ಮತಿ ನೀಡಿದ ಜಿಲ್ಲಾಡಳಿತ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಹಾಗೂ ಶಿಷ್ಟಾಚಾರದ ಪ್ರಕಾರ ಗಣ್ಯರು ಅಧಿಕಾರಿಗಳು, ಸ್ಥಳೀಯರಿಗೆ ಮಾತ್ರ ಅವಕಾಶ ನೀಡಿದೆ. ಹೊರ ರಾಜ್ಯ, ಹೊರ ಜಿಲ್ಲೆ ಹಾಗೂ ಹೊರ ತಾಲೂಕಿನ ಭಕ್ತಾದಿಗಳಿಗೆ ನಿರ್ಬಂಧ ಹೇರಿದೆ.
ಆದರೆ ಈ ನಿರ್ಬಂಧದ ವಿರುದ್ದ ಬೇಸರ ವ್ಯಕ್ತಪಡಿಸಿರುವ ಸ್ಥಳೀಯ ನಂಜನಗೂಡು ನಿವಾಸಿಗಳು, ಶ್ರೀಕಂಠನಿಗೆ ನಿರ್ಬಂಧ ಹೇರಿದರೆ ನಮ್ಮ ಕೆಲಸಗಳಿಗೂ ನಿರ್ಬಂಧ ಆಗಲಿದೆ. ನಂಜನಗೂಡು ರಥೋತ್ಸವ ನಡೆಯದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ, ರಥೋತ್ಸವಕ್ಕೆ ಅನುಮತಿ ಕೇಳಿದ ಸ್ಥಳೀಯ ನಿವಾಸಿಗಳು, ವಿಷಕಂಠ ವಿಷವನ್ನೇ ಕುಡಿದಿದ್ದಾನೆ. ಜಾತ್ರೆ ಮಾಡಿದರೆ ಕೋವಿಡ್ ಹರಡುತ್ತೆ ಅನ್ನೋದನ್ನು ನಾವು ಒಪ್ಪೋದಿಲ್ಲ. ಅಕ್ಕಪಕ್ಕದ ಎಲ್ಲ ಜಿಲ್ಲೆಗಳಲ್ಲಿ ಜಾತ್ರೆ, ಉತ್ಸವ ನಡೆಯುತ್ತಲೇ ಇದೆ. ಇಲ್ಲಿ ಮಾತ್ರ ರಥೋತ್ಸವ ಅನುಮತಿ ನಿರಾಕರಿಸಿದ್ದಾರೆ. ಸ್ಥಳೀಯರು ಕೋವಿಡ್ ನಿಯಮ ಪಾಲಿಸಿ ರಥೋತ್ಸವ ಮಾಡಲು ಅನುಮತಿ ನೀಡಬೇಕು. ಯಾವ ರಾಜ್ಯದಲ್ಲಿ ಉತ್ಸವ ಜಾತ್ರೆ ಆಗೋಲ್ಲವೋ ಅಲ್ಲಿ ಅಭಿವೃದ್ಧಿಯೂ ಆಗೋಲ್ಲ. ರಥೋತ್ಸವ ನಡೆಯದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಅಂತ ನಂಜನಗೂಡು ದೇವಾಲಯದ ಪುರೋಹಿತ ಕೃಷ್ಣಜೋಯಿಸ್ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: Maski By Election: ಮಸ್ಕಿ ಉಪಚುನಾವಣೆ ಬಿಜೆಪಿ ಪರ ಪ್ರಚಾರಕ್ಕೆ ಬಿಎಸ್ವೈ ಎಂಟ್ರಿ; ನಾಳೆ ಬೃಹತ್ ಸಮಾವೇಶ
ನಂಜನಗೂಡು ಪಂಚಮಹಾರಥೋತ್ಸವ ರದ್ದು ಮಾಡಿದ್ದಕ್ಕೆ, ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಏಕಾಂಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಹಾರ್ಡಿಂಗ್ ವೃತ್ತದಲ್ಲಿ ಚಾಪೆ ಹಾಸಿಕೊಂಡು ಉರುಳು ಸೇವೆ ಮಾಡಿದ ವಾಟಾಳ್, ಉರುಳುಸೇವೆ ಜೊತೆ ಧೂಪ, ಸಾಂಬ್ರಾಣಿ ಹಾಕಿ ಪ್ರತಿಭಟನೆ ಮಾಡುವ ಮೂಲಕ ಜಿಲ್ಲಾಡಳಿತದ ನಡೆಯನ್ನು ಪ್ರಶ್ನಿಸಿದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದವು ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ಜಿಲ್ಲಾಧಿಕಾರಿಗಳು ಆಂಧ್ರದವರು. ನಮ್ಮ ಸಂಸ್ಕೃತಿ ಗೊತ್ತಿಲ್ಲದ ಜಿಲ್ಲಾಧಿಕಾರಿಯಿಂದ ಹೀಗೆಲ್ಲ ಆಗ್ತಿದೆ. ಈ ಕೂಡಲೇ ನಂಜನಗೂಡು ರಥೋತ್ಸವಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ನಂಜನಗೂಡು ಪಂಚ ಮಹಾರಥೋತ್ಸವಕ್ಕೆ ಅನುಮತಿ ನೀಡುವ ವಿಚಾರವಾಗಿ ಪುನರ್ ಪರಿಶೀಲಿಸುವ ಭರವಸೆ ನೀಡಿದ ಸಚಿವ ಎಸ್ ಟಿ ಸೋಮಶೇಖರ್ ಆರೋಗ್ಯ ಸಚಿವ ಡಾ ಕೆ ಸುಧಾಕರ್ಗೆ ಮಾಹಿತಿ ನೀಡುತ್ತೇವೆ. ಪಂಚಲಿಂಗ ದರ್ಶನ, ಮುಡುಕುತೊರೆ ಜಾತ್ರೆಗಳನ್ನು ನಾವೇ ಮಾಡಿದ್ದೇವೆ. ಹಾಗೇ ಷರತ್ತುಬದ್ದ ಜಾತ್ರೆ ನಡೆಸಲು ಅವರೊಂದಿಗೆ ಮಾತನಾಡಿ ಅಂತಿಮ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ