ಕೊಡಗು: ಆಹಾರ ನನ್ನ ಹಕ್ಕು, ತಿನ್ನಬೇಕು ಎನಿಸಿದರೆ ಗೋಮಾಂಸವನ್ನು ನಾನು ತಿನ್ನುತ್ತೇನೆ ಎನ್ನುವ ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಎದುರಿಗೆ ತಿನ್ನಲಿ, ತಿಂದು ತೋರಿಸಲಿ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ ಚೌವ್ಹಾಣ್ ತಾಕೀತು ಮಾಡಿದ್ದಾರೆ. ತಿನ್ನುವುದಾದರೆ ಗೋಮಾಂಸ ಕೊಡಿಸೋಣ, ಆದರೆ ನನ್ನ ಎದುರಿಗೆ ತಿಂದು ತೋರಿಸಲಿ ಎಂದು ಚಾಲೆಂಜ್ ಮಾಡಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಜಾರಿಗೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಚೌವ್ಹಾಣ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
"ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದೇವೆ ಎನ್ನೋ ಕಾರಣಕ್ಕೆ ವಿರೋಧಿಸುತ್ತಾ ಹಾಗೆಲ್ಲಾ ಮಾತನಾಡುವುದು ಸಭ್ಯತನವಲ್ಲ. ಸಿದ್ದರಾಮಯ್ಯ ಅವರ ಮನೆಯಲ್ಲಿ ಗೋವುಗಳಿಲ್ಲವೆ, ಮೇಕೆ ಕುರಿಗಳಿಲ್ಲವೆ? ಇಚ್ಚೆಇದ್ದರೆ ನಾನೂ ಕೂಡ ಗೋಮಾಂಸ ತಿನ್ನುತ್ತೇನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಜನರನ್ನು ವಿನಾಕಾರಣ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. 2010 ರಲ್ಲೇ ನಮ್ಮ ಸಿಎಂ ಈ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದ್ದರು.
ಆದರೆ, ಸಿದ್ದರಾಮಯ್ಯ ಅವರು ಅದನ್ನು ಬಿಡಲಿಲ್ಲ. ಅವರ ಕೆಲಸವನ್ನು ಅವರು ಮಾಡಲಿ, ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ಯಾವುದೇ ಕಾರಣಕ್ಕೂ ಗೋವುಗಳನ್ನು ಕಸಾಯಿಕಾನೆಗಳಿಗೆ ಹೋಗಲು ಬಿಡುವುದಿಲ್ಲ" ಎಂದು ಸಚಿವ ಪ್ರಭು ಬಿ ಚೌವ್ಹಾಣ್ ಹೇಳಿದ್ದಾರೆ.
"ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಯಾರಿಂದಲೂ ವಿರೋಧವಿಲ್ಲ. ಆದರೆ ಜೆಡಿಎಸ್ ಮತ್ತು ಬಿಜೆಪಿಯವರು ರಾಜಕೀಯಕ್ಕಾಗಿ ವಿರೋಧಿಸುತ್ತಿದ್ದಾರೆ. ವಿರೋಧ ಮಾಡುವುದೇ ಅವರ ಕೆಲಸ, ವಿರೋಧಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಸಂಕ್ರಾಂತಿ ಮತ್ತು ದೀಪಾವಳಿಯಲ್ಲಿ ಗೋವುಗಳ ಪೂಜೆ ಮಾಡುವುದಿಲ್ಲವೇ" ಎಂದು ಪ್ರಭು ಚವ್ಹಾಣ್ ಪ್ರಶ್ನಿಸಿದರು.
ಇದನ್ನೂ ಓದಿ: Petrol Price: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ; ಕೇಂದ್ರ ಸರ್ಕಾರಕ್ಕೆ ಎಳ್ಳು ನೀರು ಅಭಿಯಾನ ಹಮ್ಮಿಕೊಂಡಿರುವ ಆಮ್ ಆದ್ಮಿ ಪಕ್ಷ!
"ನಮ್ಮ ಕಮಿಟ್ಮೆಂಟ್ ಇದೆ, ನಮ್ಮ ಅಜೆಂಡಾ ಇದೆ. ನಮ್ಮ ಸಿಎಂ, ಸಚಿವರು, ಶಾಸಕರು ಎಲ್ಲರೂ ಕಾಯ್ದೆ ಜಾರಿಗೆ ಸಂಪೂರ್ಣ ಬೆಂಬಲ ಇದೆ. ಈ ಕಾಯ್ದೆಯನ್ನು ನಾವು ಜಾರಿ ಮಾಡುತ್ತೇವೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಕಾಯ್ದೆ ಜಾರಿಯಾಗಿದ್ದು ಪದೇ ಪದೇ ಈ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಗರಿಷ್ಠ 10 ಲಕ್ಷ ದಂಡ ಮತ್ತು 7 ವರ್ಷ ಜೈಲುಶಿಕ್ಷೆ ವಿಧಿಸಲಾಗುವುದು. ಈ ಹಿಂದೆ ಕಾಯ್ದೆಯಲ್ಲಿ ಕೇವಲ ಸಾವಿರ ರೂಪಾಯಿ ದಂಡ, 6 ತಿಂಗಳು ಜೈಲುವಾಸವಿತ್ತು. ನಮ್ಮ ಸರ್ಕಾರ ಅದನ್ನು ತಿದ್ದುಪಡಿ ಮಾಡಿದ್ದು, ಐವತ್ತು ಸಾವಿರ ದಂಡ ವಿಧಿಸಲು ಮತ್ತು ಮೂರು ವರ್ಷದವರೆಗೆ ಜೈಲುಶಿಕ್ಷೆ ನೀಡಲು ಅವಕಾಶ ಕಲ್ಪಿಸಿದೆ.
ಇನ್ನು ಪದೇ ಪದೇ ತಪ್ಪು ಮಾಡುತ್ತಿದ್ದರೆ, ಐದು ಲಕ್ಷದಿಂದ 10 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಇನ್ನು ಈ ಗೋಹತ್ಯೆ ಪ್ರಕರಣಗಳನ್ನು ವಿಚಾರಣೆ ಮಾಡಲು ಪ್ರತ್ಯೇಕ ನ್ಯಾಯಾಲಯದ ಸ್ಥಾಪಿಸಲಾಗುವುದು. ಗಂಡು ಕರು ಹುಟ್ಟಿದರೆ, ರೈತರು ಮೂರು ತಿಂಗಳವರಗೆ ಸಾಕುವಂತೆ ಮನವಿ ಮಾಡಿದ ಅವರು ಆ ನಂತರ ಅವುಗಳನ್ನು ಗೋಶಾಲೆಗಳಿಗೆ ಬಿಡುವಂತಾಗಬೇಕು. ರಾಜ್ಯದಲ್ಲಿ ಈಗಾಗಲೇ ಇರುವ ಗೋಶಾಲೆಗಳಿಗೆ ಸರ್ಕಾರದಿಂದ ಅನುದಾನಗಳನ್ನು ನೀಡಲಾಗುತ್ತಿದೆ. ಗೋಶಾಲೆ ಆರಂಭಿಸುವವರಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡುವಂತೆ ಎಲ್ಲಾ ಜಿಲ್ಲಾಡಳಿತಗಳಿಗೆ ತಿಳಿಸಲಾಗಿದೆ" ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ