ಕೊಡಗು(ಏಪ್ರಿಲ್ 12) : ಕೊಡಗಿನಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಹ ಮತ್ತು ಭೂಕುಸಿತ ಆಗುತ್ತಿರುವುದು ಗೊತ್ತೇ ಇದೆ. ಆದರೆ ಪ್ರವಾಹ ಎದುರಾಗಲು ರಾಜ್ಯದ ಪ್ರಮುಖ ನದಿ, ಕೊಡಗಿನಲ್ಲಿ ಹುಟ್ಟಿ ಬೆಳೆಯುವ ಕಾವೇರಿ ಮತ್ತು ಹಾರಂಗಿ ಜಲಾಶಯದಲ್ಲಿ ಹೂಳು ತುಂಬಿಕೊಂಡಿರುವುದು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಹಾರಂಗಿ ಜಲಾಶಯ ಮತ್ತು ಕಾವೇರಿ ನದಿಯಲ್ಲಿ ಆದಷ್ಟು ಶೀಘ್ರ ಮರಳು ಮತ್ತು ಹೂಳು ತೆಗೆಯುವುದು ಅಗತ್ಯವಿದೆ ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈ ಸಂಬಂಧ ಮಡಿಕೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದು ಶೀಘ್ರವೇ ಕಾರ್ಯಗತಗೊಳಿಸುವಂತೆ ಸೂಚಿಸಿದ್ದಾರೆ. ಹಾರಂಗಿ ಅಣೆಕಟ್ಟು ಹಿನ್ನೀರು ಹಾಗೂ ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿ ಪಾತ್ರದಲ್ಲಿನ ಹೂಳು ಹೊರ ತೆಗೆಯದಿದ್ದಲ್ಲಿ ಈ ಬಾರಿಯೂ ಮತ್ತೆ ಪ್ರವಾಹ ಎದುರಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಕುಶಾಲನಗರ ಬಳಿಯ ಕಾವೇರಿ ನದಿ ಪಾತ್ರದಲ್ಲಿ ಮರಳು ತೆಗೆಯುವಂತೆ ಸಾರ್ವಜನಿಕರು ಕೂಡ ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಭೂ ವಿಜ್ಞಾನಿ ರೋಜಾ ಕಾವೇರಿ ನದಿ ಪಾತ್ರದಲ್ಲಿ ಮರಳು ಮಿಶ್ರಿತ ಮಣ್ಣು ಇದ್ದು, ಇದನ್ನು ಮರಳು ಬ್ಲಾಕ್‍ನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಿದ್ದಾರೆ. ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್ ಅವರು ಮರಳು ಲಭ್ಯವಾದರೆ ನಿಯಮಿತವಾಗಿ ಜಿಲ್ಲಾ ಮರಳು ಸಮಿತಿ ಸಭೆಯ ಮುಂದೆ ತಂದು ಸರ್ಕಾರಿ ಸಂಸ್ಥೆಯ ಮೂಲಕ ಮರಳು ತೆಗೆಯಬಹುದಾಗಿದೆ. ಇಲ್ಲಿ ಮರಳು ಮಿಶ್ರಿತ ಮಣ್ಣು ಇರುವುದರಿಂದ ಮರಳು ಬ್ಲಾಕ್ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಮರಳು ಮಿಶ್ರಿತ ಮಣ್ಣು ಇದೆ ಎಂದು ಭೂ ವಿಜ್ಞಾನಿಗಳು ಹೇಳುತ್ತಿರುವುದರಿಂದ ಈ ಬಗ್ಗೆ ನೀರಾವರಿ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಮರಳು ಮಿಶ್ರಿತ ಮಣ್ಣು ತೆಗೆಯಲು ಅವಕಾಶ ಮಾಡಲು ಅನುಮತಿ ಪಡೆಯುವಂತೆ ನೀರಾವರಿ ಇಲಾಖೆಯ ಎಂಜಿನಿಯರ್ ಅವರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮದನ್ ಮೋಹನ್ ಅವರು ಮರಳು ಮಿಶ್ರಿತ ಮಣ್ಣನ್ನು ಟೆಂಡರ್ ಆಹ್ವಾನಿಸಲು ಬರುವುದಿಲ್ಲ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ