ಮೈಸೂರು; ಹಸಿರು ಪಟಾಕಿ ಅಂದ್ರೇನು ಅಂತ ನನಗೆ ಗೊತ್ತಿಲ್ಲ, ಈ ಬಗ್ಗೆ ನಾನು ತಿಳಿದುಕೊಂಡು ಹೇಳ್ತಿನಿ ಅಂತ ಮೈಸೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ದೀಪಾವಳಿ ಹಬ್ಬದಲ್ಲಿ ಪಟಾಕಿ ನಿಷೇಧದ ಬಗ್ಗೆ ನಮ್ಮ ಇಲಾಖೆಯಿಂದ ಮಾರ್ಗಸೂಚಿ ವರದಿ ಬಂದಿತ್ತು. ಅದನ್ನ ಸಿಎಂ ಗಮನಕ್ಕೆ ತಂದು ಸರ್ಕಾರಕ್ಕೆ ಸಲ್ಲಿಸಿದ್ದೆ. ಆ ನಂತರ ಸಿಎಂ ಹಸಿರು ಪಟಾಕಿ ಸಿಡಿಲು ಅನುಮತಿ ನೀಡಿದ್ದಾರೆ. ಸಂಜೆ ಸಮಯಾವಕಾಶವನ್ನು ನಿಗಧಿ ಮಾಡಿದ್ದಾರೆ ಎಂದು ತಿಳಿಸಿದರು. ಪತ್ರಕರ್ತರು ಹಸಿರು ಪಟಾಕಿ ಅಂದ್ರೆ ಏನು ಸರ್ ಎಂದು ಪ್ರಶ್ನಿಸಿದಾಗ ? ಹಸಿರು ಪಟಾಕಿ ಅಂದ್ರೇನು ಅಂತ ನನಗೂ ಗೊತ್ತಿಲ್ಲ ಈ ಬಗ್ಗೆ ನಾನು ತಿಳಿದುಕೊಂಡು ಹೇಳುತ್ತೇನೆ ಅಂತ ತಮಾಷೆಯಾಗಿ ಉತ್ತರಿಸಿ, ಪಟಾಕಿ ಗೊಂದಲಕ್ಕೆ ತುಪ್ಪ ಸುರಿದ ಸಚಿವ ಡಾ.ಸುಧಾಕರ್ ನಗುತ್ತಲೇ ಅಲ್ಲಿಂದ ತೆರಳಿದರು.
ಇನ್ನು ಚುನಾವಣೆ ಸಮಾವೇಶಗಳಲ್ಲಿ ಮಾಸ್ಕ್ ಸಾಮಾಜಿಕ ಅಂತರ ಕಾಯ್ದುಕೊಳ್ಳದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ಕೆ.ಸುಧಾಕರ್ ಈ ವಿಚಾರದಲ್ಲಿ I am also helpless ಎಂದು ಅಸಹಾಯಕತೆ ಪ್ರದರ್ಶನ ಮಾಡಿದರು. ಕೊರೋನಾ ಬಗ್ಗೆ ಈಗಾಗಲೇ ಮಾರ್ಗಸೂಚಿ ಇದೆ. ನಾನು ಕೂಡ ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸುವಂತೆ ಎಲ್ಲರಿಗೂ ಹೇಳುತ್ತಿದ್ದೇನೆ. ಇದು ನಮಗೂ ಅನ್ವಯ ಆಗುತ್ತದೆ. ರಾಜಕೀಯ ಪಕ್ಷಗಳ ಸಮಾವೇಶಗಳ ವಿಚಾರದಲ್ಲೂ ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದೇ. ಆದರೆ ಇದು ಪಾಲನೆ ಆಗಿಲ್ಲ ಅನ್ನೋದು ನನಗಿರುವ ಬೇಸರ. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ಹಾಗೂ ನಾಯಕರಿಗೆ ಸಾಮೂಹಿಕ ಜವಾಬ್ದಾರಿ ಇರಬೇಕು. ಆದರೆ ಎಲ್ಲರು ಅದನ್ನು ಮರೆತಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಸಾರ್ವಜನಿಕರಿಗೆ ಮಾತ್ರ ದಂಡ ಹಾಕುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಂಡ ಎಲ್ಲರಿಗು ಅನ್ವಯ ಆಗುತ್ತೆ, ಎಲ್ಲಿರಿಗೂ ದಂಡ ಹಾಕಲು ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಹೇಳಿದರು.
ನಿನ್ನೆ ಆರ್.ಆರ್. ನಗರ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ವಿಚಾರವಾಗಿ, ಆ ಕ್ಷೇತ್ರದ ಗ್ರೌಂಡ್ ರಿಯಾಲಿಟಿ ಅರಿತುಕೊಳ್ಳುವಲ್ಲಿ ಕಾಂಗ್ರೆಸ್ ಫೇಲ್ಯೂರ್ ಆಗಿದೆ ಎಂದು ಟೀಕಿಸಿದ ಸಚಿವ ಡಾ.ಕೆ.ಸುಧಾಕರ್, ಡಿಕೆಶಿ ಹಾಗೂ ಅವರ ತಮ್ಮ ಕಷ್ಟಪಟ್ಟು ಚುನಾವಣೆಯಲ್ಲಿ ಓಡಾಡಿದ್ದಾರೆ. ಅವರಿಬ್ಬರನ್ನೇ ಯಾಕೆ ಹೊಣೆ ಮಾಡ್ತೀರಿ.? ಇಡೀ ಕಾಂಗ್ರೆಸ್ ಪಕ್ಷ ಆರ್ ಆರ್ ನಗರ ಉಪಚುನಾವಣೆಯಲ್ಲಿ ಎಡವಿದೆ. ಆರ್ ಆರ್ ನಗರದಲ್ಲಿ 50 ಸಾವಿರ ಲೀಡ್ ನಲ್ಲಿ ಗೆಲ್ತಿವಿ ಅಂತ ನಾನು ಮೊದಲೇ ಹೇಳಿದ್ದೆ. ಈಗ ಅದೇ ರೀತಿಯ ಫಲಿತಾಂಶ ಬಂದಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ