ವಿಜಯಪುರ, (ಡಿ. 16); ಸಚಿವ ಸ್ಥಾನ ಉಳಿಸಿಕೊಳ್ಳಲು ನಾನು ಎಲ್ಲಿ ಲಾಬಿ ಮಾಡಿದ್ದೇನೆ? ಯಾವುದಾದರೂ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿರುತ್ತೇನೆ. ಲಾಬಿ ಮಾಡೋಕೆ ಹೋಗಿಲ್ಲ. ನನ್ನ ಇಲಾಖೆ ಕೆಲಸಕ್ಕೆ, ಕ್ಷೇತ್ರದ ಕೆಲಸಕ್ಕೆ ಸಂಬಂಧಿಸಿದಂತೆ ನಾನು ದೆಹಲಿ ಮತ್ತು ಬೆಂಗಳೂರಿಗೆ ತಿರುಗಾಡುತ್ತಿರುತ್ತೇನೆ. ಅದರೆ ಲಾಬಿ ಮಾಡಲು ಹೋಗಿಲ್ಲ. ಲಾಬಿ ಮಾಡುವ ಪ್ರಮೇಯ ನನಗೆ ಬಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಉಳಿಸಿಕೊಳ್ಳಲು ಯಾವ ರೀತಿ ಲಾಬಿ ಮಾಡಬೇಕು? ಯಾಕೆ ಲಾಬಿ ಮಾಡಬೇಕು? ನಾನು ಲಾಬಿ
ಮಾಡುವುದಿಲ್ಲ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯಾದಾಗಿನಿಂದ ಇಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದೇನೆ. ಈ ಮೊದಲು ವಾರಕ್ಕೆ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಕೊರೋನಾ ಪೀಡಿತಳಾದ ಮೇಲೆ ವೈದ್ಯರ ಸಲಹೆಯ ಮೇರೆಗೆ ವಿಶ್ರಾಂತಿಯಲ್ಲಿದ್ದೆ. ಈಗ ಗ್ರಾಮ ಪಂಚಾಯಿತಿ ಚುನಾವಣೆ ಬಂದಿದೆ. ಚುನಾವಣೆ ಮುಗಿದ ಮೇಲೆ ಮತ್ತೆ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಳ್ಳುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ವಿಜಯಪುರ ಜಿಲ್ಲೆಯಲ್ಲಿ ನಕಲಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ಹಲವರು ವಿಜಯಪುರ ಜಿಲ್ಲೆ ಮತ್ತು ಮಹಾರಾಷ್ಟ್ರ ಎರಡೂ ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದಾರೆ. ಇದರಿಂದ ಅಕ್ರಮ ಮತದಾನದ ಆರೋಪ ಕೇಳಿ ಬರುತ್ತಿದೆ. ಈ ಕುರಿತು ಈ ಹಿಂದೆಯೇ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂಬುದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಈಗಷ್ಟೇ ತಮ್ಮ ಗಮನಕ್ಕೆ ಬಂದಿದೆ. ಇದನ್ನು ತಡೆಯಲು ಅಧಿಕಾರಿಗಳಿಗೆ ಪರಿಶೀಲನೆ ನಡೆಸಲು ಸೂಚನೆ ನೀಡುವುದಾಗಿ ತಿಳಿಸಿದರು.
ಮತದಾರರ ಪಟ್ಟಿಯಲ್ಲಿರುವವರ ಹೆಸರನ್ನು ಆಧಾರ್ ಗೆ ಲಿಂಕ್ ಮಾಡುವುದರಿಂದ ಇದನ್ನು ತಡೆಯಬಹುದಾಗಿದೆ. ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗಿದೆ. ಆಧಾರ್ ಗೆ ಮತದಾರರ ಹೆಸರುಗಳನ್ನು ಲಿಂಕ್ ಮಾಡುವುದರಿಂದ ಒಬ್ಬರೇ ವ್ಯಕ್ತಿ ಒಂದಕ್ಕಿಂತಲೂ ಹೆಚ್ಚು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದುವುದನ್ನು ತಡೆಬಹುದಾಗಿದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.
ಇದನ್ನು ಓದಿ: ಸಿದ್ದಾರೂಢರ ಐಕ್ಯಸ್ಥಳ ಹುಬ್ಬಳ್ಳಿಗೆ ಸಿಕ್ಕಷ್ಟು ಮಹತ್ವ, ಅವರ ಹುಟ್ಟೂರಿಗೆ ಸಿಗಲಿಲ್ಲ!
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಸವಾಲುಗಳು ಎದುರಾಗಿವೆ. ಸಿಎಂ ನೇತೃತ್ವದಲ್ಲಿ ಪ್ರವಾಹ, ಕೊರೋನಾವನ್ನು ಸಮರ್ಥವಾಗಿ ಎದುರಿಸಿದ್ದೇವೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿದ್ದೇವೆ. ವಿಜಯಪುರ ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕೊರೋನಾ ಟೆಸ್ಟ್ ನಡೆಸಲಾಗಿದೆ. ಕೊರೋನಾ ಲಸಿಕೆ ಆದಷ್ಟು ಬೇಗ ವಿಜಯಪುರ ಜಿಲ್ಲೆಗೆ ಬರಲಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ