ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನೆದಿನೆ ಕೊರೋನಾ ಸೋಂಕಿತರ ಸಂಖ್ಯೆ ಬೆಳೆಯುತ್ತಲೆ ಇದೆ. ಇದರ ಜತೆಗೆ ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರೋದು ಕೂಡ ಆತಂಕಕಾರಿ ಸುದ್ದಿ. ಈ ನಡುವೆ ಈಗ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರದ ಕ್ರೀಮ್ಸ್ ನಲ್ಲಿ ಕೊರೋನಾ ಸೋಂಕಿತರಿಗಾಗಿ ಐಸಿಯು ಬೆಡ್ ಕೊರತೆ ಎದುರಾಗಿದ್ದು ಎಲ್ಲ ಐಸಿಯು ಬೆಡ್ ಗಳು ಭರ್ತಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಐದು ದಿನದಿಂದ ದಿನಕ್ಕೆ ಎಂಟು ನೂರು ಮೇಲೆ ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಈ ಪೈಕಿ ಕೆಲವರು ಹೋಂ ಐಸೋಲೇಶನ್ ಆದ್ರೆ ಇನ್ನು ತೀವ್ರ ರೋಗ ಲಕ್ಷಣ ಇರುವವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈಗ ಐಸಿಯು ಬೆಡ್ ಭರ್ತಿ ಆಗಿರೋದು ಆತಂಕ ಹೆಚ್ಚಿಸಿದೆ.
ಕ್ರೀಮ್ಸ್ ನಲ್ಲಿ ಒಟ್ಟೂ 30 ಐಸಿಯು ಬೆಡ್ ಸಿದ್ದಪಡಿಸಲಾಗಿತ್ತು. ಇವತ್ತು ಬೆಳಿಗ್ಗೆ ಎಲ್ಲ ಐಸಿಯು ಬೆಡ್ ಭರ್ತಿ ಆಗಿರುವುದರಿಂದ ಇನ್ನು ಮುಂದೆ ತೀವ್ರ ರೋಗ ಲಕ್ಷಣ ಇರುವವರಿಗೆ ಜಿಲ್ಲೆಯ ಬೇರೆ ಬೇರೆ ತಾಲೂಕಿಗೆ ಶಿಫ್ಟ್ ಮಾಡುವುದೊಂದೆ ಗತಿ. ಇನ್ನು ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ತೀರಾ ವಿಸ್ತಾರ ಹೊಂದಿದ್ದು ಎಲ್ಲೆ ಹೋಗಬೇಕೆಂದ್ರು 150 ಕಿ.ಮೀ ಸುತ್ತಾಟ ನಡೆಸಲೇಬೇಕು ಇಂತಹ ಸಂದಿಗ್ಧ ಸ್ಥಿತಿ ಈಗ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಬಂದೊದಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೂಡಲೇ ಬೆಡ್ ಸಂಖ್ಯೆ ಹೆಚ್ಚಿಸುತ್ತೇವೆ. ಯಾವುದೇ ಕಾರಣಕ್ಕೂ ಸೋಂಕಿತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇದನ್ನು ಓದಿ: Third Wave of Coronavirus: ಕೊರೋನಾ ಮೂರನೇ ಅಲೆ ಕಟ್ಟಿಟ್ಟ ಬುತ್ತಿ; ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇನು?
ಹೇಗಿದೆ ಸ್ಥಿತಿ ಗತಿ? ಹೀಗೆ ಮುಂದುವರೆದರೆ ಸಾವಿನ ಸಂಖ್ಯೆ ಅಧಿಕವಾಗಬಹುದೆ?
ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ದೊಡ್ಡ ಸಮಸ್ಯೆ ಅಂದರೆ ಐಸಿಯು ಬೆಡ್ ನ ಕೊರತೆ. ಐಸಿಯು ಬೆಡ್ ಭರ್ತಿ ಆಗಿದೆ. ಮುಂದೆ ಬರುವ ರೋಗಿಗಳ ಸ್ಥಿತಿಗತಿ ಹೇಗಿರೊತ್ತೆ ಎಂದು ಹೇಳಲಾಗದು. ಆದರೆ ದಿನನಿತ್ಯಕ್ಕೂ ಸೋಂಕಿತರ ಸಂಖ್ಯೆ ಏರುತ್ತಲೆ ಇದೆ ಹೊರತು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನಲೆಯಲ್ಲಿ ಈಗಲೇ ಐಸಿಯು ಬೆಡ್ ಭರ್ತಿ ಆಗಿದ್ರಿಂದ ಮತ್ತೆ ಸಮಸ್ಯೆ ಉಲ್ಭಣಿಸಿದರೆ ಜಿಲ್ಲಾಡಳಿತ ಇದನ್ನು ಹೇಗೆ ನಿಭಾಯಿಸೊತ್ತೆ ಎನ್ನೋದೆ ಸವಾಲಿನ ಕೆಲಸ. ಈಗಾಗಲೇ ಹೋಂ ಐಸೋಲೇಷನ್ನಲ್ಲಿ ಇದ್ದವರು ಕೂಡ ತೀರಾ ರೋಗ ಲಕ್ಷಣದಿಂದ ಬಳಲುತ್ತಿದ್ದಾರೆ. ಈನಡುವೆ ಮತ್ತೆ ತೀರಾ ರೋಗ ಲಕ್ಷಣ ಕಂಡು ಬಂದು ದೇಹದ ಆರೋಗ್ಯ ಸ್ಥಿತಿ ಹದಗೆಟ್ಟರೆ ಅಂತಹವರ ಸ್ಥಿತಿ ಏನು ಎನ್ನೋದೆ ಈಗ ಯಕ್ಷ ಪ್ರಶ್ನೆ.
ಐಸಿಯು ಬೆಡ್ ಸಮಸ್ಯೆ ಒಪ್ಪಿಕೊಂಡ ಉತ್ತರ ಕನ್ನಡ ಜಿಲ್ಲಾಡಳಿತ ಕೂಡಲೇ ಸಮಸ್ಯೆ ನಿವಾರಿಸಿ ಬೆಡ್ ಸಂಖ್ಯೆ ಹೆಚ್ಚಿಸುವುದಾಗಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಯಾವುದೇ ಸಮಸ್ಯೆ ಉಲ್ಭಣಿಸದಂತೆ ನೋಡಿಕೊಳ್ಳುತ್ತೇವೆ. ಸೋಂಕಿತರು ಭಯ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ