ಸಚಿವ ಸ್ಥಾನಕ್ಕಾಗಿ ದೆಹಲಿ, ಸಿಎಂ, ವಿಜಯೇಂದ್ರ ಮನೆಗೆ ಹೋಗಕ್ಕಾಗಲ್ಲ, ಸಂತೋಷ್ ಆತ್ಮಹತ್ಯೆ ಯತ್ನ ದೊಡ್ಡ ಕಥೆ, ಮುಂದೆ ಎಲ್ಲವನ್ನೂ ಹೇಳುತ್ತೇನೆ; ಯತ್ನಾಳ ಹೊಸ ಬಾಂಬ್

ಕನ್ನಡ ಪರ ಹೋರಾಟಗಾರರು ಉರ್ದು ಶಾಲೆಗಳನ್ನು ಬಂದ್ ಮಾಡಿಸುತ್ತಾರಾ? ಉರ್ದು ಬೋರ್ಡ್ ಗಳನ್ನು ಬಂದ್ ಮಾಡಿಸುತ್ತಾರಾ? ಹಿಂದಿ, ಮರಾಠಿ ಬೋರ್ಡುಗಳಿಗೆ ಮಸಿ ಬಳಿಯುವ ಇವರು ಉರ್ದು ಬೋರ್ಡುಗಳಿಗೆ ಮಸಿ ಬಳಿಯಲಿ. ತಾಕತ್ತಿದ್ದರೆ ಕಲಬುರಗಿ ರೈಲು ನಿಲ್ದಾಣದಲ್ಲಿರುವ ಉರ್ದು ಬೋರ್ಡ್ ತೆಗೆಯಲಿ. ಕಲಬುರಗಿ ಮಹಾನಗರ ಪಾಲಿಕೆ ಮೇಲಿರುವ ಉರ್ದು ಬೋರ್ಡ್ ತೆಗೆಯಲಿ ಎಂದು ಯತ್ನಾಳ ಸವಾಲು ಹಾಕಿದರು.

ಬಸನಗೌಡ ಪಾಟೀಲ ಯತ್ನಾಳ

ಬಸನಗೌಡ ಪಾಟೀಲ ಯತ್ನಾಳ

  • Share this:
ವಿಜಯಪುರ (ಡಿ. 02); ಸಚಿವ ಸ್ಥಾನ ಪಡೆಯಬೇಕಾದರೆ ದೆಹಲಿಗೆ ಹೋಗಿ ಕುಳಿತುಕೊಳ್ಳಬೇಕು. ಅದು ಏನೇನೋ ಇಟ್ಟುಕೊಂಡು ಕುಳಿತುಕೊಳ್ಳಬೇಕು. ಅದಾವುದು ನಮ್ಮ ಬಳಿಯಿಲ್ಲ.  ಏನೋ ನಡೆದಿದೆ. ಎಲ್ಲವನ್ನು ಹೇಳುತ್ತೇನೆ. ತಾವು ವಿಧಿಸಿದ್ದ ನ. 15ರ ಗಡುವು ಮುಕ್ತಾಯವಾಗಿದೆ. ಆದರೆ, ನಾನೇನೂ ಡೌನ್ ಆಗುವ ಮಗನಲ್ಲ. ಯಾರಾರು ಹೇಗೆ ಮಂತ್ರಿಯಾಗುತ್ತಾರೆ ಎಂಬುದು ಗೊತ್ತಿದೆ.  ಸಿಎಂ ಸಚಿವ ಸಂಪುಟ ವಿಸ್ತರಣೆ ಮಾಡಲಿ.  ಆಮೇಲೆ ಮಾತನಾಡುತ್ತೇನೆ. ಸಚಿವ ಸ್ಥಾನಕ್ಕಾಗಿ ಯತ್ನಾಳ ಎಂದೂ ದೆಹಲಿಗೆ ಹೋಗುವುದಿಲ್ಲ. ಸಿಎಂ ಮನೆಗೆ, ವಿಜಯೇಂದ್ರ ಮನೆ ಬಾಗಿಲಿಗೆ ಹೋಗಿಲ್ಲ.  ಹೋಗುವುದೂ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ ಅವರು, ಸಿಎಂ ಸಂಸದೀಯ ಕಾರ್ಯದರ್ಶಿ ಸಂತೋಷ ಆತ್ಮಹತ್ಯೆ ಯತ್ನ ಪ್ರಕರಣ ದೊಡ್ಡ ಕಥೆ ಇದೆ. ಎಲ್ಲ ಘಟನಾವಳಿಗಳು ನನಗೆ ಗೊತ್ತಿದೆ. ಕಾಲ ಬಂದಾಗ ಎಲ್ಲವನ್ನು ನಾನು ಹೇಳುತ್ತೇನೆ. ಇದು ಬಹಳ ದೊಡ್ಡ ಕಥೆ ಇದೆ.  ಸಿಎಂ ಸಚಿವ ಸಂಪುಟ ವಿಸ್ತರಣೆ ಮಾಡಲಿ. ಆಮೇಲೆ ಎಲ್ಲವನ್ನು ಬಹಿರಂಗಪಡಿಸುವೆ.  ಸಚಿವ ಸಂಪುಟ ವಿಸ್ತರಣೆ ಬಳಿಕ ನನ್ನ ಎಲ್ಲ ವಿಚಾರಗಳನ್ನು ಹೇಳುತ್ತೇನೆ ಎಂದು ತಿಳಿಸಿದರು.

ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಕ್ರಾಸ್ ಬ್ರೀಡ್ ಹೇಳಿಕೆ ವಿಚಾರ ಕುರಿತು ವ್ಯಂಗ್ಯವಾಡಿದ ಯತ್ನಾಳ, ಕಾಂಗ್ರೆಸ್ ಶೇ. 90 ಕ್ರಾಸ್ ಬ್ರೀಡ್ ಆಗಿದೆ.  ಕ್ರಾಸ್ ಬ್ರೀಡ್ ನಲ್ಲಿ ಅವರದೂ ಪಾಲಿದೆ.  ಸಿದ್ಧರಾಮಯ್ಯ ಒಳ್ಳೆಯ ನಾಯಕರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಕ್ರಾಸ್ ಬ್ರೀಡ್ ಪಾರ್ಟಿಗೆ ಸೇರಿದ್ದಾರೆ. ಹೀಗಾಗಿ ಸಿದ್ಧರಾಮಯ್ಯ ಅವರ ಬಗ್ಗೆಯೂ ಸಂಶಯ ಬರುತ್ತಿದೆ ಎಂದು ಯತ್ನಾಳ ವ್ಯಂಗ್ಯವಾಡಿದರು.

ಗೋ ಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆಗಟ್ಟಲು ಕಾಯಿದೆ ಜಾರಿಯಾಗಲೇಬೇಕು. ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ಜಾರಿಯಾದ ಕಾನೂನು ರೀತಿ ಇಲ್ಲಿಯೂ ಜಾರಿಯಾಗಬೇಕು. ಕರ್ನಾಟಕದ ಸಚಿವರನ್ನು ಅಲ್ಲಿಗೆ ಕಳುಹಿಸಿ. ಅಲ್ಲಿಗಿಂತಲೂ ಕಠಿಣ ಕಾನೂನು ಜಾರಿ ಮಾಡಬೇಕು. ಹಿಂದು ಯುವತಿಯರನ್ನು ಮತಾಂತರ ಮಾಡುವುದನ್ನು ತಡೆಗಟ್ಟಬೇಕು ಎಂದು ಯತ್ನಾಳ ಹೇಳಿದರು.

ದೆಹಲಿ ಜಾಮಿಯಾ ಮಸೀದಿಯ ಮೌಲಾನಾವೊಬ್ಬರು ಹಿಂದು ಹುಡುಗರಿಗೆ ಹೆಣ್ಣು ಸಿಗದಂತೆ ನೋಡುವುದಾಗಿ ಹೇಳಿದ್ದಾರೆ. ಅವರಿಗೆ ಹೆಣ್ಣು ಸಿಗದ ರೀತಿಯಲ್ಲಿ ನಾವೂ ಮಾಡುತ್ತೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ವಾಟಾಳ್ ನಾಗರಾಜ ವಿರುದ್ಧ ವಾಗ್ದಾಳಿ

ಕರ್ನಾಟಕ ಬಂದ್ ಮಾಡಲು ಹೊರಟ ವಾಟಾಳ್ ನಾಗರಾಜಗೆ ಬುದ್ದಿ ಭ್ರಮಣೆಯಾಗಿದೆ. ವಿಧಾನ ಸಭೆ ಮತ್ತು ವಿಧಾನ ಪರಿಷತ ಚುನಾವಣೆಯಲ್ಲಿ ಅವರು ಎಷ್ಟು ಮತ ಪಡೆದಿದ್ದಾರೆ ಎಂದು ಯೋಚಿಸಲಿ. ಮತ್ತೊಬ್ಬರ ಬಗ್ಗೆ ಏಕವಚನ ಮಾಡುವ ಯೋಗ್ಯತೆ ಅವರಿಗಿಲ್ಲ.  ವಾಟಾಳ್ ಅವರಿಂದ ಹೊಂದಾಣಿಕೆ ರಾಜಕೀಯ ನಡೆಯುತ್ತದೆ. ಈ ಹಿಂದೆ ಸಿದ್ಧರಾಮಯ್ಯ, ನಂತರ ಎಚ್.ಡಿ. ಕುಮಾರಸ್ವಾಮಿ ಜೊತೆ ಹೊಂದಾಣಿಕೆಯಾಗಿದ್ದರು ಎಂದು ಯತ್ನಾಳ ಆರೋಪಿಸಿದರು.

ಇದನ್ನು ಓದಿ: ಕೊರೋನಾ ವಿರುದ್ಧ ಫಿಜರ್ ಬಯೋಟೆಕ್ ಲಸಿಕೆ ಬಳಕೆಗೆ ಅನುಮೋದನೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಬ್ರಿಟನ್!

ಜೀವ ಬೆದರಿಕೆ ಬಗ್ಗೆ ವಾಟಾಳ್ ನಾಗರಾಜ ಆತಂಕ ವ್ಯಕ್ತಪಡಿಸಿರುವ ಬಗ್ಗೆ ತಮ್ಮದೇ ಶೈಲಿಯಲ್ಲಿ ಟೀಕಿಸಿದ ಯತ್ನಾಳ, ಯಾರು ಶೂರರು ಮತ್ತು ಧೀರರು ಇರುತ್ತಾರೋ ಅವರ ಮೇಲೆ ಆಕ್ರಮಣ ಮಾಡುತ್ತಾರೆ.  ಇಂಥ ಕುರಿಗಳ ಮೇಲೆ ಯಾರೂ ಆಕ್ರಮಣ ಮಾಡುವುದಿಲ್ಲ. ವಾಟಾಳ್ ಮತ್ತೊಮ್ಮೆ ವಿಜಯಪುರಕ್ಕೆ ಬರಲಿ ನೋಡೋಣ. ದೊರೆಸ್ವಾಮಿ ವಿಚಾರ ಏನಾಗಿದೆ ಗೊತ್ತಲ್ಲ. ಅವರನ್ನು ಈಗ ಯಾರೂ ಹೋರಾಟಕ್ಕೆ ಕರೆಯುವುದಿಲ್ಲ. ಅವರು ಈಗ ಝೀರೋ ಆಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ವಾಟಾಳ್ ನಾಗರಾಜ ಅವರನ್ನೂ ಝೀರೋ ಮಾಡುತ್ತೇವೆ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಕರ್ನಾಟಕ ಬಂದ್ ಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ ಯತ್ನಾಳ, ಬಂದ್ ಉದ್ದೇಶ ಒಳ್ಳೆಯದಾಗಿಲ್ಲ. ಮರಾಠ ಸಮುದಾಯ ಸಾವಿರಾರು ವರ್ಷಗಳಿಂದ ರಾಜ್ಯದಲ್ಲಿದೆ.  ಶಿವಾಜಿ ಮಹಾರಾಜ ವಿಜಯಪುರ ಗೋಹತ್ಯೆ ಮಾಡಿದ ವ್ಯಕ್ತಿಯ ಕೈ ಕಡಿದ ಮೊದಲ ವ್ಯಕ್ತಿ.  ಕನ್ನಡ ಪರ ಹೋರಾಟಗಾರರು ಉರ್ದು ಶಾಲೆಗಳನ್ನು ಬಂದ್ ಮಾಡಿಸುತ್ತಾರಾ? ಉರ್ದು ಬೋರ್ಡ್ ಗಳನ್ನು ಬಂದ್ ಮಾಡಿಸುತ್ತಾರಾ? ಹಿಂದಿ, ಮರಾಠಿ ಬೋರ್ಡುಗಳಿಗೆ ಮಸಿ ಬಳಿಯುವ ಇವರು ಉರ್ದು ಬೋರ್ಡುಗಳಿಗೆ ಮಸಿ ಬಳಿಯಲಿ. ತಾಕತ್ತಿದ್ದರೆ ಕಲಬುರಗಿ ರೈಲು ನಿಲ್ದಾಣದಲ್ಲಿರುವ ಉರ್ದು ಬೋರ್ಡ್ ತೆಗೆಯಲಿ. ಕಲಬುರಗಿ ಮಹಾನಗರ ಪಾಲಿಕೆ ಮೇಲಿರುವ ಉರ್ದು ಬೋರ್ಡ್ ತೆಗೆಯಲಿ. ಉರ್ದು ನಮ್ಮ ರಾಷ್ಟ್ರೀಯ ಭಾಷೆಯಲ್ಲ. ಪರಕೀಯ ಭಾಷೆ.  ಹಿಂದಿ ಭಾಷೆಯ ಮೇಲೆ ಇವರು ದಬ್ಬಾಳಿಕೆ ಮಾಡುತ್ತಾರೆ.  ಹಿಂದಿ ರಾಷ್ಟ್ರ ಭಾಷೆ. ಕನ್ನಡ ಮಾತೃಭಾಷೆ. ನಾವೆಲ್ಲ ಕನ್ನಡದಲ್ಲಿ ಸಹಿ ಮಾಡುತ್ತೇವೆ. ಇವರಿಂದೇನೂ ಬುದ್ದಿ ಕಲಿಯಬೇಕಿಲ್ಲ. ಸಿಎಂ ಮತ್ತು ಶಿಕ್ಷಣ ಮಂತ್ರಿಗಳು ಕನ್ನಡ ಹೋರಾಟಗಾರರ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಯಾವ ಶಾಲೆಯಲ್ಲಿ ಕಲಿಯುತ್ತಾರೆ ಎಂಬುದರ ಬಗ್ಗೆ ತನಿಖೆ ನಡೆಸಲಿ ಎಂದು ಯತ್ನಾಳ ಆಗ್ರಹಿಸಿದರು.
Published by:HR Ramesh
First published: