ವಿಜಯಪುರ (ಮಾ. 25); ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಬಳಿ ನಾಗಬೇನಾಳ ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಅನಾಹುತವೊಂದರಲ್ಲಿ 5 ಲಕ್ಷ ನಗದು ಸೇರಿದಂತೆ ಅಪಾರ ವಸ್ತುಗಳು ಬೆಂಕಿಗಾಹುತಿಯಾಗಿವೆ. ನಾಗಬೇನಾಳ ಚೆಕ್ ಪೋಸ್ಟ್ ಸಮೀಪದ ಹೊಲದಲ್ಲಿ ಮಧ್ಯಾಹ್ನ ಸಂಭವಿಸಿದ ಈ ಬೆಂಕಿ ಆಕಸ್ಮಿಕದಲ್ಲಿ ತೋಟದಲ್ಲಿದ್ದ ಗುಡಿಸಲು ಸಂಪೂರ್ಣ ಭಸ್ಮವಾಗಿದ್ದು, ಕುರಿಗಳನ್ನು ಸಾಕಲಾಗುತ್ತಿದ್ದ ಶೆಡ್ ಕೂಡ ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ರೂ. 500, ರೂ. 200, ರೂ. 100, ರೂ. 10 ಮತ್ತು ರೂ. 5 ಮುಖಬೆಲೆಯ ನೋಟುಗಳು ಸುಟ್ಟು ಹೋಗಿವೆ. ಅಷ್ಟೇ ಅಲ್ಲ, ಜೀವನೋಪಾಯಕ್ಕೆ ಸಂಗ್ರಹಿಸಿ ಇಡಲಾಗಿದ್ದ ಕ್ವಿಂಟಾಲ್‌ಗೂ ಅಧಿಕ ಸಜ್ಜೆ, ಅಕ್ಕಿ, ಎಲ್ಐಸಿ ಬಾಂಡ್, ಬ್ಯಾಂಕ್ ಪಾಸ್ ಬುಕ್, ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್, ಶಾಲಾ ಪ್ರಮಾಣ ಪತ್ರಗಳು ಸೇರಿದಂತೆ ನಾನಾ ದಾಖಲೆಗಳೂ ಬೆಂಕಿಗೆ ಆಹುತಿಯಾಗಿವೆ. ಅಲ್ಲದೇ, ಗುಡಿಸಲಿನಲ್ಲಿ ಇಟ್ಟಿದ್ದ ಸುಮಾರು 50 ಗ್ರಾಂ ಚಿನ್ನಾಭರಣಗಳು ಬೆಂಕಿಗಾಹಿತಿಯಾಗಿವೆ.
ಖೇಮಪ್ಪ ಪಾಂಡಪ್ಪ ಲಮಾಣಿ ಎಂಬುವರಿಗೆ ಸೇರಿದ ಗುಡಿಸಲು ಬೆಂಕಿಗಾಹುತಿಯಾಗಿದೆ. ನಾಗಬೇನಾಳ ತಾಂಡಾದ ಸರ್ವೆ ನಂ 89/1 ಯಮನಪ್ಪ ರಾಮಪ್ಪ ಲಮಾಣಿ ಎಂಬುವರ ಸಂಬಂಧಿಯ ಜಮೀನಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ಹಲವು ವರ್ಷಗಳಿಂದ ವಾಸವಿದ್ದು, ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಎಲ್ಲರೂ ಕೆಲಸದ ಹಿನ್ನೆಲೆಯಲ್ಲಿ ಹೊರಗೆ ಹೋಗಿದ್ದಾಗ ಮಧ್ಯಾಹ್ನ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗುಡಿಸಲಿಗೆ ತಗುಲಿದ ಬೆಂಕಿಯ ಜ್ವಾಲೆಯು ಪಕ್ಕದಲ್ಲಿರುವ ಕುರಿಯ ಶೆಡ್ ಗೂ ಹಬ್ಬಿದ್ದು, ಅದೂ ನೋಡ ನೋಡುತ್ತಿದ್ದಂತೆ ಕಣ್ಣೆದುರಲ್ಲಿಯೇ ಸುಟ್ಟು ಭಸ್ಮವಾಗಿದೆ. ಜನರು ನೀರು ಹಾಕುವ ಮೂಲಕ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಗುಡಿಸಲು ಹಾಗೂ ಗುಡಿಸಲಿನಲ್ಲಿದ್ದ ಕ್ವಿಂಟಾಲ್‌ಗೂ ಹೆಚ್ಚಿನ ಪ್ರಮಾಣದ ಧವಸ, ಧಾನ್ಯಗಳು, ಬಟ್ಟೆಗಳು, ಹಾಸಿಗೆ, ಗೃಹಬಳಕೆ ವಸ್ತುಗಳು ಬಹುತೇಕ ಭಸ್ಮವಾಗಿ ಹೋಗಿವೆ. ಈ ಘಟನೆಯಿಂದಾಗಿ ಗುಡಿಸಲು ನಿವಾಸಿಗಳ ಬದುಕು ಬೀದಿಗೆ ಬಂದಂತಾಗಿದೆ. ತುತ್ತು ಊಟಕ್ಕೂ ಈ ಕುಟುಂಬ ಈಗ ಪರದಾಡುವಂತಾಗಿದೆ.
ಇದನ್ನು ಓದಿ: ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ; ಅನುಕಂಪದ ಹಿನ್ನೆಲೆಯಲ್ಲಿ ಅಂಗಡಿ ಕುಟುಂಬಸ್ಥರಿಗೆ ಟಿಕೆಟ್?
ಮೇಕೆ ಮರಿಗಳು ಪಾರು
ಈ ಕುಟುಂಬ ಸುಮಾರು 18 ರಿಂದ 20 ಕುರಿಗಳು ಮತ್ತು ಮೇಕೆಗಳನ್ನು ಸಾಕಿತ್ತು. ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಈ ಜಾನುವಾರುಗಳು ಮೇಯಲು ಹೋಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಈ ಅಗ್ನಿ ಅವಘಡಕ್ಕೆ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗುಡಿಸಲು ಮಾಲೀಕ ನೀಡಿದ ದೂರಿನ ಮೇರೆಗೆ ನಾಲತವಾಡ ಮತ್ತು ಮುದ್ದೇಬಿಹಾಳ ಪೊಲೀಸರು ಬೆಂಕಿ ಆಕಸ್ಮಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ, ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳಾದ ಪಿ. ಎಸ್. ಪಾಟೀಲ, ರವಿ ವಿಜಯಪುರ, ಕಂದಾಯ ಇಲಾಖೆಯ ಹರ್ಷಿತ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಮಧ್ಯೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಾಗಬೇನಾಳ ಗ್ರಾಮ ಲೆಕ್ಕಾಧಿಕಾರಿ ಹರ್ಷಿತ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಸಂತ್ರಸ್ತ ಕುಟುಂಬಕ್ಕೆ ವೈಯಕ್ತಿಕವಾಗಿ ರೂ. 5000 ನಗದು ಹಣವನ್ನು ಪರಿಹಾರ ರೂಪದಲ್ಲಿ ನೀಡಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ