news18-kannada Updated:June 19, 2020, 5:25 PM IST
ಸಮುದ್ರದ ಭಾರೀ ಅಲೆಗಳಿಂದ ಉಂಟಾಗಿರುವ ಕಡಲ ಕೊರೆತ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ಸುರಿಯಲು ಆರಂಭವಾಯ್ತು ಅಂದರೆ ಸಮುದ್ರ ದಂಡೆಯ ನಿವಾಸಿಗಳಿಗೆ ಆತಂಕ ಶುರುವಾಗುತ್ತದೆ. ಭಾರೀ ಮಳೆಗೆ ಸಮುದ್ರದ ಅಲೆಗಳು ಮನೆಗೆ ನುಗ್ಗುವ ಭಯದಲ್ಲೇ ಇಲ್ಲಿನ ಜನರು ಜೀವನ ನಡೆಸಬೇಕಾಗುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ಆರಂಭವಾದರೆ ಸಮುದ್ರ ದಂಡೆಯ ಅಕ್ಕಪಕ್ಕದ ಜನವಸತಿ ಪ್ರದೇಶದಲ್ಲಿ ಜನರು ಜೀವವನ್ನ ಕೈಯಲ್ಲಿ ಹಿಡಿದು ಜೀವನ ಸಾಗಿಸಬೇಕಾಗುತ್ತದೆ. ಎಲ್ಲಿ ಸಮುದ್ರದ ನೀರು ಮನೆ ನುಗ್ಗಿ ಹಾನಿ ಆಗತ್ತೊ ಎಂದು ಆತಂಕದಿಂದಲೇ ಜೀವನ ದೂಡಬೇಕು. ಮೂರು ತಿಂಗಳುಗಳ ಕಾಲ ಇಲ್ಲಿನ ಜನರು ಕಡಲ ಕೊರೆತದ ಭಯದಲ್ಲೇ ದಿನ ದೂಡಬೇಕು. ಯಾವಾಗ ಬೇಕಾದರೂ ಮನೆ ಬಿಟ್ಟು ಗಂಜಿಕೇಂದ್ರ ಸೇರಲು ಇಲ್ಲಿನ ಜನ ತಯಾರಾಗಿಯೇ ಇರುತ್ತಾರೆ. ಇಲ್ಲಿ ಅತಿಹೆಚ್ಚು ಮಳೆಯಾದರೆ ಸಮುದ್ರದ ಅಲೆಗಳ ಅಬ್ಬರ ಜೋರಾಗಿ ಕಡಲ ಕೊರೆತ ಉಂಟಾಗಿ ಸಮಸ್ಯೆ ಉಂಟಾಗತ್ತದೆ. ಈಗಾಗಲೇ ಮೊದಲ ಮಳೆಗೆ ಸಮುದ್ರ ದಂಡೆಯ ಅಕ್ಕಪಕ್ಕದ ರಸ್ತೆಗಳು ಕಡಲ ಕೊರೆತಕ್ಕೆ ಕೊಚ್ಚಿ ಹೋಗಿವೆ. ಕಳೆದ ವರ್ಷವಷ್ಟೇ ವಿವಿಧ ಯೋಜನೆಯಲ್ಲಿ ನಿರ್ಮಾಣವಾದ ರಸ್ತೆಗಳು ಯಾವುದಕ್ಕೂ ಪ್ರಯೋಜನ ಬಾರದೆ ಸಮುದ್ರದ ಪಾಲಾಗಿದೆ. ಕಡಲ ಕೊರೆತದ ಸಮಸ್ಯೆಗೆ ಶಾಶ್ವತ ಪರಿಹರಕ್ಕಾಗಿ ಇಲ್ಲಿನ ಜನ ಹತ್ತಾರು ವರ್ಷಗಳಿಂದ ಬೇಡಿಕೆ ಇಡುತ್ತಲೆ ಇದ್ದಾರೆ. ಆದರೆ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಇವರ ಸಮಸ್ಯೆಯನ್ನು ಕಿವಿಗೆ ಹಾಕಿಕೊಂಡಿಲ್ಲ.
ಇನ್ನೂ ಈ ಕಡಲ ಕೊರೆತದ ಸಮಸ್ಯೆ ಕೇವಲ ಒಂದೋ ಎರಡೋ ಜಾಗದಲ್ಲಿ ಮಾತ್ರ ಇಲ್ಲ. ಕರಾವಳಿಯ ಉದ್ದಕ್ಕೂ ಈ ಸಮಸ್ಯೆ ಇದ್ದೆ ಇದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ ಮತ್ತು ಇನ್ನಿತರೆ ಬಾಗದಲ್ಲಿ ಕಡಲ ಕೊರೆತ ಸಮಸ್ಯೆ ಪ್ರತಿ ಮಳೆಗಾಲದಲ್ಲಿ ಇದ್ದೆ ಇರುತ್ತದೆ. ಇದಕ್ಕೆ ಈಗ ಶಾಶ್ವತ ಪರಿಹಾರ ನೀಡಲು ಸರಕಾರ ಮುಂದಾಗಿದೆ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುತ್ತಾರೆ ಹೊರತು ಅದು ಎಷ್ಟರ ಮಟ್ಟಿಗೆ ಆಗುತ್ತೆ ಎಂದು ಕಾದು ನೋಡಬೇಕು.
ಇದನ್ನು ಓದಿ: ಬೆಂಗಳೂರಲ್ಲಿ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಗೆ ಕೊರೋನಾ; ಪರೀಕ್ಷೆ ಬರೆದ ಎಲ್ಲರೂ ಕ್ವಾರಂಟೈನ್?
ಇತ್ತೀಚಿಗೆ ಇಲ್ಲಿಗೆ ಭೇಟಿ ನೀಡಿದ್ದ ಮೀನುಗಾರಿಕೆ ಸಚಿವ ಕೋಟಾ ಶ್ರಿನಿವಾಸ ಪೂಜಾರಿ ಕಡಲ ಕೊರೆತಕ್ಕೆ ತಡೆಗೋಡೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಆದರೆ ಇಂತಹ ಭರವಸೆಗಳು ಇಲ್ಲಿನ ಜನ ಕೇಳಿಕೇಳಿ ಸುಸ್ತಾಗಿದ್ದಾರೆ. ಶ್ರಿನಿವಾಸ ಪೂಜಾರಿಯವರ ಭರವಸೆ ಕೂಡ ಕಡಲ ಕೊರೆತಕ್ಕೆ ಕೊಚ್ಚಿ ಹೋಗದಿರಲಿ ಎನ್ನುತ್ತಾರೆ ಇಲ್ಲಿನ ಜನ. ಕಡಲ ಕೊರೆತ ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಮಳೆಯಲ್ಲೇ ಆತಂಕ ಹುಟ್ಟಿಸಿದೆ. ಕಡಲ ದಂಡೆಯ ಜನರ ಸ್ಥಿತಿಗತಿ ಮುಂದೆ ಏನಾಗಲಿದೆಯೋ ಎಂಬುದೇ ಮುಂದಿರುವ ಪ್ರಶ್ನೆಯಾಗಿದೆ.
First published:
June 19, 2020, 5:25 PM IST