ಬೆಳಗಾವಿ(ಏಪ್ರಿಲ್ 12): ಇದೇ ತಿಂಗಳು 17ರಂದು ಬೆಳಗಾವಿ ಲೋಕಸಭಾ ಉಪಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಸಾಲು ಸಾಲು ಸಭೆ, ಬಹಿರಂಗ ಸಮಾವೇಶ ನಡೆಸುವ ಮೂಲಕ ಮತದಾರರ ಓಲೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೇ ಚುನಾವಣೆ ಪ್ರಚಾರದ ಅಬ್ಬರ ನಡುವೆ ಕೋವಿಡ್ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ಈಗಾಗಲೇ ಬೆಳಗಾವಿಯ ವಿವಿಧ ಪ್ರಚಾರ ಸಭೆಯಲ್ಲಿ ಆಯೋಜಕರಿಗೆ ದಂಡ ವಿಧಿಸಲಾಗಿದ್ದು, ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಇದಕ್ಕೂ ಬಗ್ಗದೆ ಹೋದ್ರೆ ರಾಷ್ಟ್ರೀಯ ವಿಪತ್ತು ನಿರ್ವಹವಣೆ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಕೇಸ್ ದಾಖಲಿಸುವುದಾಗಿ ಬೆಳಗಾವಿ ಜಿಲ್ಲಾಧಿಕಾರಿ ಹರೀಶ್ ಕುಮಾರ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಈವರೆಗೆ ಸಿಎಂ ಬಿ ಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ರಾಜ್ಯದ ಬಹುತೇಕ ನಾಯಕರು ಅಬ್ಬರದ ಪ್ರಚಾರ ಮಾಡಿದ್ದಾರೆ. ಪ್ರಚಾರದ ವೇಳೆಯಲ್ಲಿ ಸಾವಿರಾರು ಜನರನ್ನು ಒಂದೇ ಕಡೆ ಸೇರಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದು ಇದು ಆತಂಕಕ್ಕೆ ಕಾರಣವಾಗಿದೆ. ಈ ವರೆಗೆ ಬೆಳಗಾವಿ ಜಿಲ್ಲೆಯಲ್ಲಿ 36 ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿವೆ. ಒಟ್ಟು 27 ಪ್ರಕರಣದಲ್ಲಿ 61,150 ರೂಪಾಯಿ ದಂಡ ವಿಧಿಸಲಾಗಿದೆ.
ರಾಜಕೀಯ ಪಕ್ಷಗಳ ಮುಖಂಡರಿಗೆ ಈಗಾಗಲೇ ಮೊದಲು ಎಚ್ಚರಿಕೆ ನಂತರ ದಂಡ ವಿಧಿಸಲಾಗಿದ್ದು, ಇದೇ ರೀತಿಯ ಪ್ರಕರಣ ಕಂಡು ಬಂದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ಹರೀಶ ಕುಮಾರ್ ಹೆಚ್ಚರಿಕೆ ನೀಡಿದ್ದಾರೆ. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುವರರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51 ಭಾರತೀಯ ದಂಡ ಸಂಹಿತೆ 1860ರ ಕಲಂ 188 ಪ್ರಕಾರ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಇದರ ಜತೆಗೆ ಪ್ರಚಾರಕ್ಕೆ ಕೊಟ್ಟಿರೋ ಅನುಮತಿಯನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ನಿತ್ಯ 3 ಸಾವಿರಕ್ಕೂ ಹೆಚ್ಚು ಕೊವೀಡ್ ಸೋಂಕಿನ ಪರೀಕ್ಷೆಗಳು ನಡೆಯುತ್ತಿವೆ. ಇದನ್ನೂ 6 ಸಾವಿರಕ್ಕೆ ಏರಿಸಲು ಎಲ್ಲಾ ರೀತಿಯ ಸಿದ್ದತೆಯ ಮಾಡಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಬೆಳಗಾವಿ ತಾಲೂಕಿನಲ್ಲಿ ಸೋಂಕಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಬೇರೆ ಜಿಲ್ಲೆಗೆ ಹೊಲಿಸಿದ್ರೆ ಅಷ್ಟು ಪ್ರಕರಣ ಜಿಲ್ಲೆಯಲ್ಲಿ ಇಲ್ಲ, ಹಾಗೆಂದು ನಿರ್ಲಕ್ಷ್ಯ ವಹಿಸುವುದು ಬೇಡ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ