ಕ್ರಿಕೆಟ್ ಬೆಟ್ಟಿಂಗ್​ಗೂ ನನಗೂ ಸಂಬಂಧವಿಲ್ಲ, ಇದು ನನ್ನ ವಿರುದ್ಧದ ರಾಜಕೀಯ ಷಡ್ಯಂತ್ರ; ಶಾಸಕ ಮತ್ತಿಮೋಡ

ಈ ಹಿಂದೆ ಬೆಟ್ಟಿಂಗ್ ಜಾಲದಲ್ಲಿ ಶಾಸಕ ಬಸವರಾಜ ಮತ್ತಿಮೋಡ ಹೆಸರೂ ಕೇಳಿಬಂದಿತ್ತು. ಮತ್ತಿಮೋಡ ಶಾಸಕರಾಗುವ ಮುನ್ನ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದರು ಎಂಬ ಆರೋಪವಿತ್ತು. ಜಿಲ್ಲಾ ಪಂಚಾಯ್ತಿ ಸದಸ್ಯರಿದ್ದ ವೇಳೆ ಬಸವರಾಜ ಮತ್ತಿಮೋಡ ಮೇಲೆ 12 ಪ್ರಕರಣ ದಾಖಲಾಗಿದ್ದವು. ಎಲ್ಲವೂ ಕ್ರಿಕೆಟ್ ಬೆಟ್ಟಿಂಗ್ ಗೆ ಸಂಬಂಧಿಸಿದ್ದವಾಗಿದ್ದವು. 

ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೋಡ.

ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೋಡ.

  • Share this:
ಕಲಬುರ್ಗಿ;  ಕಲಬುರ್ಗಿ ನಗರ ಐಪಿಎಲ್ ಬೆಟ್ಟಿಂಗ್ ನ ಅಡ್ಡೆಯಾಗಿ ಮಾರ್ಪಟ್ಟಿದೆ. ಬುಕ್ಕಿಗಳು ಕಲಬುರ್ಗಿಯಿಂದಲೇ ಬೆಟ್ಟಿಂಗ್ ದಂಧೆ ನಡೆಸಿರುವ ಸತ್ಯ ಸೋಲಾಪುರ ಸಿಸಿಬಿ ಪೊಲೀಸರು ರೈಡ್ ಮಾಡಿದಾಗ ಬಹಿರಂಗಗೊಂಡಿದೆ. ಹಾಲಿ ಶಾಸಕ ಬಸವರಾಜ ಮತ್ತಿಮೋಡ ಅವರ ಭಾಮೈದುನನ ಮನೆಯೇ ಬೆಟ್ಟಿಂಗ್ ಅಡ್ಡಾ ಆಗಿರೋದು ಚರ್ಚೆಗೆ ಗ್ರಾಸವಾಗಿದೆ. ಅದಕ್ಕೂ ಮುಖ್ಯವಾಗಿ ಶಾಸಕರೊಬ್ಬರ ಪತ್ನಿಯ ಕಾರನ್ನು ಸೀಜ್ ಮಾಡಿರೋದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ಕ್ರಿಕೆಟ್ ಬೆಟ್ಟಿಂಗ್ ಗೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೋಡ ಸ್ಪಷ್ಟಪಡಿಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಗೂ ನಮಗೂ ಸಂಬಂಧವಿಲ್ಲ. ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಲಾಗ್ತಿದೆ ಎಂದು ಕಲುಬರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೋಡ ನ್ಯೂಸ್ 18 ಗೆ ಸ್ಪಷ್ಟಪಡಿಸಿದ್ದಾರೆ. ದೂರವಾಣಿ ಮೂಲಕ ಮಾತನಾಡಿದ ಅವರು, ನನ್ನ ಮಾವ ಮತ್ತು ಭಾಮೈದುನ ಪತ್ನಿ ಮಹಾರಾಷ್ಟ್ರಕ್ಕೆ ಹೋಗೋದಾಗಿ ಹೇಳಿದ್ದರು. ಆ ಕಾರಣಕ್ಕಾಗಿ ನನ್ನ ಕಾರನ್ನು ಕೊಟ್ಟಿದ್ದೆ. ಅವರು ಮಹಾರಾಷ್ಟ್ರದಿಂದ ವಾಪಸ್ಸಾಗಿ ಮನೆಗೆ ಬಂದಾಗಲೇ ದಾಳಿ ನಡೆದಿದೆ. ಅಲ್ಲಿದ್ದ ಕಾರನ್ನು ಸೀಜ್ ಮಾಡಲಾಗಿದೆ. ಕಾರು ನನ್ನ ಪತ್ನಿ ಜಯಶ್ರೀ ಹೆಸರಲ್ಲಿರೋದು ಸತ್ಯ. ಆದ್ರೆ ಐಪಿಎಲ್ ಬೆಟ್ಟಿಂಗ್ ಗೂ ಕಾರು ಸೀಜ್ ಗೂ ಸಂಬಂಧವಿಲ್ಲ ಎಂದು ಹೇಳಿದರು.

ಈ ಹಿಂದೆಯೂ ನನ್ನ ಮೇಲೆ 12 ಪ್ರಕರಣ ದಾಖಲಿಸಲಾಗಿತ್ತು. ಜಿಲ್ಲಾ ಪಂಚಾಯ್ತಿ ಸದಸ್ಯನಿದ್ದಾಗ ಕ್ರಿಕೆಟ್ ಬೆಟ್ಟಿಂಗ್ ಮಾಡ್ತಿದ್ದಾನೆಂದು ಕೇಸ್ ಮಾಡಲಾಗಿತ್ತು. ಕಲಬುರ್ಗಿ ಸೇರಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಮಾಡಲಾಗಿತ್ತು. ನನ್ನ ರಾಜಕೀಯ ಏಳಿಗೆ ಸಹಿಸದವರು ಈ ರೀತಿ ಮಾಡ್ತಿದಾರೆ. ಬೇಕಿದ್ದರೆ ನನ್ನ ಭಾಮೈದನ ವಿಚಾರಣೆ ನಡೆಸಲಿ, ನನ್ನದೇನು ತಕರಾರಿಲ್ಲ. ಆದರೆ ವಿನಾಕಾರಣ ನನ್ನ ತೇಜೋವಧೆ ಸರಿಯಲ್ಲ. ನನಗಾಗಲಿ, ನನ್ನ ಪತ್ನಿಗಾಗಲಿ ಕ್ರಿಕೆಟ್ ಬೆಟ್ಟಿಂಗ್ ಗೆ ಸಂಬಂಧವಿಲ್ಲ ಎಂದಿದ್ದಾರೆ.

ನನ್ನ ಪತ್ನಿಗೆ ಮಹಾರಾಷ್ಟ್ರ ಪೊಲೀಸರು ನೊಟೀಸ್ ನೀಡಿಲ್ಲ. ವಿಚಾರಣೆಗೆ ಹಾಜರಾಗುವಂತೆ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ಸ್ಪಷ್ಟಪಿಸಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಗೆ ಸಂಬಂಧಿಸಿ ಸೋಲಾಪುರದ ಸಿಸಿಬಿ ಪೊಲೀಸರು ಮತ್ತಿಮೋಡ ಪತ್ನಿ ಜಯಶ್ರೀ ಕಾರನ್ನು ಜಪ್ತಿ ಮಾಡಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮತ್ತಿಮೋಡ ಭಾಮೈದ ಗೋರಖನಾಥ್ ನಿವಾಸದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಲಕ್ಷಾಂತರ ನಗದು, ಲ್ಯಾಪ್ ಟಾಪ್ ಮತ್ತಿತರ ವಸ್ತು ಸೀಜ್ ಮಾಡಿದ್ದರು.

ಕ್ರಿಕೆಟ್ ಬೆಟ್ಟಿಂಗ್ ಗೆ ಸಂಬಂಧಿಸಿ ದಾಖಲಾಗಿದ್ದ 12 ಪ್ರಕರಣ

ಸದ್ಯದ ಪ್ರಕರಣದ ಹಿನ್ನೆಲೆಯನ್ನು ಗಮನಿಸಿದಾಗ, ಈ ಹಿಂದೆ ಬೆಟ್ಟಿಂಗ್ ಜಾಲದಲ್ಲಿ ಶಾಸಕ ಬಸವರಾಜ ಮತ್ತಿಮೋಡ ಹೆಸರೂ ಕೇಳಿಬಂದಿತ್ತು. ಮತ್ತಿಮೋಡ ಶಾಸಕರಾಗುವ ಮುನ್ನ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದರು ಎಂಬ ಆರೋಪವಿತ್ತು. ಜಿಲ್ಲಾ ಪಂಚಾಯ್ತಿ ಸದಸ್ಯರಿದ್ದ ವೇಳೆ ಬಸವರಾಜ ಮತ್ತಿಮೋಡ ಮೇಲೆ 12 ಪ್ರಕರಣ ದಾಖಲಾಗಿದ್ದವು. ಎಲ್ಲವೂ ಕ್ರಿಕೆಟ್ ಬೆಟ್ಟಿಂಗ್ ಗೆ ಸಂಬಂಧಿಸಿದ್ದವಾಗಿದ್ದವು.

2015 ರಲ್ಲಿ ಬಸವರಾಜ ಮತ್ತಿಮೋಡ ಮೇಲೆ ಸ್ಟೇಷನ್ ಬಜಾರ್ ಪೊಲೀಸರ ದಾಳಿ ಮಾಡಿ, 9 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದರು. ಸ್ಟೇಷನ್ ಬಜಾರ್, ಬ್ರಹ್ಮಪುರ ಸೇರಿ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿಯೂ ಪ್ರಕರಣಗಳು ದಾಖಲಾಗಿದ್ದವು. ರಾಜ್ಯದಲ್ಲಿ ಒಟ್ಟು 12 ಪ್ರಕರಣ ದಾಖಲಾಗುವ ಜೊತೆಗೆ, ನೆರೆ ರಾಜ್ಯ ಮಹಾರಾಷ್ಟ್ರದಲ್ಲಿಯೂ ಪ್ರಕರಣ ದಾಖಲಾಗಿದ್ದವೆಂಬ ಮಾಹಿತಿ ಇದೆ. ಆ ವೇಳೆ ಬಸವರಾಜ ಮತ್ತಿಮೋಡ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದರು.

ಇದನ್ನು ಓದಿ: ಮೈಸೂರಿನಲ್ಲಿ ಹಬ್ಬದ ದಿನವು ಸಿಗಲಿಲ್ಲ ಪಟಾಕಿ; ಹಸಿರು ಪಟಾಕಿ ಗೊಂದಲದಲ್ಲೇ ಮುಗಿದ ದೀಪಾವಳಿ

2018 ರಲ್ಲಿ ಕಲಬುರ್ಗಿ ಗ್ರಾಮೀಣ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿದ್ದರು. ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಕೋರ್ಟ್ ಮೊರೆ ಹೋಗಿದ್ದ. ಪೊಲೀಸ್ ಮೂಲಗಳ ಪ್ರಕಾರ ಎಲ್ಲ ಪ್ರಕರಣಗಳಿಂದಲೂ ಮತ್ತಿಮೋಡ ಹೊರ ಬಂದಿದ್ದಾರೆ. ಆದಾಗ್ಯೂ ಶಾಸಕರ ಭಾವ ಮೈದುನನ ಮನೆ ಬೆಟ್ಟಿಂಗ್ ಅಡ್ಡಾ ಆಗಿರೋದು ಅನುಮಾನಕ್ಕೆ ಕಾರಣವಾಗಿದೆ. ಶಾಸಕರ ಪತ್ನಿಯ ಕಾರ್ ಸೀಜ್ ಮಾಡಿರೋದು ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಎಂ.ಎಲ್.ಎ. ಶ್ರೀರಕ್ಷೆಯಲ್ಲಿಯೇ ಈ ಬೆಟ್ಟಿಂಗ್ ನಡೀತಿತ್ತಾ ಅನ್ನೋ ಅನುಮಾನ ಮೂಡಿದೆ.

ಮತ್ತಿಮೋಡ ರಾಜೀನಾಮೆಗೆ ಆಗ್ರಹ

ಬೆಟ್ಟಿಂಗ್ ಹಿಂದೆ ಸ್ವತಃ ಶಾಸಕರಿಂದ್ದಾರೆ ಎಂದು ಕೆಲ ಸಂಘಟನೆಗಳ ಆರೋಪಿಸಿವೆ. ಈ ಹಿಂದೆ ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸ್ತಿದ್ದಾರೆ ಅನ್ನೋ ಆರೋಪ ಮತ್ತಿಮೋಡರ ಮೇಲಿತ್ತು. ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಅದನ್ನೇ ಬಂಡವಾಳ ಮಾಡಿಕೊಂಡು ಬಸವರಾಜ ಮತ್ತಿಮೋಡ ಕಲಬುರ್ಗಿಯನ್ನೇ ಬೆಟ್ಟಿಂಗ್ ಅಡ್ಡೆ ಮಾಡಿದ್ದಾರೆ. ತನ್ನ ಸಂಬಂಧಿಗಳ ಮೂಲಕ ಬೆಟ್ಟಿಂಗ್ ದಂಧೆ ಮುಂದುವರೆಸಿದ್ದಾರೆ ಎಂಬ ಆರೋಪವಿದೆ. ಮಹಾರಾಷ್ಟ್ರ ಪೊಲೀಸರು ಶಾಸಕರ ಪತ್ನಿ ಕಾರು ಸೀಜ್ ಮಾಡಿರೋದೆ ಅದಕ್ಕೆ ಸಾಕ್ಷಿಯಾಗಿದೆ. ಇದರ ನೈತಿಕ ಹೊಣೆ ಹೊತ್ತು ಮತ್ತಿಮೋಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡೋದಾಗಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
Published by:HR Ramesh
First published: