ಕಲಬುರ್ಗಿ; ಖಾತೆ ಹಂಚಿಕೆಯಲ್ಲಿ ತನ್ನ ಪಾತ್ರ ಇದೆ ಎನ್ನೋ ಆರೋಪ ಶುದ್ಧ ಸುಳ್ಳು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಖಾತೆ ಬದಲಾವಣೆಯಿಂದ ಉಂಟಾದ ಅಸಮಾಧಾನ ಸದ್ಯದಲ್ಲೇ ಶಮನ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲವನ್ನೂ ಸರಿಪಡಿಸಲಿದ್ದಾರೆ. ಅಸಮಾಧಾನಗೊಂಡವರೊಂದಿಗೆ ಸಿಎಂ ಮಾತನಾಡಿ ಸಮಸ್ಯೆ ಬಗೆಹರಿಸಲಿದ್ದಾರೆ. ಖಾತೆ ಹಂಚಿಕೆಯಲ್ಲಿ ವಿಜಯೇಂದ್ರ ಪಾತ್ರ ಎನ್ನುವ ಆರೋಪಗಳೆಲ್ಲಾ ಶುದ್ಧ ಸುಳ್ಳು. ಯಡಿಯೂರಪ್ಪ ನವರು ಹೋರಾಟದ ಮೂಲಕ ರಾಜಕೀಯ ಮಾಡಿಕೊಂಡು ಬಂದು ಸಿಎಂ ಆದವರು. ಯಡಿಯೂರಪ್ಪ ಅವರ ಸಂಕಲ್ಪ, ಕಾರ್ಯಕರ್ತರ ಪ್ರಯತ್ನದ ಫಲವಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಯಡಿಯೂರಪ್ಪ ಅವರು ಡಿಸಿಎಂ ಆಗಿ, ಸಿಎಂ ಆಗಿ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ಮೂರು - ನಾಲ್ಕು ದಶಕಗಳ ಕಾಲ ಸುದೀರ್ಘವಾಗಿ ಹೋರಾಟ ಮಾಡುತ್ತಾ ಈ ಹಂತಕ್ಕೆ ಬಂದಿದ್ದಾರೆ. ಯಡಿಯೂರಪ್ಪ ಅವರಿಗೆ ಹೇಗೆ ಕೆಲಸ ಮಾಡಬೇಕೆಂಬ ಅರಿವಿದೆ. ಅವರಿಗೆ ಯಾರ ಹಸ್ತಕ್ಷೇಪದ ಅಗತ್ಯವೂ ಬೀಳೋದಿಲ್ಲ. ಅಲ್ಲದೇ ನನ್ನ ಹಸ್ತಕ್ಷೇಪವಂತೂ ಇಲ್ಲವೇ ಇಲ್ಲ. ತಮ್ಮ ಮೇಲಿನ ಆರೋಪಗಳೆಲ್ಲವೂ ನಿರಾಧಾರ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿ: ಸಚಿವ ಸುಧಾಕರ್ ನಿವಾಸದಲ್ಲಿ ವಲಸಿಗರ ಸಭೆಯಲ್ಲಿ ಆಹಾರ ಖಾತೆ ಬದಲಾವಣೆಗೆ ಕಣ್ಣೀರಿಟ್ಟ ಸಚಿವ ಗೋಪಾಲಯ್ಯ
ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ವಿಜಯೇಂದ್ರ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರದ ವಿರುದ್ಧ ನಡೆಸಿರೋ ಹೋರಾಟವನ್ನು ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ರ್ಯಾಲಿ ಮಾಡಿತು. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಎತ್ತಿ ಹಿಡಿಯೋದಾಗಿ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಹೇಳಿಕೆ ನೀಡಿದರು. ಉಪ ಚುನಾವಣೆಗಳ ಸೋಲಿನಿಂದಾಗಿ ಕಾಂಗ್ರೆಸ್ ನಾಯಕರು ಹಾತಾಶಗೊಂಡಿದ್ದಾರೆ. ತಮ್ಮ ಅಸ್ತಿತ್ವಕ್ಕೆ ಬಂದಿರೋ ಗಂಡಾಂತರದಿಂದ ತಪ್ಪಿಸಿಕೊಳ್ಳಲು ಹೋರಾಟದ ನಾಟಕ ಆಡ್ತಿದ್ದಾರೆ ಎಂದು ಕಿಡಿ ಕಾರಿದರು.ಕಾಂಗ್ರೆಸ್ ನಾಯಕರು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದರೆ ಏನೂ ಪ್ರಯೋಜನವಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತ ನಾಯಕರು. ರೈತರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಹೀಗಾಗಿ ರೈತರು ಯಡಿಯೂರಪ್ಪ ಅವರನ್ನು ನಂಬುತ್ತಾರೆಯೇ ಹೊರತು ಕಾಂಗ್ರೆಸ್ ನಾಯಕರನ್ನಲ್ಲಾ ಎಂದರು. ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ನಿರಂತರವಾಗಿ ಸರ್ಕಾರದ ವಿರುದ್ಧ, ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿರೋ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ವಿಜಯೇಂದ್ರ ಏನನ್ನೂ ಹೇಳದೆ ಹೊರಟು ಹೋದರು.
ನರಿಬೋಳ ಪುಣ್ಯತಿಥಿಯಲ್ಲಿ ಭಾಗಿ
ಕಲಬುರ್ಗಿಯಿಂದ ಜೇವರ್ಗಿ ತಾಲೂಕಿಗೆ ತೆರಳಿದ ವಿಜಯೇಂದ್ರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ತಂದೆ ಶಿವಲಿಂಗಪ್ಪಗೌಡ ಪಾಟೀಲ ನರಿಬೋಳರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಶಿವಲಿಗಪ್ಪಗೌಡ ಪಾಟೀಲರ 16ನೇ ಪುಣ್ಯ ಸ್ಮರಣೆ ಅಂಗವಾಗಿ ಆಯೋಜಿಸಿದ್ದ ಉಚಿತ ನೇತ್ರ ಚಿಕಿತ್ಸಾ ಶಿಬಿರಕ್ಕೆ ವಿಜಯೇಂದ್ರ ಚಾಲನೆ ನೀಡಿದರು. ಶಿವಲಿಂಗಪ್ಪಗೌಡ ಪಾಟೀಲರು ಬಿಜೆಪಿಗಾಗಿ ದುಡಿದದ್ದು, ಅವರ ಸತತ ಪ್ರಯತ್ನದ ನಂತರ ದೊಡ್ಡಪ್ಪಗೌಡ ಪಾಟೀಲ ಶಾಸಕರಾಗಿ ಆಯ್ಕೆಯಾದದ್ದು ಇತ್ಯಾದಿಗಳನ್ನು ವಿಜಯೇಂದ್ರ ಸ್ಮರಿಸಿದರು.
ವರದಿ - ಶಿವರಾಮ ಅಸುಂಡಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ