HOME » NEWS » District » IF CM WILL NOT VISIT TO CHAMARAJANAGARA I WILL FILE CASE IN HIGH COURT SAYS VATAL NAGARAJ RHHSN NCHM

ಚಾಮರಾಜನಗರಕ್ಕೆ ಸಿಎಂ ಭೇಟಿ ನೀಡದಿದ್ದರೆ ಹೈಕೋರ್ಟ್​ನಲ್ಲಿ ದಾವೆ: ವಾಟಾಳ್ ನಾಗರಾಜ್ ಎಚ್ಚರಿಕೆ

ಶಾಸಕರಿಗೆ, ಮಂತ್ರಿಗಳಿಗೆ ವೇತನ ಹೆಚ್ಚಳ ಮಾಡಿಕೊಳ್ಳುತ್ತೀರಿ. ಆದರೆ ಗ್ರಾಮ ಪಂಚಾಯ್ತಿ ಸದಸ್ಯರೇನು ಪಾಪ ಮಾಡಿದ್ದಾರೆ. ಇವರೇನು ನಿಮ್ಮ ಮನೆ ಗುಲಾಮರಲ್ಲ. ಗ್ರಾಪಂ ಸದಸ್ಯರ ಗೌರವಧನವನ್ನು ಕನಿಷ್ಠ 10 ಸಾವಿರ ರೂಪಾಯಿಗೆ ಏರಿಕೆ ಮಾಡಬೇಕು. ಉಪಾಧ್ಯಕ್ಷರಿಗೆ 15 ಸಾವಿರ ರೂಪಾಯಿ, ಅಧ್ಯಕ್ಷರಿಗೆ  20 ಸಾವಿರ ರೂಪಾಯಿ ಹೆಚ್ಚಳ ಮಾಡಬೇಕು ಎಂದು ಅವರು ಆಗ್ರಹಿಸಿದರು.

news18-kannada
Updated:January 2, 2021, 8:04 PM IST
ಚಾಮರಾಜನಗರಕ್ಕೆ ಸಿಎಂ ಭೇಟಿ ನೀಡದಿದ್ದರೆ ಹೈಕೋರ್ಟ್​ನಲ್ಲಿ ದಾವೆ: ವಾಟಾಳ್ ನಾಗರಾಜ್ ಎಚ್ಚರಿಕೆ
ವಾಟಾಳ್ ನಾಗರಾಜ್
  • Share this:
ಚಾಮರಾಜನಗರ (ಜನವರಿ 02); ಚಾಮರಾಜನಗರಕ್ಕೆ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಭೇಟಿ ನೀಡದಿದ್ದಲ್ಲಿ ಅವರ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡುವುದಾಗಿ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ಚಾಮರಾಜನಗರಕ್ಕೆ ಮುಖ್ಯಮಂತ್ರಿ ಭೇಟಿ ನೀಡಬೇಕು ಎಂದು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ  ವಾಟಾಳ್ ನಾಗರಾಜ್  ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದರು. ಕೆಲ ಕಾಲ ಬಸ್ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಶಿವಮೊಗ್ಗಕ್ಕೆ ಲೆಕ್ಕವಿಲದಷ್ಟು ಬಾರಿ ಹೋಗಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿದ್ದಾರೆ. ಆದರೆ ಚಾಮರಾಜನಗರಕ್ಕೆ ಒಂದು ಬಾರಿಯೂ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಆದವರು ಚಾಮರಾಜನಗರಕ್ಕೆ ಭೇಟಿ ನೀಡದೆ ಇಲ್ಲಿನ ಜನತೆಗೆ ಅವಮಾನ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಈ ನಡೆ ಕೇವಲ ಚಾಮರಾಜನಗರ ಜನತೆಗಷ್ಟೇ ಅಲ್ಲ ಇಡೀ ಮಾನವ ಕುಲಕ್ಕೆ ಅವಮಾನ ಮಾಡಿದಂತೆ ಎಂದ ವಾಟಾಳ್ ನಾಗರಾಜ್, ಇಲ್ಲಿಗೇಕೆ ಬರುತ್ತಿಲ್ಲ, ಕಾರಣವೇನು? ಎಂದು ಪ್ರಶ್ನಿಸಿದರು. ಈ ಬಗ್ಗೆ ಹೈಕೋರ್ಟ್ ನಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಜೊತೆಗೆ ಚಾಮರಾಜನಗರದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು. ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು, ಇಲ್ಲದಿದ್ದರೆ  ಚಾಮರಾಜನಗರವನ್ನು ಬಸವನನಾಡು ಎಂದು ಪ್ರತ್ಯೇಕ ರಾಜ್ಯ ಎಂದು ಘೋಷಿಸಲಿ ಎಂದು ಆಗ್ರಹಿಸಿದರು.

ತಾವು ಅಖಂಡ ಕರ್ನಾಟಕವನ್ನು ಒಡೆಯಲು  ಯಾವತ್ತು ಬೆಂಬಲ ಕೊಡುವುದಿಲ್ಲ. ಈಗಲೂ ಪ್ರತ್ಯೇಕ ರಾಜ್ಯಕ್ಕೆ ನನ್ನ ವಿರೋಧವಿದೆ. ಆದರೆ ಮುಖ್ಯಮಂತ್ರಿಗಳ ಧೋರಣೆಯಿಂದ ಬೇಸತ್ತು ಈ ಮಾತು ಹೇಳಬೇಕಾಗಿದೆ. ನಾಡಿನ ಮುಖ್ಯಮಂತ್ರಿ ಆದ ನೀವು ಎಲ್ಲಾ ಪ್ರದೇಶಗಳನ್ನು ಸಮನಾಗಿ ಕಾಣಬೇಕು. ಈ ರೀತಿಯ ಧೋರಣೆಗಳು ಮುಖ್ಯಮಂತ್ರಿ ಆದವರಿಗೆ ಶೋಭೆ ತರುವುದಿಲ್ಲ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಏನಾಗುತ್ತದೆ ಹೇಳಿ ಯಡಿಯೂರಪ್ಪನವರೆ ಎಂದ ಅವರು ಚಾಮರಾಜನಗರಕ್ಕೆ ಹೋಗುವಂತೆ ನಾಡಿನ ಮಠಾಧೀಶರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ಇದೇ ತಿಂಗಳಲ್ಲಿ ಕೋವಿಡ್ ಲಸಿಕೆ ಸಿಗುವ ನಿರೀಕ್ಷೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಗ್ರಾಪಂ ಸದಸ್ಯರ ಗೌರವಧನ ಹೆಚ್ಚಳಕ್ಕೆ ಆಗ್ರಹ

ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ಮುಗದಿದೆ. ಆದರೆ ಸರ್ಕಾರ ಗ್ರಾಮ ಪಂಚಾಯ್ತಿ ಸದಸ್ಯರಿಗೆ ತಿಂಗಳಿಗೆ ಕೇವಲ ಒಂದು ಸಾವಿರ ರೂಪಾಯಿ ಗೌರವಧನ ನೀಡುತ್ತಿದ್ದು  ದಿನವೊಂದಕ್ಕೆ 33 ರೂಪಾಯಿ ಸಿಕ್ಕಂತೆ ಆಗುತ್ತಿದೆ.  ಒಂದು ಹೊತ್ತಿನ ಕಾಫಿ, ತಿಂಡಿಗೂ ಈ ಹಣ ಸಾಲುವುದಿಲ್ಲ. ಅತ್ಯಂತ ಕಡಿಮೆ ಗೌರವಧನ ನೀಡುವುದು ಗ್ರಾಮ ಪಂಚಾಯ್ತಿ ಸದಸ್ಯರಿಗೆ ಅಪಮಾನ ಮಾಡಿದಂತೆ ಎಂದು ವಾಟಾಳ್ ಅಸಮಾಧಾನ ವ್ಯಕ್ತಪಡಿಸಿದರು.
Youtube Video
ಶಾಸಕರಿಗೆ, ಮಂತ್ರಿಗಳಿಗೆ ವೇತನ ಹೆಚ್ಚಳ ಮಾಡಿಕೊಳ್ಳುತ್ತೀರಿ. ಆದರೆ ಗ್ರಾಮ ಪಂಚಾಯ್ತಿ ಸದಸ್ಯರೇನು ಪಾಪ ಮಾಡಿದ್ದಾರೆ. ಇವರೇನು ನಿಮ್ಮ ಮನೆ ಗುಲಾಮರಲ್ಲ. ಗ್ರಾಪಂ ಸದಸ್ಯರ ಗೌರವಧನವನ್ನು ಕನಿಷ್ಠ 10 ಸಾವಿರ ರೂಪಾಯಿಗೆ ಏರಿಕೆ ಮಾಡಬೇಕು. ಉಪಾಧ್ಯಕ್ಷರಿಗೆ 15 ಸಾವಿರ ರೂಪಾಯಿ, ಅಧ್ಯಕ್ಷರಿಗೆ  20 ಸಾವಿರ ರೂಪಾಯಿ ಹೆಚ್ಚಳ ಮಾಡಬೇಕು ಎಂದು ಅವರು ಆಗ್ರಹಿಸಿದರು. ಜೊತೆಗೆ ಗ್ರಾಮ ಪಂಚಾಯ್ತಿ ಸದಸ್ಯರ ಪರವಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಹೋರಾಟ ನಡೆಸುವುದಾಗಿ ವಾಟಾಳ್ ಹೇಳಿದರು.

ವರದಿ; ಎಸ್.ಎಂ.ನಂದೀಶ್
Published by: HR Ramesh
First published: January 2, 2021, 8:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories